

ರಾಜ್ಯ ವಿಧಾನಸಭಾ ಚುನಾವಣೆ ನಡೆದು ಫಲಿತಾಂಶ ಹೊರಬಿದ್ದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ೫ ಜನ ಶಾಸಕರಿದ್ದ ಬಿ.ಜೆ.ಪಿ. ಈ ಬಾರಿ ಕೇವಲ ಎರಡು ಕ್ಷೇತ್ರಗಳನ್ನು ಮಾತ್ರ ಉಳಿಸಿಕೊಂಡಿದೆ. ಒಂದೇ ಸ್ಥಾನ ಗಳಿಸಿದ್ದ ಕಾಂಗ್ರೆಸ್ ಈ ಬಾರಿ ನಾಲ್ಕು ಕ್ಷೇತ್ರ ಗಳಿಸಿ ದಿಗ್ವಿಜಯ ಸಾಧಿಸಿದೆ. ಉತ್ತರ ಕನ್ನಡ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಈ ಬಾರಿ ಶಿರಸಿ ಕ್ಷೇತ್ರ ಹಲವು ಕೋನಗಳಿಂದ ಜನಮನ ಸೆಳೆದಿತ್ತು. ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನಿರಂತರವಾಗಿ ಜಯಗಳಿಸಿದ್ದ ಶಿರಸಿ ಕ್ಷೇತ್ರದಲ್ಲಿ ಈ ಬಾರಿ ವಿಶ್ವೇಶ್ವರ ಹೆಗಡೆಯವರನ್ನು ಸೋಲಿಸಿದ ಉದ್ಯಮಿ ಭೀಮಣ್ಣ ನಾಯ್ಕ ಈ ಹಿಂದೆ ಮೂರು ಬಾರಿ ಇದೇ ಕ್ಷೇತ್ರದಲ್ಲಿ ಸೋಲು ಕಂಡಿದ್ದರು.
ಬದಲಾದ ಪರಿಸ್ಥಿತಿಯಲ್ಲಿ ಸೋಲಿಲ್ಲದ ಸರದಾರ ವಿಶ್ವೇಶ್ವರ ಹೆಗಡೆಯವರನ್ನು ಮೊಟ್ಟಮೊದಲಿಗೆ ಸೋಲಿಸಿದ ಭೀಮಣ್ಣ ನಾಯ್ಕರನ್ನು ಕ್ಷೇತ್ರದ ಜನತೆ ಸ್ವಾಗತಿಸಿದ್ದು ವಿಭಿನ್ನವಾಗಿತ್ತು. ಕುಮಟಾದಲ್ಲಿ ಚುನಾವಣಾ ಫಲಿತಾಂಶ ಪ್ರಕಟವಾಗಿ ಕುಮಟಾದಿಂದ ಹೊರಟ ಭೀಮಣ್ಣ ತಮ್ಮ ಕ್ಷೇತ್ರ ಶಿರಸಿ-ಸಿದ್ಧಾಪುರಕ್ಕೆ ಬರುವಷ್ಟರಲ್ಲಿ ಸಂಜೆಯಾಗತೊಡಗಿತ್ತು. ಸ್ವಾತಂತ್ರ್ಯ ದೊರೆತ ನಂತರ ಮೊಟ್ಟಮೊದಲ ಬಾರಿಗೆ ಹಿಂದುಳಿದ ವರ್ಗಗಳ ಮೊದಲ ಶಾಸಕನಾಗಿ ಜಯಗಳಿಸಿದ ಭೀಮಣ್ಣ ನಾಯ್ಕರನ್ನು ಸಿದ್ಧಾಪುರದಲ್ಲಿ ಹಸಿರುಹಾಸಿನ ಸ್ವಾಗತ ಕೋರಲಾಯಿತು.
ಸಿದ್ಧಾಪುರ ತಾಲೂಕಿನ ಗಡಿಗಳಿಂದ ಪ್ರಾರಂಭವಾಗಿ ತಾಲೂಕು ಕೇಂದ್ರದ ವರೆಗೆ ಅನೇಕ ಕಡೆ ಭೀಮಣ್ಣ ನಾಯ್ಕರನ್ನು ಸ್ವಾಗತಿಸಲಾಯಿತು.ಸಿದ್ಧಾಪುರ ನಗರ ಪ್ರವೇಶಿಸುತ್ತಲೇ ಸಾವಿರಾರು ಜನರು ಸೇರಿ ರೋಡ್ ಶೋ ನಡೆಸುವ ಮೂಲಕ ಮತದಾರರಿಗೆ ಧನ್ಯವಾದ ತಿಳಿಸಿದರು.
ತಮ್ಮ ಹೊಸ ಶಾಸಕ ಭೀಮಣ್ಣ ನಾಯ್ಕರನ್ನು ಅಭಿನಂದಿಸುವ ಭರದಲ್ಲಿ ಅಭಿಮಾನಿಗಳು ಬೇರೆ ಯಾವ ಲಕ್ಷವೂ ಇಲ್ಲದೆ ಕುಣಿದುಕುಪ್ಪಳಿಸಿದರು. ನೂತನ ಶಾಸಕ ಭೀಮಣ್ಣ ನಾಯ್ಕರನ್ನು ಸುತ್ತುವರಿದ ಜನರು ಮಾಧ್ಯಮಗಳಿಗೆ ಶಾಸಕರು ಪ್ರತಿಕ್ರೀಯಿಸಲೂ ಅವಕಾಶ ನೀಡಲಿಲ್ಲ. ಅನೇಕ ಸೋಲುಗಳ ನಂತರ ಗೆಲುವು ಸಾಧಿಸಿದ ಭೀಮಣ್ಣ ನಾಯ್ಕ ಸೋಲರಿಯದ ವಿಶ್ವೇಶ್ವರ ಹೆಗಡೆಯವರನ್ನು ಸೋಲಿಸಿದ್ದು ಈ ಅಭಿಮಾನದ ಹಿಂದಿನ ಗುಟ್ಟು ಎನ್ನುವಂತಿತ್ತು.
