



ಒಂದು ಧಿಕ್ಕಾರ ಪ್ರಸಂಗ……… ಒಬ್ಬ ಶೂದ್ರ ನಾಯಕನ ಮಹತ್ವವನ್ನು ಹೇಗೆ ಕಡಿಮೆ ಮಾಡಬಹುದು? ಒಬ್ಬ ಸಾಮಾಜಿಕ ಹಿಂದುಳಿದ ಸಮುದಾಯದಿಂದ ಬಂದು ತನ್ನದೇ ಬದ್ದತೆ ಮತ್ತು ಶಕ್ತಿಯಿಂದ ಗಣ್ಯ ವ್ಯಕ್ತಿಯಾಗಿ ಬೆಳೆದ ನಾಯಕನೊಬ್ಬನ ಗೌರವ ಘನತೆಯನ್ನು ನಾಜೂಕಾಗಿ ತಗ್ಗಿಸಲು ಹೇಗೆ ಪ್ರಯತ್ನ ಮಾಡಬಹುದು ಎಂದರೆ ಇದಕ್ಕೆ ಸಾಗರದ ಆರೆಸ್ಸೆಸ್ ನಾಯಕರ ಕುಟಿಲತೆ ಒಂದು ಜ್ವಲಂತ ಸಾಕ್ಷಿ.
ವಿಷಯ ಇಷ್ಟೇ. ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪನವರಿಗೆ ಇತ್ತೀಚೆಗೆ ಪ್ರತಿಷ್ಟಿತ ದೇವರಾಜ ಅರಸು ಪುರಸ್ಕಾರವನ್ನು ರಾಜ್ಯ ಸರ್ಕಾರ ನೀಡಿ ಗೌರವಿಸಿತು. ರಾಜಕೀಯ ಹೋರಾಟ ಮತ್ತು ಸಾಮಾಜಿಕ ಬದ್ದತೆಗಳು ಮೇಳೈವಿಸಿದ ಈ ಹಿಂದುಳಿದ ವರ್ಗದ ನಾಯಕನಿಗೆ ನಾಗರಿಕ ಸನ್ಮಾನ ಮಾಡುವ ಯೋಚನೆ ಹಲವರಲ್ಲಿ ಬಂತು. ಶಿವಮೊಗ್ಗದಲ್ಲಿ ಒಂದು ಸನ್ಮಾನವೂ ನಡೆಯಿತು.

ಇದೀಗ ತಮ್ಮ ಇಳಿವಯಸ್ಸಿನಲ್ಲಿಯೂ ಹೆಚ್ಚು ಹೆಚ್ಚು ಸಮಾಜಮುಖಿಯಾಗಿ ಕೆಲಸ ಮಾಡಿರುವ ಶ್ರೀ ಕಾಗೋಡು ತಿಮ್ಮಪ್ಪ ಅವರನ್ನು ಶಿವಮೊಗ್ಗ ಸಾಗರದ ಪ್ರತಿ ಹಳ್ಳಿಯಲ್ಲಿ ಅಭಿನಂದಿಸಿ ಗೌರವಿಸಿದರೂ ತಪ್ಪಲ್ಲ.
ಯಾಕೆಂದರೆ ಕಾಗೋಡು ತಿಮ್ಮಪ್ಪನವರು ತೋರಿಕೆಯ ರಾಜಕಾರಣಿಯಾಗದೇ ನಿಷ್ಟೂರಮತಿ ರಾಜಕಾರಣಿಯಾಗೇ ಬಂದಿದ್ದನ್ನು ಇಡೀ ರಾಜ್ಯ ಕಂಡಿದೆ. ತಮ್ಮ ಅದಿಕಾರವನ್ನೂ ಅವರು ನಾಡಿನ ಎಲ್ಲಾ ತಳಸಮುದಾಯಗಳ ಏಳಿಗೆಗೆ ಬಳಸಿಕೊಂಡ ಅನೇಕಾನೇಕ ಉದಾಹರಣೆಗಳಿವೆ. ಭೂಸುದಾರಣೆ ಕಾಯ್ದೆ ಜಾರಿ, ಮೀಸಲಾತಿ ವರ್ಗೀಕರಣ, ಜನರಿಗೆ ಭೂ ಹಕ್ಕು ಇತ್ಯಾದಿ ಕೆಲಸಗಳಲ್ಲಿ ಒಬ್ಬ ಮಾದರಿ ರಾಜಕಾರಣಿಯಾಗಿ ಕಾಗೋಡು ತಿಮ್ಮಪ್ಪ ಇಡೀ ರಾಜ್ಯದ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಲೋಹಿಯಾವಾದ, ಸಮಾಜವಾದದಂತ ಸಿದ್ದಾಂತಗಳ ಪ್ರಬಾವ, ತಮ್ಮ ಹುಟ್ಟೂರಾದ ಕಾಗೋಡಿನಿಂದಲೇ ಲೋಕಕ್ಕೆ ಪರಿಚಿತವಾದ ಕಾಗೋಡು ಸತ್ಯಾಗ್ರಹದ ಪ್ರಭಾವಗಳಿಗೆ ಕಾಗೋಡು ತಿಮ್ಮಪ್ಪ ಬಹುವಾಗಿ ಒಳಗಾದ ಪರಿಣಾಮ ಅವರ ವ್ಯಕ್ತಿತ್ವದ ಮೇಲೂ ಆಗಿದೆ. ಹೀಗಾಗಿ ಅವರೊಬ್ಬ ಅನನ್ಯ ನಾಯಕರಾಗಿ ಬೆಳೆದರು.
ಈಗ ನಾಳೆ ಸಾಗರದಲ್ಲಿ ಅವರಿಗೆ ನಾಗರಿಕ ಸನ್ಮಾನ ಮಾಡಲಾಗುತ್ತಿದೆ. ಸಂತೋಷ. ಮತ್ತೆ ಏನು ಸಮಸ್ಯೆ ಅಂದ್ರ? ಸಾಗರದಲ್ಲಿ ಈ ನಾಗರಿಕ ಸನ್ಮಾನ ನಡೆಸುತ್ತಿರುವರು ಕಾಗೋಡು ತಿಮ್ಮಪ್ಪ ಅವರೊಂದಿಗೆ ಹರನಾಥರಾವ್ ಅನ್ನುವ ಮತ್ತೊಬ್ಬರಿಗೂ ಸನ್ಮಾನ ನಡೆಸುತ್ತಿದ್ದಾರೆ. ಈ ಹರನಾಥರಾವ್ ಸಾಗರದ ಮಟ್ಟಿಗೆ ಒಬ್ಬ ಸಂಬಾವಿತ ವ್ಯಕ್ತಿ ಅನ್ನೋದರಲ್ಲಿ ಎರಡು ಮಾತಿಲ್ಲ. ಖಂಡಿತಾ ಅವರ ಅಭಿಮಾನಿಗಳು ಯಾರಾದರಿದ್ದರೆ ಅವರು ಸೇರಿಕೊಂಡು ಹರನಾಥರಾವ್ ಅವರಗೂ ಅವರಿಗೂ ಒಂದು ಪ್ರತ್ಯೇಕ ನಾಗರಿಕ ಸನ್ಮಾನ ಹಮ್ಮಿಕೊಳ್ಳಬಹುದಿತ್ತು. ಆದರೆ ನಾಳೆ ಮಾನ್ಯ ಕಾಗೋಡು ತಿಮ್ಮಪ್ಪನವರೊಂದಿಗೇ ಹರನಾಥರಾವ್ ಅವರಿಗೂ ಸನ್ಮನಾ ಏರ್ಪಡಿಸಿರುವುದು ಇದೆಯಲ್ಲಾ ಇದೇ ಸಾಗರದ ಬ್ರಾಹ್ಮಣ ಚೆಡ್ಡಿ ಪಟಾಲಂ ಮಾಡಿರುವ ಒಂದು ಕುತಂತ್ರ ಮತ್ತು ಷಡ್ಯಂತ್ರ.
ನಾಯಕತ್ವದಲ್ಲಿರಲಿ, ಸೈದ್ಧಾಂತಿಕ ತಿಳುವಳಿಕೆ, ಸಾಮಾಜಿಕ ಪ್ರಜ್ಣೆಯಲ್ಲಿರಲಿ ಕಾಗೋಡು ತಿಮ್ಮಪ್ಪನವರಿಗೂ ಹರನಾಥ್ ರಾವ್ ಅವರಿಗೂ ಹೋಲಿಕೆಯೇ ಸಾಧ್ಯವಿಲ್ಲ. ಹೀಗಿದ್ದರೂ ಸಮಾನ ಸ್ಥಾಯಿಯಲ್ಲಿ ಇಬ್ಬರಿಗೂ ಒಂದೇ ವೇದಿಕೆಯಲ್ಲಿ ನಾಗರಿಕ ಸನ್ಮಾನ ಏರ್ಪಡಿಸಿರುವುದು ಕಾಗೋಡು ತಿಮ್ಮಪ್ಪನವರ ವ್ಯಕ್ತಿತ್ವ ವನ್ನು ಕುಂದಿಸುವ ಕುಟಿಲ ತಂತ್ರವೇ ವಿನಃ ಬೇರೆ ಏನಲ್ಲ.

ಈ ನಾಗರಿಕ ಸನ್ಮಾನದ ಉಸ್ತುವಾರಿ ವಹಿಸಿರುವವರು ಕೆಲವೇ ದಿನಗಳ ಹಿಂದೆ ಅಯೋಧ್ಯೆ ಹೋಗಿದ್ದ ಕರಸೇವಕರಿಗೂ ಸನ್ಮಾನ ಏರ್ಪಡಿಸಿದ್ದರು ಎಂದರೆ ಅರ್ಥ ಮಾಡಿಕೊಳ್ಳಿ. ಅದೇ ಮಲಿನ ಮನಸ್ಸುಗಳಿಂದ ಕಾಗೋಡು ತಿಮ್ಮಪ್ಪನವರೂ ಸನ್ಮಾನ ಪಡೆಯಬೇಕಿರಲಿಲ್ಲ. ಇದರಲ್ಲಿ ಸಾಗರದ ಕಾಂಗ್ರೆಸ್ ನಾಯಕರ ವೈಚಾರಿಕ ದಿವಾಳಿತನ ಮತ್ತು ಈಡಿಗ ಸಂಘದವರ ಹೊಣೆಗೇಡಿತನ ಎರಡೂ ಸೇರಿ, ಕಾಗೋಡು ತಿಮ್ಮಪ್ಪನವರಿಗೆ ಈ ಸನ್ಮಾನದ ಮೂಲಕ ಅಗುತ್ತಿರುವ ಅಗೌರವ ಅಪಮಾನ ಎಲ್ಲರಿಗೂ ಸರಿ ಅನಿಸಿಬಿಟ್ಟಿದೆ.
ಇವರು ಪ್ರಶ್ನಿಸಬೇಕಿತ್ತು. ನಿಮ್ಮ ಹರನಾಥರಾವ್ ಅವರಿಗೆ ಬೇಕಾದರೆ ಸನ್ಮಾನ ಮಾಡಿ. ಬೇಡ ಅನ್ನುವುದಿಲ್ಲ. ಆದರೆ ಈ ನಾಡಿನ ರಾಜಕೀಯ ಇತಿಹಾಸದಲ್ಲೇ ಮಹತ್ವದ ಪಾತ್ರ ಹೊಂದಿರುವ ಕಾಗೋಡು ತಿಮ್ಮಪ್ಪನವರಿಗೆ ಒಬ್ಬರಿಗೇ ನಾವು ಸನ್ಮಾನ ಸಮಾರಂಭ ನಡೆಸುತ್ತೇವೆ, ಇಡೀ ತಾಲ್ಲೂಕಿನ ಪ್ರಜ್ಣಾವಂತರು, ಯುವಜನರನ್ನು ಕರೆಸಿ ಸನ್ಮಾನಿಸಿ ‘ಕಾಗೋಡು ಅವರ ಕೊಡುಗೆ ಏನು ಎಂದು ತಿಳಿಸಿಕೊಡುತ್ತೇವೆ’ ಎಂದು ಗಟ್ಟಿ ಧ್ವನಿಯಲ್ಲಿ ಹೇಳುವ ಒಬ್ಬ ಸ್ವಾಭಿಮಾನಿಗೂ ಸಾಗರದಲ್ಲಿ ಬರ ಬಂದಿತ್ತಾ?

ಕಾಗೋಡು ಅವರ ಜೊತೆ ಕೂರಿಸಿ, ಅವರೂ ಹರನಾಥ್ ರಾವ್ ಇಬ್ಬರೂ ಸಮ ಎಂದು ಸಂದೇಶ ಕೊಡಲು ಈ ಸಮಾರಂಭ ಏರ್ಪಡಿಸಲು ಹೊರಟಾಗ ಇದೇ ಸಾಗರದ ಶಾಸಕ ಗೋಪಾಲಕೃಷ್ಣ ಬೇಳೂರು, ಮಂತ್ರಿ ಮಧು ಬಂಗಾರಪ್ಪ ಏನು ಮಾಡುತ್ತಿದ್ದರು? ಇದೇನಾ ನೀವು ಕಾಗೋಡು ತಿಮ್ಮಪ್ಪ ಅವರ ಮೇಲೆ ಇಟ್ಟಿರುವ ಅಭಿಮಾನ ಗೌರವ?
ನೀವಿಬ್ಬರೂ ಸೇರಿಕೊಂಡು ಕಾಗೋಡು ತಿಮ್ಮಪ್ಪ ಅವರಿಗೆ ಅಪಮಾನ ಮಾಡುತ್ತಿದ್ದೀರ ಎನಿಸುವುದಿಲ್ಲವೇ ಶಾಸಕ ಮತ್ತು ಮಂತ್ರಿಗಳೆ?
ಒಬ್ಬ ಶೂದ್ರ ನಾಯಕನ ಮಹತ್ವವನ್ನು ಕುಗ್ಗಿಸುವ ಈ ಸೊ ಕಾಲ್ಡ್ ನಾಗರಿಕ ಸನ್ಮಾನದ ಹೆಸರಿನಲ್ಲಿ ಸಾಗರದ
ಸಂಘದ ಬ್ರಾಹ್ಮಣರು ನಡೆಸುತ್ತಿರುವ ಮಸಲತ್ತಿನಲ್ಲಿ ನೀವು ಪರೋಕ್ಷವಾಗಿ ಪಾಲುದಾರರಾಗಿದ್ದೀರಿ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ಕಳೆದ ಚುನಾವಣೆಯಲ್ಲಿ ಸಂಪೂರ್ಣವಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಕೆಲಸ ಮಾಡಿದವರಿಗೆ ನಿಮ್ಮ ಗೆಲುವಿಗಾಗಿ ತಮ್ಮ 90ರ ವಯಸ್ಸಿನಲ್ಲೂ ದುಡಿದ ಈ ನಾಯಕನ ಸನ್ಮಾನದ ಉಸ್ತುವಾರಿ ವಹಿಸಿರುವ ನಿಮಗೆ ಮತ್ತು ಎಲ್ಲಾ ಸಂಬಂದಪಟ್ಟವರಿಗೆ ನನ್ನ ಧಿಕ್ಕಾರ!
– ಹರ್ಷಕುಮಾರ್ ಕುಗ್ವೆ.

