

ವಿಶ್ವದಾದ್ಯಂತ ಕರೋನಾ ತನ್ನ ಅಟ್ಟಹಾಸ ಮೆರೆಯುತ್ತಿರುವಂತೆ ಭಾರತದಲ್ಲೂ ದಿನದಿಂದ ದಿನಕ್ಕೆ ಕೋವಿಡ್ -19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ದೇಶದ ಕೆಲವು ರಾಜ್ಯಗಳು, ರಾಜ್ಯದ ಕೆಲವು ಜಿಲ್ಲೆಗಳು ಕರೋನಾ ಮುಕ್ತವಾಗಿದ್ದರೂ ಬಹುತೇಕ ಹೆಚ್ಚು ಜಿಲ್ಲೆ,ರಾಜ್ಯಗಳಲ್ಲಿ ಕೋವಿಡ್ ರುದ್ರನರ್ತನ ನಡೆಯುತ್ತಿದೆ. ಈ ಅಪಾಯದ ಸ್ಥಿತಿಯಲ್ಲಿ ರಾಜ್ಯದಲ್ಲಿ ಕರೋನಾ ಸೋಂಕಿತ
ಟಾಪ್ 5 ಜಿಲ್ಲೆಗಳಲ್ಲಿ ಒಂದಾಗಿದ್ದ ಉತ್ತರಕನ್ನಡದಲ್ಲಿ 8 ಜನ ಕರೋನಾ ಸೋಂಕಿತರಲ್ಲಿ 2 ಜನರು ಸಂಪೂರ್ಣ ಗುಣಮುಖರಾಗುವ ಮೂಲಕ ಮನೆಗೆ ಮರಳಿದ್ದಾರೆ.
ಹೊರದೇಶಗಳಿಂದ ಮಂಗಳೂರು, ಭಟ್ಕಳಕ್ಕೆ ಬಂದು ಚಿಕಿತ್ಸೆ ಪಡೆದಿದ್ದ ಉತ್ತರಕನ್ನಡ ಜಿಲ್ಲೆಯ ಒಟ್ಟೂ 8 ಜನರಲ್ಲಿ ಎರಡು ಜನರು ಗುಣಮುಖರಾಗಿರುವುದು ಜಿಲ್ಲೆಯ ಜನರ ನಿರಾಳಕ್ಕೆ ಕಾರಣವಾಗಿದೆ. ಜಿಲ್ಲೆಯ ಭಟ್ಕಳ ಬಿಟ್ಟರೆ ಬೇರೆ ತಾಲೂಕುಗಳಲ್ಲಿ ಕೋವಿಡ್ ಸೋಂಕಿತರಿರದಿರುವುದು ಸಮಾಧಾನಕ್ಕೆ ಕಾರಣವಾಗಿದೆ. ಆದರೆ ಜಿಲ್ಲೆಯಾದ್ಯಂತ ನಡೆಯುತ್ತಿರುವ ಲಾಕ್‍ಡೌನ್ ಜನರ ನೆಮ್ಮದಿ ಕಸಿದಿದೆ.
ಸಿದ್ಧಾಪುರ ತಾಲೂಕಿನಲ್ಲಿ ಭಯಹುಟ್ಟಿಸಿದ್ದ ಮಂಗನಕಾಯಿಲೆ ಕೂಡಾ ನಿಧಾನವಾಗಿ ನಿಯಂತ್ರಣಕ್ಕೆ ಬಂದಿದ್ದು ಕರೋನಾ, ಮಂಗನಕಾಯಿಲೆಯಿಂದ ಭಯಭೀತರಾದ ಸ್ಥಳಿಯರು ನಿಟ್ಟುಸಿರು ಬಿಡುವಂತಾಗಿದೆ.
ಈ ಸ್ಥಿತಿಯ ನಡುವೆ ಜನರು, ಸಂಘ ಸಂಸ್ಥೆಗಳು, ಪಕ್ಷಗಳ ಸೇವಾ ಕಾರ್ಯ ಮುಂದುವರಿದಿದೆ.
ಜಿಲ್ಲೆಯ ಕಾಂಗ್ರೆಸ್ ಸಮೀತಿ ಜಿಲ್ಲೆಯ ಎಲ್ಲಾ ಬ್ಲಾಕ್ ಗಳಿಗೆ ಆಯಾ ತಾಲೂಕುಗಳಲ್ಲಿ ಸೇವೆಯಲ್ಲಿರುವ ಸಿಬ್ಬಂದಿಗಳಿಗೆ ಆಹಾರಕಿಟ್ ವಿತರಿಸಿದೆ.
ಶಿರಸಿಯಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ಸಮೀತಿ ಕಛೇರಿಯಲ್ಲಿ ಡಿ.ಸಿ.ಸಿ. ಅಧ್ಯಕ್ಷ ಭೀಮಣ್ಣ ನಾಯ್ಕ, ಕೋವಿಡ್ ಟಾಸ್ಕ್ ಫೋರ್ಸ್ ಜಿಲ್ಲಾ ಉಸ್ತುವಾರಿ ಸತೀಶ್ ಶೈಲ್ ಎಲ್ಲಾ ತಾಲೂಕಾ ಅಧ್ಯಕ್ಷರಿಗೆ ಕಿಟ್ ವಿತರಿಸಿದರು.
ತಾಲೂಕಾ ಕಾಂಗ್ರೆಸ್ ಘಟಕದಿಂದ ಸಿದ್ದಾಪುರದಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಳಿಗೆ ಕಿಟ್ ವಿತರಿಸಲಾಯಿತು. ಮುಖ್ಯಮಂತ್ರಿಗಳ ಕೋವಿಡ್19 ಪರಿಹಾರ ನಿಧಿಗೆ ಸಿದ್ದಾಪುರದ ಉದ್ಯಮಿ ಹಾಲಪ್ಪ ಗೌಡರ್ 5ಸಾವಿರ ಧನ ಸಹಾಯ ನೀಡಿದರು.
ಪೊಲೀಸ್ ಸಿಬ್ಬಂದಿಗಳಿಗೆ ಫುಡ್ ಕಿಟ್ ನೀಡಿಕೆ
ಸಿದ್ದಾಪುರ.ಏ,06-
ಸ್ಥಳೀಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೊರೋನ ವೈರಸ್ ತಡೆಗಟ್ಟುವ ಲಾಕ್‍ಡೌನ್ ಕುರಿತಾಗಿ ನಿರಂತರ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಹಣ್ಣು, ಶುದ್ಧನೀರು,ತಂಪು ಪಾನೀಯ ಮುಂತಾದವುಗಳಿರುವ ಫುಡ್ ಕಿಟ್‍ನ್ನು ನೀಡಲಾಯಿತು.
ಪಕ್ಷದ ಧುರೀಣರಾದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಎ.ಪಿ.ಎಂ.ಸಿ.ಅಧ್ಯಕ್ಷ ಕೆ.ಜಿ.ನಾಗರಾಜ, ತಾಲೂಕು ಪಂಚಾಯತ ಅಧ್ಯಕ್ಷ ಸುಧೀರ್ ಗೌಡರ್, ಕೋಲಸಿರ್ಸಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಕೆ.ಆರ್.ವಿನಾಯಕ ಹಾಗೂ ಲೋಕೇಶ ನಾಯ್ಕ, ಎಲ್.ಬಿ.ರವಿ ಮುಂತಾದವರು ಪಿಐ ಪ್ರಕಾಶ್ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಕಿಟ್ ನೀಡಿದರು.
ಕಾಂಗ್ರೆಸ್ ಧುರೀಣ ಆರ್.ವಿ.ದೇಶಪಾಂಡೆಯವರ ಸೂಚನೆಯ ಮೇರೆಗೆ ಲೋಕ ಕಲ್ಯಾಣಾರ್ಥವಾಗಿ ರವಿವಾರ ಪಟ್ಟಣದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ವಿಶೇಷಪೂಜೆ ಸಲ್ಲಿಸಲಾಗಿದೆ ಎಂದು ಕೆ.ಜಿ.ನಾಗರಾಜ ತಿಳಿಸಿದ್ದಾರೆ.



