ಎಷ್ಟೋ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತಾಲೂಕಾ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಶಾಸಕ ಭೀಮಣ್ಣ ಆಸಕ್ತಿ ವಹಿಸಿ, ಅನುದಾನ ತಂದಿದ್ದು ತಾಲೂಕಿನ ಅಭಿವೃದ್ಧಿಗೆ ಅಡ್ಡಗಾಲು ಹಾಕುವ ಯಾವ ಪುಡಿ ನಾಯಕರಿಗೂ ನಾವು ಬಗ್ಗುವುದಿಲ್ಲ, ತಾಲೂಕಿನ ಅಭಿವೃದ್ಧಿಗೆ ಬದ್ಧರಾಗಿರುವ ಭೀಮಣ್ಣ ಮತ್ತು ಅಭಿವೃದ್ಧಿಗೆ ಸಹಕರಿಸುವ ಯಾರಿಗೂ ನಮ್ಮ ಬೆಂಬಲವಿದೆ. -ತಿಮ್ಮಣ್ಣ ನಾಯ್ಕ ಕಡಕೇರಿ, ಹಿರಿಯ ಸಾಮಾಜಿಕ ಕಾರ್ಯಕರ್ತ
ಮಳಲವಳ್ಳಿಯಲ್ಲಿ ಪ್ರಾರಂಭವಾಗಲಿರುವ ಸಿದ್ಧಾಪುರ ತಾಲೂಕಾ ಕೈಗಾರಿಕಾ ಕೇಂದ್ರ ಸ್ಥಾಪನೆ ವಿರೋಧದ ಹಿಂದೆ ಕಾಣದ ಕೈಗಳು ಕೆಲಸಮಾಡುತಿದ್ದು ಈ ಸ್ಥಾಪಿತ ಹಿತಾಸಕ್ತಿಗಳ ಕೈ ಮೇಲಾದರೆ ತಾಲೂಕಿಗೆ ಅನ್ಯಾಯವಾಗಲಿದೆ ಎಂದು ರೈತಮುಖಂಡ ವೀರಭದ್ರನಾಯ್ಕ ಆತಂಕ ವ್ಯಕ್ತಪಡಿಸಿದ್ದಾರೆ.
ಮನಮನೆ ಗ್ರಾಮ ಪಂಚಾಯತ್ ನ ಮಳಲವಳ್ಳಿಯಲ್ಲಿ ಕೈಗಾರಿಕಾ ಕೇಂದ್ರ ಸ್ಥಾಪನೆ ಯೋಜನೆ ಹತ್ತು ವರ್ಷಕ್ಕಿಂತ ಹಳೆಯದು ಹಲವು ವರ್ಷಗಳ ಬೇಡಿಕೆ ಮನಗಂಡ ಅಂದಿನ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಾಥಮಿಕ ಪ್ರಕ್ರಿಯೆ ಪ್ರಾರಂಭಿಸಿದ್ದರು. ಈ ಉದ್ದೇಶಿತ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಸಣ್ಣ ಕೈಗಾರಿಕೆಗಳ ಚಟುವಟಿಕೆಗೆ ಜಾಗ ಕೇಳಿ ೩೦೦ ಕ್ಕೂ ಹೆಚ್ಚು ಜನ ಅರ್ಜಿ ಹಾಕಿದ್ದಾರೆ.
ಆಗ ಬೆಂಬಲಿಸಿದ್ದ ಸ್ಥಳೀಯರು ತಾವು ಕೈಗಾರಿಕ ಕೇಂದ್ರದ ಪ್ಲಾಟುಗಳಿಗೆ ಅರ್ಜಿ ಹಾಕಿದ್ದಾರೆ. ಬಹುತೇಕ ಪ್ರಾಥಮಿಕ ಚಟುವಟಿಕೆಗಳು ಮುಗಿದ ನಂತರ ಮುಗ್ಧ ಗ್ರಾಮಸ್ಥರನ್ನು ದಿಕ್ಕು ತಪ್ಪಿಸುತ್ತಿರುವ ಕೆಲವು ಕಾಣದ ಕೈಗಳು ತಾಲೂಕಿಗೆ, ತಾಲೂಕಿನ ಜನರಿಗೆ ಅನುಕೂಲವಾಗುವ ಅವಕಾಶ ತಪ್ಪಿಸುವ ಹಿಂದೆ ಯಾರ, ಯಾವ ಉದ್ದೇಶವಿದೆ ಎಂದು ಸ್ಪಷ್ಟವಾಗುವುದಿಲ್ಲ ಎಂದು ನಾಯ್ಕ ಬೇಸರ ವ್ಯಕ್ತಪಡಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಹಿತೇಂದ್ರ ನಾಯ್ಕ ಜನಪರ ಶಾಸಕರು, ರೈತ ಮುಖಂಡರ ತೇಜೋವಧೆ ಮಾಡುತಿದ್ದಾರೆ. ಯಾರದೋ ಕೈಗೊಂಬೆಯಾಗಿ ತಾಲೂಕಿನ ಅಭಿವೃದ್ಧಿಗೆ ಪೂರಕವಾದ ತಾಲೂಕಾ ಕೈಗಾರಿಕಾ ಪ್ರದೇಶ ಸ್ಥಾಪನೆ ವಿರೋಧಿಸುವ ಹಿತೇಂದ್ರ ನಾಯ್ಕರ ಶಿಕ್ಷಣ, ನೈತಿಕತೆ ಯಾವ ಮಟ್ಟದ್ದು ಎಂದು ಜನತೆ ಅರಿತು ಅವರನ್ನು ಸಮಾಜ ದೂರವಿಡದಿದ್ದರೆ ಮುಂದೆ ತಾಲೂಕು ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.