

ಅಡಕೆ ಎಲೆಚುಕ್ಕಿ ರೋಗ ಮತ್ತು ಹಳದಿ ರೋಗದ ಬಗ್ಗೆ ಸಂಶೋಧನೆಗೆ ಶಿವಮೊಗ್ಗದಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಕೇಂದ್ರ ಸರ್ಕಾರದ ಎರಡು ಕಂತುಗಳ ಅನುದಾನ ೨೨೪ ಕೋಟಿ ವಿನಿಯೋಗ ಮಾಡುವುದರ ಮೂಲಕ ರಾಜ್ಯದ ಅಡಕೆ ಬೆಳೆಗಾರರ ನೆರವಿಗೆ ಸರ್ಕಾರ ಬಂದಿದೆ ಎಂದು ರಾಜ್ಯ ತೋಟಗಾರಿಕೆ ಮತ್ತು ಗಣಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕರ ಪ್ರಶ್ನೆಗೆ ಉತ್ತರಿಸಿದ ಅವರು ಈ ವಿವರಣೆ ನೀಡಿದರು.
ಸದನದಲ್ಲಿ ಈ ಬಗ್ಗೆ ಪ್ರಸ್ಥಾಪಿಸಿದ ಭೀಮಣ್ಣ ನಾಯ್ಕ ಮಲೆನಾಡು, ಕರಾವಳಿಯಲ್ಲಿ ಎಲೆಚುಕ್ಕಿ ರೋಗ ಮತ್ತು ಹಳದಿ ರೋಗ ರೈತರಿಗೆ ಆತಂಕ ಹೆಚ್ಚಿಸಿವೆ. ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ ೧೬.೫ ಸಾವಿರ ಹೆಕ್ಟೇರ್ ಅಡಕೆ ಬೆಳೆ ವ್ಯಾಪ್ತಿಯಲ್ಲಿ ಮಳೆ-ಕೊಳೆ ಗಳಿಂದ ಪ್ರತಿಶತ ೫೦ ಕ್ಕಿಂತ ಹೆಚ್ಚು ಹಾನಿಯಾಗಿದೆ. ಮಲೆನಾಡು- ಕರಾವಳಿಯ ಅಡಕೆ, ತೋಟಗಾರಿಕಾ ಬೆಳೆಗಳಿಗೆ ಅನ್ವಯಿಸುವ ತೋಟಗಾರಿಕಾ ಸಂಶೋಧನಾ ಸಂಸ್ಥೆ ಬಾಗಲಕೋಟ ದಲ್ಲಿದೆ. ಅದನ್ನು ಶಿರಸಿಗೆ ಸ್ತಳಾಂತರಿಸುವುದು ಸೂಕ್ತ. ಸರ್ಕಾರ ಸಂಕಷ್ಟದಲ್ಲಿರುವ ಅಡಕೆ ಬೆಳೆಗಾರರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಚುಟುಕಾಗಿ ಉತ್ತರಿಸಿದ ಸಚಿವ ಮಲ್ಲಿಕಾರ್ಜುನ ಅಡಕೆ ಎಲೆಚುಕ್ಕಿ ಮತ್ತು ಹಳದಿ ರೋಗಗಳಿಗೆ ಕೇಂದ್ರದ ಅನುದಾನ ಬಳಸಿ ಸಂಶೋಧನೆ ನಡೆಸುತ್ತೇವೆ ಎಂದಷ್ಟೇ ಹೇಳಿ ನುಣುಚಿಕೊಂಡರು.
