

ಕಡಕೇರಿಯಪ್ರಾಥಮಿಕ ಶಾಲೆಯಲ್ಲಿ ಇಂದು ನಡೆದ ವಿಠ್ಠಲ್ ಜನ್ಮ ದಿನಾಚರಣೆ ನಿಮಿತ್ತದ ಪುಟ್ಟ ಕಾರ್ಯಕ್ರಮದಲ್ಲಿ ವಿಠ್ಠಲ್ ಸಂಗಾತಿ ಯಮುನಾ ಜೊತೆ ಪಾಲ್ಗೊಂಡಿದ್ದೆ.ವಿಠ್ಠಲ್ ಭಂಡಾರಿ ಬದುಕಿದ್ದಾಗ ನಿಮ್ಮ ಜನ್ಮ ದಿನ ಎಂದರೆ ಅದರಷ್ಟಕ್ಕೆ ಅದು ಬಂದು ಹೋಗುತ್ತೆ ಬಿಡಿ ಎನ್ನುತಿದ್ದರೇನೋ?
ಸಿದ್ಧಾಪುರದಲ್ಲಿ ಪ್ರಗತಿಪರವಾದ, ಜಾತ್ಯಾತೀತವಾದ ಯಾವುದೇ ಕಾರ್ಯಕ್ರಮವಾದರೂ ಅವರು ಇರುತಿದ್ದರು. ವಿಠ್ಠಲ್ ಮತ್ತು ನಮ್ಮ ನಡುವೆ ಒಂದು ಅಲಿಖಿತ ಒಪ್ಪಂದವಿತ್ತು. ನಮ್ಮ ಸಮೂಹದ ಕಾರ್ಯಕ್ರಮಗಳಲ್ಲಿ ಅವರಿರಬೇಕು, ಅವರ ಕೆಲವು ಕಾರ್ಯಕ್ರಮಗಳಲ್ಲಿ ನಾವಿರಬೇಕು, ಸುಮಾರು ಹತ್ತು ವರ್ಷಗಳ ಹಿಂದಿನ ಕತೆ ಆಗಷ್ಟೇ ಎಷ್ಟೋ ವರ್ಷಗಳ ನಂತರ ನಮ್ಮೂರಿಗೆ ಮರಳಿದ್ದ ನನಗೆ ಜೊತೆಗೆ ಆಪ್ತ-ಆತ್ಮೀಯನೆನಿಸಿ ಭಾಸ್ಕರ್,ನರೇಂದ್ರ ಇರುತಿದ್ದರು. ಭಂಡಾರಿ ಆಗಾಗ ಸಿಕ್ಕು ಮಿಂಚಂತೆ ಮಾಯವಾಗುವ ಸಖನಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳೂ ಸೇರಿ ಬಹುತೇಕ ನಮ್ಮ ಕಾರ್ಯಕ್ರಮಗಳಲ್ಲಿ ನಮಗೆ ಥಟ್ಟನೆ ಹೊಳೆಯುತಿದ್ದ ಹೆಸರುಗಳೇ ಡಾ. ವಿಠ್ಠಲ್ ಭಂಡಾರಿ,ಸುಬ್ರಾಯ ಮತ್ತೀಹಳ್ಳಿ ಉಳಿದಂತೆ ತಮ್ಮಣ್ಣ, ಎಂ.ಕೆ.ನಾಯ್ಕ, ರತ್ನಾಕರ ಸೇರಿದ ಕೆಲವು ಸರ್ಕಾರಿ ನೌಕರರು.
ಭಂಡಾರಿ ಮತ್ತು ಮತ್ತೀಹಳ್ಳಿ ಹೆಸರು ಬರೆದಿಟ್ಟು ಉಳಿದ ಹೆಸರುಗಳಿಗೆ ಹುಡುಕಾಡುತಿದ್ದ ಸಮಯದಲ್ಲಿ ನಾನ್ ಬರ್ತೆ ಬೇರೆ ಯಾರಾದ್ರೂ ಸಿಕ್ಕರೆ ಒಳ್ಳೆಯದು ಎನ್ನುತಿದ್ದ ಈ ಎರಡು ಹೆಸರುಗಳು ನಮ್ಮ ಆಹ್ವಾನಿತರ ಮೊದಲೆರಡು ಹೆಸರುಗಳಾಗಿರುತಿದ್ದವು. ಈಗಲೂ ಸುಬ್ರಾಯ ಮತ್ತೀಹಳ್ಳಿ ನಮಗೆ ಸಿಗುವ ಹಿರಿಯ ಮಿತ್ರ ಆದರೆ ವಿಠ್ಠಲ್ ಭಂಡಾರಿ ಹುಡುಕುವುದೆಲ್ಲಿ?
ಇಂಥ ಅನೇಕ ನೆನಪುಗಳು ನಮ್ಮ ನಡುವಿನ ವಿಠ್ಠಲ್ ರ ಅನುಪಸ್ಥಿತಿಯನ್ನು ಮತ್ತೆ ಮತ್ತೆ ನೆನಪಿಸುತ್ತವೆ.
ಗ್ರಹಣ, ವೈಜ್ಞಾನಿಕ, ವೈಚಾರಿಕ ವಿಷಯಗಳ ಚರ್ಚೆ, ಕಾರ್ಯಕ್ರಮ, ಚಟುವಟಿಕೆ ಏನಿದ್ದರೂ ವಿಠ್ಠಲ್ ರ ಕರೆ ತಪ್ಪದೇ ನಮಗೆ ಬರುತಿತ್ತು. ಹಲವು ಕೆಲಸ, ಕೆಲವು ಮಿತಿಗಳ ನಡುವೆ ಸದಾ ಪಾದರಸದಂತೆ ಕ್ರೀಯಾಶೀಲವಾಗಿರುತಿದ್ದ ವಿಠ್ಠಲ್ ಕಲಿಯುವುದು, ಕಲಿಸುವುದರಲ್ಲಿ ನಿಸ್ಸೀಮ, ಓದು, ಸಂಘಟನೆ, ಸಂಶೋಧನೆಗಳ ನಡುವೆ ಪ್ರವಾಸ, ವಿಹಾರ ಸಂಘಟನೆಯ ಕೆಲಸಕ್ಕಾಗಿ ಅಲೆಯುವ ವಿಠ್ಠಲ್ ಸಲಹೆ ಕೊಡುವಾಗ ಕೂಡಾ ಹೀಗಾದರೆ, ಹೀಗಿದ್ದರೆ ಉತ್ತಮ ಎನ್ನುವ ಸಲಹೆ ಕೊಡುತಿದ್ದರೇ ವಿನ: ಇದೇ ಎಂದು ಯಾರೊಂದಿಗೂ ಹಠಕ್ಕೆ ಬೀಳುತ್ತಿರಲಿಲ್ಲ.
ಸಂಪಾದನೆ ಆಸೆಗಾಗಿ ಏನನ್ನೂ ಮಾಡದ ವಿಠ್ಠಲ್ ಸಿದ್ಧಾಂತ, ಬದ್ಧತೆಗಾಗಿ ಸದಾ, ಮಿಡಿಯುತಿದ್ದ ಜೀವ. ಒಮ್ಮೆ ಒಂದು ದೊಡ್ಡ ಕಾರ್ಯಕ್ರಮಕ್ಕೆ ವಿಶೇಶ ಅತಿಥಿಯನ್ನಾಗಿ ಕರೆದಿದ್ದಾಗ ಗೌರವಧನವೆಂದು ಎರಡೂವರೆ ಸಾವಿರ ರೂಪಾಯಿ ಕವರ್ ನಲ್ಲಿ ಇಟ್ಟು ಕೊಟ್ಟಿದ್ದೆವು.
ಮನೆಗೆ ಹೋಗಿ ಪಟ್ಟಣ ತೆರೆದ ವಿಠ್ಠಲ್ ಮರಳಿ ಪೋನಾಯಿಸಿ ಇಷ್ಟು ದೊಡ್ಡ ಗೌರವ ಧನ ನಾನು ಈವರೆಗೆ ಪಡೆದೇ ಇಲ್ಲ, ನಿಮ್ಮ ಕವರ್ ಜೊತೆಗಿನ ಹಣವನ್ನು ಹಾಗೇ ಎತ್ತಿಟ್ಟಿದ್ದೇನಿ ಈಹಣವನ್ನು ನೀವು ಮಾಡುವ ಒಳ್ಳೆಯ ಕೆಲಸಕ್ಕೆ ಬಳಸಿ ಎಂದು ನಮ್ಮನ್ನು ದಂಗು ಬಡಿಸಿದ್ದರು. ಇಂಥ ಅನೇಕ ನೆನಪುಗಳನ್ನು ಬಿಟ್ಟು ಹೋದ ಹಿರಿಯ ಸಂಗಾತಿ ವಿಠ್ಠಲ್ ಈಗಿದ್ದರೂ ಅಷ್ಟೇ ಚುರುಕಾಗಿ ಮುಂದುವರಿಯುತಿದ್ದರು. ಸಂವಿಧಾನದ ಓದುಕಾರ್ಯಕ್ರಮ, ಪುಸ್ತಕ ಪ್ರಕಟಣೆ,ತಿಂಗಳ ಚಿತ್ರ, ಸಹಯಾನ,ಪ್ರೀತಿಪದಗಳ ಪಯಣ, ಬರವಣಿಗೆ, ಭಾಷಣ ಹೀಗೆ ಎಲ್ಲವನ್ನೂ ತನ್ನ ಕರ್ತವ್ಯ ಎನ್ನುವಷ್ಟು ಪ್ರಾಮಾಣಿಕವಾಗಿ ನಿಭಾಯಿಸುತಿದ್ದ ವಿಠ್ಠಲ್ ಉತ್ತರ ಕನ್ನಡ ರಾಜ್ಯಕ್ಕೆ ಮಾಣಿಕ್ಯವಾಗಿದ್ದವರು ಈಗ ಅವರಿಲ್ಲ ಎನ್ನುವುದು ನಾವೆಲ್ಲಾ ಅರಗಿಸಿಕೊಳ್ಳಲು ಕಷ್ಟದ ಕೆಲಸ. – ಕನ್ನೇಶ್.
