

ನೀನೊಬ್ಬ ಅಪ್ರಬುದ್ದ.
ಅವಿವೇಕಿ. ಸೌಹಾರ್ದ ಐಕ್ಯ ಸಮಾಜವನ್ನು ಒಡೆಯುವ ಬರಹಗಳೇ ಹೆಚ್ಚಾಗಿವೆ. ಜಾತಿ ಧರ್ಮಗಳನ್ನು ಸದಾ ವಿರೋಧಿಸಿ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿರುವೆ, ಅಕ್ಷರಗಳ ಹಾದರ ಮಾಡುತ್ತಿರುವೆ, ನೀನೊಬ್ಬ ಅವಕಾಶವಾದಿ, ಎಡಬಿಡಂಗಿ ಎಂದು ಕೆಲವರು ಆರೋಪ ಮಾಡುತ್ತಿರುತ್ತಾರೆ.ಇದನ್ನು ಗಮನಿಸಿದ ನಾನು ಛೆ ಇದು ನಿಜವೇ ?
ಸಮಾಜ ಕಟ್ಟುವ ಮನಸ್ಥಿತಿಯ ನಾನು ಸಮಾಜವನ್ನು ಒಡೆಯುವ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದೇನೆಯೆ?. ಅಕ್ಷರಗಳನ್ನು ಹಾದರಕ್ಕೆ ಉಪಯೋಗಿಸುತ್ತಿದ್ದೇನೆಯೇ ? ಹಾಗಾದರೆ ಅದು ನಿಜವೇ ಆಗಿದ್ದಲ್ಲಿ ಸಂಪೂರ್ಣ ತಪ್ಪಲ್ಲವೇ ? ಹೀಗೆ ನನ್ನನ್ನೇ ಪ್ರಶ್ನೆ ಮಾಡಿಕೊಳ್ಳುತ್ತಾ ಎಂದಿನಂತೆ ಆತ್ಮಸಾಕ್ಷಿಯ ಜಾಗೃತಿಗಾಗಿ ಬೆಳಗಿನ ಜಾವ ಏಕಾಂತದಲ್ಲಿ ಧ್ಯಾನಕ್ಕೆ ಕುಳಿತೆ…………
ಸರಿ ತಪ್ಪುಗಳ ಆತ್ಮಾವಲೋಕನ ಸಮಯವದು. ಸುಮಾರು ಎರಡು ಗಂಟೆಯಷ್ಟು ಧ್ಯಾನದ ನಂತರ ಇದ್ದಕ್ಕಿದ್ದಂತೆ ಯಾರೋ ಫಟೀರನೆ ಜೋರಾಗಿ ಕೆನ್ನೆಗೆ ಬಾರಿಸಿದರು. ನೋವಿನಿಂದ ಕಿರುಚಿಕೊಳ್ಳುತ್ತಾ ಕಣ್ಣು ಬಿಟ್ಟೆ. ನನ್ನದೇ ಆತ್ಮದ ಪ್ರತಿರೂಪವೊಂದು ಕಾಣಿಸಿತು. ಕೋಪೋದ್ರಿಕ್ತವಾದ ಅದು ಉರಿವ ಕಣ್ಣುಗಳಿಂದ ನನ್ನನ್ನು ದೃಷ್ಟಿಸಿ ಹೇಳಿತು.. ” ಅಯ್ಯಾ ಮೂರ್ಖ. ನಿನ್ನನ್ನು ಏನೆಂದು ತಿಳಿದಿರುವೆ. ಈ ಸಮಾಜವನ್ನು ಒಡೆಯುವ ಶಕ್ತಿ ನಿನಗಿದೆ ಎಂಬ ಭ್ರಮೆಯಲ್ಲಿ ಇರುವೆಯಾ. ಹುಚ್ಚಾ, ಈ ಸಮಾಜ ಒಂದಾಗಿ ಇರುವುದಾದರೂ ಎಲ್ಲಿ. ಒಡೆಯಲು ಉಳಿದಿರುವುದಾದರೂ ಏನು. ಅದು ಚೂರುಚೂರಾಗಿ ಎಷ್ಟೋ ಶತಮಾನಗಳು ಕಳೆದಿವೆ. ಹೇಗೆಂದು ಕೇಳಿಸಿಕೊಳ್ಳುವ ದೈರ್ಯವಿದೆಯೇ ” ಎಂದು ಕೇಳಿತು.
ಕೆನ್ನೆಗೆ ಬಿದ್ದ ಪೆಟ್ಟಿನಿಂದ ನೋವು ಕೋಪದಲ್ಲಿದ್ದ ನಾನು ” ಹೇಳು ನೋಡೋಣ ” ಎಂದು ಘರ್ಜಿಸಿದೆ. ಅದು ಹೇಳತೊಡಗಿತು.” ಎಲ್ಲಿದೆ ಐಕ್ಯತೆ. ವರ್ಣಾಶ್ರಮ ಧರ್ಮ ಪ್ರಾರಂಭವಾದಾಗಲೇ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಮತ್ತು ಶೂದ್ರರಾಗಿ ಒಡೆಯಿತು. ಅನಂತರ ಅಸ್ಪೃಶ್ಯರೆಂಬ ಸಮುದಾಯ ಸೃಷ್ಟಿಸಲಾಯಿತು. ಮುಂದೆ ಇದೇ ಸಾವಿರ ಸಾವಿರ ಜಾತಿಗಳಾಗಿ ಒಡೆದು ಚೂರಾಗಿವೆ. ಬೌದ್ಧ ಜೈನ ಸಿಖ್ ಪಾರ್ಸಿಗಳಾಗಿ ಹೋಳಾದವು. ಘಜ್ನಿ ಘೋರಿ ಮಹಮದರ ದಾಳಿಗಳಿಂದಾಗಿ ಇಸ್ಲಾಂ ಬೇರೆ ಉದಯಿಸಿತು. ಬ್ರಿಟೀಷರ ಆಡಳಿತದಿಂದ ಕ್ರಿಶ್ಚಿಯನ್ ಸೃಷ್ಟಿಯಾಯಿತು. ” ನನಗೆ ಸ್ವಲ್ಪ ತೂಕಡಿಸಿದಂತಾಯಿತು. ಮತ್ತೆ ಇನ್ನೊಂದು ಕೆನ್ನೆಗೆ ಬಾರಿಸಿದ ಆತ್ಮ
” ಏಯ್ ಮುಠಾಳ ಇಷ್ಡಕ್ಕೇ ತೂಕಡಿಸುವೆಯೇನೋ ಕೇಳು, ಭಾಷೆಗಳ ಆಧಾರದಲ್ಲಿ ರಾಜ್ಯಗಳಾಗಿ ಒಡೆದವು. ಆಹಾರ ಬಟ್ಟೆಗಳ ರೀತಿಯಲ್ಲಿಯೂ ಒಡೆದಿದೆ. ಆರ್ಯ ದ್ರಾವಿಡರಾಗಿ ಒಡೆದು ಹೋಗಿದ್ದಾರೆ. ದಕ್ಷಿಣ – ಉತ್ತರ ಎಂದು ಚದುರಿದ್ದಾರೆ. ಬಿಜೆಪಿ ಕಾಂಗ್ರೆಸ್ ಬಿಎಸ್ಪಿ ಕಮ್ಯುನಿಸ್ಟ್ ಮುಂತಾದ ಪಕ್ಷಗಳಾಗಿ ಒಡೆದಿವೆ. ಎಡಪಂಥೀಯ ಬಲಪಂಥೀಯ ಮಧ್ಯಪಂಥೀಯ ಎಂದು ಚೂರು ಚೂರಾಗಿದೆ. ಅವಿಭಕ್ತ ಕುಟುಂಬಗಳೇ ಒಡೆದು ತಂದೆ ತಾಯಿಗಳೇ ಬೇರೆ ಗಂಡ ಹೆಂಡತಿಯೇ ಬೇರೆ ಮಕ್ಕಳೇ ಬೇರೆಯಾಗಿ ಒಡೆಯುತ್ತಿವೆ. ಇದೀಗ ಮನಸ್ಸುಗಳೇ ಒಡೆದ ಕನ್ನಡಿಯಾಗಿದೆ. ಇನ್ನು ನೀನು ಒಡೆಯುವುದಕ್ಕೆ ಏನು ಉಳಿದಿದೆ ಎಂದು ತಿಳಿದಿರುವೆಯೋ ದಡ್ಡ ” ಎಂದು ಕೂಗಾಡಿತು.
ಆತ್ಮದ ಮಾತು ಕೇಳಿ ದುಃಖ ಉಮ್ಮಳಿಸಿತು. ಬಿಕ್ಕಿ ಬಿಕ್ಕಿ ಅಳತೊಡಗಿದೆ. ಆಗ ರೌದ್ರಾವತಾರ ತಾಳಿದ್ದ ಆತ್ಮ ಅತ್ಯಂತ ಪ್ರಶಾಂತ ಮುಖಭಾವವಾಗಿ ಬದಲಾಯಿತು.ನನ್ನನ್ನು ಸಂತೈಸುತ್ತಾ ಹೇಳಿತು.” ಅಳಬೇಡ ಕಂದ, ನೀನು ಈಗಾಗಲೇ ಒಡೆದಿರುವ ಸಮಾಜವನ್ನು – ಮನಸ್ಸುಗಳನ್ನು ಜನರಿಗೆ ತೋರಿಸುತ್ತಿರುವೆ. ಅದಕ್ಕೆ ಕಾರಣಗಳನ್ನು ಹೇಳುತ್ತಿರುವೆ. ಸಮಸ್ಯೆಗಳನ್ನು ಅರ್ಥಮಾಡಿಸುತ್ತಿರುವೆ. ಇದು ಸರಿಯಾಗಿ ಜನರಲ್ಲಿ ಅರಿವು ಮೂಡಿದ್ದೇ ಆದರೆ ಅವರಲ್ಲಿ ಜಾಗೃತಿ ಉಂಟಾದರೆ ಸಹಜವಾಗಿಯೇ ಒಡೆದ ಸಮಾಜ ದೂರವಾದ ಮನಸ್ಸುಗಳು ಮತ್ತೆ ಸೇರಿ ಭವ್ಯ ಭಾರತದ ಕನಸು ನನಸಾಗುತ್ತವೆ.
ಕನಿಷ್ಠ ಜನರ ಜೀವನಮಟ್ಟವಾದರೂ ಸುಧಾರಿಸುತ್ತದೆ. ಈ ದ್ವೇಷ ಅಸೂಯೆ ಹಿಂಸೆಗಳು ಅತ್ಯಂತ ಕಡಿಮೆಯಾಗುತ್ತದೆ. ಈ ಪಯಣದಲ್ಲಿ ಮತಿಹೀನರ ಅಜ್ಞಾನಿಗಳ ವಿಭಜಕ ಶಕ್ತಿಗಳ ನಕಲಿಗಳ ನಿನ್ನದೇ ಜನರ ನಿಂದನೆಗಳನ್ನು ಸಹಿಸಿಕೊಳ್ಳಬೇಕು. ಅಧಿಕಾರ ಹಣ ಪ್ರಚಾರದ ಹಂಗಿಗೆ ಒಳಗಾಗಬಾರದು. ಸಾರ್ವತ್ರಿಕ ಸತ್ಯ ಹೇಳಬೇಕೆ ಹೊರತು ಒಂದು ಜಾತಿಯ ಒಂದು ಧರ್ಮದ ಒಂದು ಪಂಥದ ಒಬ್ಬ ವ್ಯಕ್ತಿಯ ಪರವಾಗಿ ಪಕ್ಷಪಾತ ಮಾಡದೆ ಎಲ್ಲರಿಗೂ ಒಂದೇ ದೃಷ್ಟಿಕೋನದ ನ್ಯಾಯ ಇರಬೇಕು. ಧರ್ಮಗಳನ್ನು ಖಂಡಿಸಿದರೆ ಎಲ್ಲಾ ಧರ್ಮಗಳನ್ನು ಖಂಡಿಸಬೇಕು. ದೇವರ ಅಸ್ತಿತ್ವ ಪ್ರಶ್ನಿಸಿದರೆ ಎಲ್ಲಾ ದೇವರುಗಳಿಗೂ ಅನ್ವಯಿಸಬೇಕು. ಎಲ್ಲಾ ಹತ್ಯೆಗಳಿಗೂ ಒಂದೇ ರೀತಿ ಸ್ಪಂದಿಸಬೇಕು. ಸರಿ ತಪ್ಪುಗಳನ್ನು ನಿನಗೂ ಸೇರಿಯೇ ಹೇಳಬೇಕು. ಮುಖ್ಯವಾಗಿ ಪ್ರತಿಫಲಾಪೇಕ್ಷೆ ಇರಬಾರದು ಮತ್ತು ಬೇಗ ಫಲಿತಾಂಶ ನಿರೀಕ್ಷಿಸಬಾರದು.
ಎಲ್ಲಕ್ಕಿಂತ ಮುಖ್ಯವಾಗಿ ಸತ್ಯವನ್ನು ಅತ್ಯಂತ ವಿನಯವಾಗಿ ಸಭ್ಯವಾಗಿ ಮತ್ತು ತಾಯಿ ಪ್ರೀತಿಗಿಂತ ನೂರುಪಟ್ಟು ಹೆಚ್ಚು ಆತ್ಮೀಯವಾಗಿ ಹೇಳಬೇಕು. ಆಗ ಮಾತ್ರ ನಿನ್ನ ಕನಸುಗಳು ಈಡೇರಬಹುದು ” ಎಂದು ಮೃದುವಾಗಿ ನನ್ನ ಹಣೆಯನ್ನು ಚುಂಬಿಸಿ ” ನಾನು ಹೇಳಿದ್ದು ನಿನ್ನ ಅರಿವಿಗಾಗಿ ಅಲ್ಲ. ಅದು ನಿನ್ನ ನಡವಳಿಕೆಯಾಗಲಿ ” ಎಂದು ಹೇಳಿ ಮಾಯವಾಯಿತು. ನಾನು ವಿಷಯವನ್ನು ನಿಮಗೆ ಮುಟ್ಡಿಸಿ ಎಂದಿನಂತೆ ಬೆಳಗಿನ ಜಾಗಿಂಗ್ ಮಾಡಲು ಮೈದಾನಕ್ಕೆ ಹೊರಟೆ.ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.ವಿವೇಕಾನಂದ. ಹೆಚ್.ಕೆ.2017 ರ ಲೇಖನ
