

ಅಲ್ಲಾಹ್ ಪ್ರವಾದಿಗಳ ಕೃಪೆಯಿಂದ ಮಳೆ ನಿಲ್ಲಲಿ ಸಂತ್ರಸ್ತರ ಬದುಕು ಹಸನಾಗಲಿ
-ಮೆಹಮೂದ್ ರಝಾ
ಸಿದ್ದಾಪುರ : ಆ,12-
ತ್ಯಾಗ ಬಲಿದಾನ ಸಾರುವ ಈದ್-ಉಲ್-ಅಝಾಹ್ (ಬಕ್ರೀದ್) ಹಬ್ಬವನ್ನು ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಶೃದ್ಧಾ ಭಕ್ತಿಯೊಂದಿಗೆ ಸಡಗರದಿಂದ ಆಚರಿಸಿದರು. ತಾಲೂಕಿನ ಬೇಡ್ಕಣಿ, ಬಿಳಗಿ, ಇಟಗಿ, ನೆಜ್ಜೂರು, ಅರೆಂದೂರು, ಹಾರ್ಸಿಕಟ್ಟಾ, ಹೆಗ್ಗರಣಿ, ಹೇರೂರು, ಐಗೋಡ ಹಾಗೂ ಸಿದ್ದಾಪುರ ಪಟ್ಟಣದಲ್ಲಿ ಮುಸ್ಲೀಮರು ತಮ್ಮ ಊರಿನ ಮಸೀದಿಗಳಲ್ಲಿ ಹಬ್ಬದ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಸಿದ್ದಾಪುರ ಬದ್ರಿಯಾ ಜಾಮಿಯಾ ಮಸೀದಿಯ ಪ್ರಧಾನ ಗುರುಗಳಾದ ಮೆಹಮೂದ್ ರಝಾ ಮುಸ್ಲೀಮರನ್ನು ಉದ್ದೇಶಿಸಿ ಮಾತನಾಡಿ ಅಲ್ಲಾಹ್‍ನು ಆಜ್ಞಾಪಿಸಿದ ತ್ಯಾಗ ಬಲಿದಾನದೋತ್ಯಕವಾದ ಬಕ್ರೀದ ಹಬ್ಬದ ಹಿಂದಿರುವ ಆಶಯವನ್ನು ಎಲ್ಲರೂ ಅರಿತುಕೊಂಡು ಪ್ರವಾದಿ ಮಹಮದ್ (ಸ,ಅ,ಸ) ರು ಭೋದಿಸಿರುವ ಆದರ್ಶ ಸದ್ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಂತ್ರಸ್ತರಿಗೆ ಸಹಾಯ ಹಸ್ತ ನೀಡಿ ಅಲ್ಲಾಹ್‍ನ ಪ್ರೀತಿಗೆ ಪಾತ್ರರಾಗಿ ಎಂದು ಕರೆ ನೀಡಿ ಅಲ್ಲಾಹ್ ಪ್ರವಾದಿಗಳ ಕೃಪೆಯಿಂದ ಮಳೆ ನಿಲ್ಲಲಿ ಸಂತ್ರಸ್ತರ ಬದುಕು ಹಸನಾಗಲಿ ಎಂದು ಪ್ರಾರ್ಥಿಸಿದರು. ಮಸೀದಿ ಕಮಿಟಿ ಕಾರ್ಯದರ್ಶಿ ಮಾಜಿ ಪ.ಪಂ ಸದಸ್ಯ ಮುನಾವರ ಎ. ಗುರಕಾರ್ ಎಲ್ಲರಿಗೂ ಈದ್ ಶುಭಾಶಯ ಕೋರಿ ಮುಂದೆ ಕೈಗೊಳ್ಳಲಾಗುವ ಮಸೀದಿ ಅಭ್ಯುದಯಕ್ಕಾಗಿ ಎಲ್ಲರ ಸಹಾಯ ಸಹಕಾರಕ್ಕಾಗಿ ವಿನಂತಿಸಿಕೊಂಡು ಹಜ್ ಯಾತ್ರಿಕರಿಗಾಗಿ ಪ್ರಾರ್ಥಿಸಿದರು. ಪ್ರಾರ್ಥನೆ ನಂತರ ಮುಸ್ಲಿಂ ಬಾಂಧವರು ಪರಸ್ಪರ ಆಲಂಗಿಸಿಕೊಂಡು ಈದ್ ಮುಬಾರಕ್ ಹೇಳುವ ಮೂಲಕ ಹಬ್ಬವನ್ನು ಸಂಭ್ರಮಿಸಿದರು.
ನಂತರ ಎಲ್ಲರೂ ಜೊತೆಗೂಡಿ ಮೆರವಣಿಗೆ ಮೂಲಕ ಷರ್‍ಮದ್‍ಷಾವಲ್ಲಿಅಲ್ಲಾಹ್ ದರ್ಗಾಹ್ ಗೆ ತೆರಳಿ ವಿಶ್ವಶಾಂತಿ ಹಾಗೂ ನೆರೆಸಂತ್ರಸ್ಥರ ಒಳಿತಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಸೀದಿ ಕಮಿಟಿಯ ಪದಾಧಿಕಾರಿಗಳು ಸದಸ್ಯರು, ಜೆಡಿಎಸ್ ಜಿಲ್ಲಾಧ್ಯಕ್ಷ(ಮೈನಾರಿಟಿ) ಇಲಿಯಾಸ ಇಬ್ರಾಹಿಂ ಸಾಬ್, ಮಾಜಿ ಪ.ಪಂ. ಸದಸ್ಯರಾದ ಬಾವಾಫಕೀ ಎಂ. ಗುರ್ಕಾರ್ ತಾಮೀರ್ ಸೊಸೈಟಿಯ ಮ್ಯಾನೇಜರ್ ಮಹಮ್ಮದ್ ಅಜೀಮ ಶೇಖ್, ಕಂಟ್ರ್ಯಾಕ್ಟರ್ ರಫೀಕ್ ಸಾಬ್ (ಭಯ್ಯಾ) ಮೊದಲಾದವರು ಉಪಸ್ಥಿತರಿದ್ದರು. ಪಿ.ಎಸ್.ಐ ಮಂಜುನಾಥ ಬಾರ್ಕಿ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು. ಮುಸ್ಲೀಂ ಬಾಂಧವರ ಮನೆಗಳಲ್ಲಿ ಈದ್(ಹಬ್ಬ)ನ ವಿಶೇಷವಾದ ಕುರಿ ಬಲಿದಾನ (ಕುರ್ಭಾನಿ) ಮಾಡಿ ಅಲ್ಲಾಹ್‍ನ ಆದೇಶವನ್ನು ಪರಿಪಾಲಿಸಿದರು.

