

ಹೊಸವರ್ಷದ ದಿನ ಮನೆಯಲ್ಲಿ ಊಟಕ್ಕೆ ಕೂತಿದ್ದಾಗ ಆಕಸ್ಮಿಕವಾಗಿ ಬಿದ್ದು ತಲೆಗೆ ಬಲವಾದ ಪೆಟ್ಟುಬಿದ್ದು ಸ್ಥಳದಲ್ಲೇ ಮೃತರಾದ ವ್ಯಕ್ತಿಯೊಬ್ಬರ ಸಾವಿನ ವಿಷಯ ಒಂದು ದಿನದ ನಂತರ ಬಹಿರಂಗವಾದ ಪ್ರಕರಣ ಸಿದ್ಧಾಪುರ ತಾಲೂಕಿನ ದೊಡ್ಗದ್ದೆಯಲ್ಲಿ ನಡೆದಿದೆ.
ಮೃತ ವಿಷ್ಣುವರ್ಧನ್ ನಾಯ್ಕ ತಂದೆ ರವಿ ನಾಯ್ಕ ದೊಡ್ಗದ್ದೆಯವರಾಗಿದ್ದು ಊರ ಹೊರಗೆ ತೋಟದಮನೆಯಲ್ಲಿ ವಾಸವಿರುತ್ತಾರೆ. ತಮ್ಮ ಹಳೆಯ ಮನೆಯಲ್ಲಿ ಅವಿವಾಹಿತ ಮಗ ಜಮೀನುಮನೆ ನೋಡಿಕೊಳ್ಳಲು ಅಲ್ಲೇ ಉಳಿದು ತಮ್ಮ ಕುಟುಂಬ ವಾಸವಿದ್ದ ಸಮೀಪದ ಮನೆಗೆ ಹೋಗಿಬರುತ್ತಿರುತ್ತಾರೆ. ಎಂದಿನಂತೆ ಹೊಸವರ್ಷ ಕೂಡಾ ವಿಷ್ಣು ಮನೆಯಿಂದ ಊಟ ಕಟ್ಟಿಸಿಕೊಂಡು ಬಂದು ಹಳೆಯ ಮನೆಯಲ್ಲಿ ಇರುತ್ತಾರೆ.
ರಾತ್ರಿ ಊಟದ ಸಮಯಕ್ಕೆ ಬುತ್ತಿ ಬಿಚ್ಚಿ ತಿನ್ನುವ ಸಮಯದಲ್ಲಿ ಡೈನಿಂಗ್ ಟೇಬಲ್ ಗೆ ಹಾಕಿಕೊಂಡ ಪ್ಲಾಸ್ಟಿಕ್ ಕುರ್ಚಿ ಜಾರಿ ಪಕ್ಕದಲ್ಲಿದ್ದ ಕಲ್ಲಿನ ಹಲಿಗೆಗೆ ವಿಷ್ಣುವಿನ ತಲೆ ಜಜ್ಜಿ ಕಲ್ಲೂ ತುಂಡಾಗುತ್ತದೆ. ವಿಷ್ಣುವಿನ ತಲೆಯಿಂದ ರಕ್ತಸ್ರಾವವಾಗಿ ಆತ ಅಲ್ಲೇ ಸಾಯುತ್ತಾನೆ. ಮಾರನೇ ದಿನ ಮಗಬರಲಿಲ್ಲ ಎಂದು ತಂದೆ ನೋಡಲು ಹೋದಾಗ ಹಚ್ಚಿಟ್ಟಿದ್ದ ಟಿ.ವಿ., ಬಿಚ್ಚಿಟ್ಟಿದ್ದ ಊಟದ ಬುತ್ತಿಯೊಂದಿಗೆ ರಕ್ತಸ್ರಾವವಾದ ವಿಷ್ಣುಶವ ಕಂಡು ದಿಗ್ಭ್ರಮೆಯಾಗುತ್ತದೆ.
ಈ ಬಗ್ಗೆ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ. ಈ ಅಸಹಜ, ಆಕಸ್ಮಿಕ ಸಾವಿನ ವಿಚಾರ ತಿಳಿದ ಜನತೆ ವಿಷಾದ ವ್ಯಕ್ತಪಡಿಸಿ, ಮೃತ ವಿಷ್ಣುವಿನ ಸಹೋದರ, ತಂದೆ-ತಾಯಿಯವರಿಗೆ ಸಾಂತ್ವನ ಹೇಳಿದ್ದಾರೆ. ರಾತ್ರಿಊಟದ ವೇಳೆ ಈ ಘಟನೆ ನಡೆದಿರುವುದರಿಂದ ಸಾವಿನ ವಿಚಾರ ತಿಳಿಯಲು ಶನಿವಾರ ಮಧ್ಯಾಹ್ನದ ವರೆಗೆ ಸಮಯ ಹಿಡಿದಿದೆ. ನಂತರ ಪೊಲೀಸ್ ಪ್ರಕ್ರೀಯೆಗಳ ನಂತರ ರವಿವಾರ ಬೆಳಿಗ್ಗೆ ಶವಸಂಸ್ಕಾರ ನಡೆದಿದೆ.






