

ಉತ್ತಮ ಆರೋಗ್ಯದ ವ್ಯಾಪ್ತಿ ವಿಸ್ತಾರ ಡಾ.ನಾಗೇಂದ್ರಪ್ಪ ಅಭಿಮತ
ಮಂಗ, ಹಸು,ಕೋಳಿ ಸೇರಿದಂತೆ ಪ್ರಾಣಿಗಳಿಂದ ಬರುವ ರೋಗಗಳನ್ನು ನಿಯಂತ್ರಿಸಿ ಮಾನವ ಮತ್ತು ಪ್ರಾಣಿಪ್ರಪಂಚಕ್ಕೆ ಪಶುವೈದ್ಯರು ಸಲ್ಲಿಸುವ ಸೇವೆ ಗಣನೀಯ ಎಂದಿರುವ ಹಿರಿಯ ಪಶುವೈದ್ಯ ಡಾ.ಸುಬ್ರಾಯ ಭಟ್ ವೈದ್ಯಕೀಯ ಸೇವೆ ಪ್ರಾಣಿಸಂಕುಲಕ್ಕೆ ಮಹತ್ವದ್ದಾಗಿದ್ದು ಮನುಷ್ಯ ಕೂಡಾ ಪ್ರಾಣಿಯಿರುವುದರಿಂದ ಎಲ್ಲಾ ವೈದ್ಯರೂ ಪ್ರಾಣಿ ವೈದ್ಯರೇ ಎಂದು ಮಾರ್ಮಿಕವಾಗಿ ನುಡಿದರು.
ಇಲ್ಲಿಯ ಬಾಲಭವನದಲ್ಲಿ ಭಾರತೀಯ ವೈದ್ಯಕೀಯ ಸಂಘದ ತಾಲೂಕಾ ಘಟಕ ಆಯೋಜಿಸಿದ್ದ ವೈದ್ಯರ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿದ ಅವರು ಪಶು,ಪಕ್ಷಿ,ಪ್ರಾಣಿಗಳಿಂದ ಅವಗಳನ್ನು ಆಹಾರವಾಗಿ ಸೇವಿಸುವುದರಿಂದ ಬರುವ ರೋಗಗಳಿಂದ ಮನುಕುಲವನ್ನು ರಕ್ಷಿಸುವ ಕೆಲಸದಲ್ಲಿ ಎಲ್ಲಾ ವೈದ್ಯರು ನಿತ್ಯ ಶ್ರಮಿಸುತಿದ್ದಾರೆ, ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ನಾಗೇಂದ್ರಪ್ಪ ಇತ್ತೀಚಿನ ದಿನಗಳಲ್ಲಿ ಸಹಜ ಆರೋಗ್ಯ, ವೈದ್ಯರು ಮತ್ತು ರೋಗಿಗಳ ನಡುವಿನ ಸಂಬಂಧದ ಆರೋಗ್ಯ ಕ್ಷಯಿಸುತ್ತಿರುವುದರಿಂದ ಉತ್ತಮ ಆರೋಗ್ಯ ರಕ್ಷಣೆ ಎನ್ನುವ ವ್ಯಾಪ್ತಿ ವಿಸ್ತಾರವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಭಾ.ವೈ ಸಂಘದ ಅಧ್ಯಕ್ಷ ಡಾ. ಪ್ರಭಾಶಂಕರ ಹೆಗಡೆ ವೈದ್ಯರ ಮೇಲೆ ಹೆಚ್ಚುತ್ತಿರುವ ಹಲ್ಲೆ ಮಾನವ ಸಂಬಂಧಗಳ ಶಿಥಿಲತೆಗೆ ಉದಾಹರಣೆ ಎಂದರು.
ಡಾ.ಸುಬ್ರಾಯ ಭಟ್, ಡಾ.ನಾಗೇಂದ್ರಪ್ಪ, ಶ್ರೀಕಲಾ ಶೆಟ್ಟಿ,ಸುಬ್ಬಣ್ಣ ಮತ್ತು ಅನಿಲ್ ಶೇಟ್ ರನ್ನು ಗೌರವಿಸಿ,ಅವರ ಪರಿಶ್ರಮವನ್ನು ಶ್ಲಾಘಿಸಿ ಅಭಿನಂದಿಸಲಾಯಿತು.ಸಾಹಿತಿ ಜಿ.ಜಿ.ಹೆಗಡೆ ನಿರೂಪಿಸಿದರು.
ಸಾಮಾನ್ಯರಿಗೆ ಸನ್ಮಾನ- ಸಾಧಕರು,ಪ್ರಭಾವಿಗಳು,ಅಧಿಕಾರಶಾಹಿಗಳು ಸನ್ಮಾನಕ್ಕೊಳಗಾಗುವುದು ಸಾಮಾನ್ಯ.
ಸಿದ್ಧಾಪುರದ ತಾಲೂಕಾ ಪತ್ರಕರ್ತರ ಸಂಘ ಪತ್ರಿಕಾ ವಿತರಕರಿಗೆ ಸನ್ಮಾನಿಸಿ ಅವರ ಶ್ರಮಕ್ಕೆ ಅಭಿನಂದಿಸಿತು.
ಇದೇ ರೀತಿ ಭಾರತೀಯ ವೈದ್ಯಕೀಯ ಸಂಘದ ಸಿದ್ಧಾಪುರ ಶಾಖೆ ವೈದ್ಯ ಡಾ ನಾಗೇಂದ್ರಪ್ಪ, ಶುಶ್ರೂಶಕಿ ಶ್ರೀಕಲಾ ಶೆಟ್ಟಿ , ಆರೋಗ್ಯ ಸಹಾಯಕ ಸುಬ್ಬಣ್ಣ, ಔಷಧ ವಿತರಕ ಅನಿಲ್ ಶೇಟ್ ರನ್ನು ಸನ್ಮಾನಿಸಿ ಗೌರವಿಸಿತು.
ಸನ್ಮಾನಿತರು ಡಾ.ಶ್ರೀಧರ ವೈದ್ಯರ ಶ್ರಮ,ಸಹಕಾರವನ್ನು ಶ್ಲಾಘಿಸಿದರು.



