


ದೇವಬಾಗ್: ಬಲೆಗೆ ಬಿದ್ದಿದ್ದ ‘jellyfish’ ಕುಟುಕಿ ಮೀನುಗಾರ ಸಾವು!
ಮೀನು ಯಾರಿಗೂ ಏನೂ ಮಾಡೋಲ್ಲ ಅನ್ನೋದೇನೋ ನಿಜ. ಆದರೆ, ಅದರಲ್ಲೂ ವಿಷಕಾರಿ ಮೀನುಗಳು ಉಂಟು ಅನ್ನೋದಕ್ಕೆ ಈ ಜೆಲ್ಲಿ ಮೀನೇ ಉದಾಹರಣೆ. ಈ ಮೀನು ಎಲ್ಲವನ್ನೂ ಕಾಲಿನ ಮೂಲಕವೇ ಗ್ರಹಿಸುತ್ತದೆ. ಅದರ ಮೂಲಕವೇ ಶತ್ರುಗಳಿಗೆ ಕುಟುಕುತ್ತದೆ. ಈ ರೀತಿ ಕುಟುಕಿದರೆ ಕೆಲವೊಮ್ಮೆ ಸಾವು ಸಂಭವಿಸುತ್ತವೆ.

ಕಾರವಾರದ ದಡಕ್ಕೆ ಬಂದ ಜೆಲ್ಲಿ ಮೀನು
ದೇವಬಾಗ್ (ಉತ್ತರ ಕನ್ನಡ): ಮೀನು ಯಾರಿಗೂ ಏನೂ ಮಾಡೋಲ್ಲ ಅನ್ನೋದೇನೋ ನಿಜ. ಆದರೆ, ಅದರಲ್ಲೂ ವಿಷಕಾರಿ ಮೀನುಗಳು ಉಂಟು ಅನ್ನೋದಕ್ಕೆ ಈ ಜೆಲ್ಲಿ ಮೀನೇ ಉದಾಹರಣೆ. ಈ ಮೀನು ಎಲ್ಲವನ್ನೂ ಕಾಲಿನ ಮೂಲಕವೇ ಗ್ರಹಿಸುತ್ತದೆ. ಅದರ ಮೂಲಕವೇ ಶತ್ರುಗಳಿಗೆ ಕುಟುಕುತ್ತದೆ. ಈ ರೀತಿ ಕುಟುಕಿದರೆ ಕೆಲವೊಮ್ಮೆ ಸಾವು ಸಂಭವಿಸುತ್ತವೆ.
ಕಾರವಾರ ಸಮೀಪದ ದೇವಬಾಗ್‌ನಲ್ಲಿ ಮೀನಿನ ಬಲೆಯಲ್ಲಿ ಸಿಲುಕಿದ್ದ ಜೆಲ್ಲಿ ಫಿಷ್ ವೊಂದು ಮೀನುಗಾರನಿಗೆ ಕುಟುಕಿದ್ದು, ವ್ಯಕ್ತಿ ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿಯನ್ನು ಕೃಷ್ಣ ಎಂದು ಗುರ್ತಿಸಲಾಗಿದೆ. ಬಲೆಗೆ ಬಿದ್ದಿದ್ದ ಜೆಲ್ಲಿ ಫಿಷ್ ನನ್ನು ಕೃಷ್ಣ ಅವರು ಬಲೆಯಿಂದ ತೆಗೆದು ಸಮುದ್ರಕ್ಕೆ ಎಸೆದಿದ್ದರು ಎಂದು ಸ್ನೇಹಿತರು ಹಾಗೂ ಸಂಬಂಧಿಕರು ಹೇಳಿದ್ದಾರೆ.
ಮೀನನ್ನು ಸಮುದ್ರಕ್ಕೆ ಎಸೆದ ಕೆಲ ನಿಮಿಷಗಳ ಬಳಿಕ ಚರ್ಮದ ಮೇಲೆ ಮತ್ತು ಕಣ್ಣುಗಳಲ್ಲು ತೀವ್ರತರ ತುರಿಕೆ ಆರಂಭವಾಗಿತ್ತು. ಕೂಡಲೇ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿತ್ತು. ಕೃಷ್ಣ ಅವರನ್ನು ವೆಂಟಿಲೇಟರ್ ಸಪೋರ್ಟ್ ನಲ್ಲಿ ಇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಈ ಘಟನೆ ಸಮುದ್ರ ಜೀವಶಾಸ್ತ್ರಜ್ಞರಲ್ಲಿ ಅಚ್ಚರಿಯನ್ನುಂಟು ಮಾಡಿದೆ. ಏನಾಯಿತು ಮತ್ತು ಯಾವ ಜೆಲ್ಲಿ ಮೀನುಗಳು ಅವರನ್ನು ಕುಟುಕಿದೆ ಎಂಬುದನ್ನು ವಿವರಿಸುವುದು ಕಷ್ಟ ಸಾಧ್ಯ. ಏಕೆಂದರೆ ಇಲ್ಲಿ ಕಂಡುಬರುವ ಸಾಕಷ್ಟು ಜೆಲ್ಲಿ ಮೀನುಗಳು ಅಪಾಯಗಳನ್ನು ತಂದೊಡ್ಡುವ ಮೀನುಗಳಲ್ಲ. ಈ ಮೀನುಗಳು ಕುಟುಕಿದರೆ ಕೇವಲ ಕಿರಿಕಿರಿಯಾಗಬಹುದು. ಕೇಪ್ ಟೌನ್, ಸಿಡ್ನಿ, ಮೆಲ್ಬೋರ್ನ್, ಪರ್ತ್, ಭಾರತ ಮತ್ತು ಜಪಾನ್ ಸುತ್ತಮುತ್ತಲಿನ ಉಷ್ಣವಲಯದ ನೀರಿನಲ್ಲಿ ಕಂಡುಬರುವ ಬಾಕ್ಸ್ ಜೆಲ್ಲಿ ಮೀನುಗಳು ಮಾರಣಾಂತಿಕವಾಗಿದೆ. ದೇವಬಾಗ್‌ನಲ್ಲಿ ನಡೆದ ಘಟನೆ ಬಹುಶಃ ಈ ಪ್ರದೇಶದಲ್ಲಿಯೇ ಮೊದಲ ಪ್ರಕರಣವಾಗಿದೆ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಾಗರ ಜೀವಶಾಸ್ತ್ರ ವಿಭಾಗದ ಪ್ರೊ.ಶಿವಕುಮಾರ ಹರಗಿ ಅವರು ಹೇಳಿದ್ದಾರೆ.
ಬಾಕ್ಸ್ ಜೆಲ್ಲಿ ಫಿಶ್ ನೋಡಲು ಸುಂದರವಾಗಿದೆ, ಆದರೆ ಅಷ್ಟೇ ಅಪಾಯಕಾರಿ. ಬಾಕ್ಸ್ ಜೆಲ್ಲಿ ಮೀನು ವಿಶ್ವದ ಅತ್ಯಂತ ವಿಷಕಾರಿ ಜೀವಿಗಳಲ್ಲಿ ಒಂದಾಗಿದೆ. ಇದರ ವಿಷವು ಏಕಕಾಲದಲ್ಲಿ 60 ಜನರನ್ನು ಕೊಲ್ಲುವ ಸಾಮರ್ಥ್ಯ ಹೊಂದಿದೆ ಎನ್ನುತ್ತವೆ ಅಧ್ಯಯನಗಳು. ಇದರ ವಿಷವು ಮನುಷ್ಯನ ದೇಹವನ್ನು ಪ್ರವೇಶಿಸಿದರೆ ಒಂದು ನಿಮಿಷದಲ್ಲಿ ಸಾಯುವಷ್ಟು ತೀವ್ರತೆ ಹೊಂದಿದೆ. (ಕಪ್ರ.ಕಾ)
