

ಇಂದು_ಅರ್ನೆಸ್ಟೋ_ಚೆಗುವೆರನ_ಹುತಾತ್ಮ ದಿನ..


ಚೆಗುವೆರಾ ಈ ಹೆಸರನ್ನು ಹೇಳುವುದೇ ಒಂದು ಅಭಿಮಾನ. ಸೈನಿಕ ದಿರಿಸಿನ ಗಡ್ಡದಾರಿ,ತಲೆಯಲ್ಲೊಂದು ಕ್ಯಾಪು,ಆ ಕ್ಯಾಪಲ್ಲೊಂದು ನಕ್ಷತ್ರ…ಭಯವೆಂದರೇನೆಂದು ಅರಿಯದ ತೀಕ್ಷ್ಣ ಕಣ್ಣೋಟಇವೆಲ್ಲವೂ ತುಂಬಿದ ಆತನ ಮುಖ ನೋಡಿದಾಗ ಅನ್ಯಾಯದ ವಿರುದ್ದ ಹೋರಾಡುವ ಹೋರಾಟಗಾರರಿಗೆ ಉತ್ಸಾಹದ ಸ್ಪೂರ್ತಿಯ ಚಿಲುಮೆಯಾತ.ಅಮೇರಿಕದಂತಹ ಅಮೇರಿಕವನ್ನೇ ನಡುಗಿಸಿದ ಜಗದೇಕವೀರನಾತ.ಉನ್ನತ ಹುದ್ದೆಗಳನ್ನು ಅಲಂಕರಿಸಿ ರಾಜನಂತೆ ಜೀವಿಸುವ ಎಲ್ಲಾ ಅವಕಾಶಗಳಿದ್ದರೂ ಶೋಷಿತರಿಗಾಗಿ ಅವೆಲ್ಲವನ್ನೂ ತ್ಯಜಿಸಿ ಅನೇಕ ಕಷ್ಟಗಳನ್ನು ಸಹಿಸಿಕೊಂಡು ಕೊನೆಗೆ ವೀರ ಹುತಾತ್ಮನಾದ.ಅಂತಹ ವೀರನ ಕಿರು ಪರಿಚಯವಿಲ್ಲಿದೆ.
ಚೆಗುವೆರ ಹುಟ್ಟಿದ್ದು 1928ರ ಜೂನ್ 14ರಂದು ಅರ್ಜೆಂಟೀನದಲ್ಲಿ.ಜನನತಃ ಅಸ್ತಮ ರೋಗಿಯಾಗಿದ್ದ ಚೆಗುವೆರ ಬಾಲ್ಯದಲ್ಲಿಯೇ ತಾನೊಬ್ಬ ಡಾಕ್ಟರ್ ಆಗಬೇಕೆಂದು ಬಯಸಿದ್ದ.ಮನೆಯವರ ಒತ್ತಾಯಕ್ಕೆ ಮಣಿದು ಇಂಜಿನಿಯರಿಂಗ್ ಮಾಡಿದ್ದ ಚೆಗುವೆರ ನಂತರ ಇಂಜಿನಿಯರಿಂಗ್ ಕ್ಷೇತ್ರದಿಂದ ಹೊರಬಂದು ಮೆಡಿಕಲ್ ಕಾಲೇಜು ಸೇರಿಕೊಂಡ.ಆತನಿಗೆ ತಾನೊಬ್ಬ ಪ್ರಖ್ಯಾತ ಡಾಕ್ಟರ್ ಆಗಿ ಲ್ಯಾಟಿನ್ ಅಮೇರಿಕದ ಬಡಜನರಿಗೆ ಉಚಿತವಾಗಿ ಆರೋಗ್ಯ ಸೇವೆ ನೀಡಬೇಕು ಎಂಬ ಬಯಕೆಯಿತ್ತು.ಆದರೆ ಅವನ ಜೀವನದ ಟರ್ನಿಂಗ್ ಪಾಯಿಂಟ್ ಆಗಿ ಮಾರ್ಪಟ್ಟ ಘಟನೆಯೊಂದು ನಡೆಯಿತು.ಸುತ್ತಾಟದ ಹುಚ್ಚಿದ್ದ ಚೆಗುವೆರ ಹಾಗು ಆತನ ಸ್ನೇಹಿತ ಅಲ್ಬರ್ಟ್ ಗ್ರನೆಡೋ ಇಬ್ಬರು ಯೂನಿವರ್ಸಿಟಿಗೆ ರಜೆ ಹಾಕಿ ಮೋಟಾರ್ ಬೈಕಿನಲ್ಲಿ ಲಾಂಗ್ ಟ್ರಿಪ್ಪಿಗೆ ಹೋದರು.ಅವರ ಮೋಟಾರ್ ಬೈಕು ತಿರುಗಿದ್ದು ದಕ್ಷಿಣ ಅಮೇರಿಕದ ಕಡೆ.ಆ ಪ್ರಯಾಣ 4000km ದೂರದ 9ತಿಂಗಳ ಪ್ರಯಾಣ.ಆ ಪ್ರಯಾಣವೇ ಆತನ ಜೀವನದ ದಿಕ್ಕನ್ನೇ ಬದಲಿಸಿಬಿಟ್ಟಿತು.ಉತ್ತರ ಅಮೇರಿಕದ ಬಂಡವಾಳಶಾಹಿಗಳು ದಕ್ಷಿಣ ಅಮೇರಿಕದ ಬಡಜನರನ್ನು ಪ್ರಾಣಿಗಿಂತಲೂ ಕಡೆಯಾಗಿ ಹಿಂಸಿಸುತ್ತಿದ್ದ ದೃಶ್ಯಗಳು ಅವನ ಕಣ್ಣಿಗೆ ಬೀಳುತ್ತವೆ.ಆಗಲೇ ಆ ಬಡಜನರ ಪರವಾಗಿ ಹೋರಾಡಬೇಕೆಂಬ ನಿರ್ಧಾರವನ್ನು ಮಾಡಿಕೊಂಡ ಚೆಗುವೆರ ತನ್ನ ಮೆಡಿಕಲ್ ಡಿಗ್ರಿಗಳನ್ನು ಬದಿಗಿಟ್ಟು ಆ ಕಾಲದ ಮತ್ತೊಬ್ಬ ಕ್ರಾಂತಿಕಾರಿ ಹೋರಾಟಗಾರ ಫಿಡೆಲ್ ಕ್ಯಾಸ್ಟ್ರೋ ಜೊತೆ ಸೇರಿಕೊಳ್ಳುತ್ತಾನೆ.
ಅಲ್ಲಿಂದ ಆರಂಭವಾಯಿತು ಚೆಗುವೆರನ ಕ್ರಾಂತಿಕಾರಿ ಹೋರಾಟದ ಪರ್ವ.ಕ್ಯೂಬದಲ್ಲಿ ಕ್ಯಾಸ್ಟ್ರೊ ಅಲ್ಲಿನ ಸರ್ವಾಧಿಕಾರಿಯಾಗಿದ್ದ ಬಟೇಷಿಯಾನ ವಿರುದ್ದ ಹೋರಾಡುತ್ತಿದ್ದ.ಚೆಗುವೆರನ ಆಗಮನದ ಬಳಿಕ ಹೋರಾಟ ಇನ್ನಷ್ಟು ತೀವ್ರವಾಯಿತು.ಆದರೆ ಅಮೇರಿಕ ಸರ್ಕಾರಕ್ಕೆ ಕ್ಯೂಬ ಅಭಿವೃದ್ಧಿ ಯಾಗುವುದು ಇಷ್ಟವಿರಲಿಲ್ಲ.ಆದುದರಿಂದ ಅಮೇರಿಕ ಬಟೀಷಿಯ ಪರ ನಿಂತಿತ್ತು.ಈ ಯುದ್ದವು ಬಟೀಷಿಯ ಬೆಂಬಲಿತ ಅಮೇರಿಕದ ಗೂಡಚಾರಿ ಸಂಸ್ಥೆ CIA ಹಾಗು ಚೆಗುವೇರ ನಡುವಿನದ್ದಾಗಿತ್ತು.ಆದರೆ ಈತನ ಹೋರಾಟದಿಂದ ನೊಂದ ಈತನ ಪತ್ನಿಯು ಈತನಿಂದ ವಿಚ್ಛೇದನ ಪಡೆಯುತ್ತಾಳೆ..!ಆದರೂ ಚೆಗುವೆರ ತನ್ನ ಹೋರಾಟದಿಂದ ಹಿಂದೆ ಸರಿಯುವುದಿಲ್ಲ.ಬಟೀಷಿಯಾನ ಶಸ್ತ್ರ ಸಜ್ಜಿತ ಬಲಿಷ್ಟ ಸೇನೆ ಹಾಗು ಅಮೇರಿಕದ ಗೂಡಚಾರಿ ಸಂಸ್ಥೆಯೊಂದಿಗೆ ಹೋರಾಡಲು ಚೆಗುವೆರ ಅದ್ಭುತ ರಣತಂತ್ರವನ್ನೇ ರೂಪಿಸಿದ್ದ.ದೌರ್ಜನ್ಯಕ್ಕೆ ಒಳಗಾದವರು ಹಾಗು ಅವರ ಸಂಬಂಧಿಕರ ಕೈಗೆ ಆಯುಧವನ್ನು ಕೊಟ್ಟು ಹೋರಾಟದ ಕಿಚ್ಚನ್ನು ಹಚ್ಚಿದ.ಗೆರಿಲ್ಲಾ ಯುದ್ದ ತಂತ್ರದಲ್ಲಿ ನಿಪುಣನಾಗಿದ್ದ ಚೆಗುವೆರ ಶತ್ರುಪಾಳಯವನ್ನು ಧ್ವಂಸ ಮಾಡಿಬಿಟ್ಟಿದ್ದ.ಇದರಿಂದ ಸರ್ವಾಧಿಕಾರಿಯಾಗಿದ್ದ ಬಟೀಷಿಯಾ ಆಳ್ವಿಕೆ ಕೊನೆಗೊಂಡು ಚೆಗುವೆರನ ಮಿತ್ರ ಕ್ಯಾಸ್ಟ್ರೊ ಗದ್ದುಗೆಯೇರಿದ. ಇದರಿಂದ ಕ್ಯೂಬ ಸಾಕಷ್ಟು ಪ್ರಗತಿಯಾಯಿತು.ಎಲ್ಲಿಯವರೆಗೆ ಎಂದರೆ ಅಲ್ಲಿನ ಸಾಕ್ಷರತೆ ಪ್ರಮಾಣ 96%ಆಗುವಷ್ಟು…!!ಕ್ಯೂಬ ಜಗತ್ತಿನ ಸಕ್ಕರೆಯ ಕಣಜ ಆಗುವಷ್ಟು….!!!ಆದರೆ …ಒಂದು ದಿನ ಚೆಗುವೆರ ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಾನೆ.ಸ್ವತಃ ಗೆಳೆಯನಾದ ಕ್ಯಾಸ್ಟ್ರೊಗೂ ಚೆಗುವೆರ ಎಲ್ಲಿದ್ದಾನೆ ಎಂದು ತಿಳಿದಿರಲಿಲ್ಲ…ಆಗ ಕ್ಯಾಸ್ಟ್ರೊ ಹೇಳಿದ ಮಾತೇನು ಗೊತ್ತೇ.. “ಚೆಗುವೆರ ಎಲ್ಲಿದ್ದಾನೆಂದು ನನಗೆ ತಿಳಿದಿಲ್ಲ.ಆದರೆ ಖಂಡಿತವಾಗಿಯೂ ಜಗತ್ತಿನ ಯಾವುದೋ ಮೂಲೆಯಲ್ಲಿ ಬಡಜನರ ಧ್ವನಿಯಾಗಿ ಹೋರಾಟ ಮಾಡುತ್ತಿದ್ದಾನೆ ಎಂಬ ಖಾತ್ರಿ ನನಗಿದೆ.”ಕ್ಯಾಸ್ಟ್ರೊ ಹೇಳಿದ್ದು ಸುಳ್ಳಾಗಲಿಲ್ಲ.ಚೆಗುವೆರ ಬಲಿವಿಯ ಎಂಬಲ್ಲಿ ಕಾಣಿಸಿಕೊಂಡಿದ್ದ.ಬಲಿವಿಯಾದ ಜನರನ್ನು ಅಮೇರಿಕ ಅತ್ಯಂತ ಕ್ರೂರವಾಗಿ ನಡೆಸಿಕೊಂಡಿತ್ತು.ಅದರ ವಿರುದ್ದ ಹೋರಾಡಲು ಚೆಗುವೆರ ಬಲಿವಿಯಾದ ಕಾಡಿನಲ್ಲಿ ಅನ್ನ ಆಹಾರವಿಲ್ಲದೆ ಸಂಚರಿಸಬೇಕಾಯಿತು.ಆದರೂ ತನ್ನ ಗೆರಿಲ್ಲ ಯುದ್ದ ತಂತ್ರದಿಂದ ಶತ್ರುಗಳ ಎದೆನಡುಗುವಂತೆ ಮಾಡಿದ್ದ. ಅಲ್ಲಿನ ಸ್ಥಳೀಯ ಜನರ ವಿಶ್ವಾಸಗಳಿಸಿಕೊಂಡು ಬಲಿವಿಯ ಸರ್ಕಾರದ ದೌರ್ಜನ್ಯದ ವಿರುದ್ದ ಹೋರಾಡುವಂತೆ ಧೈರ್ಯ ತುಂಬಿದ.ಆದರೆ ಈ ಬಾರಿ ಚೆಗುವೆರನ ಅದೃಷ್ಟ ಚೆನ್ನಾಗಿರಲಿಲ್ಲವೇನೋ….ಅಮೇರಿಕದ ಗೂಡಚಾರಿ ಸಂಸ್ಥೆ CIAಯ 650 ಶಸ್ತ್ರ ದಾರಿ ಸೈನಿಕರು ಏಕಾಂಗಿಯಾಗಿದ್ದ ಚೆಗುವೆರನನ್ನು ಸುತ್ತುವರೆದು ಬಂಧಿಸಿದರು.ಚೆಗುವೆರ ಎಂಬ ವೀರ ಜೀವಂತವಾಗಿರುವುದು ಅತೀ ಅಪಾಯ ಎಂದರಿತ CIA ಚೆಗುವೆರನನ್ನು ಗುಂಡಿಟ್ಟು ಕೊಂದಿತು. ಸಾಯುವ ಮುಂಚೆ ಚೆಗುವೆರ ಹೇಳಿದ ಮಾತೇನು ಗೊತ್ತೆ…?”ನೀನು ನನ್ನನ್ನು ಸಾಯಿಸಬಹುದು.ನನ್ನ ಚಿಂತನೆಗಳನ್ನಲ್ಲ… ಸೋಲಿಗಿಂತ ಸಾವೇ ನನಗಿಷ್ಟ..” ಎಂದಾಗಿತ್ತು!!!ಆತನ ಸಾವಿನ ಬಳಿಕ ಆತನ ಸಾವಿನ ಸುದ್ದಿಯನ್ನು ತಿಳಿಸಲು ಅಮೇರಿಕ ಅವನ ಮುಂಗೈಯನ್ನು ಕತ್ತಿರಿಸಿ ಕ್ಯೂಬಕ್ಕೆ ಕಳಿಸಿ ಅಮಾನವೀಯತೆಯನ್ನು ತೋರಿತ್ತು.ಚೆಗುವೆರನ ಸಾವಿನ ಸುದ್ದಿ ತಿಳಿದು ಆತನ ಮಿತ್ರ ಫಿಡೆಲ್ ಕ್ಯಾಸ್ಟ್ರೊ ಒಂದು ಐತಿಹಾಸಿಕ ಸುದ್ದಿಗೋಷ್ಠಿ ಮಾಡಿ ಏನು ಹೇಳಿದ್ದ ಗೊತ್ತೇ…”ಚೆಗುವೆರನಿಗೆ ಸಾವಿಲ್ಲ..! ಜಗತ್ತಿನಲ್ಲಿ ಎಲ್ಲಿ ಅನ್ಯಾಯದ ವಿರುದ್ದ ಹೋರಾಟ ನಡೆಯುತ್ತದೆಯೋ ಅಲ್ಲಿ ಚೆಗುವೆರನ ಆತ್ಮ ಹಾಜರಿರುತ್ತದೆ.”ಕ್ಯಾಸ್ಟ್ರೊನ ಆ ಭವಿಷ್ಯವಾಣಿ ಸುಳ್ಳಾಗಲಿಲ್ಲ..ಜಗತ್ತಿನ ಯಾವುದೇ ಮೂಲೆಯಲ್ಲೂ ಅನ್ಯಾಯದ ವಿರುದ್ದ ಹೋರಾಡುವಾಗಲೂ ಚೆಗುವೆರನ ಪರೋಕ್ಷ ಉಪಸ್ಥಿತಿ ಇದ್ದೇ ಇರುತ್ತದೆ.ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಅದೆಷ್ಟೋ ಕಾನ್ಫರೆನ್ಸ್ ಗಳು ಸೆಮಿನಾರ್ ಗಳು ಚೆಗುವೆರನ ಹೆಸರಿನಲ್ಲೇ ನಡೆದಿವೆ.ಇಂದಿಗೂ ಆತನ ಚಿತ್ರವಿರುವ ಶರ್ಟ್,ವಾಚ್,ಟ್ಯಾಟೋಗಳ ಕ್ರೇಝ್ ಕಡಿಮೆಯಾಗಿಲ್ಲ.ಕಮ್ಯುನಿಸಂ ಈ ಜಗತ್ತಿನಿಂದ ಮರೆಯಾಗುವ ಸ್ಥಿತಿಯಲ್ಲಿದ್ದರೂ ಚೆಗುವೆರ ಮಾತ್ರ ಅಜರಾಮರನಾಗಿದ್ದಾನೆ.ಆತನ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.
-ಆನಂದರಾಜು ಕೆ.ಎಚ್.
