

ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ಕೃಷಿ ಸುಧಾರಣೆ ಕಾಯ್ದೆಗಳನ್ನು ರದ್ದುಪಡಿಸುವಂತೆ ಬಿಗಿಪಟ್ಟು ಹಿಡಿದು ರೈತರು ನಡೆಸುತ್ತಿರುವ ಪ್ರತಿಭಟನೆ 7ನೇ ದಿನಕ್ಕೆ ಕಾಲಿಟ್ಟಿದೆ.

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ಕೃಷಿ ಸುಧಾರಣೆ ಕಾಯ್ದೆಗಳನ್ನು ರದ್ದುಪಡಿಸುವಂತೆ ಬಿಗಿಪಟ್ಟು ಹಿಡಿದು ರೈತರು ನಡೆಸುತ್ತಿರುವ ಪ್ರತಿಭಟನೆ 7ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನಾ ನಿರತ ರೈತರೊಂದಿಗೆ ಕೇಂದ್ರ ಸರ್ಕಾರ ಈ ವರೆಗೂ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲಗೊಂಡಿದ್ದು, ಗುರುವಾರ ಮತ್ತೊಂಂದು ಸುತ್ತಿನ ಸಭೆ ನಡೆಸಲು ಮುಂದಾಗಿದೆ. ಈ ಸಭೆಗೆ ರೈತರ ಸಂಘಟನೆಗಳೂ ಒಪ್ಪಿಗೆ ನೀಡಿವೆ.
ನಿನ್ನೆಯಷ್ಟೇ 35 ಸಂಘಟನೆಗಳ ಪ್ರತಿನಿಧಿಗಳ ಜೊತೆಗೆ ಮಾತುಕತೆ ನಡೆಸಿದ್ದ ಕೇಂದ್ರ ಸಚಿವರು, ರೈತರ ಬೇಡಿಕೆಗಳ ಪರಿಶೀಲನೆಗೆ 5 ಸದಸ್ಯರ ಉನ್ನತ ಸಮಿತಿ ರಚಿಸುವುದಾಗಿ ಹೇಳಿದ್ದರು, ಆದರೆ, ಇದಕ್ಕೆ ರೈತ ಸಂಘಟನೆಗಳು ಒಪ್ಪಿರಲಿಲ್ಲ. ಅಲ್ಲದೆ ಪ್ರತಿಭಟನೆ ಮುಂದುವರೆಸುವುದಾಗಿ ತಿಳಿಸಿದ್ದವು.
ಇದರಂತೆ ರೈತರ ಮನವೊಲಿಕೆ ಪ್ರಯತ್ನವನ್ನು ಮುಂದುವರೆಸಲು ನಿರ್ಧರಿಸಿರುವ ಕೇಂದ್ರ ಸರ್ಕಾರ ಡಿ.3ರ ಗುರುವಾರ ಮತ್ತೊಂದು ಸುತ್ತಿನ ಸಭೆ ನಡೆಸುವುದಾಗಿ ತಿಳಿಸಿದೆ. ಅದಕ್ಕೆ ರೈತ ಸಂಘಟನೆಗಳೂ ಒಪ್ಪಿಕೊಂಡಿವೆ. ಆದರೆ, ಕೃಷಿ ಸುಧಾರಣೆಗೆ ಸಂಬಂಧಿಸಿದ 3 ವಿವಾದಿತ ಕಾಯ್ದೆಗಳನ್ನು ರದ್ದುಪಡಿಸುವವರೆಗೂ ತಮ್ಮ ಪ್ರತಿಭಟನೆ ಮುಂದುವರೆಯಲಿದೆ ಎಂದು ಪುನರುಚ್ಛಾರ ಮಾಡಿವೆ.
ಈ ನಡುವೆ ಇಂದೂ ಕೂಡ ರೈತರ ಸಂಘಟನೆಗಳು ದೆಹಲಿಯ ಗಡಿಭಾಗಗಳಲ್ಲಿ ಪ್ರತಿಭಟನೆಯನ್ನು ಮುಂದುವರೆಸಿದ್ದು, ಪ್ರತಿಭಟನಾನಿರತ ರೈತರು ದೆಹಲಿ ಮತ್ತು ಉತ್ತರಪ್ರದೇಶ ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳನ್ನು ಬಂದ್ ಮಾಡಿದ್ದಾರೆಂದು ತಿಳಿದುಬಂದಿದೆ.
ಮತ್ತಷ್ಟು ಓದು: ರೈತರ 'ದೆಹಲಿ ಚಲೋ' ಪ್ರತಿಭಟನೆಗೆ ಬೆಂಬಲ; ಹೊಸಪೇಟೆ-ಬಳ್ಳಾರಿ ಹೆದ್ದಾರಿಯಲ್ಲಿ ರಸ್ತೆ ತಡೆದು ಪ್ರತಿಭಟನೆ
ಪಶ್ಚಿಮ ಉತ್ತರಪ್ರದೇಶದ ವಿವಿಧ ಜಿಲ್ಲೆಗಳ ರೈತರು ದೆಹಲಿ-ನೊಯ್ಡಾ ಗಡಿ ಭಾಗದಲ್ಲಿ ಜಮಾಯಿಸಿದ್ದು, ದೆಹಲಿಯಲ್ಲಿ ಹರಿಯಾಣ-ಪಂಜಾಬ್ ರೈತರು ಆಂಭಿಸಲಿರುವ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ರಾಜಧಾನಿಯತದ್ತ ಹೊರಟಿದ್ದಾರೆ. ಇದರಿಂದ ಉತ್ತರ ಪ್ರದೇಶವನ್ನು ರಾಷ್ಟ್ರ ರಾಜಧಾನಿಯೊಂದಿಗೆ ಸಂಪರ್ಕಿಸುವ ಪ್ರಮುಖ ಮಾರ್ಗವನ್ನು ಮುಚ್ಚಲಾಗಿದೆ.
ರಾಷ್ಟ್ರ ರಾಜಧಾನಿಗೆ ಪ್ರಯಾಣಿಸುವ ಪ್ರಯಾಣಿಕರು ಚಿಲ್ಲಾ ಮಾರ್ಗ ಬಳಸದೆ ದೆಹಲಿ-ನೋಯ್ಡಾ ಡೈರೆಕ್ಟ್ (ಡಿಎನ್‌ಡಿ) ಅಥವಾ ಕಲಿಂದಿ ಕುಂಜ್ ರಸ್ತೆಯನ್ನು ಬಳಸುವಂತೆ ದೆಹಲಿ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.
ಗೌತಮ್ ಬುದ್ಧ ದ್ವಾರ ಬಳಿ ರೈತರು ಪ್ರತಿಭಟನೆ ನಡೆಸುತ್ತಿರುವುದರಿಂದ ನೋಯ್ಡಾ-ಲಿಂಕ್ ರಸ್ತೆಯ ಚಿಲ್ಲಾ ಗಡಿಯನ್ನು ಮುಚ್ಚಲಾಗಿದೆ. ನೋಯ್ಡಾಕ್ಕೆ ಹೋಗುವವರು ನೋಯ್ಡಾ-ಲಿಂಕ್ ರಸ್ತೆ ಬಳಸದೆ ನೋಯ್ಡಾಕ್ಕೆ ಬದಲಾಗಿ ಎನ್ ಎಚ್ -24 ಮತ್ತು ಡಿಎನ್ ಡಿ ಬಳಸುವಂತೆ ಜನರಿಗೆ ಸೂಚಿಸಲಾಗಿದೆ ಎಂದು ದೆಹಲಿ ಸಂಚಾರ ಪೊಲೀಸರು ಟ್ವೀಟ್ ಮೂಲಕ ತಿಳಿಸಿದ್ದಾರೆ. (kpc)


