

ಬಂದೂಕು ಹಿಡಿದು
ಹೆದರಿಸುವ ಭೂಪರೆ…
ಬಾಂಬು ಕಟ್ಟಿಟ್ಟು
ಬೀಗುವ ಬಲಾಢ್ಯರೆ…
ದೊಡ್ಡಣ್ಣ ಸಣ್ಣಣ್ಣ
ಎಂಬ ವೀರರೆ…
ನಾವೇ ಶ್ರೇಷ್ಠರೆಂಬ
ದೇವ ದೂತರೆ
ಏನಿದೆಲ್ಲಾ…
ನಿಮಗೂ ಭಯ?
ಬರಿಗಣ್ಣಿಗೆ ಕಾಣದಷ್ಟು
ಸೂಕ್ಷ್ಮ ಜೀವಿ
ಎಲ್ಲಿ ಹುಟ್ಟಿತು
ಯಾರು ಬಿಟ್ಟರು ಗೊತ್ತಿಲ್ಲ
ಬಿಡಿ ನಿಮ್ಮ ಬಂದೂಕುಗಳ
ಸಿಡಿಸಿ ಬಿಡಿ ಬಾಂಬು
ಸತ್ತುಬಿಡುವುದೆನ್ನುವ
ಭರವಸೆ ಇಲ್ಲವೆ?
ಏನಾಗಿದೆ ನಮಗೆ…
ಜನರಿಗೆ ತಿಳುವಳಿಕೆ
ನೀಡಬೇಕು…
ಪ್ರಜ್ಞೆ ಬೆಳೆಯಬೇಕು
ಆಡಂಬರ ತೊರೆಯಬೇಕು
ಅರಿವಿನಡಿಯಲ್ಲಿ ಒಂದುಗೂಡಬೇಕು
ಅಲ್ಲೊಂದು ಇಲ್ಲೊಂದು ಮಾತು
ಇದಕ್ಕೂ
ಅದೇ ಬರಬೇಕಾಯಿತೆ.
-ತಮ್ಮಣ್ಣ ಬೀಗಾರ.

ಏಪ್ರಿಲ್ ಫೂಲ್
ಸಂಕಲನದ ಸಮಾಜಮುಖಿ ಕಥೆಗಳು..
‘ಏಪ್ರಿಲ್ ಫೂಲ್’ ಕಥೆ ಓದುವಾಗ ತಡೆದುಕೊಳ್ಳಲಾಗದಷ್ಟು ಒತ್ತರಿಸಿಕೊಂಡು ಹೊರಬರುವ ನಗು ಒಂದ್ಕಡೆಯಾದರೆ, ಇನ್ನೊಂದ್ಕಡೆ ಇದು ಕಾಲ್ಪನಿಕ ಅನ್ನಿಸಿದರೂ, ದಿಟವಾಗುವ ದಿನಗಳು ದೂರವಿಲ್ಲ ಅನ್ನೊ ಆತಂಕ ಒಳಗೊಳಗೇ ತಣ್ಣಗೆ ಇರಿಯುತ್ತದೆ.
ಹನುಮಂತ ಹಾಲಿಗೇರಿಯವರ ಕಥೆ ಕಟ್ಟುವ ಕೌಶಲ್ಯಕ್ಕೆ ನಿಜಕ್ಕೂ ನಾನು ಬೆರಗಾಗಿ ಶರಣಾಗಿಬಿಟ್ಟೆ. ಕಥೆ ಓದುವಾಗ ಅತೀ ಹೆಚ್ಚು ನಕ್ಕಿದ್ದು ಪ್ರಾಯಶಃ ಇದೇ ಮೊದಲು.
ಸುಡುವ ನೆಲದವರ (ಬಯಲು ಸೀಮೆಯವರ) ಒಲವು, ನಿಲುವು, ಮುಗ್ಧತೆಯನ್ನು ಅರ್ಥೈಸಿಕೊಂಡು, ಅಲ್ಲಿಯೇ ನೆಲಸಿರುವ ಕೆಲ ದುಷ್ಟಶಕ್ತಿಗಳು ರಾಷ್ಟ್ರಪ್ರೇಮ, ರಾಷ್ಟ್ರ ರಕ್ಷಣೆ, ಧರ್ಮದ ನೆಪದಲ್ಲಿ ಇಡೀ ಊರಿನ ಸಾಮರಸ್ಯವನ್ನೇ ಕುಲಗೆಡಿಸುವ ಕುತಂತ್ರದ ಚಿತ್ರಣವನ್ನು ‘ಅಲೈದೇವ್ರು’ ಕಥೆ ತುಂಬಾ ಅರ್ಥಪೂರ್ಣವಾಗಿ ತೆರೆದಿಟ್ಟಿದೆ.
