
ನಾನೋರ್ವ ಕುಡುಕ
ನಶೆ ಏರಿದಾಗಲೆ ಧ್ಯಾನಸ್ಥ ಅನುಭವ
ಅಮಲಿನಲಿ ಮಲ್ಲಿಗೆಯ ಘಮಲು
ಮದ್ಯವೆಂಬ ಆ ಮಕರಂದವನು
ಹೀರಿದಾಗ ಒಳಗೊಂದು ಅದ್ಭುತ ದೀಪ!
ಮಾತು ಹೆಪ್ಪುಗಟ್ಟಿ ಮೌನ ಝರಿಯಾಗಿ
ಹರಿದು ಹುರಿಗೊಳಿಸುವ ಹು(ಕಿ)ಚ್ಚಿಗೆ
ಶರೆಯ ದಾಸಾನುದಾಸನಾಗಿಬಿಟ್ಟೆ.
ಕುಡಿತದ ನಡುವೆ ಹುರಿದ ಕಡಲೆ
ಮೆಲುದನಿಯ ಸಂಗೀತ ನಿನಾದ
ಕುಡಿವ ಖುಷಿಗೆ ಗರಿ ಮೂಡಿಸಿವೆ
ನಶೆಯ ರಸ ಬದಲಿಸುವಾಗ
ಮೊಗದಲಿ ಬಲು ಮಂದಹಾಸ
ತಣ್ಣಗೆ ಕುಡಿವ ಕಡುಕೌತುಕ
ಒಳಗಿಳಿದಂತೆಲ್ಲಾ ಹೊಸ ಹೊಳಹುಗಳು
ಒಂದಿಷ್ಟು ತಳಮಳಗಳು, ತಲ್ಲಣಗಳು..!
ಸಧ್ಯ ಬುದ್ಧ ಬಸವ ಅಂಬೇಡ್ಕರ್ ಗಾಂಧಿ
ಫುಲೆ ಪೆರಿಯಾರ್ ನಂಜುಂಡಸ್ವಾಮಿಯ
ನಶೆಯಲಿ ನಿತ್ಯ ಮುಳಿಗೇಳುತ್ತಿರುವೆ
ಕಪಾಟಲಿನ್ನೂ ಹಲವು ಬಾಟಲಿಗಳಿವೆ
ಗೆಳೆಯರೆ..
ಶರೆಯ ಸುಧೆ ಸವಿಯಲು ಸಾತಿಯಾಗಿ
ಕೂಡಿ ಕುಡಿವಾಗಿನ ಮಜವೇ ಬೇರೆ
ಎಲ್ಲವ ಕಳಚಿಟ್ಟು ಕದಳಿವನಕೆ ಬನ್ನಿ
ಥರಗುಟ್ಟುವ ಚಳಿಯಲಿ ಸ್ವರ್ಗಕೆ ಕಿಚ್ಚಹಚ್ಚಿ
ಸುತ್ತಲೂ ಕುಳಿತು ಬೆಚ್ಚಗೆ ಕುಡಿಯೋಣ
ಕುಡಿವ ಹುಚ್ಚು ನಿಜಕ್ಕೂ ಅಚ್ಚುಮೆಚ್ಚು.
-ಕೆ.ಬಿ.ವೀರಲಿಂಗನಗೌಡ್ರ.
ಎಸ್.ಆರ್.ಜಿ.ಎಚ್.ಎಂ ಪ್ರೌಢಶಾಲೆ, ಸಿದ್ದಾಪುರ-581355. ಉ.ಕ ಜಿಲ್ಲೆ. ದೂ-9448186099.

