ಕರೋನಾ ಜನಾಭಿಪ್ರಾಯ ಭಾಗ-02- 20 ಲಕ್ಷ ಕೋಟಿ ಪ್ಯಾಕೇಜ್ ಏನಂತಾರೆ ಜನ


ಇಲ್ಲಿವೆ ಜನರ ಅಭಿಪ್ರಾಯ

ಕರೋನಾ ದಿಂದ ಜರ್ಜರಿತವಾಗಿರುವ ದೇಶ ಮತ್ತು ದೇಶದ ಆರ್ಥಿಕತೆ ಉತ್ತೇಜಿಸಲು 20 ಲಕ್ಷ ಕೋಟಿ ಪ್ಯಾಕೇಜ್ ನೀಡಿರುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ. ಈ ಬಗ್ಗೆ ನಾಲ್ಕು ಹಂತಗಳಲ್ಲಿ ಹಣಕಾಸು ಸಚಿವರು ವಿಭಾಗ ಮಾಡಿದ ಪ್ಯಾಕೇಜ್ ವಿವರಗಳನ್ನು ನೀಡಿದ್ದಾರೆ.

ಮಾಧ್ಯಮಗಳ ಪ್ರಚಾರ, ಸಚಿವರು, ಶಾಸಕರ ವಿವರಣೆಗಳ ಮಧ್ಯೆ ಕೂಡಾ ಬಹುತೇಕ ಜನಸಾಮಾನ್ಯರಿಗೆ ಈ ಪ್ಯಾಕೇಜ್ ಸರಿಯಾಗಿ ಅರ್ಥವಾಗಿಲ್ಲ ಎನ್ನುವ ವಾಸ್ತವ ಅಭಿಪ್ರಾಯ ಸಂಗ್ರಹದ ಸಮಯದಲ್ಲಿ ನಮ್ಮ ಗಮನಕ್ಕೂ ಬಂತು. ಹೆಚ್ಚಿನವರು ಈ ಪ್ಯಾಕೇಜ್ ಗುಟ್ಟುಗಳ ಬಂಡಲ್ ಎಂದು ಲೇವಡಿಮಾಡಿದರೆ ಕೆಲವರು ಇದು ಸ್ಫಷ್ಟತೆ-ಪಾರದರ್ಶಕತೆ ಇಲ್ಲದ ಮೋದಿಯವರ ಸುಳ್ಳಿನ ಮುಂದುವರಿದ ಕಂತೆ ಎಂದರು.

ಕೆಲವರು ಪಕ್ಷದ ಕಾರಣಕ್ಕೆ ನಾವು ಈ ಪ್ಯಾಕೇಜ್ ಸಮರ್ಥಿಸಿಕೊಳ್ಳಬೇಕು ಬಿಟ್ಟರೆ ಈ ಕ್ಷಣದಲ್ಲಿ ಅನುಕೂಲ, ಲಾಭ ಹಾಗಿರಲಿ ನಮಗೂ ಅರ್ಥಮಾಡಿಕೊಳ್ಳದ ಒಗಟು ಈ ಪ್ಯಾಕೇಜ್ ಎಂದು ತಮ್ಮ ಅಸಮಾಧಾನ ಹೇಳಿಕೊಂಡರು. ಕೆಲವರು ಮಾತ್ರ ಇದು ದೀರ್ಘಕಾಲಿಕ ಲಾಭದ ದೂರದ ಆಲೋಚನೆಯ ಬೃಹತ್ ಪ್ಯಾಕೇಜ್ ಎಂದು ಸಮರ್ಥಿಸಿದರು. ಈ ಪ್ಯಾಕೇಜ್, ಕೇಂದ್ರಸರ್ಕಾರದ ಕೋವಿಡ್ ನಿರ್ವಹಣಾ ವಿಧಾನ ಎಲ್ಲವೂ ಟೀಕೆಗೆ ಒಳಗಾಗಿರುವ ಈ ಸಂದರ್ಭದಲ್ಲಿ ನಮಗೆ ಸಿಕ್ಕ ಪ್ರತಿಕ್ರೀಯೆಗಳಲ್ಲಿ ಕೆಲವನ್ನು ಸಂಕ್ಷಿಪ್ತವಾಗಿ ಇಲ್ಲಿ ಪ್ರಕಟಿಸಲಾಗಿದೆ.

20 ಲಕ್ಷ ಕೋಟಿ ಜನಸಾಮಾನ್ಯ ಊಹಿಸಲಾಗದ ಬೃಹತ್ ಪ್ಯಾಕೇಜ್ ಇದು, ಇದರಲ್ಲಿ 136 ಕೋಟಿ ಭಾರತದ ಜನಸಂಖ್ಯೆಗೆ ತಲಾ 1 ಕೋಟಿ ಕೊಟ್ಟದ್ದರೆ ಜನಸಾಮಾನ್ಯ ಕೂಡಾ ಕುಬೇರನಾಗುತಿದ್ದ.. – ವೀರಭದ್ರಗೌಡ ವಡಗೇರಿ

ಉಜ್ವಲ ಯೋಜನೆಯ ಗ್ಯಾಸ್ ಫಲಾನುಭವಿಗಳಿಗೆ ಮಾತ್ರ ಉಚಿತ ಅನಿಲ ಸೌಲಭ್ಯ, ಜನ್ ಧನ್ ಖಾತೆಗೆ ಮಾತ್ರ ಹಣ ಇವೆಲ್ಲಾ ಅಸಮರ್ಪಕ. ಉಜ್ವಲ ಗ್ಯಾಸ್ ಫಲಾನುಭವಿಗಳು, ಜನಧನ್ ಖಾತೆದಾರರು ಮಾತ್ರ ಬಡವರೆ. ಜಾಬ್ ಕಾರ್ಡ್‍ಗಾಗಿ ಜನಧನ್ ಗಿಂತ ಮೊದಲು ಬ್ಯಾಂಕ್ ಪಾಸ್ ಬುಕ್, ಖಾತೆ ಹೊಂದಿದವರಿಗೆ ಹಣ ನೀಡದಿದ್ದರೆ ಕೇಂದ್ರದ ಯೋಜನೆಗಳು ಸರ್ಕಾರದ ಯೋಜನೆಗಳಲ್ಲ, ಪಕ್ಷದ ಯೋಜನೆಗಳು ಎಂದಾಗುತ್ತವೆ. ಕರೋನಾ ಸಂಕಷ್ಟದ ಸಮಯದಲ್ಲಿ ಕೇಂದ್ರದ ಫಲಾನುಭವಿಗಳಿಗೊಂದು, ರಾಜ್ಯದ ಯೋಜನೆಗಳ ಫಲಾನುಭವಿ ಬಡವರಿಗೊಂದು ತಾರತಮ್ಯ ಮಾಡುವ ಸರ್ಕಾರದ ನೀತಿ ಬಡವರ ವಿರೋಧಿ ಧೋರಣೆ ಎನಿಸಿಕೊಳ್ಳುತ್ತದೆ. -ವೀರಭದ್ರ ನಾಯ್ಕ ಮಳಲವಳ್ಳಿ, ರಾಜ್ಯ ರೈತ ಸಂಘದ ತಾಲೂಕಾಧ್ಯಕ್ಷ.

20 ಲಕ್ಷ ಕೋಟಿ ಕಣ್ಣೊರೆಸುವ ತಂತ್ರ. ಕೇಂದ್ರ ಸರ್ಕಾರ ಘೋಷಣೆಯ ಸರ್ಕಾರವಾಗಿದೆಯೇ ಹೊರತು, ಅನುಷ್ಠಾನದ ಸರ್ಕಾರವಾಗಿಲ್ಲ. ಬಡ ಚಾಲಕರು, ಸಣ್ಣ-ಪುಟ್ಟ ವೃತ್ತಿ ನಿರತರಿಗೆ ಅಧೀಕೃತ ಸರ್ಕಾರಿ ನೋಂದಣಿಯಿಲ್ಲದಿದ್ದರೂ ಮಾಸಿಕ ಪರಿಹಾರ ನೀಡಬೇಕು. 20 ಕೋಟಿ ಪ್ಯಾಕೇಜ್ ಕರೋನಾ ಕಾಲದ ಸುಳ್ಳು. ಈ ಪ್ಯಾಕೇಜ್ ಗಿಂತ ಹಿಂದಿನ ಘೋಷಣೆಗಳ ಅನುಷ್ಠಾನ, ಸಾಲ ಮನ್ನಾದಂಥ ವಿದಾಯಕ ಯೋಜನೆಗಳನ್ನು ಕೊಡಬೇಕಿತ್ತು. – ಭೀಮಣ್ಣ ನಾಯ್ಕ, ಡಿ.ಸಿ.ಸಿ. ಅಧ್ಯಕ್ಷ

ಇದು ದೀರ್ಘ ಕಾಲಿಕ ಪರಿಣಾಮದ ಪ್ಯಾಕೇಜ್, ಇಂಥ ಬೃಹತ್ ಪ್ಯಾಕೇಜ್ ನಿಂದ ಈ ಕ್ಷಣದ ಲಾಭ ನಿರೀಕ್ಷಿಸಬಾರದು. -ನಾಗರಾಜ್ ನಾಯ್ಕ, ಜಿ.ಪಂ. ಸದಸ್ಯ.

20 ಲಕ್ಷ ಕೋಟಿ ಪ್ಯಾಕೇಜ್ ನಿಂದ ಧೀರ್ಘ ಕಾಲಿಕ ಲಾಭ ಆಗಬಹುದು, ದಾಖಲೆ, ಗ್ಯಾರಂಟಿ ಇಲ್ಲದೆ ಹೆಚ್ಚುವರಿ ಕಡಿಮೆ ಬಡ್ಡಿದರದ ಸಾಲ, ತೆರಿಗೆ ವಿನಾಯಿತಿ, ಜಿ.ಎಸ್.ಟಿ., ತೆರಿಗೆ ಭರಣಕ್ಕೆ ಸಮಯಾವಕಾಶ ಇವುಗಳಿಂದ ಚಿಕ್ಕ ಉದ್ದಿಮೆಗಳಿಗೆ ಅನುಕೂಲವಾಗಿದೆ. -ವಿಜಯ ಪ್ರಭು, ಉದ್ಯಮಿ

20 ಲಕ್ಷ ಕೋಟಿ ಪ್ಯಾಕೇಜ್ ಸರ್ಕಾರದ ವ್ಯವಹಾರ ಚತುರತೆಗೆ ಸಾಕ್ಷಿ. ಇದು ಅಂಕಿ-ಅಂಶಗಳ ಮ್ಯಾಜಿಕ್ ಕಣ್ಣೊರೆಸುವ ತಂತ್ರ. ಇದರಿಂದ ಲಾಭ ಆಗುವ ನಿರೀಕ್ಷೆ ಇಲ್ಲ. ಜನರ ಅನಿವಾರ್ಯತೆಯ ಸಮಯದಲ್ಲಿ ಸಾಲ ಕೊಡುವ ಸ್ಕೀಮ್ ಮಾದರಿಯ ಪ್ಯಾಕೇಜ್ ನಿಂದ ಜನರು ಬಡತನ ರೇಖೆ ದಾಟಿ ಶ್ರೀಮಂತರಾಗುವ ಕೇಂದ್ರದ ಘೋಷಣೆ ಯಶಸ್ವಿಯಾದರೆ ಜನತೆ ಮೋದಿಯವರನ್ನು ದೇವರಂತೆ ಕಾಣುತ್ತಾರೆ. ಸ್ಫಷ್ಟತೆ ಇಲ್ಲದ, ಪಾರದರ್ಶಕವಲ್ಲದ ಈ ಪ್ಯಾಕೇಜ್ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುವ ಬಿ.ಜೆ.ಪಿ. ಯೋಜನೆ.

-ಕೆ.ಜಿ. ನಾಗರಾಜ್, ಅಧ್ಯಕ್ಷರು ಎ.ಪಿ.ಎಂ.ಸಿ.

20 ಲಕ್ಷ ಕೋಟಿ ಪ್ಯಾಕೇಜ್ ಎನ್ನುವುದು ಬರೀ ಘೋಷಣೆಗೆ ಸೀಮಿತ, ರೈತರಿಗೆ, ಬಡವರಿಗೆ ಜನಸಾಮಾನ್ಯರಿಗೆ ಯಾವ ದೃಷ್ಟಿಯಿಂದಲೂ ಉಪಯೋಗವಿಲ್ಲದ ಈ ಪ್ಯಾಕೇಜ್ ಕನ್ನಡಯೊಳಗಿನ ಗಂಟು. ಜನಸಾಮಾನ್ಯರು ಇಂಥ ಪುಕ್ಕಟ್ಟೆ ಪ್ರಚಾರವನ್ನು ನಂಬುವುದೂ ಇಲ್ಲ. -ಈಶ್ವರ ನಾಯ್ಕ, ಮನ್ಮನೆ, (ಜಿ.ಪಂ. ಮಾಜಿ ಸದಸ್ಯ)

ಜನಸಾಮಾನ್ಯರ ಬಳಕೆಯ ಅಡುಗೆ ಅನಿಲ, ಪೆಟ್ರೋಲ್, ಡಿಸೆಲ್ ಗಳ ದರ ಏರಿಕೆಯಾಗಿದೆ.ಕರೋನಾ ಪೂರ್ವ, ಕರೋನಾ ಸಂಕಷ್ಟದ ಸಮಯದಲ್ಲಿ ಜನಸಾಮಾನ್ಯರಿಗೆ ನೆರವಾಗುವುದನ್ನು ಬಿಟ್ಟು ಕನ್ನಡಿಯಲ್ಲಿ ಹಣ್ಣು-ವಸ್ತು ಇಟ್ಟು ತಿನ್ನಿ ಎನ್ನುವಂಥ ಸುಳ್ಳಿನ ಪ್ಯಾಕೇಜ್ ಇದು. 136 ಕೋಟಿ ಜನರಿಗೆ 20ಲಕ್ಷ ಕೋಟಿ ಪ್ಯಾಕೇಜ್ ಎನ್ನುವ ಸುಳ್ಳನ್ನು ನಂಬುವ ವಿರೋಧ ಪಕ್ಷಗಳು,ಈ ಸುಳ್ಳನ್ನು ಪ್ರಚಾರ ಮಾಡುವ ಮಾಧ್ಯಮಗಳು ಜನವಿರೋಧಿಗಳು 20 ಲಕ್ಷ ಕೋಟಿ ಪ್ಯಾಕೇಜ್ ಆಡಳಿತ ಪಕ್ಷದ ಮುಖಂಡರು, ಜನಪ್ರತಿನಿಧಿಗಳು,ಅವರ ಆಪ್ತ ಉದ್ಯಮಿಗಳ ರಕ್ಷಣೆಗೆ ಮಾಡಿರುವ ಪರ್ಯಾಯ ಬಜೆಟ್ ಎನಿಸುತ್ತಿದೆ. – ವಸಂತ ನಾಯ್ಕ, (ತಾ.ಪಂ. ಮಾಜಿ ಸದಸ್ಯ)

ಬಾಣಲೆಯಿಂದ ಬೆಂಕಿಗೆ : ಕೊರೊನಾ ರಣವೈದ್ಯ ಬೆಳಕಿಗೆ -ನಾಗೇಶ್ ಹೆಗಡೆ

ಕೊರೊನಾಮಾರಿ ಬರುವ ಮೊದಲು ಭಾರತದ ನದಿಗಳೆಲ್ಲ ಕೊಳಕು ಕೂಪಗಳಾಗಿದ್ದವು. ವಾಯುಮಾಲಿನ್ಯ ದಟ್ಟವಾಗಿತ್ತು. ಟ್ರಾಫಿಕ್ ಗದ್ದಲ ಅತಿಯಾಗಿತ್ತು. ಕಾರ್ಖಾನೆಗಳು, ಗಣಿಗಳು ಲಂಗುಲಗಾಮಿಲ್ಲದೇ ನಿಸರ್ಗ ಸಂಪತ್ತನ್ನು, ಕಾರ್ಮಿಕರನ್ನು ಶೋಷಣೆ ಮಾಡುತ್ತಿದ್ದವು. ಕೊರೊನಾ ಬಂದಮೇಲೆ ಎಲ್ಲಕಡೆ ಶಾಂತಿ ನೆಲೆಸಿತ್ತು. ಲಾಕ್ಡೌನ್ ಎಂಬ ಹಠಾತ್ ಎಡವಟ್ಟಿನಿಂದಾಗಿ ಅದೆಷ್ಟೊ ಲಕ್ಷ ಕಾರ್ಮಿಕರು ನೆಲೆತಪ್ಪಿ ಗುಳೆ ಹೊರಟು, ಘನಘೋರ ಸಂಕಷ್ಟಗಳಿಗೆ ತುತ್ತಾಗಿದ್ದನ್ನು ಬಿಟ್ಟರೆ , ಅಭಿವೃದ್ಧಿಯ ಭರಾಟೆಯಿಂದ ನಲುಗಿದ್ದ ನೆಲ-ನೀರು-ಗಾಳಿ-ವನ್ಯಜೀವ ಎಲ್ಲವೂ ತುಸು ಉಸಿರಾಡತೊಡಗಿದವು.

ಕೊರೊನಾ ನಂತರ ಹೊಸ ಭಾರತ ಉದಯಿಸಲಿದೆ ಎಂದು ನಮ್ಮಲ್ಲಿ ಅನೇಕರು ಸಣ್ಣ ಆಸೆಯನ್ನಿಟ್ಟುಕೊಂಡಿದ್ದರು. ಆದರೆ ಈಗಿನ ಸರಕಾರ ರಣವೈದ್ಯದ ವೈಖರಿ ನೋಡಿದರೆ, ಕಾಯಿಲೆಯ ನೆಪದಲ್ಲಿ ದುರ್ಬಲರನ್ನು (ಅಂದರೆ ಉದ್ಯೋಗ ಕಳಕೊಂಡವರನ್ನು, ನಡೆನಡೆದು ಸುಸ್ತಾದವರನ್ನು, ಹಸಿದವರನ್ನು) ಕಂದಕಕ್ಕೆ ದೂಡಿ ಮಣ್ಣು ಮುಚ್ಚಲು ಹೊರಟಂತೆ ಕಾಣುತ್ತದೆ. ನಮ್ಮಲ್ಲಿ ಹಕ್ಕಿಜ್ವರ ಬಂತೆಂದು ಹ್ಯಾಚರಿಯ ಸಾವಿರಾರು ಕೋಳಿಗಳನ್ನು ಕಂದಕಕ್ಕೆ ಹಾಕಿ ಮಣ್ಣು ಮುಚ್ಚಿದ ಹಾಗೆ.

[ಇಲ್ಲೊಂದು ಕ್ರೂರ ವ್ಯಂಗವಿದೆ: ಪ್ರಧಾನಿ ಮೋದಿಯವರು ಘೋಷಿಸಿದ 20 ಲಕ್ಷ ಕೋಟಿಯಲ್ಲಿ ಯಾವಯಾವ ಬಾಬ್ತಿಗೆ ಎಷ್ಟೆಷ್ಟು ಎಂಬುದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಲ್ಕು ಟ್ರಾಂಚ್‌ (tranche)ಗಳಲ್ಲಿ ಹಂಚಿದ್ದಾರೆ. ನಾಲ್ಕನೆಯ ಕಂತಿನಲ್ಲಂತೂ ಗಣಿಗಾರಿಕೆ ವಿಸ್ತರಣೆಗೆ, ರಕ್ಷಣಾ ಉತ್ಪಾದನೆ, ವಿಮಾನಯಾನ, ಬಾಹ್ಯಾಕಾಶ ಸಾಹಸಕ್ಕೆ ಇತ್ಯಾದಿಯಂತೆ. ಟ್ರಾಂಚ್ ಎಂದರೆ ಹೋಳು ಅಥವಾ ಭಾಗ. ಆದರೆ ನೀವು ಗೂಗಲ್ ಕನ್ನಡ ನಿಘಂಟಿನಲ್ಲಿ ಅದರ ಅರ್ಥವನ್ನು ಹುಡುಕಿದರೆ ಟ್ರಾಂಚ್ ಎಂದರೆ ‘ಕಂದಕ’ trench ಎಂಬ ತಪ್ಪು ಅರ್ಥವಿದೆ, ಬೇಕಿದ್ದರೆ ನೋಡಿ. ನಿಜಕ್ಕೂ 40 ಕೋಟಿ ಜನರನ್ನು ಕಂದಕಕ್ಕೆ ಬೀಳಿಸಿ ತಪ್ಪನ್ನೇ ಸರಿಯೆಂದು, trancheನ್ನೇ trench ಎಂದು ತೋರಿಸುವ ಹುನ್ನಾರವೆ?]
.
ಹಳ್ಳಿಯ ಜನರು ಹಳ್ಳಿಗೇ ಮರಳಿ ವಲಸೆ ಬಂದಾಗ ಎಷ್ಟೊಂದು ವಿಧಗಳಲ್ಲಿ ಅವರಿಗೆ ನೆರವಾಗಲು ಸಾಧ್ಯವಿತ್ತು. ಅದರ ಕೆಲವು ಯಶಸ್ವೀ ಉದಾಹರಣೆಗಳು ನಮ್ಮಲ್ಲಿವೆ: ಮಹಾರಾಷ್ಟ್ರದಲ್ಲಿ ಹೀವ್ಡೆ ಬಝಾರ್ ಎಂಬ ಗ್ರಾಮವಿದೆ. ನಮ್ಮ ಕೋಲಾರದ ಯಾವುದೇ ಊರಿನ ಹಾಗೆ ಬರೀ 430 ಮಿ.ಮೀ. ಮಳೆ ಬೀಳುವ ಹಳ್ಳಿ. 1980ರ ದಶಕದಲ್ಲಿ ಬಹಳಷ್ಟು ಜನ ದಿಕ್ಕೆಟ್ಟು ಉದ್ಯೋಗ ಹುಡುಕಿ ಮುಂಬೈಗೋ ಪುಣೆಗೋ ಹೋದರು. ಆ ಊರಿನ ಪುಣ್ಯಾತ್ಮನೊಬ್ಬ ಸರಪಂಚನೆಂದು ಆಯ್ಕೆಯಾದ. ಮಳೆಕೊಯ್ಲು ಮಾಡಿಸಿದ. ಗಿಡಮರ ನೆಡಿಸಿದ. ಅಂತರ್ಜಲ ಹೆಚ್ಚಿತು. ಊರು ನಳನಳಿಸಿತು. ಕೃಷಿ, ಕುರಿಸಾಕಣೆ, ಡೇರಿ ಎಲ್ಲಕ್ಕೂ ಚೈತನ್ಯ ಬಂತು. ಗುಳೆ ಹೋದವರು ಮರಳಿ ಬಂದರು. ಇಂದು ಆ ಊರಲ್ಲಿ (ನಂಬಿ ಇದನ್ನು) ಬಡತನದ ರೇಖೆಗಿಂತ ಕೆಳಗಿದ್ದ 135 ಕುಟುಂಬಗಳು ಮೇಲೆದ್ದು ಬಂದಿವೆ, 60 ಜನರು ದಶಲಕ್ಷಾಧೀಶರಾಗಿದ್ದಾರೆ. ಸರಕಾರಿ ಇಲಾಖೆಗಳ ಅಧಿಕಾರಿಗಳಿಗೆ ಈ ಊರೇ ಈಗ ಪ್ರವಾಸೀ ತಾಣವಾಗಿದೆ. ಬೇಕಿದ್ದರೆ Hewre Bazar ಎಂದು ಅಂತರಜಾಲದಲ್ಲಿ ಹುಡುಕಿ ನೋಡಿ.
ನಗರಮುಖೀ ವಲಸೆಯನ್ನು ಹೀಗೆ ಹಿಮ್ಮೊಗ ತಿರುಗಿಸಲು ಸಾಧ್ಯವೆಂದು ಮೊದಲು ತೋರಿಸಿದವರು ಅಣ್ಣಾ ಹಜಾರೆ ಮತ್ತು ರಾಜೇಂದ್ರ ಸಿಂಗ್.
ತಮ್ಮ ಊರಿನ ನೀರು, ನೆಲ, ಗಾಳಿ, ಬೆಳಕನ್ನೇ ಸಂಪತ್ತನ್ನಾಗಿ ಬಳಸಿಕೊಂಡು ಗ್ರಾಮದ ಸಮೃದ್ಧಿಗೆ ಕಾರಣರಾದ ಬೇರೆ ನೂರಾರು ಜನರ ಉದಾಹರಣೆಗಳು ನಮ್ಮಲ್ಲಿವೆ. ಕೊಯಮತ್ತೂರಿನ ಸಮೀಪದ ಒಡಂತ್ತುರೈ ಗ್ರಾಮ ತನ್ನ ಬಿಸಿಲಿನಿಂದ ಬರುವ ವಿದ್ಯುತ್ತನ್ನೇ ಮಾರಾಟ ಮಾಡುತ್ತ ಗ್ರಾಮಪಂಚಾಯತನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದೆ.
ಕಳೆದ ನಾಲ್ಕು ವರ್ಷಗಳಿಂದ ಆಮಿರ್ ಖಾನ್ ಆರಂಭಿಸಿದ ವಾಟರ್ ಕಪ್ ಮಳೆಕೊಯ್ಲಿನ ಸ್ಪರ್ಧೆಯಿಂದಾಗಿ ಮಹಾರಾಷ್ಟ್ರದಲ್ಲಿ ಅನೇಕ ಹಳ್ಳಿಗಳಲ್ಲಿ ಜಲ ಸಂವರ್ಧನೆ ಆಗಿದ್ದು, ಊರು ಬಿಟ್ಟು ಹೋದವರು ಮರಳಿ ಬರುತ್ತಿದ್ದಾರೆ. ಟ್ಯಾಂಕರ್ ನೀರನ್ನೇ ಆಧರಿಸಿದ್ದ ಬರಪೀಡಿತ ಹಳ್ಳಿಗಳು ಈಗ ತಮ್ಮ ಬಳಿಯ ಹೆಚ್ಚುವರಿ ನೀರನ್ನು ನಗರಕ್ಕೂ ಪೂರೈಸಲು ಮುಂದಾಗಿವೆ. ಇಂಧನ ವನಗಳನ್ನು ಸೃಷ್ಟಿಸಿ ನಗರಗಳಿಗೆ ಬಯೊಡೀಸೆಲ್ಲನ್ನೂ ಒದಗಿಸುವ ಕನಸು ಕಾಣುತ್ತಿದ್ದಾರೆ.
ಇಂಥ ಸ್ವಾವಲಂಬಿ ಗ್ರಾಮಗಳ ಒಂದು ಉದಾಹರಣೆಯೂ ಸರಕಾರದ ಗಮನಕ್ಕೆ ಬರಲೇ ಇಲ್ಲವೆ? ಗ್ರಾಮೀಣ ಜಲಸಂಪತ್ತನ್ನು ಹೆಚ್ಚಿಸುವ ಸರಳ ವಿಧಾನ ಅದಕ್ಕೆ ಗೊತ್ತೇ ಇಲ್ಲವೆ?
ಸರಕಾರ ಮನಸ್ಸು ಮಾಡಿದರೆ, ತಾಲ್ಲೂಕು ಮಟ್ಟದಲ್ಲೇ ಉತ್ತಮ ಗುಣಮಟ್ಟದ ಸಾಬೂನು, ಟೂಥ್ಪೇಸ್ಟ್, ಸೊಳ್ಳೆಪರದೆ, ಸೊಳ್ಳೆಬತ್ತಿ, ಶಾಂಪೂ, ಸುಗಂಧ ತೈಲ, ಪೇಯ, ಪ್ಯಾರಾಸಿಟೆಮಾಲ್, ಆಯುರ್ವೇದ ಔಷಧಗಳು, ಅಷ್ಟೇಕೆ ಗ್ರಾಮಗಳಿಗೆ ಬೇಕಾದ ಪ್ಲಾಸ್ಟಿಕ್ ಚಪ್ಪಲಿಗಳಿಂದ ಹಿಡಿದು ಕೃಷಿ ಸಲಕರಣೆ, ರಸಗೊಬ್ಬರಗಳ ಉತ್ಪಾದನೆಗೆ ಪ್ರೋತ್ಸಾಹ ನೀಡಬಹುದಿತ್ತು.
ಇವನ್ನೆಲ್ಲ ಬೃಹತ್, ನಗರಕೇಂದ್ರಿತ ಉದ್ಯಮಗಳ ಮುಷ್ಟಿಯಿಂದ ತಪ್ಪಿಸಿ ತಾಲ್ಲೂಕು ಮಟ್ಟಕ್ಕೆ ತಂದು ಸ್ಥಳೀಯರಿಗೆ ಉದ್ಯೋಗ ಸಿಗುವಂತೆ ಮಾಡಿ, ವಾಣಿಜ್ಯ ರಂಗದ ಅಸಲೀ ಸ್ವಾವಲಂಬನೆ ಸಾಧಿಸಬಹುದಿತ್ತು.
ಅದರ ಬದಲಿಗೆ ಖನಿಜ ಮತ್ತು ಕಲ್ಲಿದ್ದಲ ಗಣಿಗಾರಿಕೆಗೆ ಹೆಬ್ಬಾಗಿಲು ತೆರೆಯಲಿದೆ.

ಕಲ್ಲಿದ್ದಲು ಎಂಬುದೇ ಮಹಾ ವಿಷವೃತ್ತ. ನಮ್ಮ ಎಲ್ಲ ಕಲ್ಲಿದ್ದಲ ನಿಕ್ಷೇಪಗಳೂ ಛತ್ತೀಸಗಢ, ಝಾರ್ಖಂಡ್, ಬಿಹಾರ್‌ನ ದಟ್ಟ ಅರಣ್ಯಗಳಲ್ಲಿವೆ. ಅಲ್ಲಿ ಆದಿವಾಸಿಗಳೂ ಮೂಲನಿವಾಸಿಗಳೂ ಇದ್ದಾರೆ. ಅವರನ್ನೆಲ್ಲ ಗುಡಿಸಿ ಒತ್ತಿ, ಜೀವಲೋಕವನ್ನು ಧ್ವಂಸ ಮಾಡಿ, ತೆರೆದ ಗಣಿಗಳ ಮೂಲಕ ಕಲ್ಲಿದ್ದಲನ್ನು ಸ್ಫೋಟಿಸಿ, (ಚಿತ್ರವನ್ನು ಗಮನಿಸಿ) ನೂರಾರು ಉಷ್ಣವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಿದರೆ ಹೊಮ್ಮುವ ಕಾರ್ಬನ್ ಡೈಆಕ್ಸೈಡ್‌ ಇಡೀ ಜಗತ್ತಿಗೇ ಮಾರಕ. ಹಾರುಬೂದಿ, ಸೆಕೆ ಹೆಚ್ಚಳ, ಜಲಮಾಲಿನ್ಯ ಒಂದಲ್ಲ, ಎರಡಲ್ಲ. ಅಲ್ಲಿಂದ ಪಡೆದ ವಿದ್ಯುತ್ತು ನಗರಗಳ ಮಾಲ್‌ಗಳಿಗೆ.ಮತ್ತು ತರಾವರಿ ಯಂತ್ರಗಳಿಗೆ, ಕೊಳ್ಳುಬಾಕ ಶೋಕಿ ವಸ್ತುಗಳ ಉತ್ಪಾದನೆಗೆ ಹೋಗುತ್ತದೆ. ಅದರ ಲಾಭವೆಲ್ಲ ತಿರ್ಗಾ ಕೋಟ್ಯಧೀಶ ಉದ್ಯಮಿಗಳಿಗೆ.

ನಿಸರ್ಗ ಸಂಪತ್ತನ್ನು ಹೀಗೆ ಲೂಟಿ ಮಾಡಲು ದೊಡ್ಡ ಕಂಪನಿಗಳಿಗೆ ಅನುವು ಮಾಡಿಕೊಡಲೆಂದೇ ತೆರಿಗೆದಾರರ 50 ಸಾವಿರ ಕೋಟಿ ಮೀಸಲಿಡುವುದಾಗಿ ಸರಕಾರ ಘೋಷಿಸಿದೆ. ಅದಕ್ಕೆಂದು ಪರಿಸರ ಸಂರಕ್ಷಣೆಯ ಬಿಗಿ ಕಾನೂನುಗಳನ್ನು ಸಡಿಲ ಮಾಡುವ ಸಿದ್ಧತೆ ಆಗಲೇ ನಡೆದಿದೆ.

ನಿಸರ್ಗದ ದುರಂತ ಕತೆ ಹೀಗೆ. ಹಾಗಿದ್ದರೆ ಮನುಷ್ಯರ ಕತೆ? ಈ ರಣವೈದ್ಯ ಮಾಡಿದರೆ 40 ಕೋಟಿ ಬಡ, ಕಡುಬಡವರ ಹಾಗು ಆದಿವಾಸಿಗಳ ಸ್ಥಿತಿಗತಿ ಉತ್ತಮಗೊಂಡೀತೆ? ಅದೂ ಇಲ್ಲ.
ಮೂಲ ನಿವಾಸಿಗಳಿಗೆ ಅರಣ್ಯಾಧಾರಿತ ಉದ್ಯೋಗ ಕೊಡಲೆಂದು 6000 ಕೋಟಿ ಮೀಸಲಿದೆಯಂತೆ. ಅದರ ಕತೆ ಕೇಳಿ. ಅದು ಖಾಸಗಿಯ ಕಂಪನಿಗಳ ಜಂಟಿ ಯೋಜನೆಯಂತೆ. ಅಂದರೆ ಅರಣ್ಯಗಳಿಗೂ ಕೋಟ್ಯಧೀಶರು ಲಗ್ಗೆ ಇಡಲಿದ್ದಾರೆ. ಮೂಲನಿವಾಸಿಗಳ ಜಮೀನನ್ನು ಮುಗಿಸಿದ ನಂತರ ಮುಂದೇನು ಆದೀತೆಂದು ನಾವು ಊಹಿಸಬಹುದು.
ಆದಿವಾಸಿಗಳ ಕಲ್ಯಾಣವೇ ಮುಖ್ಯ ಗುರಿಯಾಗಿದ್ದಿದ್ದರೆ ಈಗಿರುವ ನರೇಗಾ ಸ್ಕೀಮನ್ನೇ ಸುಧಾರಿಸಿ ಅವರಿಗೂ ವಿಸ್ತರಿಸಬಹುದಿತ್ತು. ಗಿಡ ನೆಡುವ, ಬೇಲಿ ಕಂದಕಗಳಂಥ ಭದ್ರತಾ ಕೆಲಸವನ್ನು ಅವರೇ ಮಾಡಬಹುದಿತ್ತು. ಹಳ್ಳಿಗಳಲ್ಲೂ ನರೇಗಾ ದುಡಿಮೆಯ ಅವಧಿಯನ್ನು ಈಗಿನ 100 ದಿನಗಳ ಬದಲು 200-300 ಅಥವಾ ಅಗತ್ಯವಿದ್ದಷ್ಟು ದಿನಗಳಿಗೆ ವಿಸ್ತರಿಬಹುದಿತ್ತು. ಅದರತ್ತ ಆದ್ಯತೆಯೇ ಇಲ್ಲ.

ಅಷ್ಟೊಂದು ಜನರು ಹಳ್ಳಿಗಳಿಗೆ ಹಿಂದಿರುಗಿದ್ದಾರೆ. ಅವರಿಂದ ಎಷ್ಟೊಂದು ಗ್ರಾಮೀಣ ಅಭಿವೃದ್ಧಿಯ ಕೆಲಸ ಮಾಡಿಸಬಹುದಿತ್ತು. ಹಳ್ಳಿಗಳಿಗೆ ಹಿಂದಿರುಗಿದ ಆ ನತದೃಷ್ಟರಿಗೆ ಯಾವ ನೆರವೂ ಇಲ್ಲ. ನಗರ ನಿರ್ಮಾಣದಲ್ಲಿ ತೊಡಗಿದ್ದ ಅವರಲ್ಲಿ ಅನೇಕರು ಹಿಂದೆಲ್ಲ ಚುನಾವಣೆ ಬಂದಾಗ ತಮ್ಮದೇ ಖರ್ಚಿನಲ್ಲಿ ಊರಿಗೆ ಹೋಗಿ ಮತ ಹಾಕಿ ಈ ಸರಕಾರವನ್ನು ನಿಲ್ಲಿಸಿದವರು. ಪ್ರಧಾನಿಯವರ ಒಂದು ಅವಸರದ ಲಾಕ್‌ಡೌನ್‌ ಘೋಷಣೆಯಿಂದಾಗಿ ಇಡೀ ಜಗತ್ತೇ ಕಂಬನಿ ಮಿಡಿಯುವಂಥ ದುರ್ದೆಸೆಗೆ ಈಡಾದವರು. ಅವರ ಕೈ ಹಿಡಿಯುವ ಬದಲು ಬಹುಕೋಟ್ಯಧೀಶರ ಕೈ ಹಿಡಿಯಲು ಸರಕಾರ ಹೊರಟಿದೆ.
ದೇಶದ 20 ಕೋಟಿ ಮಹಿಳೆಯರ ಜನ್‌ಧನ್ ಖಾತೆಗೆ ತಿಂಗಳಿಗೆ 500 ರೂ. ಜೊತೆಗೆ 80 ಕೋಟಿ ಜನರಿಗೆ 6 ಕಿಲೊ ಧಾನ್ಯವನ್ನು ಮೂರು ತಿಂಗಳ ಅವಧಿಗೆ ಕೊಡುವುದಾಗಿ ಸರಕಾರ ಮಾರ್ಚ್‌ನಲ್ಲಿ ಹೇಳಿತ್ತು. ಅದನ್ನು ಇನ್ನೂ ಮೂರು ತಿಂಗಳಿಗೆ ವಿಸ್ತರಿಸಬಹುದಿತ್ತು. ಈ ತೀರಾ ಜುಜುಬಿ ಸಹಾಯದ ಮೊತ್ತವನ್ನು ಹೆಚ್ಚಿಸಬಹುದಿತ್ತು. ಹೆಚ್ಚಿಸುವುದು ಹಾಗಿರಲಿ, ಸರಕಾರದ್ದೇ ದಾಖಲೆಗಳ ಪ್ರಕಾರ ಈ ನೆರವೂ ಶೇ. 25ರಷ್ಟು ಜನರಿಗೆ ಮಾತ್ರ ತಲುಪಿದೆ. ಕೇವಲ 110 ಲಕ್ಷ ಟನ್ ಧಾನ್ಯ ಮಾತ್ರ ವಿತರಣೆಯಾಗಿದೆ.
ಹಾಗೆಂದು ನಮ್ಮ ದೇಶ ಅಷ್ಟೊಂದು ದರಿದ್ರ ಸ್ಥಿತಿಯಲ್ಲೇನೂ ಇಲ್ಲ. ತಜ್ಞರ ಲೆಕ್ಕಾಚಾರದ ಪ್ರಕಾರ ಕೆಲಸ ಕಳೆದುಕೊಂಡವರಿಗೆ ತಿಂಗಳಿಗೆ 7 ಸಾವಿರ ನಗದು ಮತ್ತು ದೇಶದ ಶೇ. 80ರಷ್ಟು ಜನಕ್ಕೆ ತಿಂಗಳಿಗೆ ಹತ್ತು ಕಿಲೊ ಧಾನ್ಯದಂತೆ ಆರು ತಿಂಗಳವರೆಗೆ ಉಚಿತವಾಗಿ ಕೊಟ್ಟಿದ್ದರೂ ನಮ್ಮ ಜಿಡಿಪಿಯ ಕೇವಲ 3%ರಷ್ಟು ವೆಚ್ಚವಾಗುತ್ತಿತ್ತು. ಅದನ್ನಂತೂ ಮಾಡಲಿಲ್ಲ. ತನ್ನ ಬಹುತೇಕ ವೈಫಲ್ಯಗಳಿಗೆ ರಾಜ್ಯಗಳನ್ನು ದೂರುವುದನ್ನು ಬಿಟ್ಟು ಸರಕಾರ ಏನನ್ನೂ ಮಾಡಲಿಲ್ಲ. ರಾಜ್ಯಗಳಿಗೂ ಸಿಗಬೇಕಾದ ಧನಸಹಾಯವನ್ನು ಪೂರ್ತಿ ನೀಡಲಿಲ್ಲ.
ಈಗ ಟ್ರಾಂಚ್ 3ರ ಕತೆ ಕೇಳಿ.
ಸಣ್ಣ ಮತ್ತು ಮಧ್ಯಮ ಉದ್ಯಮ(MSME)ಗಳು ಚೇತರಿಸಿಕೊಳ್ಳಲೆಂದು 3.7 ಲಕ್ಷ ಕೋಟಿ ಸಾಲ ಕೊಡುವುದಾಗಿ ಸರಕಾರ ಹೇಳಿದೆ. ಅದು ಆಮೇಲಾಗಲಿ, ಈವರೆಗೆ ಸಂದಾಯವಾಗಬೇಕಿದ್ದ 5 ಲಕ್ಷ ಕೋಟಿ ಬಾಕಿ ಹಣವನ್ನು ಮೊದಲು ಕೊಡ್ರಪ್ಪಾ ಎಂದು MSME ಗಳು ಕೇಳುತ್ತಿವೆ. ಅದಂತೂ ಬಾಕಿ ಇದೆ. ಈ ಹೊಸ ಸಾಲವನ್ನು ಪಡೆದು ಉತ್ಪಾದನೆ ಆರಂಭಿಸೋಣವೆಂದರೆ ಕಾರ್ಮಿಕರು ಎಲ್ಲಿದ್ದಾರೆ?
ಅಂದಾಜು 12 ಕೋಟಿ ಕಾರ್ಮಿಕರು ಕೆಲಸ ಕಳೆದುಕೊಂಡು ತಂತಮ್ಮ ಹಳ್ಳಿಗಳಿಗೆ ಹೋಗಿದ್ದಾರೆ. ಅವರು ಮರಳಿ ಬಾರದಂತೆ ಮಾಡಲು ಹೊಸ ಕಾರ್ಮಿಕ ನೀತಿಗಳನ್ನು ಜಾರಿಗೆ ತರಲು ಸರಕಾರ ಹೊರಟಿದೆ. ಕೆಲಸಗಾರರ ಹಕ್ಕುಗಳನ್ನೇ ಮೊಟಕುಗೊಳಿಸಿ ಅವರ ದುಡಿಮೆಯ ಅವಧಿಯನ್ನು 50% ಜಾಸ್ತಿ ಮಾಡುತ್ತಾರಂತೆ.
ಸರಿ, ಕಾರ್ಮಿಕರು ಹೇಗೋ ಬಂದು ಉತ್ಪಾದನೆ ಆರಂಭಿಸಿದರೂ ಫ್ಯಾಕ್ಟರಿಯ ಉತ್ಪನ್ನಗಳನ್ನು ಖರೀದಿಸಲು ಜನರ ಬಳಿ ಹಣ ಎಲ್ಲಿದೆ? ಅದಕ್ಕೆ ಈಗ ಟ್ರಾಂಚ್‌ 4ನ್ನು ಹಣಕಾಸು ಸಚಿವೆ ಘೋಷಣೆ ಮಾಡಿದೆ.
ಹಣದ ಚಲಾವಣೆ ಹೆಚ್ಚಿಸಲೆಂದೇ ಎಗ್ಗಿಲ್ಲದ ಗಣಿಗಾರಿಕೆ, ಹೊಸ ವಿಮಾನ ನಿಲ್ದಾಣ ನಿರ್ಮಾಣ, ರಕ್ಷಣಾ ಸಾಮಗ್ರಿ ಉತ್ಪಾದನೆ, ಬಾಹ್ಯಾಕಾಶ ಎಲ್ಲವನ್ನೂ ಖಾಸಗಿ ಕಂಪನಿಗಳಿಗೆ ವಹಿಸುತ್ತಾರಂತೆ. ಲಾಕ್‌ಡೌನ್‌ ಸಡಿಲವಾಗುವ ಮೊದಲೇ ದೇಶದ ಹಿತಾಸಕ್ತಿಯನ್ನು ಕಾಯಬೇಕಿದ್ದ ನಿಯಮಗಳನ್ನೇ ಸಡಿಲ ಮಾಡಲಾಗುತ್ತಿದೆ.
ಅದಕ್ಕೇ, ‘ವಲಸಿಗರಿಗೆ ಮನೆ ತಲುಪಲು ಸಾಧ್ಯವಾಗುತ್ತಿಲ್ಲ; ಬಾಹ್ಯಾಕಾಶಕ್ಕೆ ಹೋಗಲು ಧನಿಕರಿಗೆ ಅನುಕೂಲ ಮಾಡುತ್ತಾರಂತೆ’ ಎಂದು ಜೈರಾಮ್ ರಮೇಶ್ ಕುಟುಕಿದ್ದಾರೆ.
ಯಾರೆಷ್ಟೇ ಕುಟಕಿದರೂ ಪ್ರಭುತ್ವಕ್ಕೆ ವಂದಿಮಾಗಧರ ಮತ್ತು ಬಹುಕೋಟ್ಯಧೀಶರ ಭೋಪರಾಕ್ ಮಾತ್ರ ಕೇಳಿಸುತ್ತದೆ. ಕಂದಕಕ್ಕೆ ಕುಸಿದವರ ಆಕ್ರಂದನ ಮಾತ್ರ ಕೇಳಿಸುತ್ತಿಲ್ಲ.
[ಚಿತ್ರ: ಛತ್ತೀಸಗಢದ ಅರಣ್ಯದ ಮಧ್ಯೆ ಅದಾನಿ ಕಂಪನಿಯ ಕಲ್ಲಿದ್ದಲ ಗಣಿಗಾರಿಕೆಯ ದೃಶ್ಯ. ಕೃಪೆ qz.com]

ಅರಣ್ಯವಾಸಿಗಳನ್ನು ಹೊರಗಟ್ಟುವ ಗಣಿಗುತ್ತಿಗೆದಾರರ ಷಡ್ಯಂತ್ರದ ವಿರುದ್ಧ ಆದಿವಾಸಿಗಳ ಒಂದು ಸೊಗಸಾದ ಪ್ರತಿಭಟನಾ ಲಾವಣಿಯನ್ನು ಈ ಕೊಂಡಿಯಲ್ಲಿದೆ:
https://www.youtube.com/watch?v=sFmsl7KrZn8

ಕಾರಂಟೈನ್ ನಲ್ಲಿರುವ ಅನೇಕರಲ್ಲಿ ಕೋವಿಡ್ ಶಂಕೆ, ಉತ್ತರಕನ್ನಡ-ಶಿವಮೊಗ್ಗ ಗಳಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳು
ಉತ್ತರಕನ್ನಡ ಜಿಲ್ಲೆಯ 6 ಸಾವಿರ ಜನರು ಸೇರಿ ಕರ್ನಾಟಕದೆಲ್ಲೆಡೆ ಕಾರಂಟೈನ್ ಆಗಿರುವ ಲಕ್ಷಾಂತರ ಜನರಲ್ಲಿ ಸಾವಿರಾರು ಜನರು ಕರೋನಾ ಕ್ಕೆ ತುತ್ತಾಗಿರುವ ಬಗ್ಗೆ ಈಗ ಶಂಕೆ ವ್ಯಕ್ತವಾಗಿದೆ.
ಮೊದಮೊದಲು ಉತ್ತರ ಕನ್ನಡ ಜಿಲ್ಲೆಗೆ ಬಂದ ಹೊರದೇಶಗಳ ಉದ್ಯೋಗಿಗಳು ಕೋವಿಡ್ ಪ್ರಾರಂಭಕ್ಕೆ ಕಾರಣವಾದರು. ನಂತರ ತಬ್ಲಿಘಿಗಳ ಓಡಾಟ,ಒಡನಾಟದಿಂದ ಕರೋನಾ ದೇಶ ಸುತ್ತತೊಡಗಿತ್ತು.
ಈಗ ಮಹಾರಾಷ್ಟ್ರ,ಗುಜರಾತ್, ಚಿನ್ನೈಗಳಿಂದ ಬಂದ ಜನರು ಉತ್ತರಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಕರೋನಾ ಹಬ್ಬಿಸುತಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ದೃಢಪಟ್ಟ ಎರಡು ಕರೋನಾ ಪಾಸಿಟಿವ್ ಪ್ರಕರಣಗಳು ಮಹಾರಾಷ್ಟ್ರದಿಂದ ಬಂದ ವ್ಯಕ್ತಿಗಳ ಪ್ರಕರಣಗಳು. ಮಹಾರಾಷ್ಟ್ರದಿಂದ
ಶಿವಮೊಗ್ಗ ಜಿಲ್ಲೆ ಸೊರಬಾ ಕ್ಕೆ ಹೊರಟಿದ್ದ ಈ ಕುಟುಂಬವನ್ನು ಪೊಲೀಸರು ಯಲ್ಲಾಪುರದಲ್ಲಿ ತಡೆದು ಕಾರಂಟೈನ್ ಮಾಡಿದ್ದರು. ಈ ಎರಡೂ ಪ್ರಕರಣಗಳಂತೆ ಉತ್ತರಕನ್ನಡದ 6 ಸಾವಿರ ಕಾರಂಟೈನ್ ಆದ ಜನರು ಹಾಗೂ ರಾಜ್ಯದ ಲಕ್ಷಾಂತರ ಜನರಲ್ಲಿ ಕರೋನಾ ಕಾಣಿಸಿಕೊಳ್ಳುವ ಅಪಾಯದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ.
ಬಸ್ ಪ್ರಯಾಣಿಕರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡುವುದು, ಹೊರ ರಾಜ್ಯಗಳಿಂದ ಬಂದ ಜನರ ತಪಾಸಣೆ, ಕಾರಂಟೈನ್ ಕ್ರಮಗಳ ನಡುವೆ ನುಸುಳುಕೋರರು ಸುದ್ದಿಮಾಡದೆ ಗ್ರಾಮ, ನಗರ ಸೇರಿಕೊಂಡಿರುವ ಅನೇಕ ಉದಾಹರಣೆಗಳೂ ಇವೆ.
ಈ ವಿಶೇಶ ಪ್ರಕರಣಗಳ ಹಿನ್ನೆಲೆಯಲ್ಲಿ ಒಬ್ಬೊಬ್ಬ ವ್ಯಕ್ತಿ ನೂರಾರು ಜನರಿಗೆ ಕರೋನಾ ವಿಸ್ತರಿಸುವ ಅಪಾಯವಿರುವುದರಿಂದ ಸಾರ್ವಜನಿಕರು ಓಡಾಟ, ವಹಿವಾಟು ನಿಲ್ಲಿಸಿ ಮನೆಯಲ್ಲೇ ಉಳಿಯುವುದು ಮತ್ತು ಕರೋನಾ ನಿರ್ಬಂಧದ ಉಪಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಸಂಕಷ್ಟದಿಂದ ಪಾರಾಗಬೇಕಿದೆ.

ಶಿವಮೊಗ್ಗ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಕಾರಂಟೈನ್ ಶಿಕ್ಷೆ!
ಗ್ರೀನ್ ಜೋನ್ ಆಗಿದ್ದ ಶಿವಮೊಗ್ಗ ಜಿಲ್ಲೆ ಕರೋನಾ ಕಿತ್ತಳೆ ವಲಯವಾಗಿರುವುದು ಹಳೆಯ ಸುದ್ದಿ ಈಗಿನ ಹೊಸ ವರ್ತಮಾನವೆಂದರೆ…
ಶಿವಮೊಗ್ಗದ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳು ಕಾರಂಟೈನ್ ಆಗುವ ಅಪಾಯಕ್ಕೆ ಸಿಕ್ಕಿಕೊಂಡಿದ್ದಾರೆ.
ಎರಡು ದಿವಸಗಳ ಹಿಂದೆ ಕೋವಿಡ್ ದೃಢಪಟ್ಟ 15 ವರ್ಷದ ಬಾಲಕಿ ಪೋಸ್ಕೋ ಪ್ರಕರಣವೊಂದರ ಸಂತೃಸ್ತೆಯಾಗಿದ್ದಾರೆ. ಈ ಬಾಲಕಿಯನ್ನು ತನಿಖೆ ಕಾರಣಕ್ಕೆ ವಿಚಾರಣೆ ನಡೆಸಿದ ಶಿಕಾರಿಪುರದ ಇನ್ಪೆಕ್ಟರ್,ಶಿವಮೊಗ್ಗ ಎ.ಎಸ್.ಪಿ. ಹಾಗೂ ಎಸ್.ಪಿ. ಸೇರಿ ಮೂವರು ಅಧಿಕಾರಿಗಳು ಈ ಸಂತೃಸ್ತೆಯ ಸಂಪರ್ಕಕ್ಕೆ ಒಳಪಟ್ಟಿದ್ದರು. ಈ ಸಂತೃಸ್ತೆಗೆ ಅವಳ ಹಿಂದಿನ ಟ್ರಾವೆಲ್ ಹಿಸ್ಟರಿ ಸಂಗ್ರಹಿಸಿದ್ದಾಗ ಶಿಕಾರಿಪುರದಿಂದ ಶಿವಮೊಗ್ಗ ವರೆಗೆ ಮೂವರು ಅಧಿಕಾರಿಗಳು ಈ ಸಂತೃಸ್ತೆಯ ಸಂಪರ್ಕಕ್ಕೆ ಬಂದಿದ್ದು ಇವರೆಲ್ಲರೂ ಈಗ ಕಾರಂಟೈನ್ ಆಗುವ ಶಿಕ್ಷೆಗೆ ಗುರಿಯಾದಂತಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *