


ಸಿದ್ದಾಪುರ: ಅಧಿಕಾರಿಗಳ ಬೇಜವಬ್ದಾರಿತನದಿಂದ ತಿರಸ್ಕಾರಗೊಂಡ ಅತಿಕ್ರಮಣದಾರರ ಅರ್ಜಿಗಳ ಪುನರ್ ಪರಿಶೀಲನೆಗೆ ಅವಕಾಶ ಮಾಡಿಕೊಡುವಂತೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.
ತಾಲೂಕಿನ ಗ್ರಾಮ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗಾಗಿ ಪಟ್ಟಣದ ಬಾಲಭವನದಲ್ಲಿ ಆಯೋಜಿಸಿದ್ದ ಮಾಹಿತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾಡಿದ ಯಡವಟ್ಟಿನಿಂದ ಅನೇಕರಿಗೆ ಅನ್ಯಾಯವಾಗಿದೆ. ಅಧಿಕಾರಿಗಳು ಮಾಡಿದ ದೊಡ್ಡ ದ್ರೋಹದಿಂದಾಗಿ ಹತ್ತಾರು ಸಾವಿರ ಜನರ ಅರ್ಜಿಗಳು ತಿರಸ್ಕಾರವಾಗಿವೆ. ನಮ್ಮ ಹಕ್ಕಿಗಾಗಿ ಬೀದಿಗಿಳಿದು ಹೋರಾಟ ನಡೆಸಬೇಕಿದೆ. ಅಂದು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದಂತೆ ಇಂದು ಅತಿಕ್ರಮಣ ಜಮೀನನ ಪಟ್ಟಾಕ್ಕಾಗಿ ಹೋರಾಟ ನಡೆಸಬೇಕಾದ ಸ್ಥಿತಿ ಬಂದಿದೆ. ಅತಿಕ್ರಮಣದಾರರ ಪರವಾಗಿ ಸದಾ ಬೆಂಬಲಕ್ಕೆ ನಿಂತಿರುತ್ತೇನೆ. ತಿರಸ್ಕಾರಗೊಂಡಿರುವ ಅರ್ಜಿಗಳ ಪುನರ್ ಪರಿಶೀಲನೆಗೆ ಅವಕಾಶ ನೀಡುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಮುಖ್ಯಮಂತ್ರಿಗಳ ಗಮನ ಸೆಳೆದು ತಿರಸ್ಕಾರಗೊಂಡ ಅರ್ಜಿಗಳನ್ನು ಪುನಃ ಅರಣ್ಯ ಹಕ್ಕು ಸಮಿತಿಗೆ ಕಳುಹಿಸಿ ಪರಿಶೀಲನೆಗೆ ಅವಕಾಶ ನೀಡುವಂತೆ ಕೋರಲಾಗುವುದು ಎಂದರು.
ಸಂಪನ್ಮೂಲ ವ್ಯಕ್ತಿ ಬಿ.ಆರ್.ನಾಯ್ಕ ಮಾತನಾಡಿ, ಅನಾದಿ ಕಾಲದಿಂದ ವಾಸ್ತವ್ಯ ಮಾಡಿದ್ದ ಅತಿಕ್ರಮಣದಾರರಿಗೆ ಹಕ್ಕು ಪತ್ರ ನೀಡುವ ಸದು ದ್ದೇಶದೊಂದಿಗೆ ಅಂದಿನ ಕೇಂದ್ರ ಸರ್ಕಾರ ಕಾನೂನು ಜಾರಿಗೊಳಿಸಿತು. ಯಾವುದೇ ಅರ್ಜಿಯನ್ನು ತಿರಸ್ಕರಿಸಬೇಕೆಂದರೆ ಮೂರು ನೋಟಿಸ್ ಕಳುಹಿಸಬೇಕು. ಎಲ್ಲಾ ನೋಟಿಸ್ ಗಳಿಗೆ ಉತ್ತರಿಸಿಲ್ಲವಾದರೆ ಮಾತ್ರ ತಿರಸ್ಕರಿಸಬಹುದಾಗಿದೆ. ಪ್ರಸ್ತುತ ಅರಣ್ಯ ಹಕ್ಕು ಮಂಜೂರಾತಿ ಪ್ರಕ್ರೀಯೆ ಸಂಪೂರ್ಣ ಸ್ಥಗಿತವಾಗಿದೆ. ಈಗಾಗಲೇ ತಿರಸ್ಕಾರವಾಗಿರುವ ಅರ್ಜಿಗಳ ಪುನರ್ ಪರಿಶೀಲನೆಗೆ ಅವಕಾಶ ನೀಡಬೇಕು. ಎಲ್ಲಾ ಅರಣ್ಯ ಹಕ್ಕು ಸಮಿತಿಯವರು ಒಟ್ಟಾಗಿ ನಿಂತು ಧ್ವನಿ ಎತ್ತಬೇಕು. ಎಂದರು.
ರೈತ ಮುಖಂಡ ವೀರಭದ್ರ ನಾಯ್ಕ ಮಾತನಾಡಿ, ಮನಮೋಹನ್ ಸಿಂಗ್ ಸರ್ಕಾರದ ನಂತರ ಬಂದ ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾರಣವಿಲ್ಲದೇ ಅರ್ಜಿ ತಿರಸ್ಕರಿಸಿದ್ದಾರೆ. ಅವುಗಳ ಪುನರ್ ಪರಿಶೀಲನೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು.
ಕ್ಯಾದಗಿ ವಲಯ ಅರಣ್ಯಾಧಿಕಾರಿ ಗಿರೀಶ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಸವರಾಜ ಬಂಡೇರ, ವಲಯಾರಣ್ಯಾಧಿಕಾರಿಗಳಾದ ಬಸವರಾಜ ಬೋಚಳ್ಳಿ, ಮಂಜುನಾಥ ಹೆಬ್ಬಾರ, ಪ್ರಮುಖರಾದ ವಿ.ಎನ್.ನಾಯ್ಕ, ಎಸ್.ಕೆ.ಭಾಗವತ್ ಉಪಸ್ಥಿತರಿದ್ದರು.
