

ಶಿರಸಿಯಲ್ಲಿ ಭೀಕರ ಕರಡಿ ದಾಳಿ ನಡೆದಿದ್ದು, ವ್ಯಕ್ತಿ ಮೇಲೆ ದಾಳಿ ಮಾಡಿದ ಕರಡಿ ಆತನ ತಲೆಯನ್ನು ಹರಿದು ಹಾಕಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಶಿರಸಿ: ಶಿರಸಿಯಲ್ಲಿ ಭೀಕರ ಕರಡಿ ದಾಳಿ ನಡೆದಿದ್ದು, ವ್ಯಕ್ತಿ ಮೇಲೆ ದಾಳಿ ಮಾಡಿದ ಕರಡಿ ಆತನ ತಲೆಯನ್ನು ಹರಿದು ಹಾಕಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದೇವನಹಳ್ಳಿಯ ಸುಂದಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಕರಡಿ ದಾಳಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ಓಂಕಾರ ಜೈನ್(52) ಎಂದು ಗುರುತಿಸಲಾಗಿದೆ. ಓಂಕಾರ್ ಉಪ್ಪಾಂಗಿ ಸಿಪ್ಪೆ ಹೆಕ್ಕಲು ಬೆಟ್ಟಕ್ಕೆ ಹೋದಾಗ ಈ ಘಟನೆ ನಡೆದಿದೆ.
ಓಂಕಾರ್ ಕಾಡಿಗೆ ತೆರಳಿದ್ದ ವೇಳೆ ಕರಡಿ ಏಕಾಏಕಿ ದಾಳಿ ನಡೆಸಿದೆ. ದಾಳಿ ವೇಳೆ ಓಂಕಾರ್ ಕರಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆಯಾದರೂ ಈ ವೇಳೆ ಆಕ್ರೋಶಭರಿತ ಕರಡಿ ಗಂಭೀರವಾಗಿ ಹಲ್ಲೆ ಮಾಡಿದೆ.
ಓಂಕಾರ್ ಅವರ ತಲೆ ಭಾಗವನ್ನೆ ಕರಡಿ ಕಿತ್ತು ಹರಿದು ಹಾಕಿದೆ. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದಾರಿ ಹೋಕರು ಓಂಕಾರ್ ಮೃತದೇಹ ನೋಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. (ಕಪ್ರಡಾ)
