

ಮಾಲಾಶ್ರೀ ಮನೆಗೆ ಹೋದಾಗ ನನ್ನ ಈ ನಿಲುವು ಇನ್ನಷ್ಟು ಗಟ್ಟಿಯಾಯಿತು. ನಿಮ್ಮದೊಂದು ಪ್ರೀತಿಯ ಆಶೀರ್ವಾದ ದುರ್ಗಮ ಹಾದಿಯಲಿ ಕ್ರಮಿಸಿ ಹಳ್ಳಿಯ ಮೊದಲ ಸ್ನಾತಕೋತ್ತರ ಪದವಿ ಪಡೆದ ಈ ಪುಟ್ಟ ಜೀವದ ಮೇಲೆ ಇರಲಿ… ಅವಳು ಇನ್ನೂ ಎತ್ತರ ಬೆಳೆಯಲಿ..ಕನಸ ಸಸಿ ಹಸಿರಾಗಿದೆ….ಬೆಳೆ ಬರಲಿ ಎಂಬುದು ನಮ್ಮ ಸಹಮತದ ಹಾರೈಕೆ….
ಇವತ್ತು ನಾನು ನನ್ನ ನೆಚ್ಚಿನ ದುರ್ಗಮ ಹಳ್ಳಿಗೆ ಬೆಳಿಗ್ಗೆಯೇ ಹೋಗಿದ್ದೆ. ಮಂಗನಕಾಯಿಲೆ ಕಾರಣ ಈಚೆಗೆ ಈ ಹಳ್ಳಿ ಸುದ್ದಿ ಆಗಿದೆ. ಮಾರಲಗೋಡು ಎಂಬ ಗುಡ್ಡಗಳ ತಗ್ಗಿನಲಿ ಇರುವ ಈ ಊರಲ್ಲಿ ನನ್ನ ಪ್ರೀತಿಯ ಶಿಷ್ಯರು ಇದ್ದಾರೆ. ಪೃಥ್ವಿಯಿಂದ ಮೊದಲುಗೊಂಡು ರಾಜೇಶ್, ಲೋಹಿತ್, ಭರತ್ ಹೀಗೆ ಯುವ ಸ್ನೇಹಿತರು ಸೇರಿ ಜನ ಸಾಮಾನ್ಯರಲ್ಲೂ ಇಲ್ಲಿ ನನಗೊಂದು ಆಪ್ತ ವಲಯ ಇದೆ.
ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯವಾಗಿ ಫೇಸ್ ಬುಕ್ ನಲ್ಲಿ ನನ್ನ ಬರಹಗಳನ್ನ ಸಾಕಷ್ಟು ಜನ ಓದುತ್ತಾರೆ. ಕೆಲವರು ಪ್ರತಿಕ್ರಿಯೆ ನೀಡಿದರೆ ಮತ್ತೆ ಕೆಲವರು ಕಾಮೆಂಟ್ ಲೈಕ್ ಏನೂ ಹೇಳದೇ msg ಅಥವಾ ಕರೆ ಮಾಡಿ ತಮ್ಮ ಅಭಿಪ್ರಾಯ ಹೇಳುತ್ತಾರೆ. Fb ಯಲ್ಲಿ ಪ್ರತಿಕ್ರಿಯೆ ಕೊಡಲು ಕೆಲವರು ಬೇರೆ ಬೇರೆ ಕಾರಣದಿಂದ ಹಿಂದೆ ಸರಿಯುತ್ತಾರೆ.ಈ ನಡುವೆ fb ಯಲ್ಲಿ ಬರಹಗಳಿಗೆ ಪ್ರತಿಕ್ರಿಯೆ ಕೊಡುತ್ತಾ, ತಾನು ಬರೆಯುತ್ತಾ ಇದ್ದವರು ಮಾಲಾಶ್ರೀ ಎನ್ನುವರು.
ನಾನು ಅವರ ಪ್ರತಿಕ್ರಿಯೆ ಗಮನಿಸಿದ್ದೆ ಹೊರತಾಗಿ ವೈಯಕ್ತಿಕ ವಿವರಗಳಿಗೆ ಹೆಚ್ಚು ಗಮನ ಕೊಡಲು ಹೋಗಿರಲಿಲ್ಲ. ಹೇಳಿ ಕೇಳಿ fb ಖಾತೆ.. ಅಸಲಿ ನಕಲಿಗಳ ವಿಚಿತ್ರ ಜಗತ್ತು ಇದರಲ್ಲಿ ಇದೆ. ಆದರೆ ಈಚೆಗೆ ಗೊತ್ತಾಗಿದ್ದು ಈ ಮಾಲಾಶ್ರೀ ನಮ್ಮ ಭಾಗದವರು. ಕನ್ನಡ ಎಂ ಎ ಮುಕ್ತಾಯ ಹಂತದಲ್ಲಿ ಇದೆ. ಚಂದಾಗಿ ಸಾಹಿತ್ಯ ಓದಿಕೊಂಡವರು ಎಂದು.
ನಾನು ಎಂ ಎ ಮುಗಿಸಿದ ಕಾಲವು ಹೀಗೆ ಇತ್ತು. ಗ್ರಂಥಾಲಯ ನನ್ನ ಅತಿ ನೆಚ್ಚಿನ ತಾಣವಾಗಿತ್ತು. ರಾಜ್ಯಶಾಸ್ತ್ರ ನನ್ನ ಸ್ನಾತಕೋತ್ತರ ವಿಷಯವಾಗಿದ್ದರೂ ಸಾಹಿತ್ಯದ ವಿದ್ಯಾರ್ಥಿಯೇ ನಾನಾಗಿದ್ದೆ. ನನ್ನ ಜತೆ ಕಥೆಗಾರ ಪರಮೇಶ್ ಕರೂರು ಇದ್ದ. ಹಠಕ್ಕೆ ಬಿದ್ದು ನಾವಿಬ್ಬರೂ ಓದುತ್ತ ಬರೆಯುತ್ತಾ ಪುಸ್ತಕ ಬಿಡುಗಡೆ ಮಾಡಿದ್ದೆವು. ಆದರೆ ಹಾಗೆ ನಾವು ಓದುವಾಗಲೆಲ್ಲ ಪರಸ್ಪರ ಮಾತಾಡಿಕೊಳ್ಳುತ್ತ ಇದ್ದುದ್ದು “ಊರಿಗೆ ಹೋಗಬೇಕು, ನಾವು ಹೊಸತನದ್ದು ಕಟ್ಟಬೇಕು, ನಮ್ಮ ಅಣಕ ಮಾಡಿದವರ ಎದುರು ಬೆಳೆಯಬೇಕು” ಅಂತ.
ಅದ್ಯಾಕೋ ನಮ್ಮ ಮನಸಿಗೆ ಸರ್ಕಾರದ ನೌಕರಿ ತೆಗೆದುಕೊಳ್ಳಬೇಕು ಅಂತ ಅನ್ನಿಸಿಯೇ ಇರಲಿಲ್ಲ. ತೋಟ ಸಾಕು ಎಂಬ ನಿರ್ಧಾರಕ್ಕೆ ಬಂದಿದ್ದೆವು ಅನ್ನಿಸುತ್ತೆ. ನಮ್ಮ ಮನೆಯವರು ನಮಗೆ ಊರಲ್ಲಿ ಮನುಷ್ಯರಾಗಬೇಕು ಎಂದು ಹೇಳಿದ್ದೇ ಇದಕ್ಕೆ ಕಾರಣ ಅನ್ನಿಸುತ್ತೆ.ಹಾಗೆ ನೋಡಿದರೆ ದುಡಿಯುವ ಸಮುದಾಯದಲಿ ನಮ್ಮ ಊರಲ್ಲಿ ನಾವೇ ಮೊದಲು ಎಂ ಎ ಮುಗಿಸಿದವರು.
ಎಂ ಎ ಮುಗಿಸಿ ಬಂದ ಮೇಲೆ ನಮ್ಮನ್ನು ಬಹಳ ಕಾಡಿದ್ದು ಮಾರ್ಗದರ್ಶನ ಕೊರತೆ. ನಮ್ಮ ಬರಹ, ಓದು, ತಲೆಮಾರಿನ ಮೊದಲು ಡಿಗ್ರಿ ಪಡೆದದ್ದು, ನಮ್ಮ ಭವಿಷ್ಯದ ಸಾಧ್ಯತೆಗಳು, ರಚನಾತ್ಮಕ ಬದುಕನ್ನು ಕಟ್ಟುವ ಮಾರ್ಗಗಳ ಬಗ್ಗೆ ಮಾತಾಡುವವರೆ ಇರಲಿಲ್ಲ. ಯುನಿವರ್ಸಿಟಿ ಬದುಕಿನಲ್ಲಿ ಬೆನ್ನು ತಟ್ಟುವ ಮೇಸ್ಟ್ರುಗಳ ಸಹವಾಸದಲ್ಲಿದ್ದ ನಮಗೆ ಊರಲ್ಲಿ ಅಕ್ಷರಶಃ ಅನಾಥತೆ ಕಾಡಿತ್ತು.
ಎಸ್…. ಈ ಮಾತು ಬರೆಯಲು ಕಾರಣ ಇದೆ. ನಾನು ಇಂದು ನೆಚ್ಚಿನ ಊರು ಮಾರಲಗೋಡು ಹೋಗಲು ಬಹಳ ಮುಖ್ಯ ಕಾರಣ ನನ್ನ ಮೇಲಿನ ಅನುಭವವೇ ಆಗಿದೆ. ಸಹಮತ ವೇದಿಕೆ ಸಂಘಟಿಸಲು ಇಂಥ ಕಾರಣ ಇವೆ. ನಾನು ಮಾಲಾಶ್ರೀ ಮನೆಗೆ ಸಹಮತದ ಸದಸ್ಯ ಪೃಥ್ವಿ ಜತೆಯಾಗಿ ಭೇಟಿ ನೀಡಿದಾಗ ಅವರಿಗೆ ಅಧ್ಯಕ್ಷರು ಯಾಕೆ ಬಂದರು ಎಂಬ ಕುತೂಹಲ. ಹಾ…ಕುತಂತ್ರ ಮಾಡಿ ಮೀಸಲಾತಿ ತಪ್ಪಿಸಿ ಪುನ್ಹ ಪಂಚಾಯತ್ ಗೂ ಆಯ್ಕೆ ಆಗಬಾರದು ಎಂಬ ಮತಿವಿಕಲರ ನಡುವೆಯೂ ನನ್ನ ಪ್ರೀತಿಯ ಜನರ ಮನಸ್ಸಿನಲ್ಲಿ ನಾನಿನ್ನೂ ಅಧ್ಯಕ್ಷನೇ. ಹೆಚ್ಚಿನವರು ಅಲ್ಲಿಂದ ನನ್ನ ಇಳಿಸಲು ಸಿದ್ಧರಿಲ್ಲ. ಆ ಪುಟ್ಟ ಮನೆ ಒಳಗೆ ಹೋದಾಗ ಮಾಲಾಶ್ರೀ ಎದುರಾದಳು. ಆ ಮನೆಯಲ್ಲಿ ಅವಳನ್ನು ನೋಡಿದಾಗ ಬಿಳಿಮಲೆ ಸರ್ ಆತ್ಮಕಥನ ತುಣುಕು ನೆನಪಾಯ್ತು.
ಮಾಲಾಶ್ರೀ ತಂದೆ ತಾಯಿ ತಮ್ಮ ಇದ್ದರು.ಮಾಲಾಶ್ರೀ ಮಾರಲಗೋಡು ಎಂಬ ಈ ಪುಟ್ಟ ಹಳ್ಳಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಾ ಇರುವ ಮೊದಲ ಯುವತಿ. ಆ ಮನೆಯೊಳಗೆ ನಾನು ಪ್ರವೇಶ ಮಾಡುತ್ತಾ ಇರುವಾಗಲೇ ನನಗೆ ಎದುರಿದ್ದ ಶುಂಠಿಗದ್ದೆ, ಆ ಸಣ್ಣ ಮನೆ, ಮೊದಲೇ ಪರಿಚಯವಿದ್ದ ಅವರ ತಂದೆಯ ಮುಖ ಸಾಕಷ್ಟು ಹೇಳಿತು. ದುರ್ಗಮ ಹಳ್ಳಿಯಿಂದ ಬಡತನ ನಡುವೆ ಮಾಲಾಶ್ರೀ ಓದಿದ್ದು, ಓದಿಸಿದ್ದು ಸಣ್ಣ ಸಾಧನೆಯಲ್ಲ. ಆ ಕುಟುಂಬದ ಮೊದಲ ಪದವೀಧರೆ ಇವಳು. ದುರ್ಗಮತೆ, ದುರ್ಬಲ ಆರ್ಥಿಕತೆ ಹೊಂದಿರುವ ಈ ಪುಟ್ಟ ಊರಿಂದ ಅಂತಿಮ ಎಂ ಎ ಓದುತ್ತಾ ಇರುವ ಮಾಲಾಶ್ರೀ ಅಕ್ಷರ ಹಸಿವಿನವಳು.
ಸಾಹಿತ್ಯ ಪ್ರಕಾರಗಳನ್ನು ಓದಿಕೊಂಡಿದ್ದಾಳೆ. ಕೆ ಎ ಎಸ್ ಪೂರ್ವ ಪರೀಕ್ಷೆ ತೇರ್ಗಡೆ ಆಗಿರುವುದು ಕೀ ಉತ್ತರ ನೋಡಿ ಖಾತರಿ ಆಗಿದೆ ಅವಳಿಗೆ. ನಾನು ಅರೆತಾಸು ಅಲ್ಲಿದ್ದು. ಪೋಷಕರಿಗೆ ಅಭಿನಂದನೆ ಹೇಳಿ. ನಾಲ್ಕು ಪುಸ್ತಕಗಳನ್ನು ಅವಳ ಕೈಗೆ ಇಟ್ಟು. ಮುಂದಿನ ಓದಿನ ಮತ್ತು ಔದ್ಯೋಗಿಕ ಸಾಧ್ಯತೆಗಳು, ಇಚ್ಚಾಶಕ್ತಿಯಿಂದ ಬದುಕು ಕಟ್ಟುವ, ಬದುಕನ್ನು ಇತ್ಯಾತ್ಮಕವಾಗಿ ನೋಡುವ ಬಗ್ಗೆ ಒಂದಿಷ್ಟು ಮಾತಾಡಿ ಬಂದೆ. ಹಾಗೆಲ್ಲಾ ಮಾತಾಡುವಾಗ ನನ್ನ ಒಳಗೆ ಪಾಠ ಮಾಡಿದ ಗುರು ಜಾಗೃತವಾಗಿದ್ದ. ದೊಡ್ಡ ಕನಸುಗಳು ಜೋಪಡಿಯಿಂದ ಆರಂಭ ಆಗುತ್ತವೆ. ನಾನು ಆಶಾವಾದಿ. ಮಾಲಾಶ್ರೀ ರೀತಿಯ ಅರಳು ಪ್ರತಿಭೆಗಳು ಪ್ರತಿ ಊರಿನಲ್ಲೂ ಇರುತ್ತಾರೆ. ಕನಿಷ್ಠ ನಾವು ಯುವಮನಸುಗಳ ಬಗ್ಗೆ ಗಮನಹರಿಸಿ, ಸಮಯ ಕೊಟ್ಟು, ಮೆಚ್ಚುಗೆ ಜತೆ ಅವರ ಕನಸಿಗೆ ಕಸುವು ತುಂಬುವ ಕೆಲಸ ಮಾಡಿದರೆ ಅದು ಅವರಿಗೆ ಕೊಡುವ ಚೈತನ್ಯವೇ ಬೇರೆ. ಇದೆ ಕಾರಣಕ್ಕೆ ಮಾರಲಗೋಡು ನಿನ್ನೆ ಭೇಟಿ ಆತ್ಮತೃಪ್ತಿ ನೀಡಿತು. ರಾಜಕಾರಣ ಮೀರಿ ದ್ವೀಪದಲಿ ಇಂತಹ ನೂರು ಕೆಲಸ ಇವೆ. ಸಹಮತ ವೇದಿಕೆ ಇಂಥ ಮನಸು ಕಟ್ಟುವ ಭಾಗವಾಗಿ ಕೆಲಸ ಮಾಡಬೇಕು ಎಂಬುದು ನಮ್ಮ ಇರಾದೆ. ಮಾಲಾಶ್ರೀ ಮನೆಗೆ ಹೋದಾಗ ನನ್ನ ಈ ನಿಲುವು ಇನ್ನಷ್ಟು ಗಟ್ಟಿಯಾಯಿತು. ನಿಮ್ಮದೊಂದು ಪ್ರೀತಿಯ ಆಶೀರ್ವಾದ ದುರ್ಗಮ ಹಾದಿಯಲಿ ಕ್ರಮಿಸಿ ಹಳ್ಳಿಯ ಮೊದಲ ಸ್ನಾತಕೋತ್ತರ ಪದವಿ ಪಡೆದ ಈ ಪುಟ್ಟ ಜೀವದ ಮೇಲೆ ಇರಲಿ… ಅವಳು ಇನ್ನೂ ಎತ್ತರ ಬೆಳೆಯಲಿ..ಕನಸ ಸಸಿ ಹಸಿರಾಗಿದೆ….ಬೆಳೆ ಬರಲಿ ಎಂಬುದು ನಮ್ಮ ಸಹಮತದ ಹಾರೈಕೆ.
-ಜಿ.ಟಿ ವಿಥ್ ಸಹಮತ.

