

ನೆರೆ ಬಂದಾಗ, ಭೂಕಂಪವಾದಾಗ ಮತ್ತಿತ್ತರ ಸಂಕಷ್ಟದ ಸಮಯದಲ್ಲಿ ನಮ್ಮ ದೇಶವನ್ನು ಉಳಿಸಿದ್ದು ಬಿಎಸ್‌ಎನ್‌ಎಲ್ ಹೊರತು, ಜಿಯೋ ಸೇರಿದಂತೆ ಯಾವುದೇ ಖಾಸಗಿ ಟೆಲಿಕಾಂ ಕಂಪನಿಗಳಲ್ಲ. ಬಿಎಸ್‌ಎನ್‌ಎಲ್ ಬಂದ ನಂತರ ಮೊಬೈಲ್ ಸೇವೆಗಳು ಜನರ ಕೈಗೆಟುಕಲು ಸಾಧ್ಯವಾಯಿತು.

ಸರ್ಕಾರಿ ಸ್ವಾಮ್ಯದ ದೈತ್ಯ ಕಂಪನಿ ‘ಬಿಎಸ್‌ಎನ್‌ಎಲ್‌ನಲ್ಲಿ ದೇಶದ್ರೋಹಿಗಳೇ ತುಂಬಿಕೊಂಡಿದ್ದಾರೆ’ ಎಂಬ ಹೇಳಿಕೆ ಕೊಡುವ ಮೂಲಕ ಮಾಜಿ ಸಚಿವ, ಉತ್ತರ ಕನ್ನಡ ಸಂಸದ ಅನಂತ್‌ಕುಮಾರ್ ಹೆಗಡೆ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.
ಕುಮುಟಾದಲ್ಲಿ ಸರ್ಕಾರದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದ ಬಹುದೊಡ್ಡ ಕಂಪನಿ ಬಿಎಸ್‌ಎನ್‌ನಲ್ಲಿ ಬರೀ ದೇಶದ್ರೋಹಿಗಳೇ ತುಂಬಿಕೊಂಡಿದ್ದಾರೆ. ಅವರನ್ನು ಸರಿಪಡಿಸಲು ನಮ್ಮ ಸರ್ಕಾರದಿಂದ ಸಾಧ್ಯವಾಗಿಲ್ಲ. ಹಾಗಾಗಿ ಹಂತ ಹಂತವಾಗಿ ಅವರನ್ನು ಕೆಲಸದಿಂದ ತೆಗೆದುಹಾಕುವ ಮೂಲಕ ಖಾಸಗೀಕರಣ ಮಾಡುತ್ತೇವೆ ಎಂದು ಸಂಸದರು ಹೇಳಿದ್ದಾರೆ.
ಬಿಎಸ್‌ಎನ್‌ಎಲ್ ಎಷ್ಟು ಜಿಡ್ಡು ಹಿಡಿದು ಹೋಗಿದೆ ಎಂದರೆ ನಮ್ಮ ಸರ್ಕಾರಕ್ಕೂ ಅದನ್ನು ಸರಿಪಡಿಸಲು ಸಾಧ್ಯವಾಗಿಲ್ಲ. ಹಾಗಾಗಿ ಹೂಡಿಕೆ ಹಿಂತೆಗೆತದ ಮೂಲಕ ಅದನ್ನು ಮುಚ್ಚಿ ಆ ಜಾಗದಲ್ಲಿ ಖಾಸಗಿಯವರಿಗೆ ಅವಕಾಶ ಮಾಡಿಕೊಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಸಂಸದರ ಈ ವಿವಾದಾತ್ಮಕ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಅವರ ಬಾಯಲ್ಲಿ ದೇಶದ್ರೋಹ ಬಿಟ್ಟರೆ ಮತ್ತೇನೂ ಬರುವುದಿಲ್ಲ. ಎಲ್ಲರನ್ನೂ ದೇಶದ್ರೋಹಿಗಳೆಂದು ಕರೆಯುವುದು ಅವರಿಗೆ ಖಯಾಲಿ ಆಗಿಬಿಟ್ಟಿದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ದೂರಿದ್ದಾರೆ.
ಬಿಎಸ್‌ಎನ್‌ಎಲ್ ಮುಗಿಸುತ್ತೇವೆ
ದೆಹಲಿಯ ನನ್ನ ಮನೆಯಲ್ಲಿಯೂ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಬರುವುದಿಲ್ಲ. ಈ ವಿಚಾರದಲ್ಲಿ ಬೆಂಗಳೂರಿಗೆ ಹೋಲಿಸಿಕೊಂಡರೆ ಉತ್ತರ ಕನ್ನಡವೇ ಬೆಸ್ಟ್. ಅಲ್ಲಿರುವವರು ಅಧಿಕಾರಿಗಳಲ್ಲ ಕೇವಲ ದೇಶದ್ರೋಹಿಗಳೇ ತುಂಬಿಕೊಂಡಿದ್ದಾರೆ. ನಾನು ಬಳಸವು ಭಾಷೆಯಲ್ಲಿ ನಿಖರತೆಯಿದೆ. ಹಾಗಾಗಿ ಹೂಡಿಕೆ ಹಿಂತೆಗೆತ ಮೂಲಕ ಬಿಎಸ್‌ಎನ್‌ಎಲ್ ಮುಗಿಸುತ್ತೇವೆ ಎಂದು ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ. (ನಾ.ಗೌ.ಕಾಂ.)
