

ಹುಣಸೂರು ಉಪ ಚುನಾವಣೆಯಲ್ಲಿ ನನ್ನ ಸೋಲಿಗೆ ಸಿ.ಪಿ.ಯೋಗೀಶ್ವರ್ ಹಾಗೂ ಎನ್.ಆರ್.ಸಂತೋಷ್ ಕಾರಣವೆಂದು ಮಾಜಿ ಸಚಿವ ಎಚ್.ವಿಶ್ವನಾಥ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರು: ಹುಣಸೂರು ಉಪ ಚುನಾವಣೆಯಲ್ಲಿ ನನ್ನ ಸೋಲಿಗೆ ಸಿ.ಪಿ.ಯೋಗೀಶ್ವರ್ ಹಾಗೂ ಎನ್.ಆರ್.ಸಂತೋಷ್ ಕಾರಣವೆಂದು ಮಾಜಿ ಸಚಿವ ಎಚ್.ವಿಶ್ವನಾಥ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಶಾಸಕರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಣಸೂರು ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಹಾಗೂ ಪಕ್ಷದಿಂದ ಚುನಾವಣಾ ಖರ್ಚಿಗಾಗಿ ನೀಡಿದ ದೊಡ್ಡಮಟ್ಟದ ಹಣವನ್ನು ಸಿ.ಪಿ. ಯೋಗೀಶ್ವರ್ ಹಾಗೂ ಎನ್.ಆರ್ ಸಂತೋಷ್ ಲಪಟಾಯಿಸಿದರು.
ಉಪ ಚುನಾವಣೆ ಅಭ್ಯರ್ಥಿ ಘೋಷಣೆಗೂ ಮುನ್ನವೇ ತಾನೆ ಅಭ್ಯರ್ಥಿ ಎಂದು ಎಲ್ಲೆಡೆ ಫ್ಲೆಕ್, ಬ್ಯಾನರ್ ಹಾಕಿಹೊಂಡು ಪ್ರಚಾರ ಮಾಡಿದರು. ಸೀರೆ, ಕುಕ್ಕರ್ ನೀಡಿದರು. ಅದರೂ ಸಹ ಬಹಿರಂಗವಾಗಿಯೇ ನಡೆಸಿ ಸಿಕ್ಕಿಬಿದ್ದರು. ಮಾಧ್ಯಮಗಳಲ್ಲಿಯೂ ಇದು ಭಾರೀ ಸುದ್ದಿಯಾಗಿತ್ತು. ಹೀಗಾಗಿ ನನ್ನ ಸೋಲಿಗೆ ಇದೂ ಕಾರಣವಾಗಿದೆ. ಅಂತಹವರನ್ನು ಮುಖ್ಯಮಂತ್ರಿಯವರು ಮಂತ್ರಿ ಮಾಡುತ್ತೇನೆ ಎಂದು ಹೇಳಿಕೆ ನೀಡಿದರೆ ಹೇಗೆ ಎಂದು ಪ್ರಶ್ನಿಸಿದರು. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೂ ಲಿಖಿತವಾಗಿ ದೂರು ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ನನಗೆ ತುಂಬಾ ಬೇಸರವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಯಾರು ನಮ್ಮಿಂದ ಸಹಾಯ ಪಡೆದುಕೊಂಡು ಸರ್ಕಾರ ರಚನೆ ಮಾಡಿ ಎಲ್ಲ ಅನುಭವಿಸುತ್ತಿದ್ದಾರೋ ಅವರು ನಮ್ಮನ್ನು ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರಲಿಲ್ಲ. ವಿಧಾನ ಪರಿಷತ್ ಸದಸ್ಯತ್ವಕ್ಕೆ ಜೂನ್ ನಲ್ಲಿ ನಡೆದ ಚುನಾವಣೆ ವೇಳೆ ರಾಜ್ಯ ಕೋರ್ ಕಮಿಟಿ ಕಳುಹಿಸಿದ್ದ ಮೊದಲ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಪಟ್ಟಿ ಬಿಡುಗಡೆಯಾದಾಗ ನನ್ನ ಹೆಸರು ಕೈ ಬಿಟ್ಟು ಹೋಗಿತ್ತು. ಇದು ಏನಾಯಿತು ಎಂದು ತಿಳಿಯಲಿಲ್ಲ. ಹಾಗೆ ನೋಡಿದರೆ ಸಂಘಪರಿವಾರದಿಂದ ನನಗೆ ಹೆಚ್ಚು ಸಹಕಾರ ಸಿಕ್ಕಿತ್ತು. ಆದರೆ ಈಗ ಕೋರ್ಟ್ ಗೆ ವಿಷಯ ಹೋದಾಗ ನಮಗೆ ಸಿಗಬೇಕಾದ ಸಹಕಾರ ಸಿಗಲಿಲ್ಲ. ಅಡ್ವೊಕೇಟ್ ಜನರಲ್ ಸರಿಯಾಗಿ ಮಾತನಾಡಿಸಲೂ ಅನಾದರ ತೋರಿಸಿದರು. ಯಾಕೆ ಹೀಗಾಯ್ತು ಅಂತಾ ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆದರೂ ನಾನು ಅದನೆಲ್ಲಾ ಎದುರಿಸಿ ನಿಲ್ಲುತ್ತೇನೆ. ವಿಧಾನ ಪರಿಷತ್ ಶಾಸಕ ಸ್ಥಾನವನ್ನು ಹೈಕೋರ್ಟ್ ಅನರ್ಹ ಮಾಡಿಲ್ಲ. ಹೀಗಾಗಿ ಹೈಕೋರ್ಟ್ ನೀಡಿರುವ ಮಧ್ಯಂತರ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆ. ಹಾಗೆಂದ ಮಾತ್ರಕ್ಕೆ ಸಚಿವ ಸ್ಥಾನಕ್ಕೆ ನಾನು ಕಾಯುತ್ತಿದ್ದೇನೆ ಎಂದಲ್ಲ. ನಾನು ರಾಜಕಾರಣವನ್ನು ವ್ಯವಹಾರವಾಗಿ ತೆಗೆದುಕೊಂಡಿಲ್ಲ ಸಾಂಸ್ಕೃತಿಕ ಹೋರಾಟವಾಗಿ ತೆಗೆದುಕೊಂಡವನು. ಸಚಿವನಾಗಿ ನನ್ನ ಕಾರ್ಯ ವೈಖರಿ ಜನತೆಗೆ ಗೊತ್ತಿದೆ. ಹೈಕೋರ್ಟ್ ತೀರ್ಪು ಕೇವಲ ಸಚಿವ ಸ್ಥಾನಕ್ಕೆ ಸೀಮಿತವಾಗಿದೆ ಆದರೆ ವಿಧಾನಪರಿಷತ್ ಸದಸ್ಯತ್ವ ಸ್ಥಾನ ಅಬಾಧಿತವಾಗಿದೆ. ಎಂಎಲ್ಸಿಯಾಗಿ ಮುಂದುವರೆಯಲು ಕಾನೂನು ಅಡ್ಡಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನಾನು ಸಾ.ರಾ.ಮಹೇಶ್ ಬಗ್ಗೆ ಮಾತನಾಡೋದಿಲ್ಲ. ಆ ಕೊಚ್ಚೆ ಗುಂಡಿಗೆ ಕಲ್ಲೆಸೆದು ನನ್ನ ಶುಭ್ರ ವಸ್ತ್ರಮಲಿನ ಮಾಡಿಕೊಳ್ಳಲು ನಾನು ತಯಾರಿಲ್ಲ ಎಂದರು. ಮಿತ್ರಮಂಡಳಿಯವರು ಈಗಲೂ ನನ್ನ ಜತೆ ಇದ್ದಾರೆ. ನಿನ್ನೆಯೂ ರಮೇಶ್ ಜಾರಕಿಹೊಳಿ, ಆರ್.ಅಶೋಕ್, ಎಸ್‌ಟಿ. ಸೋಮಶೇಖರ್ ಸೇರಿದಂತೆ ಬಹುತೇಕ ಎಲ್ಲರೂ ನನಗೆ ಫೋನ್ ಮಾಡಿ ಬೆಂಬಲ ಸೂಚಿಸಿದ್ದಾರೆ. ಇವತ್ತೂ ಕೂಡ ಸಿಎಂ ಜತೆ ಮಾತನಾಡುತ್ತೇನೆ ಎಂದರು. (kpc)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
