

ಬಂಗಾರಪ್ಪ ಹೆಸರಿನಲ್ಲಿ ಪ್ರತಿಷ್ಠಾನ, ಪ್ರಶಸ್ತಿ ಆರಂಭವಾಗಲಿ
ಎಸ್. ಬಂಗಾರಪ್ಪ ಕರ್ನಾಟಕದ ನಿತ್ಯ ಮಿಂಚು. ಅವರ ಜನ್ಮದಿನಾಚರಣೆಯ ನಿಮಿತ್ತ ವಾಟ್ಸಾಪ್,ಫೇಸ್ ಬುಕ್ ಗಳಲ್ಲೆಲ್ಲ ಅಭಿಮಾನದ ನಾಯಕನಿಗೆ ಶುಭಾಶಯ ಹರಿದಾಡುತ್ತವೆ. ಬಂಗಾರಪ್ಪ ತಕ್ಷಣಕ್ಕೆ ಮರೆತು ಹೋಗುವ ವ್ಯಕ್ತಿತ್ವದವರಲ್ಲ ಎಂಬುದನ್ನು ಅವರ ರಾಜಕೀಯ ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ.

ಒಮ್ಮೆ ಸಿದ್ದಾಪುರದ ಇಟಗಿಯಲ್ಲಿ ಯಕ್ಷಗಾನ ನಡೆಯುತ್ತಿತ್ತು. ತಡರಾತ್ರಿಯವರೆಗೂ ಯಕ್ಷಗಾನ ನೋಡಿದ ಬಂಗಾರಪ್ಪ ಅವರು ಸ್ತ್ರೀ ವೇಷಧಾರಿ ಅಗ್ರಹಾರ ಗಜಾನನ ಭಂಡಾರಿ ಅವರನ್ನು ಕರೆದು “ನೀವು ತುಂಬ ಚೆನ್ನಾಗಿ ಪಾತ್ರ ಮಾಡ್ತೀರಿ ಭಂಡಾರಿಯವರೇ..ಈ ವರ್ಷ ನಿಮಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿಸ್ತೇನೆ..ಇನ್ನೂ ಹಲವಾರು ವರ್ಷ ಚೆನ್ನಾಗಿ ಅಭಿನಯಿಸ್ತಾನೇ ಇರಿ” ಅಂತ ಬೆನ್ನುತಟ್ಟಿದರು..
ಅದಾದ ಕೆಲ ತಿಂಗಳ ನಂತರ ಅಕ್ಟೋಬರ್ ಕೊನೆಗೆ ಘೋಷಣೆ ಆಗಿತ್ತು , ಮರುದಿನದ ಪತ್ರಿಕೆಗಳಲ್ಲಿ ‘ಅಗ್ರಹಾರ ಗಜಾನನ ಭಂಡಾರಿಗೆ ರಾಜ್ಯೋತ್ಸವ ಪ್ರಶಸ್ತಿ’ !
ಅನಂತರ ಗಜಾನನ ಭಂಡಾರಿ ಅವರ ಹೆಣ್ಣುಮಕ್ಕಳ ಮದುವೆಗೂ ಬಂಗಾರಪ್ಪ ತಮ್ಮ ಮಡದಿ ಶ್ರೀಮತಿ ಶಕುಂತಲಮ್ಮ ಅವರಿಂದ ಬಾಗೀನದ ಜೊತೆ ಮದುವೆ ಖರ್ಚಿಗೆ ಹಣವನ್ನೂ ಕೊಡಿಸಿ ಗೌರವಿಸಿದರು. ಗಜಾನನ ಭಂಡಾರಿ ಅವರು ತಮ್ಮ ಕೊನೆ ಉಸಿರಿರುವವರೆಗೂ ‘ಬಂಗಾರದ ಮನುಷ್ಯ’ ನನ್ನು ನೆನೆಯುತ್ತಲೇ ಇದ್ದರು.
ಇನ್ನೊಂದು ಘಟನೆ : ಅಗ್ರಹಾರದ ಹವ್ಯಕ ಬ್ರಾಹ್ಮಣ ಯುವಕನೋರ್ವ ಟಿ.ಸಿ.ಎಚ್. ಮಾಡಿಕೊಂಡು ನೌಕರಿ ಇಲ್ಲದೇ ಸೋತಿದ್ದ. ಆತ ತನ್ನ ಅಜ್ಜಿಯೊಟ್ಟಿಗೆ ಬೆಂಗಳೂರಿಗೆ ಹೋಗಿ ಸಾಹೇಬ್ರನ್ನು ಭೇಟಿ ಆದ..ಅಜ್ಜಿ ತನ್ನ ಮೊಮ್ಮಗನಿಗೆ ಒಂದು ಮಾಸ್ತರಿಕೆ ಚಾಕರಿ ಕೊಡುವಂತೆ ಅಲವತ್ತುಕೊಂಡಳು.
ಬಂಗಾರಪ್ಪ ಶಿಕ್ಷಣ ಇಲಾಖೆಗೆ ಅದೇಶ ನೀಡಿ ಮೊಮ್ಮಗನಿಗೆ ಅನ್ನದ ದಾರಿ ಮಾಡಿ ಕೊಟ್ಟರು. ಇವತ್ತಿಗೂ ಆತ ಕುಮಟಾದಲ್ಲಿ ಮಾಸ್ತರನಾಗಿದ್ದಾನೆ.
(ಆ ಶಿಕ್ಷಕ ಎಲ್ಲೂ ಹೇಳಿಕೊಳ್ಳದೇ ಇರುವುದರಿಂದ ನಾನಿಲ್ಲಿ ಆತನ ಹೆಸರು ಪ್ರಸ್ತಾಪಿಸಿಲ್ಲ)
ಬಂಗಾರಪ್ಪ ಕುರಿತಂತೆ ಇಂಥ ನೂರಾರು ಉದಾಹರಣೆಗಳಿವೆ.
ಬಂಗಾರಪ್ಪ ಕೇವಲ ಈಡಿಗರ ನಾಯಕ ಅಂತ ತಪ್ಪು ಸಂದೇಶ ರವಾನೆಯಾಗುವಂತೆ ವ್ಯವಸ್ಥಿತವಾಗಿ ಸಂಚು ರೂಪಿಸಿದರು. ಬಂಗಾರಪ್ಪ ಎಂದಿಗೂ ತಮ್ಮ ಜಾತ್ಯತೀತ ನಿಲುವಿಗೆ ಬದ್ಧರಾಗಿದ್ದರು. ಆದರೆ ಬಂಗಾರಪ್ಪ ಅವರಿಂದ ಉಪಕಾರ ಪಡೆದವರೇ ಬಾಯಲ್ಲಿ ಅವಲಕ್ಕಿ ಹಾಕಿಕೊಂಡು ಕೂತರೆ ಯಾರು ಏನು ಮಾಡಲು ಸಾಧ್ಯ?
ನಾನೀಗ ಹೇಳಲು ಹೊರಟ ಕಾರಣ ಬೇರೆಯಿದೆ. ಪ್ರತಿ ವರ್ಷ ಬಂಗಾರಪ್ಪ ಅವರ ಹುಟ್ಟುಹಬ್ಬದಂದು ನಾವೆಲ್ಲ ವಾಟ್ಸಾಪ್ , ಫೇಸ್ ಬುಕ್ ಗಳಲ್ಲಿ
ಆ ಚೇತನಕ್ಕೆ ಶುಭಾಶಯ ಹೇಳಿ ಖುಷಿಪಡುತ್ತೇವೆ, ಅಭಿಮಾನ ಪಡುತ್ತೇವೆ.
ಬಂಗಾರಪ್ಪ ಅವರ ಹೆಸರಿನಲ್ಲಿ ಒಂದು ಪ್ರತಿಷ್ಠಾನ ಈವರೆಗೂ ಇಲ್ಲ. ಉತ್ತರ ಕನ್ನಡದಲ್ಲೇ ಅವರ ಹೆಸರಿನಲ್ಲಿ ಒಂದು ಪ್ರತಿಷ್ಠಾನವನ್ನು ಯಾಕೆ ಆರಂಭಿಸಬಾರದು ? ಆ ಪ್ರತಿಷ್ಠಾನದ ಅಡಿ ಪ್ರತಿವರ್ಷ ಒಂದು ವಿಶಿಷ್ಠವಾದ, ಅರ್ಥಪೂರ್ಣವಾದ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ವೇದಿಕೆಯಲ್ಲಿ ಬಂಗಾರಪ್ಪ ಅವರ ಬಗ್ಗೆ ಹೆಚ್ಚಿನ ಬಣ್ಣನೆ ಇರದೇ ಕೃಷಿ, ಸಾಮಾಜಿಕ ನ್ಯಾಯ, ಯುವ ಸಮಯದಾಯದ ಸವಾಲು, ಗ್ರಾಮೀಣಾಭಿವೃದ್ಧಿ ಇಂಥ ಸಂಗತಿಗಳ ಬಗ್ಗೆ ತಜ್ಞರಿಂದ ವಿಚಾರ ಗೋಷ್ಠಿ, ಸಂವಾದ ಇಡಬೇಕು.
ವರ್ಷಕ್ಕೊಂದು ಕಾರ್ಯಕ್ರಮ ಮಾಡಿ ಕೈ ತೊಳೆದುಕೊಳ್ಳದೇ ವರ್ಷದುದ್ದಕ್ಕೂ ಶಿವಮೊಗ್ಗ, ಉತ್ತರ ಕನ್ನಡ, ಬೆಂಗಳೂರು ಜಿಲ್ಲೆಯ ಬೇರೆ ಬೇರೆ ಸ್ಥಳಗಳಲ್ಲಿ ಪುಟ್ಟ ಪುಟ್ಟ ಕಾರ್ಯಕ್ರಮ ಮಾಡಬೇಕು. ಶಾಲಾ ಕಾಲೇಜು ಮಕ್ಕಳಿಗೆ ಬಂಗಾರಪ್ಪ ಅವರ ಸಾಮಾಜಿಕ ನ್ಯಾಯ, ಕೃಷಿ ಕಾಳಜಿ, ಶಿಕ್ಷಣ ಕಾಳಜಿ, ಸಾಹಿತ್ಯದ ತುಡಿತ, ಸಂಗೀತಾಸಕ್ತಿ , ಮುಖ್ಯಮಂತ್ರಿಯಾಗಿ ಬಂಗಾರಪ್ಪ ಅವರ ದೂರದೃಷ್ಟಿ , ಗೃಹ ಸಚಿವರಾಗಿ ಬಂಗಾರಪ್ಪ, ಲೋಕೋಪಯೋಗಿ ಸಚಿವರಾಗಿ ಬಂಗಾರಪ್ಪ, ಕೃಷಿ ಸಚಿವರಾಗಿ ಬಂಗಾರಪ್ಪ, ಸಂಸದರಾಗಿ ಬಂಗಾರಪ್ಪ…. ಹೀಗೆ ವಿವಿಧ ವಿಷಯವನ್ನಿಟ್ಟುಕೊಂಡು ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಇಡಬೇಕು..
ಬಂಗಾರಪ್ಪ ಹೆಸರಿನಲ್ಲಿ ಪ್ರಶಸ್ತಿ :
ಬಂಗಾರಪ್ಪ ಹೆಸರಿನಲ್ಲಿ ಜಾತ್ಯತೀತ ನೆಲೆಯನ್ನು ಗಮನದಲ್ಲಿಟ್ಟುಕೊಂಡು ಒಂದು ಪ್ರಶಸ್ತಿ ನೀಡಬೇಕು..ಪ್ರಶಸ್ತಿ ಮೊತ್ತವೇ ಒಂದು ಲಕ್ಷ ರೂ. ಮೇಲ್ಪಟ್ಟಿರಬೇಕು. ಐದು ಲಕ್ಷವಾದರೆ ಇನ್ನೂ ಒಳ್ಳೆಯದು. ಬಂಗಾರಪ್ಪ ಅವರ ಘನತೆಗೆ ತಕ್ಕಂತೆ ಪ್ರಶಸ್ತಿಯ ಚೌಕಟ್ಟು ಇರಬೇಕು. ರಾಜ್ಯಮಟ್ಟದಲ್ಲಿ ನೀಡಬೇಕಾದ ಈ ಪ್ರಶಸ್ತಿ ಸಾಮಾಜಿಕ ನ್ಯಾಯಕ್ಕಾಗಿ ದುಡಿದ ಓರ್ವ ಮಹನೀಯರಿಗೆ ‘ಎಸ್.ಬಂಗಾರಪ್ಪ ಪ್ರಶಸ್ತಿ’ ನೀಡುವಂತಾಗಬೇಕು. ಮತ್ತು ಈ ಪ್ರಶಸ್ತಿ ಪಾರರ್ಶಕವಾಗಿ ಕೊಡಬೇಕಾದ ಜವಾಬ್ದಾರಿ ಪ್ರತಿಷ್ಠಾನದ್ದು. ಆಯ್ಕೆ ಸಮಿತಿಯ ಮೂಲಕವೇ ಪ್ರಶಸ್ತಿ ಪುರಸ್ಕೃತರನ್ನು ಗುರುತಿಸಬೇಕು..
ನೆನಪಿಡಿ : ಈ ಪ್ರಶಸ್ತಿ ಪ್ರದಾನ ಪ್ರಕ್ರಿಯೆ ಯಾವುದೇ ಕಾರಣಕ್ಕೂ ಬಂಗಾರಪ್ಪ ಅವರ ವ್ಯಕ್ತಿತ್ವಕ್ಕೆ ಕಳಂಕ ಆಗಬಾರದು..ಪ್ರಶಸ್ತಿ ಆಯ್ಕೆಯಲ್ಲಿ ವಶೀಲಿ ಪ್ರಭಾವ ಇರದಂತೆ ಕಟ್ಟೆಚ್ಚರ ವಹಿಸಬೇಕು.
ಸಾಧ್ಯವಾದರೆ ಬಂಗಾರಪ್ಪ ಪ್ರತಿಷ್ಠಾನದವರು ಪ್ರಯತ್ನಪಟ್ಟು ಸ್ಥಳೀಯ ಆಡಳಿತದ ಸಹಕಾರದೊಂದಿಗೆ ಶಿರಸಿ ಅಥವಾ ಕುಮಟಾ ಅಥವಾ ಕಾರವಾರದಲ್ಲಿ ಬಂಗಾರಪ್ಪ ಸರ್ಕಲ್ ಅಥವಾ ಉದ್ಯಾನವನ ನಿರ್ಮಿಸಿ ಅಲ್ಲಿ ಬಂಗಾರಪ್ಪ ಪುತ್ಥಳಿ ಆರಂಭಿಸಬೇಕು..
ಇನ್ನೆರಡು ಅನಿಸಿಕೆ :
1) ‘ಎಸ್. ಬಂಗಾರಪ್ಪ ಪ್ರತಿಷ್ಠಾನ’ ದಲ್ಲಿ ಬಂಗಾರಪ್ಪ ಕುಟುಂಬದವರು ಇರದಿದ್ದರೇ ಚಂದ. ಪ್ರತಿಷ್ಠಾನಕ್ಕೆ ಅವರ ಪ್ರೀತಿಯ ಬೆಂಬಲ, ಸಲಹೆ ಪಡೆಯಬಹುದು. ಪ್ರತಿಷ್ಠಾನದ ಕಾರ್ಯಕ್ರಮಕ್ಕೆ ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ, ಗೀತಾ ಶಿವರಾಜಕುಮಾರ್,ಭೀಮಣ್ಣ ನಾಯ್ಕ ಸಹೋದರರಿಗೆ ಗೌರವಪೂರ್ವಕವಾಗಿ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಬೇಕು. ಮಹತ್ವದ ಕಾರ್ಯಕ್ರಮ ವಾಗಿದ್ದಲ್ಲಿ ಅವರುಗಳನ್ನು ವೇದಿಕೆಗೂ ಕರೆಯಬಹುದು ಅಥವಾ ವೇದಿಕೆ ಎದುರು ಗಣ್ಯರ ಸಾಲಿನಲ್ಲಿ ಅವರಿಗೆಲ್ಲ ಆಸನ ವ್ಯವಸ್ಥೆ ಮಾಡಿ ಗೌರವದಿಂದ ಬರಮಾಡಿಕೊಳ್ಳಬೇಕು.
2) ‘ಎಸ್.ಬಂಗಾರಪ್ಪ ಪ್ರತಿಷ್ಠಾನ’ ಜಾತಿಯ ನೆಲೆಯ ಪ್ರತಿಷ್ಠಾನವಾಗದೇ ಜಾತ್ಯತೀತವಾಗಿ ರಚಿತವಾಗಿರಬೇಕು. ಅಂದಾಗ ಮಾತ್ರ ಬಂಗಾರಪ್ಪ ಅವರಿಗೆ ಗೌರವಕೊಟ್ಟಂತ್ತಾಗುತ್ತದೆ.
ಇವೆಲ್ಲ ನನ್ನ ಸಲಹೆ ಅಷ್ಟೇ. 🙏🏻🌹
-ಅರವಿಂದ ಕರ್ಕಿಕೋಡಿ

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
