ಬಂಡಿಪುರ, ನಾಗರಹೊಳೆ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದೆ ಎನ್ನುವ ವಾಸ್ತವ ಹೊರಬೀಳುವುದಕ್ಕೂ ಉತ್ತರ ಕನ್ನಡ ಜಿಲ್ಲೆಯ ಗಡಿ ತಾಲೂಕು ಸಿದ್ಧಾಪುರ ಮತ್ತು ಹೊನ್ನಾವರ ತಾಲೂಕಿನ ಗಡಿಭಾಗವಾದ ವಾಜಗೋಡು ಪಂಚಾಯತ್, ಹಲಗೇರಿ, ಮೆಣಸಿ, ಲಂಬಾಪುರ, ಸಂಪಕಂಡ, ಕ್ಯಾದಗಿ, ದೊಡ್ಮನೆ ಭಾಗದಲ್ಲಿ ಹುಲಿ ಕಂಡಿದೆ ಎನ್ನುವುದಕ್ಕೂ ಸುತಾರಾಂ ಸಂಬಂಧವಿಲ್ಲ.
ಆದರೆ, ಸಿದ್ದಾಪುರ ತಾಲೂಕಿನ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ದಿವಾಕರ ನಾಯ್ಕ ಮತ್ತು ಸಂಪಕಂಡ, ವಾಜಗೋಡು,ಅರಶಿನಗೋಡು ಭಾಗದ ಕೆಲವು ಜನರು ಹೇಳುವಂತೆ ಸಿದ್ಧಾಪುರ ತಾಲೂಕು ಮತ್ತು ಕುಮಟಾ,ಹೊನ್ನಾವರ ತಾಲೂಕುಗಡಿಭಾಗಗಳಲ್ಲಿ ಹುಲಿ ಎಂದು ಭಾವಿಸಲಾದ ಚಿಟ್ಟೆ ಚಿರತೆ ಕಾಣಿಸಿಕೊಂಡಿದ್ದು ಸತ್ಯ!
ಈ ವಾರದ ಪ್ರಾರಂಭದಲ್ಲಿ ಸಂಪಕಂಡ, ವಾಜಗೋಡು, ಲಂಬಾಪುರ ಭಾಗದ ಜನರು ಹುಲಿಯ ಕೂಗನ್ನು ಕೇಳಿದ್ದಾರೆ.ಅಲ್ಲಲ್ಲಿ ಹುಲಿಹೆಜ್ಜೆ, ಹಿಕ್ಕೆ ಕಂಡಿದ್ದು ಹೌದು. ಆದರೆ ಅದು ಹುಲಿಯಲ್ಲ!
ಈ ಭಾಗದಲ್ಲಿ ಕಪ್ಪು ಚಿರತೆ, ಚಿಟ್ಟೆ ಚಿರತೆ ಸೇರಿದ ನಾಲ್ಕೈದು ಹುಲಿ ಜಾತಿಯ ವಿಭಿನ್ನ ಪ್ರಭೇದಗಳು ಓಡಾಡುವುದಿದೆ. ಇವುಗಳ ಹೊರ ಆಕೃತಿ ತುಸು ಭಿನ್ನವಾಗಿರುವುದು ಬಿಟ್ಟರೆ, ಇವೆಲ್ಲಾ ಚಿರತೆ ಜಾತಿಯ ಹುಲಿಗಳೇ.
ಸ್ಥಳಿಯರು, ಗ್ರಾಮಸ್ಥರು ಆತಂಕಪಟ್ಟಂತೆ ಈ ಭಾಗದಲ್ಲಿ ಈಗ ಹುಲಿ ಕಾಣಿಸಿಕೊಂಡಿಲ್ಲ. ಆದರೆ ಈ ಭಾಗದಲ್ಲಿ ಆಗಾಗ ಕಾಣಿಸಿಕೊಳ್ಳುವ ಕೆಲವು ಹುಲಿ ಜಾತಿಯ ಚಿರತೆಗಳು ಇಲ್ಲಿ ಕೂಗುತ್ತಿರುವುದು ಹೌದು ಎಂದಿದ್ದಾರೆ. ಸಿದ್ಧಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್.
ಸ್ಥಳಿಯರ ಆತಂಕ, ಮಾಹಿತಿ ಆಧರಿಸಿ, ಅರಣ್ಯ ಇಲಾಖೆಯ ಸಿಬ್ಬಂದಿ ಈ ಭಾಗದಲ್ಲಿ ಪರೀಕ್ಷಿಸಿದಾಗ ಹುಲಿ ಪ್ರಭೇದದ ಚಿರತೆಯೊಂದು ಈ ಭಾಗದಲ್ಲಿ ಸಂಚರಿಸಿದ್ದು ಧೃಢವಾಗಿದೆ.
ಈ ಭಾಗದಲ್ಲಿ ಚಿರತೆಗಳಿರುವುದು, ಕೂಗುವುದು ಸಾಮಾನ್ಯ. ಅವು ಜನರು, ಜಾನುವಾರುಗಳಿಗೆ ಯಾವುದೇ ತೊಂದರೆ ಮಾಡುವುದಿಲ್ಲ.ಹೆಚ್ಚೆಂದರೆ ಅವು ಕೋಳಿ, ನಾಯಿಗಳನ್ನು ಹೊತ್ತೊಯ್ಯಬಹುದು.
ಜನರು ಅವುಗಳ ಕೂಗು ಕೇಳಿಸಿದ ಭಾಗದಲ್ಲಿ ಪಟಾಕಿ ಸಿಡಿಸಿ, ಅವುಗಳನ್ನು ಬೆದರಿಸಬಹುದು. ಅವುಗಳಿಂದ ಜನರು, ಜನಜೀವನಕ್ಕೆ ಯಾವುದೇ ತೊಂದರೆ ಇಲ್ಲದಿರುವುದರಿಂದ ಅರಣ್ಯ ಇಲಾಖೆ ಅವುಗಳನ್ನು ಹಿಡಿಯುವುದಿಲ್ಲ.ಸ್ಥಳಿಯರು ಇಲಾಖೆಯ ನೆರವು ಪಡೆದು ಅವುಗಳನ್ನು ಬೆದರಿಸಿ, ಚದುರಿಸಬಹುದು ಎಂದಿದ್ದಾರೆ ಅಜೀಜ್ ಅಹಮದ್ ಶೇಖ್.