

ಸಿದ್ಧಾಪುರ ತಾಲೂಕಿನ ಹೆಗ್ಗೋಡಮನೆಯ ವಾರ್ಷಿಕ ಆಲೆಮನೆ ಹಬ್ಬ ಇತ್ತೀಚೆಗೆ ನಡೆಯಿತು.
ರಾವ್ ಬಹೂದ್ದೂರು ಕುಟುಂಬ ಎನ್ನುವ ಹೆಸರಿದ್ದ ಹೆಗ್ಗೋಡಮನೆಯಲ್ಲಿ ಬಹುಹಿಂದಿನಿಂದಲೂ ಸಾಂಪ್ರದಾಯಿಕ ಆಲೆಮನೆ ಮಾಡುವುದು ರೂಢಿ, ಆದರೆ ಈಗ ಮೊದಲಿನಂತೆ ಸಾಂಪ್ರದಾಯಿಕ ಆಲೆಮನೆ ನಡೆಯುತ್ತಿಲ್ಲ. ಆದರೆ ಮೊದಲ ವ್ಯವಸ್ಥೆಗಿಂತ ಹೆಚ್ಚು ಅದ್ಧೂರಿಯಾಗಿ ಕಬ್ಬಿನ ಹಾಲು ತಯಾರಿಸಿ ಆಮಂತ್ರಿತರಿಗೆ ನೀಡುವ ಜೊತೆಗೆ ಊಟೋಪಚಾರವನ್ನು ಮಾಡಲಾಗುತ್ತದೆ.
ಈ ಆಲೆಮನೆಯಲ್ಲಿ ನೀರಿನ ಮಹತ್ವ,
ನೀರಿಂಗಿಸುವಿಕೆ, ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಸೇರಿದ ಪರಿಸರಪೂರಕ ಘೋಷಣೆಗಳೊಂದಿಗೆ ಕಾರ್ಯಕ್ರಮ ನಡೆಸಲಾಗುತ್ತದೆ. ಈ ವರ್ಷ ಕೂಡಾ ಕಳೆದ ಶನಿವಾರ ಈ ವಾರ್ಷಿಕ ಆಲೆಮನೆ ಹಬ್ಬ ನಡೆಯಿತು. ಈ ಹಬ್ಬದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯಕ್ಷಗಾನ ಪ್ರದರ್ಶನ ನಡೆಯಿತು. ಸುತ್ತಲಿನ ತಾಲೂಕು ಎರಡ್ಮೂರು ಜಿಲ್ಲೆಗಳಿಂದ ಬಂದ ಹೆಗ್ಗೋಡಮನೆ ಗೌಡರ ಹಿತೈಶಿಗಳು, ಸಂಬಂಧಿಗಳು, ಸ್ನೇಹಿತರು ಈ ಆಲೆಮನೆ ಹಬ್ಬದ ಸವಿ ಉಂಡರು.
ಫೆ.27ರಿಂದ ಅಗ್ಗೇರಿಯಲ್ಲಿ ಸಾಂಸ್ಕೃತಿಕ ಜಾತ್ರೆ
ಸಿದ್ಧಾಪುರ ತಾಲೂಕಿನ ಅಗ್ಗೇರಿಯ ಮಾರಿಕಾಂಬಾ ಜಾತ್ರಾ ನಿಮಿತ್ತ ಸಾಂಸ್ಕೃತಿಕ ಸಂಗಮ ನಡೆಯಲಿದ್ದು ಈ ಕಾರ್ಯಕ್ರಮಗಳಿಂದಾಗಿ ಇದು ಸಾಂಸ್ಕೃತಿಕ ಜಾತ್ರೆಯಾಗಿ ಸಾರ್ವಜನಿಕರ ಗಮನ ಸೆಳೆದಿದೆ.
ಫೆ,27 ರ ಗುರುವಾರ ಸಾಯಂಕಾಲದ ಸಭಾ ಕಾರ್ಯಕ್ರಮದ ನಂತರ ಚಿಣ್ಣರ ಚಿಲಿಪಿಲಿ ನಡೆಯಲಿದೆ. ಫೆ,28 ರ ಶುಕ್ರವಾರ ಸಾಯಂಕಾಲ ಸಂಗೀತ ಸಂಜೆ ನಂತರ ಶಿರಸಿ ಯಕ್ಷಕಲಾಬಳಗದಿಂದ ಕರ್ಣಪರ್ವ ಯಕ್ಷಗಾನ ತಾಳಮದ್ದಲೆ ನಡೆಯಲಿವೆ.



