ಇದು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ (AB PM-JAY) ವಿಸ್ತರಿತ ಆರೋಗ್ಯ ವಿಮೆ ಯೋಜನೆಯಾಗಿದೆ. ಇದರಲ್ಲಿ ರೂ. 5 ಲಕ್ಷದವರೆಗೂ ಹಿರಿಯ ನಾಗರಿಕರು ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಅರ್ಹರಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಬೆಂಗಳೂರು: ಈಗ 70 ವರ್ಷಕ್ಕೂ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರು ಆಯುಷ್ಮಾನ್ ವಯ ವಂದನಾ (AVV) ಕಾರ್ಡ್ ಪಡೆಯಲು ಅರ್ಹರಾಗಿದ್ದಾರೆ. ಬಹುನಿರೀಕ್ಷಿತ 70 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯನ್ನು ಪ್ರಧಾನಿ ನರೇಂದ್ರ ಕಳೆದ ವಾರ ಚಾಲನೆ ನೀಡಿದರು. ಇದು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ (AB PM-JAY) ವಿಸ್ತರಿತ ಆರೋಗ್ಯ ವಿಮೆ ಯೋಜನೆಯಾಗಿದೆ. ಇದರಲ್ಲಿ ರೂ. 5 ಲಕ್ಷದವರೆಗೂ ಹಿರಿಯ ನಾಗರಿಕರು ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಅರ್ಹರಾಗಿದ್ದಾರೆ.
ಯೋಜನೆಯ ಅನುಕೂಲತೆಗಳೇನು? Beshak.org ಸಂಸ್ಥಾಪಕ ಅಯುಷ್ ದುಬೆ ಯೋಜನೆಯ ಅನುಕೂಲತೆಗಳನ್ನು ಪಟ್ಟಿ ಮಾಡಿದ್ದಾರೆ.
ಉಚಿತ ಆಸ್ಪತ್ರೆ ಚಿಕಿತ್ಸೆ: ಆಯುಷ್ಮಾನ್ ವಯ ವಂದನಾ ಕಾರ್ಡ್ 70 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನಗದು ರಹಿತ (Cashless) ಆಸ್ಪತ್ರೆ ಸೌಲಭ್ಯ ಕಲ್ಪಿಸುವ ಮೂಲಕ ಹಣಕಾಸಿನ ಸಮಸ್ಯೆಯಿಲ್ಲದಂತೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸಲಿದೆ.
ಎಲ್ಲಾರು ಅರ್ಹರು (Universal eligibility) ಆದಾಯದ ಮಟ್ಟವನ್ನು ಲೆಕ್ಕಿಸದೆಯೇ 70 ವರ್ಷಕ್ಕೂ ಮೇಲ್ಪಟ್ಟ ಯಾವುದೇ ಹಿರಿಯ ನಾಗರಿಕರು ಈ ಪ್ರಯೋಜನಕ್ಕೆ ಅರ್ಹರಾಗಿರುತ್ತಾರೆ. ಇದು ಕಡಿಮೆ, ಮಧ್ಯಮ ಅಥವಾ ಉನ್ನತ-ಆದಾಯದ ಹಿನ್ನೆಲೆಯ ಎಲ್ಲರಿಗೂ ಮುಕ್ತವಾಗಿದೆ.
ಕುಟುಂಬ ಅವಲಂಬಿತರಿಗೆ ಯೋಜನೆ ಪ್ರಯೋಜನ: ಒಂದೇ ಮನೆಯಲ್ಲಿ ವಯಸ್ಸಾದ ಅನೇಕ ಮಂದಿ ವಾಸಿಸುವ ಸಂದರ್ಭಗಳಲ್ಲಿ ರೂ. 5 ಲಕ್ಷ ಮಿತಿಯೊಳಗೆ ಎಲ್ಲಾ ಅರ್ಹ ಸದಸ್ಯರು ಯೋಜನೆಯ ಸದುಪಯೋಗಪಡೆದುಕೊಳ್ಳಬಹುದು.
ವಿಮಾ ಯೋಜನೆ ಕವರೇಜ್: ಆಯುಷ್ಮಾನ್ ಭಾರತ್ ಯೋಜನೆಯು ಸುಮಾರು 1,929 ವೈದ್ಯಕೀಯ ಕಾರ್ಯವಿಧಾನಗಳನ್ನು ಒಳಗೊಳ್ಳುತ್ತದೆ. ಮಿತಿ ಇಲ್ಲದ ಔಷಧಿಗಳು, ಸರಬರಾಜುಗಳು, ವೈದ್ಯರ ಶುಲ್ಕಗಳು, ಆಸ್ಪತ್ರೆ ಪೂರ್ವ ಮತ್ತು ನಂತರದ ರೋಗನಿರ್ಣಯ ಮತ್ತು ಔಷಧಿಗಳು ಇತ್ಯಾದಿ ಎಲ್ಲಾ ಚಿಕಿತ್ಸೆಯ ಶುಲ್ಕವನ್ನು ಒಳಗೊಂಡಿರುತ್ತದೆ. ಇದು ಹಿರಿಯರು ತಮ್ಮ ಚಿಕಿತ್ಸಾ ಸಮಯದಲ್ಲಿ ಸಂಪೂರ್ಣ ಮತ್ತು ತಡೆರಹಿತ ಆರೈಕೆಯನ್ನು ಪಡೆಯುವುದನ್ನು ಖಚಿತಪಡಿಸುತ್ತದೆ.
ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (CGHS), ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆ (ECHS), ಅಥವಾ ಆಯುಷ್ಮಾನ್ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ನಂತಹ ಇತರ ಸಾರ್ವಜನಿಕ ಆರೋಗ್ಯ ವಿಮಾ ಯೋಜನೆಗಳಿಂದ ಈಗಾಗಲೇ ಪ್ರಯೋಜನ ಪಡೆಯುತ್ತಿರುವ ಹಿರಿಯ ನಾಗರಿಕರು AB PM-JAY ಯೋಜನೆಯೊಂದಿಗೆ ಮುಂದುವರಿಯುವ ಬಗ್ಗೆ ಆಯ್ಕೆಯನ್ನು ಹೊಂದಿದ್ದಾರೆ. ಸೆಪ್ಟೆಂಬರ್ 29, 2024 ರಂತೆ AB PM-JAY ಅಡಿಯಲ್ಲಿ 35 ಕೋಟಿಗೂ ಹೆಚ್ಚು ಆಯುಷ್ಮಾನ್ ಕಾರ್ಡ್‌ಗಳನ್ನು ಸೃಷ್ಟಿಸಲಾಗಿದೆ. ಫಲಾನುಭವಿಗಳು ದಾಖಲಾದ ಮೊದಲ ದಿನದಿಂದ ಚಿಕಿತ್ಸೆ ದೊರೆಯಲು ಪ್ರಾರಂಭವಾಗುತ್ತದೆ ಯಾವುದೇ ರೋಗ ಅಥವಾ ಚಿಕಿತ್ಸೆಗಾಗಿ ಕಾಯುವ ಅವಧಿ ಇರುವುದಿಲ್ಲ.
ನೋಂದಾಯಿಸುವುದು ಹೇಗೆ? ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಆಯುಷ್ಮಾನ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಫಲಾನುಭವಿಯಾಗಿ ಲಾಗಿನ್ ಆದಾಗ captcha Enter ಮಾಡಿ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು, ದೃಢೀಕರಣ ಮಾಡಬೇಕು. ತದನಂತರ enroll senior citizens ಕ್ಲಿಕ್ ಮಾಡಬೇಕು. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಪ್ರಕಾರ, ಹೊಸದಾಗಿ ನೋಂದಾಯಿಸಲು ಆಧಾರ್ ಅಸ್ತಿತ್ವದಲ್ಲಿದ್ದೇಯೆ? ಎಂಬುದನ್ನು ಯಾರಾದರೂ ಪರೀಕ್ಷಿಸಿಕೊಳ್ಳಬಹುದು. e-KYC ಮಾಡಬೇಕು. ಪರಿಶೀಲನೆಗಾಗಿ ಮೊಬೈಲ್ ನಂಬರ್ ಮತ್ತು ಆಧಾರ್ OTP ಎಂಟರ್ ಮಾಡಬೇಕು. ಆಯುಷ್ಮಾನ್ ವಯ ವಂದನಾ ಕಾರ್ಡ್ ಡೌನ್ ಲೋಡ್ ಆದ ನಂತರ ಫೋಟೋ ಅಂಟಿಸಿ (capture) ಎಲ್ಲಾ ಹೆಚ್ಚುವರಿ ಮಾಹಿತಿ ಭರ್ತಿ ಮಾಡಬೇಕು. 70 ವರ್ಷಕ್ಕೂ ಮೇಲ್ಪಟ್ಟ ಎಲ್ಲಾ ಕುಟುಂಬ ಸದಸ್ಯರ ಹೆಸರನ್ನು ಸೇರಿಸಬೇಕು.
AVV ಕಾರ್ಡ್ ಎಷ್ಟು ಉಪಯುಕ್ತವಾಗಿದೆ? ಆರೋಗ್ಯ ಮತ್ತು ವಯಸ್ಸಿಗೆ ಸಂಬಂಧಿಸಿದ ಕಾರಣಗಳಿಂದಾಗಿ ವೈಯಕ್ತಿಕ ಆರೋಗ್ಯ ವಿಮೆ ಪಡೆಯುವುದು ಸವಾಲಾಗಿರುವುದರಿಂದ, ಹಿರಿಯ ನಾಗರಿಕರು AVV ಕಾರ್ಡ್ ಪಡೆಯುವುದು ಪ್ರಮುಖವಾಗಿದೆ.
ವೈಯಕ್ತಿಕ ಆರೋಗ್ಯ ವಿಮಾ ಪಾಲಿಸಿ ಹೊಂದಿರದವರಿಗೆ ಇದು ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ. ಆರೋಗ್ಯ ವಿಮಾ ರಕ್ಷಣೆಯನ್ನು ಹೊಂದಿರುವವರಿಗೆ, AVV ಕಾರ್ಡ್ ಪೂರಕ ಪ್ರಯೋಜನವಾಗಿ ಕಾರ್ಯನಿರ್ವಹಿಸುತ್ತದೆ, ಹೆಚ್ಚುವರಿ ವೆಚ್ಚಗಳನ್ನು ಸರಿದೂಗಿಸಲು ಸಹಾಯ ಮಾಡುತ್ತದೆ ದುಬೆ ಹೇಳಿದ್ದಾರೆ.
ಆದಾಗ್ಯೂ, ಕೆಲವು ಮಿತಿಗಳಿವೆ
ನಿರ್ಬಂಧಿತ ಆಸ್ಪತ್ರೆ ನೆಟ್‌ವರ್ಕ್: AVV ಕಾರ್ಡ್‌ನೊಂದಿಗಿನ ಚಿಕಿತ್ಸೆಯು ಎಂಪನೆಲ್ಡ್ ಆಸ್ಪತ್ರೆಗಳಿಗೆ ಸೀಮಿತವಾಗಿದೆ. ಇದು ವೈಯಕ್ತಿಕ ಆರೋಗ್ಯ ವಿಮಾ ಯೋಜನೆಗಳಲ್ಲಿರುವಂತೆ ಹೆಚ್ಚಿನ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಒದಗಿಸುವುದಿಲ್ಲ.
ನೀತಿ ನಿಯಮಗಳ ಮೇಲೆ ಸೀಮಿತ ನಿಯಂತ್ರಣ: ಸರ್ಕಾರದ ನೀತಿಗಳು ಮತ್ತು ನಿಯಮಗಳು ಕಾಲಾನಂತರದಲ್ಲಿ ಬದಲಾಗಬಹುದು. ಕೇವಲ AVV ಕಾರ್ಡ್ ಅನ್ನು ಅವಲಂಬಿಸಿರುವುದು ದೀರ್ಘಾವಧಿಯ, ವೈಯಕ್ತಿಕಗೊಳಿಸಿದ ಆರೋಗ್ಯ ಅಗತ್ಯಗಳಿಗೆ ಸಾಕಾಗುವುದಿಲ್ಲ. ವೈಯಕ್ತಿಕ ಆರೋಗ್ಯ ವಿಮಾ ಯೋಜನೆಯು ಹೆಚ್ಚು ಗ್ರಾಹಕೀಯಗೊಳಿಸಬಹುದಾದ ಮತ್ತು ಸ್ಥಿರವಾದ ಸಮಗ್ರ ರಕ್ಷಣೆಯನ್ನು ಒದಗಿಸುತ್ತದೆ.
ಭಾರತದಲ್ಲಿ ಆರೋಗ್ಯ ವಿಮಾ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. 2023 ರಿಂದ 2030 ರವರೆಗೆ ಶೇ. 11. 55 ರಷ್ಟು CAGR ನಲ್ಲಿ ವಿಸ್ತರಿಸುವ ನಿರೀಕ್ಷೆಯಿದೆ ಎಂದು ಮಾರುಕಟ್ಟೆ ಸಂಶೋಧನೆ ಮತ್ತು ಸಲಹಾ ಕಂಪನಿ ಗ್ರ್ಯಾಂಡ್ ವ್ಯೂ ರಿಸರ್ಚ್ ಹೇಳುತ್ತದೆ. ಆಯುಷ್ಮಾನ್ ವಯ ವಂದನಾ ಯೋಜನೆಗೆ 6 ಕೋಟಿ ಹಿರಿಯ ನಾಗರಿಕರು ಅರ್ಹರಾಗಿದ್ದು, 4.5 ಕೋಟಿ ಕುಟುಂಬಗಳಿಗೆ ಸಹಾಯ ಮಾಡುತ್ತದೆ. (kp.c)