

ಸಂಘಟನೆ, ಹೋರಾಟ,ಸಾಮಾಜಿಕ ಅಭಿವೃದ್ಧಿ ಧ್ಯೇಯದ ಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಂಸ್ಥೆ ಈಡಿಗರೊಟ್ಟಿಗೆ ಇತರ ಹಿಂದುಳಿದ ಸಮಾಜವನ್ನು ಸಂಘಟಿಸಿ,ಸಾಮಾಜಿಕ ಸುಧಾರಣೆಯ ಪ್ರಯತ್ನ ಮಾಡುತ್ತಿದೆ. ಈ ಕೆಲಸದ ಹಿನ್ನೆಲೆಯಲ್ಲಿ ಕಳೆದ ವಾರ ಸಾಗರದ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ವಿಷಯವನ್ನು ಮುಂದಿಟ್ಟುಕೊಂಡು ಸಭೆ ನಡೆಸಿರುವ ಸಂಘ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ನಿರ್ವಹಣೆ, ಆಡಳಿತ ವಿಚಾರದಲ್ಲಿ ಮೂಗು ತೂರಿಸಿ ಹಿಂದುಳಿದ ವರ್ಗಗಳನ್ನು ರಾಜಕೀಯ,ಧಾರ್ಮಿಕ, ಆರ್ಥಿಕವಾಗಿ ಶೋಷಿಸುತ್ತಿರುವ ವೈದಿಕಶಾಹಿ ಪುರೋಹಿತಶಾಹಿ ತಂತ್ರಗಳ ವಿರುದ್ಧ ಹೋರಾಡಲು ನಿರ್ಣಯಿಸಿದೆ.
ಸೊರಬದ ಹೊಳೆಕೊಪ್ಪದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಮಾಡಿರುವ ಸಂಘ ಇಂಥ ಶೂದ್ರವಿರೋಧಿ ನಡವಳಿಕೆಗಳನ್ನು ವಿರೋಧಿಸುವ ಪುರೋಹಿತಶಾಹಿ ತಂತ್ರಗಾರಿಕೆಗೆ ಸರಿಯಾದ ಉತ್ತರ ನೀಡಲು ಬಿ.ಎಸ್,ಎನ್.ಡಿ.ಪಿ.ಯ 30 ಜಿಲ್ಲೆಗಳ ಪದಾಧಿಕಾರಿಗಳ ಪ್ರತಿನಿಧಿಗಳು ನಿರ್ಣಯ ಅಂಗೀಕರಿಸಿದ್ದಾರೆ.
ಸಾಗರದ ಸಿಗಂದೂರಿನಲ್ಲಿ ಕಳೆದ ಅನೇಕ ವರ್ಷಗಳ ಹಿಂದೆ ಅಲ್ಲಿಯ ಮೂಲದ ರಾಮಪ್ಪ ಚೌಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿ ಅದರ ಮೂಲಕ ಸಾಮಾಜಿಕ,ಶೈಕ್ಷಣಿಕ, ಸಾಂಸ್ಕೃ ತಿಕ,ಧಾರ್ಮಿಕ ಕೆಲಸಗಳನ್ನು ಮಾಡುತಿದ್ದಾರೆ.ನಂತರ ಅಲ್ಲಿ ಪೂಜೆಯ ನೆಪದಲ್ಲಿ ಸೇರಿಕೊಂಡ ಪುರೋಹಿತರು ತಮ್ಮ ಲಾಗಾಯ್ತಿನ ಪುರೋಹಿತಶಾಹಿ, ವೈದಿಕ ಶಾಹಿ ಕುತಂತ್ರಗಳನ್ನು ಮಾಡುತ್ತಾ ಹಿಂದುಳಿದ ವರ್ಗಗಳ ಶೃದ್ಧಾ ಕೇಂದ್ರಕ್ಕೆ ಕಂಟಕವಾಗಿದ್ದಾರೆ. ಇಂಥ ವೈದಿಕರು, ಪುರೋಹಿತಶಾಹಿಗಳು ಮಾಡುವ ಉಪಾಯದ ಕೆಲಸಗಳೆಲ್ಲಾ ಸಮಾಜಕ್ಕೂ ಅರ್ಥವಾಗುತ್ತಿವೆ. ಎಂದು ದೂರಿರುವ ಕೆಲವರು ಈ ಬಗ್ಗೆ ಸಂಘಟಿತ ಹೋರಾಟಕ್ಕಾಗಿ ಬಿ.ಎಸ್.ಎನ್.ಡಿ.ಪಿ. ನೇತೃತ್ವ ವಹಿಸುವ ಬಗ್ಗೆ ಅಲ್ಲಿಯ ಸಭೆಯಲ್ಲಿ ನಿರ್ಣಯಿಸಿರುವುದಾಗಿ (ಸಂಘದ) ಕೆಲವರು ತಿಳಿಸಿದ್ದಾರೆ.
ಹೋರಾಟ ಅನಿವಾರ್ಯ- ಸಿಗಂದೂರಿನಲ್ಲಿ ಹಿಂದುಳಿದವರು ಅವರ ಪೂಜೆ, ನಂಬಿಕೆ,ಶೃದ್ಧೆಗಳ ಕಾರಣಕ್ಕೆ ಪ್ರಾರಂಭಿಸಿದ ದೇವಸ್ಥಾನದಲ್ಲಿ ಪುರೋಹಿತ ವರ್ಗ ಸೇರಿಕೊಂಡು ವರಲೆ ಹುತ್ತದಲ್ಲಿ ಹಾವು ಸೇರಿಕೊಂಡು ಸರ್ವಾಧಿಕಾರ ನಡೆಸಿದಂತಿದೆ. ಇಲ್ಲಿಯ ಪುರೋಹಿತಶಾಹಿ ನಡವಳಿಕೆಯನ್ನು ವಿರೋಧಿಸಲು ಎಸ್.ಎನ್.ಡಿ.ಪಿ. ನೇತೃತ್ವದಲ್ಲಿ ನಾಡಿನ ಹಿಂದುಳಿದ, ದಲಿತ, ಪ್ರಗತಿಪರರ ಒಕ್ಕೂಟಗಳೆಲ್ಲಾ ಸೇರುತ್ತಿವೆ. ತಂತ್ರ-ಕುತಂತ್ರ,ಮಂತ್ರ-ಷಡ್ಯಂತ್ರಗಳ ಮೂಲಕ ಬಹುಸಂಖ್ಯಾತರನ್ನು ವಂಚಿಸುತ್ತಿರುವ ಪುರೋಹಿತಶಾಹಿ ನಮ್ಮ ದೇವಾಲಯದಲ್ಲಿ ಯಜಮಾನಿಕೆಗೆ ಪ್ರಯತ್ನಿಸುತ್ತಿರುವುದು ದ್ರೋಹದ ಕೆಲಸ. ಅದಕ್ಕೆ ಸಂಘಟಿತ ಹೋರಾಟದ ಮೂಲಕ ವೈದಿಕ-ಪುರೋಹಿತಶಾಹಿ ಕುತಂತ್ರವನ್ನು ಎದುರಿಸಲು ಸಂಗಟಿತರಾಗುತಿದ್ದೇವೆ. ಇದು ವರ್ಗ ಸಂಘರ್ಷಕ್ಕೆ ಕಾರಣವಾದರೂ ಆಶ್ಚರ್ಯವಿಲ್ಲ. – ಲೋಹಿತ್ ನಾಯಕ ಈರಗೊಪ್ಪ, ಯುವಮುಖಂಡ ಬೆಂಗಳೂರು.

ವೈದಿಕಶಾಹಿ ಕುತಂತ್ರಕ್ಕೆ ತಕ್ಕ ಉತ್ತರ ನೀಡಲು ಬದ್ಧ- ನಾರಾಯಣಗುರುಗಳ ತತ್ವ ಆದರ್ಶದಂತೆ ನಮ್ಮ ಸಂಘಟನೆ ಬೆಳೆಯುತ್ತಿದೆ. ಸಿಗಂದೂರು ದೇವಿ ಹಿಂದುಳಿದವರ ಆರಾಧನೆಯ ದೇವತೆ, ಇಲ್ಲಿ ನುಸುಳಿರುವ ವೈದಿಕರು ತಮ್ಮ ಲಾಗಾಯ್ತಿನ ಕುತಂತ್ರಗಳಂತೆ ಅಲ್ಲಿಯ ವ್ಯವಸ್ಥೆಯ ಮೇಲೆ ಯಜಮಾನಿಕೆಗೆ ಪ್ರಯತ್ನಿಸುತ್ತಾ ಅಲ್ಲಿಯ ವ್ಯವಸ್ಥೆ, ಹಿಂದುಳಿದ ವರ್ಗಗಳ ಪ್ರಮುಖರಿಗೆ ಅಡ್ಡಿಯಾಗಿದ್ದಾರೆ. ಈ ವಿಚಾರದಲ್ಲಿ ನಾವು ತಾಳ್ಮೆಯಿಂದ ಕಾದು ನೋಡುವ ತಂತ್ರ ಅನುಸರಿಸಿ ಸಾಕಾಗಿದೆ. ಈ ಹಿಂದೆ ದೇವರು, ಧರ್ಮದ ಹೆಸರಿನಲ್ಲಿ ವಂಚಿಸಿರುವ ಪುರೋಹಿತರು ಈಗ ನಮ್ಮ ಸ್ವಾಭಿಮಾನ, ಅಭಿಮಾನಕ್ಕೆ ನೇರವಾಗಿ ಕೈ ಹಚ್ಚಿದಂತಾಗಿದೆ. ಸಿಗಂದೂರು ವಿಚಾರದಲ್ಲಿ ನಾವು ಹೋರಾಟಕ್ಕೂ ಸಿದ್ಧ, ದೇವಸ್ಥಾನಕ್ಕೇ ನುಗ್ಗಿ ವೈದಿಕ ಕುತಂತ್ರಿಗಳನ್ನು ಒದ್ದು ಹೊರಹಾಕಲೂ ಸಿದ್ಧರಾಗಿದ್ದೇವೆ. ಧರ್ಮ, ನಂಬಿಕೆ, ಕಾನೂನು, ಸರ್ಕಾರಗಳ ಯಜಮಾನಿಕೆ ವಹಿಸಿ ನಮ್ಮ ಸಮಾಜ, ನಾಯಕರಿಂದ ನಮ್ಮ ದೇವರು ಅಲ್ಲಿಯ ವ್ಯವಸ್ಥೆಯನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಸಂಘರ್ಷವೋ,ಸಮರವೋ ಎಲ್ಲದಕ್ಕೂ ಸಿದ್ಧ. ವೈದಿಕಶಾಹಿಯ ಧಾರ್ಮಿಕ ರಾಜಕಾರಣ,ಲಾಭದ ಶೋಷಣೆಯ ರಾಜಕಾರಣ ಮಿತಿಮೀರಿದೆ. ಈ ದೇವಸ್ಥಾನದಿಂದಲೇ ಪುರೋಹಿತಶಾಹಿ ವಿರುದ್ಧದ ಸಂಘಟಿತ ಹೋರಾಟ ಸಾಧ್ಯವಾಗುವುದಿದ್ದರೆ ಅದಕ್ಕಿಂತ ಖುಷಿ ಬೇರೆನಿದೆ. ಬಹುಸಂಖ್ಯಾತರನ್ನು ನಂಬಿಕೆ, ಸರ್ಕಾರ, ಸುಳ್ಳು, ಯಜಮಾನಿಕೆಗಳಿಂದ ಹಿಂದೆ ಸರಿಸುತ್ತೇವೆಂಬ ಭ್ರಮೆಯಲ್ಲಿರುವ ವೈದಿಕಶಾಹಿ ಈ ವಿವಾದದಿಂದ ಪಾಠ ಕಲಿಯಲಿದೆ. – ಸೈದಪ್ಪ ಗುತ್ತೇದಾರ ಬಿ.ಎಸ್.ಎನ್.ಡಿ.ಪಿ. ರಾಜ್ಯಾಧ್ಯಕ್ಷ



