

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷಾಗಿ ನೇಮಕಗೊಂಡ ನಂತರ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷಾಗಿ ನೇಮಕಗೊಂಡ ನಂತರ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಇದಕ್ಕು ಮುನ್ನ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಮತ್ತು ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಇದರ ಬೆನ್ನಲ್ಲೇ ವಿಜೇಯಂದ್ರ ಅವರು ಪ್ರಧಾನಿಯನ್ನು ಭೇಟಿ ಮಾಡಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಪ್ರಧಾನಿ ಮೋದಿ ಭೇಟಿ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಂಡಿರುವ ವಿಜಯೇಂದ್ರ, ರಾಜ್ಯಾಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು ಭೇಟಿಯಾಗಿ ಆಶೀರ್ವಾದ ಪಡೆದ ಸಂದರ್ಭ ಸಂತ ತೇಜಸ್ಸಿನ ಭಾರತಾಂಬೆಯ ಮಹಾನ್ ಸುಪುತ್ರನ ದರ್ಶನ ಪಡೆದ ಅನುಭವವಾಯಿತು ಎಂದು ಬರೆದುಕೊಂಡಿದ್ದಾರೆ.
2024 ರ ಮಹಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಮೋದಿ ಅವರ ಮಡಿಲಿಗೆ ಸಮರ್ಪಿಸಬೇಕೆಂಬ ನನ್ನ ಹೆಗ್ಗುರಿಯ ಹೆಜ್ಜೆಗೆ ಇಂದಿನ ಭೇಟಿಯ ಅವರ ಪ್ರೇರಣೆಯ ಮಾತುಗಳು ನನ್ನಲ್ಲಿ ಅದಮ್ಯ ಆತ್ಮ ವಿಶ್ವಾಸ ಮೂಡಿಸಿದೆ ಎಂದು ವಿಜಯೇಂದ್ರ ಅವರು ಹೇಳಿದ್ದಾರೆ. (ಕಪ್ರಡಾ)
