


ನಾನು ದೇವರನ್ನು ನಂಬುವವನಲ್ಲ. ದೇವರನ್ನು ನಂಬುವವರಿಗಿಂತ ನಾನು ಶ್ರೇಷ್ಠನೆಂದು ತಿಳಿದುಕೊಳ್ಳುವ ಭ್ರಮೆಯೂ ನನಗಿಲ್ಲ. ಪ್ರತಿಯೊಬ್ಬರದೂ ಒಂದೊಂದು ವಿಧಾನ. ದೇವರನ್ನು ನಂಬಿರುವ ಸಾಧಾರಣ ಜನರನ್ನು ನಾನು ನೋಡಿದ್ದೇನೆ. ಅಂಥವರು ದೇವಸ್ಥಾನ, ಮಸೀದಿ, ಚರ್ಚ್ ಗಳಿಗೆ ಹೋಗಿ ಶಾಂತಿ ಪಡೆಯುವುದುಂಟು. ಅವರಿಗೆ ನಾನೆಂದು ಅಡ್ಡಿಮಾಡುವವನೂ ಅಲ್ಲ. ಏಕೆಂದರೆ ಹಾಗೆ ಮಾಡುವುದರಿಂದ ಅವರ ಮುಖಗಳ ಮೇಲೆ ಮೂಡುವ ಶಾಂತಿಯನ್ನು ಪ್ರಾಯಶಃ ಬೇರಾವ ರೀತಿಯಿಂದಲೂ ನಾನು ಅವರಿಗೆ ಕೊಡಲಾರೆ. ಪರಿಸ್ಥಿತಿ ಹೀಗಿರುವಾಗ ಅವರನ್ನು ತಡೆಯಲು ನಾನಾರು…?

ನಾನು ದೇವರಲ್ಲಿ ನಂಬಿಕೆ ಇಲ್ಲದವನೆನೋ ನಿಜ. ಆದರೆ ಎಷ್ಟೋ ಕಲಾತ್ಮಕ ಕಲ್ಪನೆಗಳು ನನ್ನ ಮನ ಮಿಡಿಯುತ್ತವೆ. ಉದಾಹರಣೆಗೆ ಶಿಲುಬೆ ಮೇಲಿರುವ ಯೇಸುವಿನ ಕಲ್ಪನೆಯು ಕೋಟಿಗಟ್ಟಲೇ ಕ್ರಿಶ್ಚಿಯನ್ನರನ್ನು ಸೆಳೆದಂತೆ ನನ್ನ ಮನವನ್ನೂ ಸೆಳೆದಿದೆ. ಹ್ಯಾಮ್ಲೆಟ್ ಮತ್ತು ಜೂಲಿಯೆಟ್ ನನ್ನ ಮನ ಮಿಡಿಯಬಹುದಾದರೆ ಹುಸೇನ್ ಮತ್ತು ಏಸು ನನ್ನ ಮನ ಸೆಳೆಯಬಾರದೇಕೆ? ಅದರಂತೆಯೇ ರಾಮ, ಕೃಷ್ಣ, ಶಿವನ ಕಲ್ಪನೆಯೂ ನನಗೆ ಆಕರ್ಷಣೀಯವೆನಿಸುತ್ತದೆ. ಆ ಶಿವನಂತೂ ಎಲ್ಲರಿಗಿಂತ ತುಸು ಹೆಚ್ಚಿಗೆ! ದೇವರಲ್ಲಿ ನಂಬಿಕೆ ಇರಲಿ ಬಿಡಲಿ ಕಲಾಪೂರ್ಣ ಕಲ್ಪನೆಗಳು ಮನಸ್ಸಿನ ಮೇಲೆ ಪರಿಣಾಮವನ್ನುಂಟು ಮಾಡುತ್ತವೆ…” — ಡಾ.ಲೋಹಿಯಾ
-‘ ಡಾ.ರಾಮಮನೋಹರ ಲೋಹಿಯಾ’

ನನ್ನ ದೇವರು
-ದೇವನೂರ ಮಹಾದೇವ
(“ಎದೆಗೆ ಬಿದ್ದ ಅಕ್ಷರ” ಸಂಕಲನದಿಂದ ಆಯ್ದ ಒಂದು ಭಾಗ. ನಮ್ಮ ಮರು ಓದಿಗಾಗಿ… ರೇಖಾ ಚಿತ್ರ- ದೇಮ)
ಕನ್ನಡದ ಪ್ರಸಿದ್ಧ ವಾರಪತ್ರಿಕೆಯೊಂದು ‘ನನ್ನ ದೇವರು’ ಹೆಸರಡಿ ಲೇಖಕರ, ಚಿಂತಕರ ಅನ್ನಿಸಿಕೆಗಳನ್ನು ಪ್ರಕಟಿಸುತ್ತಿತ್ತು. ಅಕಸ್ಮಾತ್ ನನ್ನನ್ನೂ ಕೇಳಿದರೆ ಯಾವುದಕ್ಕೂ ಇರಲಿ ಎಂದು ನಾನು ಬರೆಯಬೇಕಾದುದನ್ನು ಅಂದಾಜಿಸಿಕೊಂಡಿದ್ದೆ. ಆದರೆ ಪತ್ರಿಕೆಯವರು ನನಗೆ ದೇವರಿಲ್ಲ ಎಂದು ನಿರ್ಧರಿಸಿಕೊಂಡೋ ಏನೋ ನನ್ನನ್ನು ಕೇಳಲೇ ಇಲ್ಲ. ನಾನು ಅಂದಾಜಿಸಿಕೊಂಡಿದ್ದ ನನ್ನ ದೇವರು ನನ್ನೊಳಗೇ ಉಳಿಯಿತು.
ನನ್ನ ದೇವರು ನನ್ನೊಳಗೆ ಉಳಿದಿರುವುದು ಹೀಗೆ:
ಕವಿ ಸಿದ್ಧಲಿಂಗಯ್ಯ ಒಮ್ಮೆ ನನಗೆ ಹೇಳಿದ ಕತೆಯಲ್ಲಿ ಮನೆಮಂಚಮ್ಮ ಎಂಬ ಗ್ರಾಮದೇವತೆಯ ಒಳಗಿಂದ ನನ್ನ ದೇವರು ಒಡಮೂಡುತ್ತದೆ- ಒಂದ್ಸಲ ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ ದೇವತೆಗೆ ಗುಡಿಕಟ್ಟಲು ಆರಂಭಿಸುತ್ತಾರೆ. ಹೀಗೆ ಕಟ್ತಾ ಚಾವಣಿಮಟ್ಟಕ್ಕೆ ಆ ಗುಡಿ ಬಂದಾಗ ಒಬ್ಬನ ಮೈಮೇಲೆ ಆ ದೇವತೆ ಮಂಚಮ್ಮ ಆವಾಹಿಸಿಕೊಂಡು ‘ನಿಲ್ಸಿ ನನ್ ಮಕ್ಕಳಾ’ ಎಂದು ಅಬ್ಬರ ಮಾಡುತ್ತಾಳೆ. ಆ ಅಬ್ಬರಕ್ಕೆ ಜನ ತಮ್ಮ ಕೆಲ್ಸ ನಿಲ್ಸಿ ಕಕ್ಕಾಬಿಕ್ಕಿಯಾಗಿ ನೋಡುತ್ತಿರಲು ಆ ದೇವತೆ ಹಾಗೂ ಆ ಜನರ ನಡುವೆ ಮಾತುಕತೆ ನಡೆಯುತ್ತದೆ:
‘ಏನ್ರಯ್ಯಾ ಏನ್ ಮಾಡ್ತಾ ಇದ್ದೀರಿ?’
‘ನಿನಗೊಂದು ಗುಡಿಮನೆ ಕಟ್ತಾ ಇದ್ದೀವಿ ತಾಯಿ’
‘ಓಹೋ, ನನಗೇ ಗುಡಿಮನೆ ಕಟ್ತಾ ಇದ್ದೀರೋ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ ಮಕ್ಕಳಾ?’
‘ನನಗಿಲ್ಲ ತಾಯಿ’- ಅಲ್ಲೊಬ್ಬ ಹೇಳ್ತಾನೆ.
‘ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ’
-ಹೀಗೆಂದ ಮಂಚಮ್ಮದೇವಿ ಮನೆಮಂಚಮ್ಮನಾಗುತ್ತಾಳೆ!
ಛಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆಮಂಚಮ್ಮ ಇಂದು ಪೂಜಿತಳಾಗುತ್ತಿದ್ದಾಳೆ. ಈ ರೀತಿಯಲ್ಲಿ ಛಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದೇ ನನ್ನ ದೇವರಾಗುತ್ತದೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
