ಕುಂಭಕರ್ಣನ ನಿದ್ದೆ

ಈಗಲೇ ಪ್ರಸ್ತುತ ಶ್ರೀನಿವಾಸ ಉಡುಪರ “ಕುಂಭಕರ್ಣನ ನಿದ್ದೆ” ! -ನಾಗೇಶ್ ಹೆಗಡೆ

ಮಕ್ಕಳ ದೀರ್ಘಪದ್ಯಗಳ ಪ್ರಶ್ನೆ ಬಂದಾಗ ಕುವೆಂಪು ವಿರಚಿತ ‘ಬೊಮ್ಮನಹಳ್ಳಿಯ ಕಿಂದರಜೋಗಿ’ ಬಿಟ್ಟರೆ ನನಗೆ ತೀರ ಹಿಡಿಸಿದ್ದು (ಏ.11 ರಂದು ಗತಿಸಿದ) ಶ್ರೀನಿವಾಸ ಉಡುಪರ ಈ ಕವನ. ಇದು ಈಗ ಇನ್ನಷ್ಟು ಪ್ರಸ್ತುತವೂ ಹೌದು. ಮನೆಯಲ್ಲಿರುವ ಮಕ್ಕಳಿಗೆ ಹಾಡಿ ತೋರಿಸಲಿಕ್ಕೆ ಅಥವಾ ಡಿಡಿಯಲ್ಲಿ ನಾಳೆ ನಾಡಿದ್ದು ಈ ದೃಶ್ಯ ಬರಲಿದೆ ಎಂಬ ಕಾರಣಕ್ಕಷ್ಟೇ ಅಲ್ಲ, ನಮ್ಮ ಇಂದಿನ ಕೊರೊನಾ ಸಂದರ್ಭದಲ್ಲೂ ಎಷ್ಟೊಂದು ಜನರು ಕುಂಭಕರ್ಣನಂತೆ ವರ್ತಿಸುತ್ತಿದ್ದಾರೆ. ಮಸೀದಿಗೆ- ಮದರಸಾಕ್ಕೆ ಹೋಗಿಯೇ ಹೋಗುತ್ತೇನೆಂದು ಹೇಳುತ್ತಾರೆ. ಯಾರೆಷ್ಟೇ ಶಂಖ ಜಾಗಟೆ ಹೊಡೆದರೂ ಅರಮನೆಯ ವೈಭೋಗಲ್ಲಿರುವ ಕೆಲವರು ನಿದ್ದೆಯಲ್ಲಿದ್ದಂತೆ ಯಾರದೋ ಮದುವೆಯ ಊಟಕ್ಕೆ ಹೋಗುತ್ತಾರೆ, ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಾರೆ. ಮಗನ ಮದುವೆ ಮಾಡೇಮಾಡುತ್ತೇನೆಂದು ಜಿದ್ದಿಗೆ ಬೀಳುತ್ತಾರೆ. ಅವರೆಲ್ಲರನ್ನು ನೆನಪಿಸುವ ಉಡುಪರ ಈ ಕವನವನ್ನು 20ನೇ ಶತಮಾನದ ಕನ್ನಡದ ಶ್ರೇಷ್ಠ ಮಕ್ಕಳ ಸಾಹಿತ್ಯದಲ್ಲಿ ಸೇರ್ಪಡೆ ಮಾಡಲಾಗಿದೆ (ನನ್ನದೊಂದು ಕತೆಯೂ ಅದರಲ್ಲಿ ಸೇರಿದೆ, ಅದು ಬೇರೆ). “ಕುಂಭಕರ್ಣನ ನಿದ್ದೆ”ಯನ್ನು ಹಿಂದೆ ಓದಿದ್ದರೂ ಈಗ ಮತ್ತೊಮ್ಮೆ ಓದಿ ನೋಡಿ. ಮಕ್ಕಳಿಗೆ ಓದಿಸಿ. ತಮಾಷೆಯಾಗಿದೆ.

ಸೀತಾಮಾತೆಯ ರಾವಣ ಕದ್ದು
ಅಶೋಕವನದಲಿ ಬಚ್ಚಿಟ್ಟಿದ್ದು
ಆಂಜನೇಯನು ಸೀತೆಯ ಕಂಡು
ಲಂಕಾನಗರಕ್ಕೆ ಕಿಚ್ಚಿಟ್ಟಿದ್ದು
ಕುಂಭಕರ್ಣನಿಗೆ ಗೊತ್ತೇ ಇಲ್ಲ
ಎಂಥಾ ನಿದ್ದೆಯೊ ದೇವರೆ ಬಲ್ಲ!
2
ಕಪಿಗಳು ಕಡಲಿಗೆ ಸೇತುವೆ ಕಟ್ಟಿ
ಲಂಕಾನಗರಿಗೆ ದಾಳಿಯಿಟ್ಟಿದ್ದು
ಹನುಮ ರಾವಣನ ದವಡೆಗೆ ತಟ್ಟಿ
ರಾವಣೇಶ್ವರನ ಹಲ್ಲುದುರಿದ್ದು
ಕುಂಭಕರ್ಣನಿಗೆ ಗೊತ್ತೇ ಇಲ್ಲ
ಎಂಥಾ ನಿದ್ದೆಯೊ ದೇವರೆ ಬಲ್ಲ!
3
ರಾವಣಗಂತೂ ತುಂಬಾ ಕೋಪ
(ಅಲ್ಲವೆ ಮತ್ತೆ, ಅಯ್ಯೊ ಪಾಪ!)
ಮೀಸೆಯ ತಿರುವಿ, ಮುಷ್ಟಿಯ ಬಿಗಿದು
ಕರಕರ ಕರಕರ ಹಲ್ಲನು ಕಡಿದು
ಗಟಗಟ ಗಟಗಟ ನೀರನು ಕುಡಿದು
“ಏಳಿಸಿರೊ ಆ ಕುಂಭಕರ್ಣನನು
ಹೊಸೆದು ಹಾಕಲಿ ನರವಾನರರನು”
ಎಂದು ಕಿರುಚಿದುದು, ಒದರಾಡಿದುದು
ಕುಂಭಕರ್ಣನಿಗೆ ಗೊತ್ತೇ ಇಲ್ಲ
ಎಂಥಾ ನಿದ್ದೆಯೊ ದೇವರೆ ಬಲ್ಲ!
4
ಒಡಯನ ಮಾತಿಗೆ ಅಪ್ಪಣೆಯೆಂದು
ಧಡ ದಢ ಹೊರಟಿತು ರಾಕ್ಷಸ ದಂಡು
ಕೊಕ್ಕರೆಕಾಲಿನ ತೆಳು ರಾಕ್ಷಸರು
ಗೂಬೆಯ ಮೂತಿಯ ಮುದಿರಾಕ್ಷಸರು
ಹೋತನ ಗಡ್ಡದ ಹಿರಿ ರಾಕ್ಷಸರು
ಕುರುಚಲು ಮೀಸೆಯ, ಕೋರೆಯದಾಡಿಯ
ತರತರ ರೀತಿಯ ಯುವರಕ್ಕಸರು
ಪುಟಪುಟ ನಡೆಯುವ ಮರಿರಕ್ಕಸರು
ಕುಂಭಕರ್ಣನನು ಎಬ್ಬಿಸಲೆಂದು
ಅವರೆಲ್ಲರು ಏನ್ ಮಾಡಿದರೆಂದು
ಕುಂಭಕರ್ಣನಿಗೆ ಗೊತ್ತೇ ಇಲ್ಲ
ಎಂಥಾ ನಿದ್ದೆಯೊ ದೇವರೆ ಬಲ್ಲ!
5
ಹಕ್ಕಿತುಪ್ಪಳದ ಹಾಸಿಗೆಯಲ್ಲಿ
ಬೆಟ್ಟದಂತಹ ದೇಹವ ಚೆಲ್ಲಿ
ನಿದ್ರಿಸುತಿದ್ದ ಆ ಮಹರಾಯ
ಎಚ್ಚರವಾದರೆ ಬಹಳ ಅಪಾಯ!
(ಆರು ತಿಂಗಳದ ನಿದ್ದೆಯ ನಡುವೆ
ಎದ್ದನೆಂದರೆ ಅಪಾರ ಹಸಿವೆ!)
ಭೋರ್ಭೋರ್ ಎನ್ನುವ ಭಾರೀ ಗೊರಕೆಗೆ
ಇಡೀ ಅರಮನೆ ನಡುಗುತ್ತಿತ್ತು
ಕರೀಮಂಚ ನರಳುತ್ತಿತ್ತು
“ನೀ ಹೋಗಯ್ಯ, ನೀ ನಡೆ ಮುಂದೆ”
ಒಬ್ಬರನೊಬ್ಬರು ತಿವಿಯುತ ಹಿಂದೆ
ಹಿಂದೆಯೆ ಉಳಿದರು ಬಹಳ ರಕ್ಕಸರು
ಕುಂಭಕರ್ಣನನೆಬ್ಬಿಸ ಬಂದವರು
ಆತನಿಗೇನೂ ಗೊತ್ತೇ ಇಲ್ಲ
ಎಂಥಾ ನಿದ್ದೆಯೊ ದೇವರೆ ಬಲ್ಲ!
6
“ಕುಂಭಕರ್ಣನೋ ಹೊಟ್ಟೇಬಾಕ
ನಡೆಯಲಿ ಮೊದಲು ಅಡುಗೇಪಾಕ!”
ಎಂದು ಭೋಜನವ ತಂದೇ ತಂದರು
ನೂರು ಜಿಂಕೆ, ಕುರಿ ಕೋಳಿಯ ಕೊಂದರು
(ಕೊಂಚ ಕೊಂಚವೂ ತಾವೇ ತಿಂದರು
ಹುಡುಹುಡುಗಾಟದ ಹುಡುಗ ರಾಕ್ಷಸರು!)
ಹೆಡಿಗೆಗಟ್ಟಲೇ ಲಾಡಿನ ಕಾಳು
ತಪ್ಪಲೆತಪ್ಪಲೆ ಬಿಸಿ ಬಿಸಿ ಕೂಳು
ಹಂಡೆಹಂಡೆಗಳ ಖಾರದ ಸಾರು
ಕಡಾಯಿ ತುಂಬಾ ಘಮಘಮ ಖೀರು
ರಾಶೀರಾಶಿಯ ರಾಗೀ ಮುದ್ದೆ
ಎದ್ದನೆಂಬೆಯೋ ಅಯ್ಯೋ ಪೆದ್ದೆ
ಕುಂಭಕರ್ಣನಿಗೆ ಗೊತ್ತೇ ಇಲ್ಲ
ಎಂಥಾ ನಿದ್ದೆಯೊ ದೇವರೆ ಬಲ್ಲ!
7
ಬೆಟ್ಟದ ದೇಹಕೆ ಗಂಧವ ಬಳಿದು
ಕಣ್ಣುಗಳನು ತಣ್ಣೀರಲಿ ತೊಳೆದು
ಸುತ್ತಲು ಧೂಪದ ಹೊಗೆಯನು ಹಾಕಿ
ಮಂಚದ ಕೆಳಗೇ ಬೆಂಕಿಯ ನೂಕಿ
‘’ಪರಾಕು ಪರಾಕು’’ ಎನ್ನುತ ಕಿರುಚಿ
ಮೀಸೆಯನೆಳೆದು ಕಿವಿಯನು ತಿರುಚಿ
ಭೋಂಭೋಂ ಭೋಂಭೋ ಶಂಖವನೂದಿ
ಧಮ್ಧಮ್ ಧಮ್ಧಮ್ ಜಾಗಟೆ ಬಡಿದು
ಕಹಳೆಯ ಕೂಗಿಸಿ, ನಗಾರಿ ಹೊಡೆದು
ಹೊಟ್ಟೆಯ ಮೇಲೆ ತಕತಕ ಕುಣಿದು
ಮೂಗಿನ ಹೊಳ್ಳೆಗೆ ಬಿರಡೇ ಜಡಿದು
-ಏನು ಮಾಡಿದರು ಎಚ್ಚರವಿಲ್ಲ,
ಅದೆಂಥ ನಿದ್ದೆಯೊ ದೇವರೆ ಬಲ್ಲ!
8
ಬಂದೇ ಬಂದ ಮಂತ್ರಿ ಪ್ರಹಸ್ತ
ರಾಜ ರಾವಣನ ನಿಜ ಬಲಹಸ್ತ
ಕುಂಭಕರ್ಣನನು ಎಬ್ಬಿಸಲೆಂದು
ನಡೆಯುತ್ತಿದ್ದ ಫಜೀತಿಯ ಕಂಡು
ಹೇಳಿದನಾತ- “ಹೀಗೋ ವಿಷಯ
ನನಗೆ ಗೊತ್ತು ಬಿಡಿ ಇದರ ರಹಸ್ಯ”
ಬರಲಿ ನೂರು ತೊಲ ಉಂಡೇ ನಶ್ಯ
ಮರದ ಸೌಟಿನಲಿ ಮೊಗೆದೂ ಮೊಗೆದೂ
ಎರಡೂ ಮೂಗಿಗೆ ಗಿಡಿದೂ ಗಿಡಿದೂ
ಬೆವರುತ ಬೆದರುತ ಠೊಣೆ ರಕ್ಕಸರು
ಉಂಡೇ ನಶ್ಯವ ತುಂಬಿದರು
ಗೊರಕೆಯು ನಿಂತಿತು ಒಂದು ಕ್ಷಣ
ಗೆದ್ದೆನೆಂದಿತು ದನುಜಗಣ
“ಛಟ್ ಛಟ ಛಟಾರ್” ಅಯ್ಯೊ ಏನು?
ಬಿರಿಯಿತೆ ಕೆಳಗಿನ ನೆಲ ಮೇಲ್ ಬಾನು?
(ಸಿಡಿಲಿಗು ಮೀರಿದ ಭಯಂಕರ ಸೀನು)
ಅರಮನೆ ಕಂಭಗಳುರುಳಿದವು
ಆನೆ ಕುದುರೆಗಳು ಕೆರಳಿದವು
“ಅಯ್ಯೋ ಅಮ್ಮ, ನಾ ಸತ್ತೆ!
ಕಿರುಚುತ ಎಲ್ಲರು ನಾಪತ್ತೆ!
ಏನಾದರು ಸರಿ ಫಲವಿಲ್ಲ,
ಕುಂಭಕರ್ಣ ಮೇಲೇಳಲೆ ಇಲ್ಲ!
9
ಹೇಳಿದನೊಬ್ಬ ಪುಟಾಣಿ ರಾಕ್ಷಸ
ಕೊಡುವಿರಾದರೆ ನನಗೊಂದವಕಾಶ
ನನ್ನದೂ ಒಂದಿದೆ ಕೊನೇ ಉಪಾಯ
ಬರಲಿ ಇಲ್ಲಿಗೆ ಆನೆಯ ಲಾಯ
ಸಾವಿರ ಆನೆಯ ತರಿಸಿದರು
ಹುಳೀ ಹೆಂಡವ ಕುಡಿಸಿದರು
ಕುಂಭಕರ್ಣನ ಮೈಬೆಟ್ಟವ ಹತ್ತಿಸಿ
ಬೇಕಾಬಿಟ್ಟಿ ತುಳಿಸಿದರು!
10
ಗೊರಕೆಯ ನಿಲ್ಲಿಸಿ ಪರಪರ ಕೆರೆದು
ಕಣ್ಣುತುಟಿಗಳನು ಅರಬರೆ ತೆರೆದು
“ಯಾಕೆ ಈ ದಿನ ಇಷ್ಟೊಂದ್ ಜಿರಲೆ
ನಿದ್ದೆ ಮಾಡಲೂ ಇವುಗಳ ತರಲೆ!”
ಎಂದು ಮುಷ್ಟಿಯಲಿ ಅವುಗಳ ಹಿಡಿದು
ದಿಕ್ಕುದಿಕ್ಕಿಗೂ ಎಸೆದೇ ಬಿಟ್ಟ!
ಅಂತೂ ಕೊನೆಗೂ ಕಣ್ಣನು ಬಿಟ್ಟ!
ಕೂಳು ತಿಂಡಿಗಳ ಗಬಗಬ ತಿಂದು
ಸಾರುಖೀರುಗಳ ಗಟಗಟ ಕುಡಿದು
ಹೊಟ್ಟೆಯ ನೀವಿ, ಡರ್ರನೆ ತೇಗಿ
ಹೊರಟೇಬಿಟ್ಟ ಗದೆಯನು ತೂಗಿ
ಕುಂಭಕರ್ಣ ಆ ನಿದ್ರಾಯೋಗಿ!

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂದರ್ಭಿಕ ಚಿತ್ರ‌ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ೨೪ ಗಂಟೆಗಳಲ್ಲಿ ನಿರಂತರ ಮಳೆಯಾಗಿದೆ. ಇದರ ಪರಿಣಾಮ ಶಿರಸಿ-ಅಂಕೋಲಾ ಮಾರ್ಗದ ಮಧ್ಯೆ ಗುಡ್ಡ...

Recommended For You

About the Author: Kanneshwar Naik

Leave a Reply

Your email address will not be published. Required fields are marked *