ವಿಸ್ಮಯ
ಎಲ್ಲಿಯದೋ ಕಲ್ಲು, ಯಾರದೋ ಉಳಿ ಕಲೆತು
ಕಟಿದು ಒಂದಾದ ಮೇಲಲ್ಲವೆ?
ಬೆರಗಾಗಿ
ನಾವದಕೆ ವಿರಾಗಿ, ಬಾಹುಬಲಿ
ಎಂದು ಹೆಸರಿಟ್ಟಿದ್ದು.
ಆಳ ಕಡಲಿನ ಲವಣ,
ದೂರದ ಸೂರ್ಯನ ಕಿರಣ
ಕಲೆತು ಬಡಿದಾಡಿ ಗಾಳಿ- ಬಿಸಿಗೆ ತಾಗಿ
ರುಚಿಯ ಮೂಲವಾದ ಮೇಲಲ್ಲವೆ?
ನಾವದಕೆ ಉಪ್ಪೆಂದು ನಾಮಕರಣ ಮಾಡಿದ್ದು
ಉತ್ತಿ-ಬಿತ್ತಿ ತಿಂಗಳು ಕಳೆದು
ಮಳೆ-ಬಿಸಿಲು, ಗಾಳಿಗೆ ತಲೆಯೊಡ್ಡಿ
ವರ್ಷದೊಳಗೆ ಸಸಿಯ ತುದಿಗೆ ಬಂದ
ಹೂವಿನ ಮಗನಲ್ಲವೆ ನಮ್ಮ ಭತ್ತ-ಅಕ್ಕಿ?
ಭೂಮಿಯ ಚರ್ಮವನ್ನೇ ಸೀಳಿ
ಅದರ ಅಂಗವನ್ನೇ ಕಡಿದು,
ಅಡಿಪಾಯ ಮೇಲ್ಮೈ ಆಗಿ ಬಸಿದು
ಅದಕ್ಕೇ ರಸಾಯನ, ತಂಪು ಅಮೃತವ ಎರೆದು
ರೂಪ ಬಂದ ಮೇಲಲ್ಲವೆ?
ನಾವು ಅದಕೆ ರಸ್ತೆಯೆಂದು ಕರೆದದ್ದು.
ಲೋಕ ಹೀಗೂ ಉಂಟು, ಹಾಗೂ ಉಂಟು
ಅಂಕೋ? ಡೊಂಕೊ?
ಉಪ್ಪು,ಹುಳಿ-ಒಗರು.
ಸಾಧಿಸುವವನಿಗೆ ಲೋಕವೇ ಬಯಲು
ಮೇಲು-ಕೀಳಿನ ಮಲಿನ ಸಾಗಿ
ನಾ ಶ್ರೇಷ್ಠ, ನೀ ಕನಿಷ್ಠ
ಎಲ್ಲಾ ಕನಿಷ್ಟ ಮತಿಗಳ ಸೃಷ್ಟಿ
ಎತ್ತಿಕೋ ನಿನ್ನ ಪಾಲಿನ ಕತ್ತಿ
ತುಂಡರಿಸಿ ಬಿಡು,
ಮೂರು ಎಳೆಯ ಬಂಧನ
ಕೀಳರಿಮೆ, ಮೇಲರಿಮೆ ಅವವರದೇ ಕರ್ಮ
ದೂರಾಗಿ, ಬೋರಲಾಗಿ, ಬಯಲಾಗಿ ಸೇರಲಿ ಗಮ್ಯ
-ಕನ್ನೇಶ್ ಕೋಲಶಿರ್ಸಿ