

ಹಿಂದೂ-ಮುಸ್ಲಿಂರು ಒಡಗೂಡಿ ಮೀನು ಹಿಡಿದ್ರು.. ಪರ್ಯಾಯವಾಗಿ ದೇವಸ್ಥಾನಕ್ಕೆ ಕಾಣಿಕೆ ಕೊಟ್ರು..
ಶ್ರೀ ಸಿದ್ಧೇಶ್ವರ ದೇವಸ್ಥಾನದ ಅಭಿವೃದ್ಧಿ ಸಹಾಯಾರ್ಥ ಪ್ರತಿ ವರ್ಷ ನಡೆಯುವ ಕೆರೆಬೇಟೆಯಲ್ಲಿ ಮುಸ್ಲಿಂ ಸಮುದಾಯದ ಹೆಚ್ಚು ಜನರು ಪಾಲ್ಗೊಳ್ಳುತ್ತಾರೆ. ಹಿಂದೂ-ಮುಸ್ಲಿಂರು ಒಡಗೂಡಿ ಮೀನು ಹಿಡಿಯುತ್ತಾರೆ. ಪರ್ಯಾಯವಾಗಿ ದೇವಸ್ಥಾನಕ್ಕೆ ಕಾಣಿಕೆ ಕೊಡುತ್ತಾರೆ..
ಕಾರವಾರ : ಹಿಂದೂ-ಮುಸ್ಲಿಂ ಸಮುದಾಯದ ಜನರು ಜಾತಿ, ಧರ್ಮ ಮರೆತು ಕೆರೆಯಲ್ಲಿ ಮೀನು ಹಿಡಿದ ಅಪರೂಪದ ಘಟನೆಯಿದು. ತಾವು ಹಿಡಿದ ಅದೇ ಮೀನಿಗೆ ಪರ್ಯಾಯವಾಗಿ ಮುಸ್ಲಿಂರು ದೇವರಿಗೆ ಕಾಣಿಕೆ ರೂಪದಲ್ಲಿ ಹಣ ನೀಡುವ ವಿಶಿಷ್ಟ ಸಂಪ್ರದಾಯ ಶಿರಸಿ ತಾಲೂಕಿನ ಕಲಕರಡಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಶ್ರೀ ಸಿದ್ಧೇಶ್ವರ ದೇವಸ್ಥಾನದ ಅಭಿವೃದ್ಧಿ ಸಹಾಯಾರ್ಥ ಪ್ರತಿ ವರ್ಷ ನಡೆಯುವ ಕೆರೆಬೇಟೆಯಲ್ಲಿ ಮುಸ್ಲಿಂ ಸಮುದಾಯದ ಹೆಚ್ಚು ಜನರು ಪಾಲ್ಗೊಳ್ಳುತ್ತಾರೆ. ಮುಸ್ಲಿಂಮರೇ ದೇವರಿಗೆ ಸೇವೆ ರೂಪದಲ್ಲಿ ಕಾಣಿಕೆ ನೀಡ್ತಾರೆ.
ಶಿರಸಿ ಕೆರೆಬೇಟೆಯಲ್ಲಿ ಭಾಗಿಯಾದ ಹಿಂದೂ ಮುಸ್ಲಿಂ-ಬಾಂಧವರು..
ಈ ದೇವಸ್ಥಾನದ ಆಚರಣೆಯಲ್ಲಿ ಹಿಂದೂಗಳನ್ನು ಹೊರತುಪಡಿಸಿ ಅನ್ಯಧರ್ಮೀಯರು ಭಾಗವಹಿಸದಂತೆ ಹಿಂದೂಪರ ಸಂಘಟನೆ ಮನವಿ ಮಾಡಿತ್ತು. ಆದರೆ, ದೇವಸ್ಥಾನದ ಆಡಳಿತ ಮಂಡಳಿ ತಾವೆಲ್ಲಾ ಸೌಹಾರ್ದಯುತವಾಗಿದ್ದೇವೆ ಎಂದು ಈ ಬಾರಿ ವಿವಾದಗಳ ನಡುವೆಯೂ ಮುಸ್ಲಿಂ ಬಾಂಧವರಿಗೆ ಮತ್ಸ್ಯ ಭೇಟೆಗೆ ಅವಕಾಶ ನೀಡಿದೆ. ನೂರಾರು ಮುಸ್ಲಿಂರು ಇದರಲ್ಲಿ ಭಾಗವಹಿಸಿದ್ದರು.
ಶ್ರೀ ಸಿದ್ಧೇಶ್ವರ ದೇವಾಲಯದ ಅಭಿವೃದ್ಧಿಗೆ ದೇಣಿಗೆ ಸಲುವಾಗಿ ಪ್ರತಿ ವರ್ಷ ಕೆರೆಬೇಟೆ ಎನ್ನುವ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಈ ಕೆರೆಬೇಟೆಯಲ್ಲಿ ದೇವಸ್ಥಾನಕ್ಕೆ ಸಹಾಯವಾಗಲು ಕೆರೆಯಲ್ಲಿ ಮೀನು ಹಿಡಿಯುವವರಿಗೆ ಪ್ರತಿ ಕೂಣಿಗೆ ದರ ನಿಗದಿಪಡಿಸಲಾಗುತ್ತದೆ. ಈ ಬಾರಿ 340ಕ್ಕೂ ಹೆಚ್ಚು ಜನರು ಕೆರೆಬೇಟೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿ ಕೂಣಿಗೆ ತಲಾ 500 ರೂ. ನಿಗದಿಪಡಿಸಲಾಗಿದೆ. ದೇವಸ್ಥಾನಕ್ಕೆ ಸುಮಾರು 1.70 ಲಕ್ಷದಷ್ಟು ಆದಾಯ ಸಂಗ್ರಹಿಸಲಾಯ್ತು. ಇದನ್ನು ದೇವಸ್ಥಾನದ ವಿವಿಧ ಅಭಿವೃದ್ಧಿ ಕೆಲಸಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ.
