
ನಾವು ಸ್ಪೃಶ್ಯರು
ನೀವು ಅಸ್ಪೃಶ್ಯರು ಎಂದು
ಮನುಷ್ಯ ಮನುಷ್ಯರಲ್ಲೆ
ಏನೆಲ್ಲ ವಿಭಜನೆ ಮಾಡಿದ್ದರು
ಕಣ್ಣಿಗೆ ಕಾಣದ ವೈರಸ್ಸೊಂದು
ಎಲ್ಲರನ್ನು ಸಹ ಸರಿ ಸಮಾನವಾಗಿ
ಅಸ್ಪೃಶ್ಯರನ್ನಾಗಿಯೆ ಮಾಡಿತು .
ಕಾಲ ಕೆಲವೊಮ್ಮೆ
ತಾನೇ ನ್ಯಾಯ ತೀರಿಸುತ್ತದೆ.
ನಾವು ಮೇಲು, ನೀವು ಕೀಳು
ನಾವು ಶ್ರೀಮಂತರು ,ನೀವು ಬಡವರು
ನಾವು ಪ್ರಸಿದ್ಧರು, ನೀವು ಪಾಮರರು
ಇನ್ನು ಏನೇನೋ ….
ನೂರೆಂಟು ವಿಂಗಡಣೆಗಳು ಬೇರೆ
ಕಣ್ಣಿಗೆ ಕಾಣದ ವೈರಸ್ಸೊಂದು
ಯಾವ ಭೇದ ಭಾವವನ್ನು ಮಾಡದೆ
ಎಲ್ಲರನ್ನು ಸರಿಸಮಾನವಾಗಿ ಕಾಡಿತು .
ಕಾಲ ಕೆಲವೊಮ್ಮೆ
ಕೆಡುಕಿನಿಂದಲು ಪಾಠ ಕಲಿಸುತ್ತದೆ.
ನಮ್ಮ ಧರ್ಮವೇ ಶ್ರೇಷ್ಟ
ನಿಮ್ಮ ಧರ್ಮ ಕನಿಷ್ಟ ಎಂದು
ಪ್ರತಿನಿತ್ಯವೂ ಬಡಿದಾಡುತಿದ್ದರು
ದ್ವೇಷ ಹೊತ್ತು ನಡೆದಾಡುತ್ತಿದ್ದರು
ಕಣ್ಣಿಗೆ ಕಾಣದ ವೈರಸ್ಸೊಂದು
ಬಟ್ಟೆಯೊಳಗಿನ ಬೆತ್ತಲೆಯ
ಬಟಾಬಯಲು ಮಾಡಿ
ಎಲ್ಲ ಬೊಗಳೆಗಳ ಬಾಯಿ ಮುಚ್ಚಿಸಿತು.
ಕಾಲ ಕೆಲವೊಮ್ಮೆ
ಆತ್ಮಾವಲೋಕನಕ್ಕೂ ಅವಕಾಶ ನೀಡುತ್ತದೆ.
ಬಾಡಿಗೆ ಭಾಷಣಕಾರರು
ಗುತ್ತಿಗೆ ಧರ್ಮರಕ್ಷಕರು
ಪಾದ್ರಿಗಳು ಮೌಲ್ವಿಗಳು
ಜ್ಯೋತಿಷಿಗಳು ಪೂಜಾರಿಗಳು
ಇದೆಲ್ಲ ಮುಗಿದ ಮೇಲೆ
ಮತ್ತೆ ಶುರು ಹಚ್ಚಿಕೊಳ್ಳುತ್ತಾರೆ
ತಮ್ಮ ಬುರುಡೆ ಬಡಾಯಿಗಳನ್ನ .
ದುರದೃಷ್ಟ ಏನೆಂದರೆ
ಜನರು ಮತ್ತೆ ನಂಬುತ್ತಾರೆ
ಕಾಲದೊಡನೆ ಸತ್ಯವು ತಿರುಚಲ್ಪಡುತ್ತದೆ .
-ಮನು ಪುರ.
