

ಮಂಗಳೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿ ಇಂದು ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಲಿರುವ ಈಡಿಗರ ಗುರು ಪ್ರಣವಾನಂದ ಸ್ವಾಮೀಜಿ ಮಂಡ್ಯದಲ್ಲಿ ಒಕ್ಕಲಿಗರ ಮತಬಾಹುಳ್ಯವಿರುವ ಎಲ್ಲಾ ಕ್ಷೇತ್ರಗಳಲ್ಲಿ ಒಕ್ಕಲಿಗರಿಗೆ ಟಿಕೇಟ್ ನೀಡುವ ಪಕ್ಷಗಳು ಕರಾವಳಿ ಮಲೆನಾಡಿನಲ್ಲಿ ಹೆಚ್ಚಿನ ಮತದಾರರಿರುವ ದೀವರು, ಈಡಿಗ, ಬಿಲ್ಲವರಿಗ್ಯಾಕೆ ಟಿಕೇಟ್ ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ಪ್ರಶ್ನೆ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ರಾಜ್ಯದ ಕನಿಷ್ಠ ೨೫ ಕ್ಷೇತ್ರಗಳಲ್ಲಿ ಬ್ರಾಹ್ಮಣರಿಗೆ ಟಿಕೇಟ್ ನೀಡಬೇಕೆಂದು ಬ್ರಾಹ್ಮಣ ಮಹಾಸಭಾ ಬೇಡಿಕೆ ಇಟ್ಟಿದೆ.
ಜಾತಿ ಇಲ್ಲ ಧರ್ಮ, ರಾಷ್ಟ್ರೀಯತೆ ಎನ್ನುವ ಪಕ್ಷವೊಂದು ಲಿಂಗಾಯತ ಮತ್ತು ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಒಕ್ಕಲಿಗರು, ಲಿಂಗಾಯತರಿಗೆ ಟಿಕೇಟ್ ನೀಡಿ ಇತರ ತಬ್ಬಲಿ ಜಾತಿಗಳ ಪ್ರಾಬಲ್ಯವಿರುವಲ್ಲಿ ಹಿಂದುತ್ವ ಎನ್ನುವುದು ಬಹಿರಂಗ ಗುಟ್ಟಾಗುತ್ತಿದೆ.
ಈ ಸಂದರ್ಭದಲ್ಲಿ ಪೇಶ್ವೆ ಬ್ರಾಹ್ಮಣರನ್ನು ಆರೆಸ್ಸೆಸ್ ತುಷ್ಟೀಕರಿಸುತ್ತಾ ಬಹುಸಂಖ್ಯಾತರಿಗೆ ಬಿ.ಜೆ.ಪಿ. ನಿರ್ಲಕ್ಷಿಸುತ್ತಿದೆ ಎನ್ನುವ ಕುಮಾರಸ್ವಾಮಿಯವರ ಮಾತು ಹೆಚ್ಚಿನ ಚರ್ಚೆಗೊಳಪಟ್ಟು ಟೀಕೆ, ವಿಮರ್ಶೆಗಳಿಗೂ ಕಾರಣವಾಗಿದೆ.
ರಾಜ್ಯದಲ್ಲಿ ಒಕ್ಕಲಿಗರ ಒಲವು ಜನತಾಪರಿವಾರದಲ್ಲಿದ್ದರೆ, ಲಿಂಗಾಯತರ ಒಲವು ಸಂಘ ಪರಿವಾರದತ್ತ ಎನ್ನುತ್ತಾ ಲಿಂಗಾತರಿಗೆ ಅನ್ಯರನ್ನು ನಾಯಕರನ್ನಾಗಿಸುವ ಪ್ರಯೋಗಗಳು ನಡೆಯುತ್ತಿವೆ. ಹಿಂದುಳಿದ ವರ್ಗಗಳ ಕಾಂಗ್ರೆಸ್ ಬ್ರಾಹ್ಮಣರನ್ನು ಒಲೈಸುತ್ತಲೇ ಅಹಿಂದ, ಒಕ್ಕಲಿಗ, ಲಿಂಗಾಯತರ ಸಮೀಕರಣದೊಂದಿಗೆ ಅಧಿಕಾರದ ಗದ್ದುಗೆ ಏರಲು ಪ್ರಯತ್ನಿಸುತ್ತಿದೆ.
ಈ ನಡುವೆ ರಾಮಕೃಷ್ಣ ಹೆಗಡೆ ಪರಿವಾರದ ಶಶಿ ಎನ್ನುವ ಕುಡಿ ಜನತಾ ಪರಿವಾರ ಬಿಟ್ಟು ಸಂಘ ಪರಿವಾರದ ಬಿ.ಜೆ.ಪಿ. ಸೇರಲು ಈ ತಿಂಗಳ ಕೊನೆಯ ಒಂದು ದಿನವನ್ನು ನಿಗದಿ ಮಾಡಿದೆ.
ಹಾಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿ ಶಶಿ ಭೂಷಣ ಹೆಗಡೆಯವರ ವರೆಗೆ ಜನತಾ ಪರಿವಾರದ ಅನೇಕರು ಸಂಘದ ಚೆಡ್ಡಿ ಹಾಕಿ ಕೋಲು ಜಳಪಿಸುತ್ತಿರುವ ಹಿಂದೆ ಈ ನಾಯಕರು ಮತ್ತು ಅವರ ಪರಿವಾರಗಳ ಸೋಲುಗಳಿವೆ.
ಡಾ.ಶಶಿಭೂಷಣ ಹೆಗಡೆ ಪ್ರಿಯಾಂಕಾ ಖರ್ಗೆ ಮೂಲಕ ಕಾಂಗ್ರೆಸ್ ಸೇರುವ ಪ್ರಯತ್ನ ನಡೆಸಿ ಅಲ್ಲಿ ಭರವಸೆ ಸಿಗದ ಹಿನ್ನೆಲೆಯಲ್ಲಿ ಬಸವರಾಜ್ ಬೊಮ್ಮಯಿ ಮೂಲಕ ಬಿ.ಜೆ.ಪಿ. ಸೇರಿ ಕುಮಟಾ ಕ್ಷೇತ್ರದ ಬಿ.ಜೆ.ಪಿ. ಟಿಕೇಟ್ ಅಥವಾ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಬಿ.ಜೆ.ಪಿ. ಅಭ್ಯರ್ಥಿಯಾಗಲು ಸಿದ್ಧತೆ ನಡೆಸಿ ಬಿ.ಜೆ.ಪಿ. ಸೇರುತ್ತಿದ್ದಾರೆ ಎನ್ನುವುದು ಬಹಿರಂಗ ಗುಟ್ಟು.
ಈ ವಿದ್ಯಮಾನಕ್ಕೆ ತೆರೆಮರೆಯಲ್ಲಿ ಪ್ರಯತ್ನಿಸಿ ರಾಜ್ಯ ವಿಧಾನಸಭೆಗೆ ಕುಮಟಾ ಅಥವಾ ಶಿರಸಿ ಕ್ಷೇತ್ರದಿಂದ ಆಯ್ಕೆ ಬಯಸಿರುವ ಸಂಸದ ಅನಂತಕುಮಾರ ಹೆಗಡೆ ಶಶಿಭೂಷಣರ ನೆರವಿನಿಂದ ರಾಜ್ಯ ವಿಧಾನಸಭಾ ಅಧ್ಯಕ್ಷ ಕಾಗೇರಿ ವಿಶ್ವೇಶ್ವರ ಹೆಗಡೆಯವರ ವಿರುದ್ಧ ಸಮರಕ್ಕೆ ಸಿದ್ಧರಾಗಿದ್ದಾರೆ ಎನ್ನಲಾಗುತ್ತಿದೆ.
ಈ ವಿದ್ಯಮಾನಗಳ ನಡುವೆ ಕೆ.ಪಿ.ಸಿ.ಸಿ. ರಾಜ್ಯ ಕಾರ್ಯದರ್ಶಿ ಭೀಮಣ್ಣ ನಾಯ್ಕರಿಗೆ ಟಾಂಗ್ ಕೊಡಲು ಪ್ರಯತ್ನಿಸುತಿದ್ದ ನಿವೇದಿತ್ ಆಳ್ವ ಶಿರಸಿ ಸಹವಾಸ ಬೇಡ ಎಂದು ಕುಮಟಾ ಕ್ಷೇತ್ರದತ್ತ ದೃಷ್ಟಿ ನೆಟ್ಟಿದ್ದಾರೆ ಎನ್ನುವುದು ಹೊಸ ವಿದ್ಯಮಾನ.
ಶಿರಸಿಯ ಉಪೇಂದ್ರ ಪೈ ಜಾ ದಳದಿಂದ,ಬಿ.ಜೆ.ಪಿ.ಯಿಂದ ಕಾಗೇರಿ ಅಥವಾ ಕೆ.ಜಿ. ನಾಯ್ಕ ಹಣಜಿಬೈಲ್, ಇವರಿಗೆ ಎದುರಾಗಿ ಕಾಂಗ್ರೆಸ್ ನಿಂದ ಭೀಮಣ್ಣ ನಾಯ್ಕ ಅಥವಾ ವೆಂಕಟೇಶ್ ಹೆಗಡೆ ಎನ್ನುವ ಗಾಳಿಸುದ್ದಿಗಳ ನಡುವೆ ಹೋಟೆಲ್ ಉದ್ಘಾಟನೆ, ಪುತ್ರನ ಮದುವೆ ಅದ್ಧೂರಿ ಸಮಾರಂಭಗಳಿಂದ ಜನರ ಪ್ರೀತಿ ಗಳಿಸಿರುವ ಭೀಮಣ್ಣ ನಾಯ್ಕ ಈ ಬಾರಿ ನಿರ್ಣಾಯಕ ಹೋರಾಟ ಎಂದು ತೊಡೆ ತಟ್ಟಿದ್ದಾರಂತೆ! ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ ರಾಜಧಾನಿಯಿಂದ ಬಹುದೂರದ ಶಿರಸಿ-ಸಿದ್ಧಾಪುರಗಳು ಈ ಬಾರಿ ರಾಜ್ಯ-ರಾಷ್ಟ್ರ ನಾಯಕರ ಗಮನ ಸೆಳೆದಿವೆ. ಆಡಳಿತ ವಿರೋಧಿ ಅಲೆಯ ಬಿ.ಜೆ.ಪಿ.ಗೆ ಜೆ.ಡಿ.ಎಸ್. ಹೊಡೆತಕೊಡುವುದರಿಂದ ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವುದಂತೂ ಸತ್ಯ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
