

ಗವಿನಸರಕ್ಕೆ ಬೇಕು ಸರ್ವಋತು ರಸ್ತೆ ಎನ್ನುತ್ತಿರುವವರು ಸಿದ್ಧಾಪುರದ ಅರೆಹಳ್ಳ ಮತ್ತು ಈ ಭಾಗದ ಸಾರ್ವಜನಿಕರು.
ಅಂದಹಾಗೆ ಸಿದ್ದಾಪುರ ತಾಲೂಕಿನ ಕಟ್ಟಕೊನೆಯ ಗ್ರಾಮ ಗವಿನಸರ, ಕಾನಸೂರು,ದೇವಿಸರ ಮಾರ್ಗದ ಗಿರಗಡ್ಡೆ ಶಾಲೆಯಿಂದ ಒಳನುಗ್ಗಿ ಹೋದರೆ ಗವಿನಸರ ತಲುಪುತಿದ್ದಂತೆ ಸಿದ್ಧಾಪುರ ತಾಲೂಕಾ ವ್ಯಾಪ್ತಿ ಮುಗಿಯುತ್ತದೆ.
ಅಲ್ಲಿಂದ ಕಾಡಿನಲ್ಲಿ ಪೂರ್ವಕ್ಕೆ ನಡೆದರೆ ಅರೆಹಳ್ಳ, ಅರೆಹಳ್ಳ ದಾಟಿದರೆ ಒಂದು ದಿಕ್ಕಿಗೆ ಶಿರಸಿ ತಾಲೂಕು ಇನ್ನೊಂದು ದಿಕ್ಕಿಗೆ ಸೊರಬ! ಹೀಗೆ ಸಿದ್ದಾಪುರದ ರಸ್ತೆ ಕೊನೆಗೆ ತಲುಪಿ ಮುಕ್ತಾಯವಾಗುವ ರಸ್ತೆ ಮತ್ತು ಸಿದ್ದಾಪುರ ತಾಲೂಕಿನ ಗಡಿಯಲ್ಲಿರುವುದೇ ಗವಿನಸರ. ಗವಿನಸರ ಕಾನಸೂರಿನಿಂದ ಬರೀ 8 ಕಿ.ಮೀ.ದೂರದಲ್ಲಿದೆ. ಆದರೆ ಈ ಮಾರ್ಗದಲ್ಲಿ 4 ಕಿ.ಮೀ. ಕೂಡಾ ಸರ್ವಋತು ರಸ್ತೆ ಇಲ್ಲ. ಬೇಸಿಗೆ ಚಳಿಕಾಲದಲ್ಲಿ ಬಸ್ಸಿಲ್ಲದ ಈ ರಸ್ತೆಯ ಮೂಲಕ ನಡೆದೇ ಜನರು ಕಾನಸೂರಿಗೆ ಬರಬೇಕು.
ಮಳೆಗಾಲದಲ್ಲಂತೂ ಈ ರಸ್ತೆ ಭಯಂಕರ. ಈ ವರ್ಷದ ಮಹಾಮಳೆ ಅವಧಿಯಲ್ಲಿ ಈ ರಸ್ತೆಯಲ್ಲಿ ಧರೆ ಕುಸಿದು ಮೂರು ತಿಂಗಳುಗಳ ಕಾಲ ಸೈಕಲ್, ದ್ವಿಚಕ್ರವಾಹನ ಬಿಟ್ಟರೆ ಬೇರೆ ಯಾವ ವಾಹನವೂ ಚಲಿಸುತ್ತಿರಲಿಲ್ಲ. ಈ ಗ್ರಾಮದ ಮಹಾಬಲೇಶ್ವರ ದೇವಾಡಿಗರ ಒತ್ತಾಯಕ್ಕೆ ಮಣಿದ ಕಾನಸೂರು ಪಂಚಾಯತ್ ದುರಸ್ತಿಗೆ ಅನುದಾನ ಒದಗಿಸುವ ಭರವಸೆ ನೀಡಿ ತಾತ್ಕಾಲಿಕ ಕೆಲಸವೂ ಆಗಿದೆ.
ಆದರೆ ಈ ತಿಂಗಳಲ್ಲಿ ಸುರಿದ ಮಳೆ ಮತ್ತೆ ಈ ರಸ್ತೆಯನ್ನು ಸಂಚಾರಕ್ಕೆ ಅಯೋಗ್ಯ ಮಾಡಿದೆ. ಹೀಗೆ ಆಗಾಗ ಹಾಳಾಗುತ್ತಾ, ವರ್ಷವಿಡೀ ಹೊಂಡಗಳಿಂದ ತುಂಬಿದ ರಸ್ತೆಯಲ್ಲಿ ಈ ಭಾಗದ ಕೆಲವು ಗ್ರಾಮಗಳ ಜನರು ಸಾಗಬೇಕು. ಈ ದುರ್ಗಮ ಪ್ರದೇಶಕ್ಕೆ ಬಸ್, ವಾಹನ ಸೌಲಭ್ಯಗಳಂತೂ ಇಲ್ಲ ಕನಿಷ್ಟ ರಸ್ತೆಯನ್ನಾದರೂ ಮಾಡಿಕೊಡಿ ಎನ್ನುವ ಅನಿವಾರ್ಯತೆ ಇಲ್ಲಿದೆ.
ಸ್ಥಳಿಯ ಜನಪ್ರತಿನಿಧಿಗಳು, ಈ ಕ್ಷೇತ್ರದ ಶಾಸಕರು, ಸಂಸದರು ನೋಡದ ಈ ಗ್ರಾಮಕ್ಕೆ ಸರ್ವಋಉತು ರಸ್ತೆಯಾದರೆ ಗವಿನಸರ ಮತ್ತು ಈ ಭಾಗದ ಜನರಿಗೆ ಅನುಕೂಲವಾಗುತ್ತದೆ. ಈಗ ಈ ಗ್ರಾಮಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು 8-10ಕಿ.ಮೀ ದೂರದ ಕಾನಸೂರಿಗೆ ಬರಬೇಕು ಇಲ್ಲಾ ಅಷ್ಟೇ ದೂರದ ಶಿರಸಿಗೆ ತೆರಳಬೇಕು. ಇಂಥ ದುರ್ಗಮ ಹಳ್ಳಿಗಳಲ್ಲಿ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸುವುದು ದುಸ್ಸಾಹಸ ಆದರೆ ಸರ್ವಋಉತು ರಸ್ತೆ ಮಾಡಿ ಈ ಭಾಗದ ಜನರ ಬವಣೆ ತಗ್ಗಿಸಬಹುದು.
7ಕ್ಕೆ ಕಲಗದ್ದೆಯಲ್ಲಿ ಲಂಕಾದಹನ
ಶರನ್ನವರಾತ್ರಿ ಉತ್ಸವದ ಹಿನ್ನಲೆಯಲ್ಲಿ ಶ್ರೀನಾಟ್ಯ ವಿನಾಯಕ ಸೇವಾ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಾರವಾರದ ಸಹಕಾರದಲ್ಲಿ ಲಂಕಾದಹನ ಉಚಿತ ಯಕ್ಷಗಾನ ಪ್ರದರ್ಶನ ಅ.7ರಂದು ಸಂಜೆ 4ರಿಂದ ಸಿದ್ದಾಪುರತಾಲೂಕಿನ ಇಟಗಿ ಕಲಗದ್ದೆಯ ಯಕ್ಷಗಾನ ನಾಟ್ಯ ವಿನಾಯಕ ದೇವಸ್ಥಾನದ ಆವಾರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಮೊಕ್ತೇಸರ ವಿನಾಯಕ ಹೆಗಡೆ ವಹಿಸಿಕೊಳ್ಳಲಿದ್ದು, ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತರಾದ ನಾರಾಯಣ ಮೂರ್ತಿ ಎಸ್.ಹೆಗಡೆ, ವಸಂತ ಹೆಗಡೆ ಶಶಿಗುಳಿ, ಸುಬ್ರಾಯ ಹೆಗಡೆ ಭವಂತಿಮನೆ ಆಲಳ್ಳಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹಿಮಂತರಾಜು, ಅನಂತ ಪ್ರತಿಷ್ಠಾನದ ಕಾರ್ಯದರ್ಶಿ ಕೊಳಗಿ ಕೇಶವ ಹೆಗಡೆ ಪಾಲ್ಗೊಳ್ಳಲಿದ್ದಾರೆ.
ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಶರತ್ ಜಾನಕೈ, ಭಾರ್ಗವ ಹೆಗ್ಗೋಡು, ಮುಮ್ಮೇಳದಲ್ಲಿ ವಿನಾಯಕ ಹೆಗಡೆ ಕಲಗದ್ದೆ, ಅಶೋಕ ಭಟ್ಟ ಸಿದ್ದಾಪುರ, ನಾಗೇಂದ್ರ ಮೂರೂರು, ವೆಂಕಟೇಶ ಬೊಗ್ರಿಮಕ್ಕಿ, ಅವಿನಾಶ ಕೊಪ್ಪ ಸಹಕಾರ ನೀಡಲಿದ್ದು, ಪ್ರಸಾದನದಲ್ಲಿ ಎಂ.ಆರ್.ನಾಯ್ಕ ಕರಸೇಬೈಲ್ ಪಾಲ್ಗೊಳ್ಳಲಿದ್ದಾರೆ.


