


ಕೊಂಕಣಿಯಲ್ಲಿನಾಮಫಲಕ ಹಾಕಲು ಠರಾವು: ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕಾರವಾರ ನಗರಸಭೆ ನಿರ್ಧಾರ!
ಸ್ಥಳೀಯ ವಾರ್ಡ್ಗಳ ನಾಮಫಲಕವನ್ನು ಕೊಂಕಣಿಯಲ್ಲಿ ಹಾಕುವ ಬಗ್ಗೆ ಠರಾವು ಸಿದ್ಧಗೊಂಡಿದೆ. ಸರ್ಕಾರಕ್ಕೆ ಠರಾವು ಪ್ರಸ್ತಾಪ ಕಳುಹಿಸಲಾಗಿದೆ.
ಕಾರವಾರ: ಸ್ಥಳೀಯ ವಾರ್ಡ್ಗಳ ನಾಮಫಲಕವನ್ನು ಕೊಂಕಣಿಯಲ್ಲಿ ಬರೆದಿದ್ದಕ್ಕೆ ಕಾರವಾರದಲ್ಲಿ ಭಾಷಾ ವಿವಾದಕ್ಕೆ ಕಾರಣವಾಗಿತ್ತು. ಸರ್ಕಾರವೇ ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆಯನ್ನು ಹೇರುತ್ತಿದೆಯೆಂದು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದರೆ, ಇತ್ತ ಕೊಂಕಣಿ ಭಾಷಿಗರು ವಾರ್ಡ್ಗಳಿಗೆ ಕೊಂಕಣಿ ಬೋರ್ಡ್ ಬೇಕೆಂದು ಪಟ್ಟು ಹಿಡಿದಿದ್ದರು. ಇದೀಗ ಕಾರವಾರ ನಗರಸಭೆ ಸದಸ್ಯರು ಕನ್ನಡದ ಜೊತೆ ಕೊಂಕಣಿ ಭಾಷೆಯಲ್ಲೂ ಬೋರ್ಡ್ ಹಾಕುವಂತೆ ಠರಾವು ಮಾಡಿದ್ದಾರೆ.
ಕೊಂಕಣಿಯಲ್ಲಿ ನಾಮಫಲಕ ಹಾಕಲು ನಿರ್ಧಾರ
ನಗರಸಭೆ ವಾರ್ಡ್ಗಳ ಹೆಸರನ್ನು ಕನ್ನಡದ ಜೊತೆ ಕೊಂಕಣಿ ಭಾಷಿಕರಿಗೂ ತಿಳಿಯಲೆಂದು ಕೊಂಕಣಿ ಭಾಷೆಯಲ್ಲಿ ಹೋಲಿಕೆಯಾಗುವಂತೆ ಬರೆಸಿದ್ದು ಇದು ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಕೊಂಕಣಿಯಲ್ಲಿ ಬರೆದಿದ್ದ ಬೋರ್ಡ್ಗೆ ಕಪ್ಪು ಮಸಿ ಬಳೆದು ಕನ್ನಡ ಪರ ಸಂಘಟನೆ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದರು.
ಇತ್ತ ನಮ್ಮ ಮಾತೃ ಭಾಷೆ ಕೊಂಕಣಿಗೆ ಅವಮಾನ ಮಾಡಿದ್ದು, ಕಾರವಾರದಲ್ಲಿ ಕೊಂಕಣಿ ಬೋರ್ಡ್ ಸಹ ಬರೆಸಬೇಕು ಎಂದು ಕೊಂಕಣಿಯವರು ಪ್ರತಿಭಟನೆ ಮಾಡಿದ್ದರು. ಇದೀಗ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಈ ಭಾಷಾ ವಿವಾದ ಚರ್ಚೆಗೆ ಬಂದಿದ್ದು, ಸದಸ್ಯರುಗಳು ಕನ್ನಡದ ಜೊತೆ ಕೊಂಕಣಿ ಭಾಷೆಯಲ್ಲಿಯೂ ಬೋರ್ಡ್ಗಳನ್ನು ಬರೆಯುವಂತೆ ಠರಾವು ಮಾಡಲಾಗಿದೆ.
ಇನ್ನು ಕೊಂಕಣಿಯಲ್ಲಿ ಬರೆದಿದ್ದ ಬೋರ್ಡಿಗೆ ಮಸಿ ಬಳೆದಿದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರ ವಿರುದ್ಧ ದೂರು ಸಹ ದಾಖಲಾಗಿತ್ತು. ಘಟನೆ ಖಂಡಿಸಿ ಸ್ವತಃ ಪ್ರವೀಣ್ ಶೆಟ್ಟಿಯವರೇ ಕಾರವಾರಕ್ಕೆ ಆಗಮಿಸಿ ನಗರಸಭೆ ವಿರುದ್ಧ ಪ್ರತಿಭಟನೆ ಮಾಡಿದ್ದಲ್ಲದೇ ಮುಂದೆ ಮತ್ತೆ ಕೊಂಕಣಿಯಲ್ಲಿ ಬೋರ್ಡ್ ಬರೆಯಲು ಮುಂದಾದರೆ ಬೋರ್ಡನ್ನು ಧ್ವಂಸ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು.
ತಾವು ಹಿಂದಿ ಭಾಷೆಯಲ್ಲಿ ಬರೆದಿಲ್ಲ. ದೇವನಾಗರಿ ಲಿಪಿಯಲ್ಲಿ ಬರೆದಿದ್ದು ಸರ್ಕಾರಕ್ಕೆ ಈ ಬಗ್ಗೆ ಠರಾವು ಮಾಡಿರುವ ಪ್ರಸ್ತಾಪ ಕಳುಹಿಸಲಾಗಿದೆ. ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆಯೆಂಬುದನ್ನು ಕಾದು ನೋಡಬೇಕೆಂದು ನಗರಸಭೆ ಅಧ್ಯಕ್ಷರು ಹೇಳಿದ್ದಾರೆ.
ಇನ್ನೂ ಭಟ್ಕಳ ಪುರಸಭೆ ವ್ಯಾಪ್ತಿಯಲ್ಲೂ ಇದೇ ರೀತಿ ಭಾಷಾ ವಿವಾದ ಸೃಷ್ಟಿಯಾಗಿದ್ದು, ಜಿಲ್ಲಾಧಿಕಾರಿ ಮುಲೈ ಮುಗಿಲನ್ ಸರ್ಕಾರದ ನಾಮಫಲಕಗಳು ಕನ್ನಡ, ಇಂಗ್ಲಿಷ್ ಭಾಷೆ ಬಿಟ್ಟು ಬೇರೆ ಯಾವ ಭಾಷೆಯಲ್ಲೂ ಬರೆಯುವಂತಿಲ್ಲ ಎಂದು ಸೂಚಿಸಿದ್ದಾರೆ. ಇದರ ನಡುವೆ ಕಾರವಾರ ನಗರಸಭೆಯಲ್ಲಿ ಕೊಂಕಣಿಯಲ್ಲಿ ಬೋರ್ಡ್ ಬರೆಯುವಂತೆ ಠರಾವು ಮಾಡಿದ್ದು, ಜಿಲ್ಲಾಡಳಿತ, ಸರ್ಕಾರ, ನಗರಸಭೆಯ ಠರಾವಿಗೆ ಯಾವ ನಿರ್ಧಾರ ಕೈಗೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಭಟ್ಕಳ ಪುರಸಭೆಗೆ ಅಳವಡಿಸಿದ್ದ ಉರ್ದು ನಾಮಫಲಕ ತೆರವು
ಭಟ್ಕಳ ಪುರಸಭೆಗೆ ಅಳವಡಿಸಿದ್ದ ಉರ್ದು ನಾಮಫಲಕವನ್ನು ತೆರವುಗೊಳಿಸುವ ಮೂಲಕ ಸೃಷ್ಟಿಯಾಗಿದ್ದ ಭಾಷಾ ವಿವಾದಕ್ಕೆ ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್ ತೆರೆ ಎಳೆದಿದ್ದಾರೆ.
ಭಟ್ಕಳ(ಉತ್ತರ ಕನ್ನಡ): ಭಟ್ಕಳದ ಪುರಸಭೆಗೆ ಉರ್ದು ನಾಮಫಲಕ ಅಳವಡಿಸಿದ್ದಕ್ಕೆ ಉಂಟಾಗಿದ್ದ ಭಾಷಾ ವಿವಾದಕ್ಕೆ ಜಿಲ್ಲಾಧಿಕಾರಿಗಳ ಮಧ್ಯಪ್ರವೇಶದಿಂದ ತೆರೆ ಬಿದ್ದಿದೆ. ಕನ್ನಡ ಮತ್ತು ಇಂಗ್ಲಿಷ್ ಬಿಟ್ಟು ಬೇರಾವ ಭಾಷೆಗಳನ್ನೂ ಸರ್ಕಾರಿ ಕಚೇರಿಗಳ ಮೇಲೆ ಬಳಸದಂತೆ ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್ ಸೂಚಿಸಿದ್ದಾರೆ.
ಭಟ್ಕಳದಲ್ಲಿ ಕೆಲ ದಿನ ದಿನಗಳ ಹಿಂದೆ ಪುರಸಭೆ ಕಚೇರಿಯ ನಾಮಫಲಕವನ್ನು ಕನ್ನಡ, ಇಂಗ್ಲಿಷ್ ಹಾಗೂ ಉರ್ದು ಭಾಷೆಯಲ್ಲಿ ಅಳವಡಿಸಲು ಮುಂದಾಗಿತ್ತು. ಇದನ್ನು ವಿರೋಧಿಸಿ ಭುವನೇಶ್ವರಿ ಕನ್ನಡ ಸಂಘ ಹಾಗೂ ಇತರ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪುರಸಭೆಯ ಎದುರು ಸೇರಿ ಪ್ರತಿಭಟಿಸಿದ್ದರು. ಜೊತೆಗೆ ಉರ್ದು ಫಲಕವನ್ನು ತೆಗೆಯುವಂತೆ ಪಟ್ಟು ಹಿಡಿದಿದ್ದರು. ಇದಾದ ಮಾರನೇ ದಿನ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿ, ಉರ್ದು ಫಲಕವನ್ನು ಅಳವಡಿಸುವಂತೆ ಒತ್ತಾಯಿಸಿದ್ದರು.
ಈ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಇಂದು ಭಟ್ಕಳಕ್ಕೆ ಭೇಟಿ ನೀಡಿ ಸಂಬಂಧಪಟ್ಟವರೊಂದಿಗೆ ಸಭೆ ನಡೆಸಿದರು. ಸಾಕಷ್ಟು ಚರ್ಚೆ, ಪರ- ವಿರೋಧಗಳನ್ನು ಆಲಿಸಿದ ಜಿಲ್ಲಾಧಿಕಾರಿ, ಅಂತಿಮವಾಗಿ ಪುರಸಭೆಗೆ ಆದೇಶವೊಂದನ್ನು ನೀಡಿದ್ದಾರೆ. ಕನ್ನಡ- ಇಂಗ್ಲಿಷ್ ಹೊರತುಪಡಿಸಿ ಬೇರಾವ ಭಾಷೆಯ ನಾಮಫಲಕಗಳನ್ನು ಅಳವಡಿಸುವಂತಿಲ್ಲ. ಹಾಗೇನಾದರೂ ಅವಶ್ಯವಿದ್ದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಕೊಡಿ ಎಂದು ಸೂಚಿಸಿದ್ದಾರೆ.
ಈ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಪುರಸಭೆಗೆ ಅಳವಡಿಸಲಾಗಿದ್ದ ಉರ್ದು ನಾಮಫಲಕವನ್ನು ತೆರವುಗೊಳಿಸಲಾಗಿದೆ. ಸದ್ಯ ಕನ್ನಡ ಹಾಗೂ ಇಂಗ್ಲಿಷ್ ಬರಹಗಳನ್ನು ಮಾತ್ರ ಉಳಿಸಲಾಗಿದೆ. ಬಗ್ಗೆ ಸಭೆಯ ಬಳಿಕ ಪ್ರತಿಕ್ರಿಯೆ ನೀಡಿರುವ ಪುರಸಭೆಯ ಅಧ್ಯಕ್ಷ ಫರ್ವೇಜ್ ಕಾಶಿಂಜಿ, ಜಿಲ್ಲಾಧಿಕಾರಿಯವರ ಆದೇಶಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಇನ್ನು ತುರ್ತು ಸಾಮಾನ್ಯ ಸಭೆಯ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಹೇಳಿದ್ದಾರೆ ಎಂದರು.
ಒಂದೆಡೆ ಈವರೆಗೆ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಭಟ್ಕಳದಲ್ಲಿ ಕಾನೂನು ಸುವ್ಯವಸ್ಥೆ ಕಾಯ್ದುಕೊಂಡು ಭಾಷಾ ವಿವಾದಕ್ಕೆ ಜಿಲ್ಲಾಡಳಿತ ತೆರೆಯೇನೋ ಎಳೆದಿದೆ. ಆದರೂ ಮತ್ತೊಂದು ಕಡೆ ಈ ವಿವಾದ ಇಲ್ಲಿ ಬೂದಿಮುಚ್ಚಿದ ಕೆಂಡದಂತೆ ಕಾಣಿಸುತ್ತಿದೆ. ಹಾಗಾಗಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ. ಉರ್ದು ಬೋರ್ಡ್ ತೆಗೆಯಿಸಿದ್ದಕ್ಕೆ ಅಸಮಾಧಾನಗೊಂಡಿರುವ ಮುಸ್ಲಿಮರು ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಿದ್ದು, ಪುರಸಭೆಯ ತುರ್ತು ಸಾಮಾನ್ಯ ಸಭೆಯ ಬಳಿಕ ಮುಂದೇನಾಗಲಿದೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
