

ಸಿದ್ದಾಪುರ
ತಾಲೂಕಿನ ಕೋಡ್ಸರ ವ್ಯವಸಾಯ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭ ನ.28ರಂದು ದಿ.ಶಿವರಾಮ ನಾರಾಯಣಪ್ಪ ಹೆಗಡೆ ಪಾಟೀಲ್ ವೇದಿಕೆಯಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಗಣಪತಿ ಹೆಗಡೆ ಸಂಕದ್ಮನೆ ಹೇಳಿದರು.
ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಘ 1919ರಲ್ಲಿ ಕಾನಸೂರಿನಲ್ಲಿ ಸ್ಥಾಪನೆಗೊಂಡು ಈಗ ಕೋಡ್ಸರದಲ್ಲಿ 1960ರಿಂದ ಸ್ವಂತ ಕಟ್ಟಡದೊಂದಿಗೆ ವ್ಯವಹಾರಮಾಡುತ್ತ ಬೆಳೆದುಬಂದಿದೆ.
ಆರಂಭದಿಂದಲೂ ಸಂಘದ ಸದಸ್ಯರ ಸಮಸ್ಯೆಗೆ ಸ್ಪಂದಿಸುತ್ತ ಬಂದಿದೆ. ಈಗ ಕೃಷಿ ಹಾಗೂ ಕೃಷಿಯೇತರ ಸಾಲಗಳನ್ನು ನೀಡುತ್ತ ಸದಸ್ಯರ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಸಂಸ್ಥಾಪಕ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳಿಂದ ಹಿಡಿದು ಇಂದಿನವರೆಗಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಸೇವೆ, ಸಲಹೆ ಸೂಚನೆಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಲ್ಲದೆ ಸದಸ್ಯರ ಪ್ರಾಮಾಣಿಕ ವ್ಯವಹಾರವೂ ಸಂಘದ ಅಭಿವೃದ್ಧಿಗೆ ಪೂರಕವಾಗಿದೆ, ಶತಮಾನೋತ್ಸವದ ಸವಿನೆನಪಿಗಾಗಿ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಸಂಘದಲ್ಲಿ ಸೇವೆ ಸಲ್ಲಿಸಿದ ಎಲ್ಲ ಅಧ್ಯಕ್ಷರಿಗೆ ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಲಾಗವುದು ಎಂದು ಹೇಳಿದರು.
ಉದ್ಘಾಟನೆ: ನ.28ರಂದು ಬೆಳಗ್ಗೆ 10.30ಕ್ಕೆ ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಗಣಪತಿ ಹೆಗಡೆ ಅಧ್ಯಕ್ಷತೆವಹಿಸುವರು.ಶಿರಸಿ ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ, ತಟ್ಟೀಸರ ಗ್ರೂಪ್ ಸೇವಾ ಸಹಕಾರಿ ಸಂಘ ಮೇಲಿನ ಓಣಿಕೇರಿ ಅಧ್ಯಕ್ಷ ಜಿ.ಟಿ.ಹೆಗಡೆ ತಟ್ಟೀಸರ, ಕೆಡಿಸಿಸಿ ಬ್ಯಾಂಕ್ ಎಂ.ಡಿ.ಎಸ್.ಪಿ.ಚವ್ಹಾಣ, ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕಿ ಶಶಿಕಲಾ ಪಾಳೇದ, ಸಹಕಾರಿ ಸಂಘಗಳ ಸಹಾಯಕ ನಿರ್ದೇಶಕ ಎನ್.ಎನ್.ಹೆಗಡೆ ಉಪಸ್ಥಿತರಿರುತ್ತಾರೆ.
