

ಅಪರಿಚಿತ ವ್ಯಕ್ತಿಯ ಕೊಲೆ ರಹಸ್ಯ ಭೇದಿಸಿದ ಮುಂಡಗೋಡ ಪೊಲೀಸರು
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಕಾತೂರು ಅರಣ್ಯ ಪ್ರದೇಶದಲ್ಲಿ ಈ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಫಾರೆಸ್ಟ್ ಗಾರ್ಡ್ ನವರು ಅರಣ್ಯ ಬೀಟ್ ಸಂಚರಣೆಗೆ ಹೋದಾಗ ದುರ್ವಾಸನೆ ಬಂದ ಕಡೆಗೆ ಹೋಗಿ ನೋಡಲಾಗಿ ಕಾಡು ಪ್ರಾಣಿಗಳು ಅರೆಬರೆ ತಿಂದ ಮಾನವನ ದೇಹದ ಭಾಗಗಳು ಅಲ್ಲಲ್ಲಿ ಬಿದ್ದಿದ್ದನ್ನು ಕಂಡಿದ್ದು ಯಾರೋ ವ್ಯಕ್ತಿಯನ್ನು ಕೊಲೆ ಮಾಡಿ ಅಲ್ಲಿ ತಂದು ಹಾಕಿರಬಹುದೆಂದು ಸಂಶಯಗೊಂಡು ಅದಕ್ಕೆ ಸಂಬಂಧಿಸಿದಂತೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್.ಪಿ.ಕಾರವಾರ ರವರು ಅಪರಿಚಿತ ಶವಗಳ ಪತ್ತೆ ಹಾಗೂ ಕೊಲೆ ಪ್ರಕರಣಗಳನ್ನು ಬೇದಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಪಡೆಯನ್ನು ರಚಿಸಿ ಕಾರ್ಯ ನಿರತರಾಗುವಂತೆ ತಿಳಿಸಿದ ಮೇರೆಗೆ ಮುಂಡಗೋಡ ಪೊಲೀಸರು ಈ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವಾಗಿ ಮೃತನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ. ಕೊಲೆಗೀಡಾದ ವ್ಯಕ್ತಿಯನ್ನು ಗುರುತಿಸುವ ಯಾವುದೇ ಕುರುಹುಗಳು ಇರದೇ ಇದ್ದುದ್ದರಿಂದ ಕೊಲೆಯಾದ ವ್ಯಕ್ತಿ ಯಾರೆಂದು ಪತ್ತೆ ಹಚ್ಚುವುದು ಕ್ಲಿಷ್ಟಕರವಾಗಿತ್ತು. ಕೊಲೆಗೀಡಾದ ವ್ಯಕ್ತಿಯನ್ನು ಪತ್ತೆ ಹಚ್ಚಲು ರಾಜ್ಯದ ಎಲ್ಲಾ ಠಾಣೆಗಳಲ್ಲಿ ಕಾಣೆಯಾದ ಪ್ರಕರಣ ದಾಖಲಾದ ಬಗ್ಗೆ ಪರಿಶೀಲಿಸಲು ಈ ಶವಕ್ಕೆ ಹೋಲುವಂತಹ ಯಾವ ಲಕ್ಷಣಗಳು ಕಂಡುಬಂದಿರಲಿಲ್ಲ, ಕಾರಣ ಮೃತ ವ್ಯಕ್ತಿಯನ್ನು ಪತ್ತೆ ಹಚ್ಚುವುದೇ ಒಂದು ದೊಡ್ಡ ಸವಾಲಾಗಿತ್ತು. ಮುಂಡಗೋಡ ಪೊಲೀಸ ನಿರೀಕ್ಷಕರಾದ ಪ್ರಭುಗೌಡ ಡಿ.ಕೆ ಹಾಗೂ ಅವರ ಸಿಬ್ಬಂದಿಯವರು ಹೆಚ್ಚಿನ ಪ್ರಯತ್ನ ಮಾಡಿ ಸಂಗ್ರಹಿಸಿದ ಮಾಹಿತಿಯ ಆಧಾರದ ಫಲವಾಗಿ ಕೊಲೆಯಾದ ವ್ಯಕ್ತಿಯು ಹುಬ್ಬಳ್ಳಿಯ ನವನಗರದ ನಿವಾಸಿ ವರದರಾಜ ಶ್ರೀನಿವಾಸ ನಾಯಕ ವಯಾ 32 ವರ್ಷ ಅಂತಾ ತಿಳಿದು ಬಂದ ಕೂಡಲೇ ಯಾರು ಕೊಲೆ ಮಾಡಿರಬಹುದೆಂದು ತೀವ್ರತರಹದ ಮಾಹಿತಿ ಸಂಗ್ರಹಿಸಲಾಗಿ ಕೊಲೆ ಮಾಡಿದ ಪ್ರಮುಖ ಆರೋಪಿ ಅಭೀಷೇಕ ಶೇಟ ಸಾ|| ಉಣಕಲ್ ಇವನು ಮೃತ ವರದರಾಜನ ತಾಯಿಯ ತಂಗಿಯ ಮಗನಾಗಿದ್ದು ತನ್ನೊಂದಿಗೆ ತನ್ನ ಸ್ನೇಹಿತರಾದ ಸುರೇಶ ತಂದೆ ನೂರಪ್ಪ ಲಮಾಣಿ ಹಾಗೂ ರಾಮಕುಮಾರ ತಂದೆ ಕೃಷ್ಣ ತಾಟಿಸಮ್ಲಾ ಸಾ|| ಇಬ್ಬರೂ ತಾಜ್ ನಗರ ಉಣಕಲ್, ಹುಬ್ಬಳ್ಳಿರವರೊಂದಿಗೆ ಸೇರಿಕೊಂಡು ವರದರಾಜನನ್ನು ಕೊಲೆ ಮಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದ್ದು, ಆರೋಪಿತರನ್ನು ದಸ್ತಗಿರಿ ಮಾಡಲಾಗಿದೆ.
ಈ ಪ್ರಕರಣದ ವಿಚಾರಣೆಯಲ್ಲಿ ತಿಳಿದುಬಂದಿದ್ದೆನೇಂದರೆ ಆರೋಪಿ ಅಭೀಷೇಕ ಇವನು ಆಸ್ತಿಯ ಸಂಬ
ಂಧ ಕೊಲೆ ಮಾಡಿದಲ್ಲಿ ತನಗೆ ಕೊಲೆಯಾದ ವ್ಯಕ್ತಿಯ ಎಲ್ಲಾ ಆಸ್ತಿ ತನಗೆ ಆಗುತ್ತದೆ. ಅಂತಾ ತಿಳಿದು ಉಳಿದ ಆರೋಪಿತರ ಸಹಾಯ ಪಡೆದು ಶಿರಸಿ ಕಡೆಗೆ ಪ್ರವಾಸಕ್ಕೆ ಹೋಗೋಣ ಅಂತಾ ನಂಬಿಸಿ ಕರೆದುಕೊಂಡು ಬಂದು ಸರಾಯಿ ಕುಡಿಸಿ ಕಾತೂರ-ಉಮ್ಮಚಗಿ ರಸ್ತೆ ನಾಗನೂರಿಗೆ ಹೋಗುವ ಅರಣ್ಯದ ದಾರಿಯಲ್ಲಿ ಕಾರನ್ನು ನಿಲ್ಲಿಸಿ ಆತನೊಂದಿಗೆ ಜಗಳ ಮಾಡಿ ಆತನ ಕುತ್ತಿಗೆಗೆ ಪ್ಯಾಂಟಿಗೆ ಹಾಕುವ ಬೇಲ್ಟಿನಿಂದ ಆತನ ಮುಂಭಾಗದಿಂದ ಹಿಂಭಾಗಕ್ಕೆ ಬಿಗಿಯಾಗಿ ಎಳೆದು ಕೊಲೆ ಮಾಡಿರುತ್ತಾರೆ.
ಆ ಕಾಲಕ್ಕೆ ಕೊಲೆಗೀಡಾದ ವ್ಯಕ್ತಿಯ ಕಾಲು ಬಡಿತದಿಂದ ಕಾರಿನ ಚಾವಿ ಮುರಿದು ಹೋಗಿದ್ದರಿಂದ ಆರೋಪಿ ಬಸವರಾಜ ಈತನ ಸಹಾಯದಿಂದ ಮೋಟಾರ ಸೈಕಲ್ ಮೇಲಾಗಿ ಶವವನ್ನು ಕಾಡಿನಲ್ಲಿ ಸಾಗಿಸಿ ಕಾಡಿನಲ್ಲಿ ಪ್ರಾಣಿಗಳಿಗೆ ನೀರು ಕುಡಿಯಲು ನಿರ್ಮಿಸಿದ ಹೊಂಡದಲ್ಲಿ ಗುದ್ದಲಿಯಿಂದ ತಗ್ಗು ತೆಗೆದು ಶವವನ್ನು ಮುಚ್ಚಿರುತ್ತಾರೆ. ಆರೋಪಿತರು ಮೃತನು ತನ್ನ ಸಂಬಂಧಿಕರ ಊರಲ್ಲಿ ಇರುತ್ತಾನೆ ಅಂತಾ ಸುಳ್ಳು ಸುದ್ದಿ ಹಬ್ಬಿಸಿ ಅವನು ಕಾಣೆಯಾದ ಬಗ್ಗೆ ಯಾವ ಠಾಣೆಯಲ್ಲಿಯೂ ಪ್ರಕರಣ ದಾಖಲಾಗದಂತೆ ನೋಡಿಕೊಂಡಿದ್ದರು. ಸಾಕ್ಷಿ ಸಿಗಬಾರದೆಂದು ಮೃತನು ಉಪಯೋಗಿಸುತ್ತಿದ್ದ ಮೋಬೈಲ್ ನ್ನು ಗೋವಾದ ಸಮುದ್ರದಲ್ಲಿ ಒಗೆದು ಬಂದಿದ್ದರು.ಕೃತ್ಯಕ್ಕೆ ಬಳಸಿದ ಕಾರನ್ನು ಜಪ್ತು ಪಡಿಸಿಕೊಳ್ಳಲಾಗಿದೆ. ಈ ಪ್ರಕರಣವನ್ನು ಭೇದಿಸಲು ಕಾರವಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಶಿವ ಪ್ರಕಾಶ್ ದೇವರಾಜು. ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎಸ್. ಬದರಿನಾಥ, ಮತ್ತು ಶಿರಸಿ ಡಿ.ಎಸ್.ಪಿ. ಶ್ರೀ ಜಿ. ಟಿ. ನಾಯಕ ರವರು ಮಾರ್ಗದರ್ಶನ ನೀಡಿದ್ದು ಮುಂಡಗೋಡ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಪ್ರಭುಗೌಡ. ಡಿ. ಕೆ, ಪಿ.ಎಸ್.ಐ.ಶ್ರೀ ಬಸವರಾಜ ಮಬನೂರ, ಮಹಿಳಾ ಪಿ.ಎಸ್.ಐ. ಶ್ರೀಮತಿ ಮೋಹಿನಿ ಶೆಟ್ಟಿ, ಎ.ಎಸ್.ಐ. ಶ್ರೀ ಅಶೋಕ ರಾಠೋಡ, ಹಾಗೂ ಸಿಬ್ಬಂದಿಯವರಾದ ಶರತ ದೇವಳ್ಳಿ, ಭಗವಾನ ಗಾಂವಕರ, ವಿನೋದಕುಮಾರ, ಜಿ. ಬಿ., ರಾಘವೇಂದ್ರ ನಾಯ್ಕ, ಅರುಣ ಬಾಗೇವಾಡಿ, ಕುಮಾರ ಬಣಕಾರ, ವಿವೇಕ ಪಟಗಾರ, ತಿರುಪತಿ ಚೌಡಣ್ಣನವರ, ರಾಘವೇಂದ್ರ ಪಟಗಾರ, ಹಾಗೂ ಮಾನ್ಯ ಎಸ್.ಪಿ.ಸಾಹೇಬರ ಕಛೇರಿಯ ಸಿ.ಡಿ.ಆರ್ ವಿಭಾಗದ ತಾಂತ್ರಿಕ ಸಿಬ್ಬಂದಿಯವರಾದ ಸುಧೀರ ಮಡಿವಾಳ, ಅಣ್ಣಪ್ಪ ಬುಡಗೇರಿ, ರಮೇಶ ನಾಯ್ಕ ಹಾಗೂ ಚಾಲಕರಾದ ನಾಗರಾಜ ಬೇಗಾರ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಕೊಲೆಯ ರಹಸ್ಯವನ್ನು ಭೇದಿಸುವಲ್ಲಿ ಶರತ್ ದೇವಳ್ಳಿ ಇವರು ಪ್ರಮುಖ ಪಾತ್ರ ವಹಿಸಿದ್ದು ಅದರಂತೆ ಅಧಿಕಾರಿ ಹಾಗೂ ಸಿಬ್ಬಂದಿಯವರ ಈ ಕಾರ್ಯವನ್ನು ಮಾನ್ಯ ಕಾರವಾರ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ವಿಶೇಷ ಬಹುಮಾನವನ್ನು ಘೋಷಿಸಿರುತ್ತಾರೆ.




