



ವಿದ್ಯಾರ್ಥಿ ಸಂಘ, ಕ್ರೀಡಾ ಸಂಘ, ಎನ್.ಎಸ್.ಎಸ್. ಮತ್ತು ರೆಡ್ ಕ್ರಾಸ್ ಘಟಕಗಳ ಉದ್ಘಾಟನಾ ಕಾರ್ಯಕ್ರಮ

ಸಿದ್ದಾಪುರ
ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯತ್ತ ಗಮನಹರಿಸಿ ಸಮಾಜಕ್ಕೆ ಹೊರೆಯಾಗದೇ ಉತ್ತಮ ಭವಿಷ್ಯವನ್ನು ರೂಡಿಸಿಕೊಳ್ಳಬೇಕು ಎಂದು ಸ್ಥಳೀಯ ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಪ್ರಾಚಾರ್ಯ ಶಾಂತರಾಮ ಹೇಳಿದರು.
ಅವರು ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘ, ಕ್ರೀಡಾ ಸಂಘ, ಎನ್.ಎಸ್.ಎಸ್. ಮತ್ತು ರೆಡ್ ಕ್ರಾಸ್ ಘಟಕಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಇಂದು ಡಿಪ್ಲೋಮಾ ಸೇರಿದಂತೆ ಸಮರ್ಪಕ ಶಿಕ್ಷಣ ಪಡೆದವರಿಗೆ ಅತ್ಯುತ್ತಮ ಅವಕಾಶಗಳಿವೆ. ಉದ್ಯೋಗವೂ ವಿಫುಲವಾಗಿವೆ. ವಿದ್ಯಾರ್ಜನೆಯ ಅವಧಿಯಲ್ಲಿ ಸರಿಯಾಗಿ ಶಿಕ್ಷಣ ಪಡೆದಾಗ ಅವೆಲ್ಲ ದೊರೆಯುತ್ತದೆ. ಹೊರಗಿನ ಪ್ರಪಂಚದಲ್ಲಿ ಸಾಕಷ್ಟು ಮೋಸಗಳು ನಡೆಯುತ್ತಿದ್ದು ಉದ್ಯೋಗ ಕೊಡುವ ಭರವಸೆ ನೀಡಿ ವಂಚಿಸುವ ಕಾರ್ಯಗಳು ನಡೆಯುತ್ತಿವೆ. ಯಾವುದೇ ಕಾರಣಕ್ಕೂ ಅಂಥ ವಂಚನೆಗೆ ಒಳಗಾಗಬೇಡಿ ಎಂದರು.

ಸಮಾರಂಭ ಉದ್ಘಾಟಿಸಿದ ಪತ್ರಕರ್ತ,ಸಾಹಿತಿ ಗಂಗಾಧರ ಕೊಳಗಿ ಮಾತನಾಡಿ ಬೌದ್ಧಿಕ ಸಾಮಥ್ಯ, ಶಾರೀರಿಕ ಆರೋಗ್ಯ, ಸಾಮಾಜಿಕ ಮತ್ತು ಮಾನವೀಯ ಕಾಳಜಿ ಪ್ರತಿ ವ್ಯಕ್ತಿಗೂ ಮುಖ್ಯವಾಗಿದ್ದು ವಿದ್ಯಾರ್ಥಿ ಜೀವನದಲ್ಲಿ ಈ ಎಲ್ಲ ಘಟಕಗಳು ಅವುಗಳ ಅರಿವನ್ನು ಒದಗಿಸುತ್ತವೆ. ತಪ್ಪು ಮಾಡದ ಮನುಷ್ಯ ಈ ಜಗತ್ತಿನಲ್ಲಿ ಯಾರೂ ಇಲ್ಲ. ಆದರೆ ಅವನ್ನು ತಿದ್ದಿಕೊಂಡು ಸೂಕ್ತ ಮಾರ್ಗದರ್ಶನ, ಗುರಿಗಳೊಂದಿಗೆ ಮುನ್ನಡೆಯುವದು ಮುಖ್ಯ. ಯಾವ ನೋವು,ಸಂಕಟ ತೋರ್ಪಡಿಸದೇ ಸಲಹುವ ತಂದೆ,ತಾಯಿ, ಶಿಕ್ಷಣ ನೀಡುವ ಗುರುವೃಂದವನ್ನು ಯಾವತ್ತೂ ಅಸಡ್ಡೆಯಿಂದ ನೋಡದೇ ಗೌರವ ನೀಡಬೇಕು. ದೇಶ ಕಾಯುವ ಯೋಧ, ಅನ್ನ ನೀಡುವ ರೈತ, ವಿಜ್ಞಾನಿಗಳು,ವೈದ್ಯರು,ಕ್ರೀಡಾಪಟುಗಳಂಥವರು ನಮಗೆ ಮಾದರಿಯಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಸಿ.ಆರ್.ಪಿ.ಎಪ್.ಯೋಧ, ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಜಯ್ವಂತ್ ವಿ.ಎಸ್.ಹೊಸೂರು ಮಾತನಾಡಿ ವಿದ್ಯಾರ್ಥಿ ಸಂಘ, ಎನ್.ಎಸ್.ಎಸ್.,ರೆಡ್ ಕ್ರಾಸ್ ಘಟಕಗಳ ಮಹತ್ವ ಏನು ಎನ್ನುವದು ವಿದ್ಯಾರ್ಥಿಯಾಗಿ ನನ್ನ ಅನುಭವಕ್ಕೆ ಬಂದಿದೆ. ನಾನು. ಕೂಡ ತಂದೆತಾಯಿಗಳ,ಗುರುಗಳ ಮಾತನ್ನು ಸರಿಯಾಗಿ ಕೇಳಿದ್ದರೆ ಇನ್ನೂ ಉತ್ತಮ ಅವಕಾಶ ದೊರೆಯುತ್ತಿತ್ತು ಎಂದು ಈಗ ಅರಿವಾಗಿದೆ.ನೀವು ಕೂಡ ಹಿರಿಯರನ್ನ ಗೌರವಿಸಿ. ಈ ಕಾಲೇಜು ಮೊದಲಿಗಿದ್ದಕ್ಕಿಂತ ಅತ್ಯುತ್ತಮವಾಗಿದೆ. ಈ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ನಡೆಯುವಂತಾಗಬೇಕು,ಆ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಶಿಕ್ಷಣ ತಜ್ಞರು ಹೆಚ್ಚಿನ ಪ್ರಯತ್ನ ನಡೆಸಬೇಕು ಎಂದರು.

ಈ ಸಂದರ್ಭದಲ್ಲಿ ರಸಪ್ರಶ್ನೆ,ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಕುಲಸಚಿವರಾದ ಶೋಭಾ ಕೆ.ಎನ್., ಉಪನ್ಯಾಸಕರಾದ ಲತಾ ಬಿ.,ಮನೋಜಕುಮಾರ್,ಶಿವರಾಜಕುಮಾರ,ಮೂರ್ತಿ ಜಿ.ಈ.,ಕಾರ್ತಿಕ್ ಜೆ.,ಶ್ರಿನಿಧಿ ಸಾಗರ, ವಿದ್ಯಾರ್ಥಿ ಸಂಘದ ಪದಾದಿಕಾರಿಗಳು ಉಪಸ್ಥಿತರಿದ್ದರು.
ಕು.ದಿವ್ಯಾ ಸಂಗಡಿಗರು ಪ್ರಾರ್ಥಿಸಿದರು. ಕು.ರಕ್ಷಿತಾ ಸ್ವಾಗತಿಸಿದರು.ಕು.ಪ್ರಭಾವತಿ ವಂದಿಸಿದರು. ಕು.ರಾಧಿಕಾ ನಿರೂಪಿಸಿದರು.

