

ಭಾರತದ ಪ್ರಜಾಪ್ರಭುತ್ವ ಒಬ್ಬ ಚಾ ಮಾರುವ ಅಶಿಕ್ಷಿತನನ್ನು ಪ್ರಧಾನಿ ಮಾಡಿದೆ. ದಲಿತರೊಬ್ಬರನ್ನು ರಾಷ್ಟ್ರಪತಿಮಾಡಿದೆ, ಮಹಿಳೆಯರು ಪ್ರಧಾನಿ, ರಾಷ್ಟ್ರಪತಿಗಳಾಗಿ ವಿಜೃಂಬಿಸಿದ್ದಾರೆ. ಒಬ್ಬ ಬುಡಕಟ್ಟು ಮಹಿಳೆ ದೇಶದ ಮೊದಲ ಪ್ರಜೆ ಭಾರತದ ರಾಷ್ಟ್ರಪತಿ ಆಗಿದ್ದಾರೆ. ಇದೆಲ್ಲಾ ಭಾರತದ ಸಂವಿಧಾನ ನೀಡಿರುವ ಸೌಲತ್ತು, ದೌಲತ್ತು. ಇದೇ ಸಾಲಿಗೆ ಸೇರುತ್ತಾರೆ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬೇಡ್ಕಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಉಲ್ಲಾಸ್ ಗೌಡರ್.

ಯುವಕ ಉಲ್ಲಾಸ್ ಗೌಡರ್ ಇನ್ನೂ ಮೂವತ್ತು ವರ್ಷ ಮೀರದ ಯುವಕ. ಪಿ.ಯು.ಸಿ. ಮುಗಿಸಿ ಕೆಲಸಕ್ಕಾಗಿ ಅಲೆಯುತ್ತಾ ಸ್ವಂತ: ಗ್ರಾಮ ತ್ಯಾರಸಿ ಊರಲ್ಲಿ ಕೃಷಿ ಮಾಡಿಕೊಂಡಿದ್ದಾಗ ಜೀವನೋಪಾಯಕ್ಕಾಗಿ ನಗರದ ಪೆಟ್ರೋಲ್ ಬಂಕ್ ನಲ್ಲಿ ಕೆಲಸಕ್ಕೆ ಸೇರುತ್ತಾನೆ. ಇದಕ್ಕಿಂತ ಮೊದಲು ಈತ ದಂತವೈದ್ಯರ ಸಹಾಯಕ, ಬ್ಯಾಂಕಿನ ಭದ್ರತಾ ಸಿಬ್ಬಂದಿ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾತ.

ಈ ಚುರುಕು ಯುವಕ ನಗರದ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತಿದ್ದಾಗ ಬಂದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ೩ ಬಿ ಮೀಸಲಾತಿಯಿಂದ ತ್ಯಾರಸಿ ವಾರ್ಡನ ಗ್ರಾ.ಪಂ. ಸದಸ್ಯನಾಗಿ ಆಯ್ಕೆಯಾಗುತ್ತಾನೆ. ಗ್ರಾ.ಪಂ. ನ ಸಾಮಾನ್ಯ ಸದಸ್ಯನಾಗಿ ಆಯ್ಕೆಯಾದ ಈ ಯುವಕನಿಗೆ ಮತ್ತದೇ ಮೀಸಲಾತಿ ಅಧ್ಯಕ್ಷತೆಯ ಹುದ್ದೆಗೇರುವ ಅವಕಾಶ ಕಲ್ಫಸಿಕೊಡುತ್ತದೆ.

ಭಾರತದ ಪ್ರಜಾಪ್ರಭುತ್ವ, ಸಂವಿಧಾನ ನೀಡಿರುವ ಅವಕಾಶದಿಂದ ಬೇಡ್ಕಣಿ ಗ್ರಾಮ ಪಂಚಾಯತ್ ಅಧ್ಯಕ್ಷತೆಗೇರುವ ಉಲ್ಲಾಸ, ಗ್ರಾ.ಪಂ. ಅಧ್ಯಕ್ಷತೆಯ ಜೊತೆಗೆ ಹೊಟ್ಟೆಪಾಡಿನ ತನ್ನ ಪೆಟ್ರೋಲ್ ಬಂಕ್ ಕೆಲಸವನ್ನೂ ಖುಷಿಯಿಂದ ನಿರ್ವಹಿಸುತ್ತಾನೆ.
ಅಲ್ಪಸಂಖ್ಯಾತ ಲಿಂಗಾಯತ ಪ್ರತಿನಿಧಿ, ಯುವಕರ ಪ್ರತಿನಿಧಿಯಾಗಿರುವ ಉಲ್ಲಾಸ್ ಗೌಡರಿಗೆ ಆತನ ಪೆಟ್ರೋಲ್ ಬಂಕ್ ಮಾಲಿಕ ಮಾಜಿ ಸೈನಿಕ ಕುಮಾರ ಗೌಡರ್ ತನ್ನ ವೃತ್ತಿ ಮಾಡುತ್ತಾ ಗ್ರಾ.ಪಂ. ಜವಾಬ್ಧಾರಿ ನಿರ್ವಹಿಸಲು ಸಹಕರಿಸುತಿದ್ದಾರೆ.
ಹೊಟ್ಟೆಪಾಡಿನ ನೌಕರಿ ಅಗತ್ಯ, ಅಧ್ಯಕ್ಷತೆ, ಜನಪ್ರತಿನಿಧಿತ್ವ ಶಾಶ್ವತವಲ್ಲ ಯಾವ ಹುದ್ದೆಯಲ್ಲಿದ್ದರೂ ಕಾಯಕವೇ ಕೈಲಾಸ, ಕೈ ಕೆಸರಾದರೆ ಬಾಯಿ ಮೊಸರು ಎನ್ನುವ ಬಸವಣ್ಣನ ಸಿದ್ಧಾಂತ ತನ್ನದೆನ್ನುವ ಉಲ್ಲಾಸ, ಉತ್ಸಾಹದಿಂದ ಯುವಕರಿಗೆ ಮಾದರಿಯಾಗಿದ್ದಾರೆ.
