

ಕಳೆದ ವರ್ಷ ಸಂಗ್ರಹಿಸಬೇಕೆಂದುಕೊಂಡಿದ್ದ ನೇರಳೆ ಹಣ್ಣು ಸಂಗ್ರಹಿಸಲಾಗದೆ ಮಳೆಗಾಲ ಬಂದೇ ಹೋಗಿತ್ತು. ಈ ವರ್ಷ ಹಾಗಾಗಬಾರದೆಂದು ಕಾಡು-ಮೇಡುಗಳನ್ನೆಲ್ಲಾ ಸುತ್ತಿ ನೇರಳೆಹಣ್ಣುಗಳಿಗಾಗಿ ಹುಡುಕಿದ್ದೇ ಹುಡುಕಿದ್ದು. ಆದರೆ ಈ ವರ್ಷ ಕಣ್ಣಿಗೆ ಬೀಳುವ, ಕೈ ಗೆ ಎಟುಕುವಷ್ಟು ನೇರಳೆ ಹಣ್ಣು ಬಿಡಲೇ ಇಲ್ಲ ಎನ್ನುವ ವಾಸ್ತವ ಅರಿವಾಗುವ ಸಮಯಕ್ಕೆ ಮತ್ತೊಂದು ಮಳೆಗಾಲ ಹೊಸ್ತಿಲಿಗೆ ಬಂದು ನಿಂತಿದೆ. ಮಲೆನಾಡಿನ ಗುಡ್ಡ-ಬೆಟ್ಟಗಳಲ್ಲಿ ಯತೇಚ್ಛವಾಗಿ ದೊರೆಯುವ ನೇರಳೆಹಣ್ಣುಗಳಲ್ಲಿ 2 ಡಜನ್ ಗಳಿಗೂ ಹೆಚ್ಚು ವಿಭಿನ್ನ ಪ್ರಭೇದಗಳಿವೆ ಎನ್ನುವ ಸಸ್ಯತಜ್ಞ ಎಂ.ಬಿ.ನಾಯ್ಕ ಕಡಕೇರಿ ಈ ವರ್ಷ ನೇರಳೆ ಫಸಲು ವಿರಳ ಮರಗಳಲ್ಲಿ ಫಸಲಿನ ಸಮೇಕ್ಷೆ ನಡೆಸಿದ ನಮಗೆ ಮರಗಳು ವರ್ಷಬಿಟ್ಟು ವರ್ಷ ಸಮೃದ್ಧ ಫಸಲು ನೀಡಲು ಆ ಮರದ ಹಾರ್ಮೋನು ಉತ್ಪಾದನೆ ಕಾರಣ ಎನ್ನುವ ಶೋಧನೆಯ ಸತ್ಯ ತಿಳಿಸಿದರು. ನೂರರಲ್ಲಿ ಒಂದು ಮರದಂತೆ ಎಲ್ಲೆಂದರಲ್ಲಿ ಮಲೆನಾಡಿನಾದ್ಯಂತ ಕಂಡು ಬರುವ ನೇರಳೆ ಹಣ್ಣು, ಅದರ ತೊಗಟೆ, ಕುಡಿ, ಎಲೆಗಳೆಲ್ಲಾ ಮಧುಮೇಹಕ್ಕೆ ದಿವ್ಯೌಷಧಿಗಳಂತೆ ನಮಗೆ ಈ ನೇರಳೆ ಹಿತ್ತಲಿನ ಗಿಡದಂತಾಗಿ ಅದರ ಮದ್ದಿನ ಮಹತ್ವ ತಿಳಿದಿಲ್ಲ.ವರ್ಷದಲ್ಲಿ ಸಾವಿರಾರು ಟನ್ ಬಿದ್ದು ಹಾಳಾಗುವ ಈ ನೇರಳೆಗೆ ಮಹಾನಗರಗಳಲ್ಲಿ ಪ್ರತಿ ಕಿ.ಲೋ.ಗೆ 500 ರೂ. ಗಿಂತ ಹೆಚ್ಚಿನ ಬೆಲೆ. ಈ ವರ್ಷ ಯಾರಾದರೂ ಒಂದೆರಡು ಕೆ.ಜಿ. ನೇರಳೆ ಹಣ್ಣು ಕೊಯ್ದುಕೊಡಿ ಎಂದವನಿಗೆ ನೇರಳೆಹಣ್ಣು ಸಿಗದೆ ಸಿಕ್ಕಿದ್ದು ನೇರಳೆ ಹಣ್ಣಿನ ಬಗ್ಗೆ ಮಾಹಿತಿ. ಈ ಉಪಯುಕ್ತ ಮಾಹಿತಿ ನಿಮಗೂ ತಿಳಿಯಲಿ ಎನ್ನುವ ಆಸೆಯಿಂದ ನನ್ನ ಮುನ್ನುಡಿಯೊಂದಿಗೆ ಈ ಬರಹ-

ನೀಲಿ ಸುಂದರಿ ನೇರಳೆ ಹಣ್ಣು

ಒಮ್ಮೆ ತಿಂದರೆ ಸಾಕು, ಮತ್ತೊಮ್ಮೆ ಸವಿಯಬೇಕು ಎಂದೆನಿಸುವ ಈ ನೀಲಿ ಸುಂದರಿಯನ್ನುಇಷ್ಟಪಡದವರಾರು ಹೇಳಿ? ವರುಷಕ್ಕೊಮ್ಮೆ ಕಾಣಸಿಗುವ ಈ ಹಣ್ಣು ಎಲ್ಲರಿಗೂ ಪ್ರಿಯ. ರೋಗ ಶಮನ ಮಾಡುವಲ್ಲಿ ಪ್ರಮುಖ ಔಷಧಿಯಾಗಿ ಕಾರ್ಯನಿರ್ವಹಿಸುವ ಈ ನೇರಳೆ ಹಣ್ಣು ಇತ್ತೀಚಿನ ದಿನಗಳಲ್ಲಿ ಕಾಣಸಿಗುವುದೇ ಅಪರೂಪ.
ಕಬ್ಬಿಣ, ಪೊಟಾಶಿಯಂ, ಮೇಗ್ನೇಶಿಯಂ, ಪ್ರೋಸ್ಫರಸ್, ವಿಟಮಿನ್ ಸಿ ಅಂಶಗಳನ್ನು ಹೊಂದಿದ ನೇರಳೆ ಹಣ್ಣು ಬರೀ ಆರೋಗ್ಯಕಾರಕ ಮಾತ್ರವಲ್ಲ, ಸೌಂದರ್ಯವರ್ಧಕವೂ ಹೌದು. ತಿನ್ನಲು ರುಚಿರುಚಿಯಾದ ಈ ಹಣ್ಣು ಹಲವು ರೋಗಗಳಿಗೆ ರಾಮಬಾಣ ಎಂದರೆ ನಂಬಲು ಸಾಧ್ಯವೆ?
ರಕ್ತಹೀನತೆ, ಕಾಮಾಲೆ ರೋಗ, ಹೃದಯ ಸಂಬಂಧ ಕಾಯಿಲೆ, ಹೊಟ್ಟೆ ಹುಣ್ಣು, ಬೇಧಿ, ಆಯಸಿಡಿಟಿಯಂಥ ಹತ್ತು ಹಲವು ಕಾಯಿಲೆಗಳನ್ನು ಹೋಗಲಾಡಿಸುವ ಶಕ್ತಿ ಈ ನೀಲಿ ಸುಂದರಿಗಿದೆ. ಅಷ್ಟೇ ಅಲ್ಲದೇ ಹದೆಹರೆಯದ ಯುವಕ ಯುವತಿಯರ ಪಾಲಿಗೆ ಸಿಂಹಸ್ವಪ್ನವಾಗಿ ಕಾಡುವ ಮೊಡವೆಯನ್ನು ಹೋಗಲಾಡಿಸಿ ತ್ವಚೆಯ ಅಂದ ಹೆಚ್ಚಿಸುವ ಶಕ್ತಿ ಇದಕ್ಕಿದೆ.
ಆಯಂಟಿ ಬ್ಯಾಕ್ಟೀರಿಯಾ ಅಂಶ ಹೊಂದಿದ ಈ ನೇರಳೆ ಹಣ್ಣಿನ ಎಲೆಗಳನ್ನು ಸೇವಿಸುವುದರಿಂದ ಬಾಯಿಯ ದುರ್ವಾಸನೆ ತಡೆಗಟ್ಟಬಹುದು. ಜಾಂಬೋಲಿನ್ ಎಂಬ ಗ್ಲೂಕೋಸ್ ಅಂಶ ಇದರಲ್ಲಿರುವ ಕಾರಣ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಡಯಾಬಿಟಿಸ್ ಇರುವವರು ಕೂಡಾ ಯಾವುದೇ ಆತಂಕವಿಲ್ಲದೆ ಈ ಹಣ್ಣನ್ನು ತಿನ್ನಬಹುದು. ನೇರಳೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಜೀರ್ಣ ಕ್ರಿಯೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸುವ ಇದು ರಕ್ತ ಶುದ್ಧಿ ಮಾಡುವಲ್ಲಿ ಸಹಕಾರಿಯಾಗಿದೆ. ಇನ್ನು ಆಯಿಲ್ ಸ್ಕಿನ್ ನಿಂದ ಕಂಗಲಾಗಿರುವವರಿಗೆ ಇದು ಹೇಳಿ ಮಾಡಿಸಿದ ಮದ್ದು.
ಅಷ್ಟೇ ಅಲ್ಲದೇ ಇದರ ತಿರುಳನ್ನು ಜೆಲ್ಲಿ, ಜ್ಯಾಮ್, ವೈನ್ ಗಳ ತಯಾರಿಕೆ ಬಳಸಲಾಗುತ್ತದೆ. ಅಗಾಧ ಔಷಧಿಯ ಗುಣ ಹೊಂದಿದ ಈ ಹಣ್ಣು ತಿನ್ನಲು ತುಂಬಾ ರುಚಿ. ನೇರಳೆ ಹಣ್ಣು ಸೇವಿಸಿ ಬಾಯಿ ಚಪ್ಪರಿಸಿಕೊಳ್ಳುವುದು ಮಾತ್ರವಲ್ಲ. ಸೌಂದರ್ಯದ ಜೊತೆಗೆ ಆರೋಗ್ಯವನ್ನು ವೃದ್ಧಿಸಿಕೊಳ್ಳಿ. -ಅನಿತಾ ಬನಾರಿ
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
