

ಮತ್ತೆ ನಗುತ್ತದೆ……
ಹಗಲೆಲ್ಲ ನಗೆಯಾಡುತ್ತ ಇದ್ದ ಮರಗಳು
ರಾತ್ರಿ ಕತ್ತು ಕತ್ತರಿಸಿ ಬಿದ್ದಾಗಿದೆ….
ಹೂವು ಹಣ್ಣು ಎಲ್ಲಾ ಚಲ್ಲಾಪಿಲ್ಲಿ
ಅಲ್ಲಿ ಒಡೆದ ಮೊಟ್ಟೆ ಮುರಿದ ರಟ್ಟೆ
ಏನೆಲ್ಲಾ ಚಿತ್ರಗಳು….
ನಡೆಯಲಾಗದ ಅಜ್ಜಿ
ಮಗ ಕೂಡ್ರಿಸಿ ಹೊಗಿದ್ದಾನೆ ಇಲ್ಲಿ
ಮೊನ್ನೆ ಹಾಲು ಕುಡಿಸಿದ್ದು… ಮುದ್ದಾಡಿದ್ದು
ಇಂದು ಅಳುವಾಗಿ ಕಾಡುತ್ತಿದೆ
ನೆರಳೇ ಇಲ್ಲದ ಕಾಡಿನಲ್ಲಿ ನೆಳಲು
ಬೆನ್ನಿಗೆ ಬರುತ್ತಿದೆ…. ಬಿಸಿಲು ತಿನ್ನಿಸಿ ನಗುತ್ತಿದೆ
ಆನೆ ಹುಲಿ ಚಿರತೆ ಇನ್ನು ಅಲ್ಲಲ್ಲಿ
ಗದ್ದೆ ತೋಟಗಳಲ್ಲಿ ಓಡಾಡುತ್ತಿವೆ
ಬೆಂಗಳೂರಿನಲ್ಲಿ ಮರ ಬಿದ್ದ ಸುದ್ದಿ
ನಮ್ಮೂರಲ್ಲಿ ಆನೆಗಳ ಲದ್ದಿ
ಗುಡ್ಡದ ಮೇಲೆ ಕಾಣುವ ಕಲ್ಲು
ದೇವರಾಗಿ, ಮನೆಯಾಗಿ, ಸೇತುವೆಯಾಗಿ
ಹಣವಾಗಿ ಏನೇನೋ ಬದಲಾಗಿದೆ
ಇಲ್ಲಿ ಬಂದಿದೆ ಕೊಳವೆ ಬಾವಿ
ಮತ್ತು ಪಂಪು ಆ ಮೂಲಕ ತಂಪು
ಹಳ್ಳಿಯಲ್ಲಿರುವ ವೃದ್ಧರೆಲ್ಲ
ಕೆಲಸದ ಮಾತಾಡುತ್ತ ಕೆಲಸ ಮಾಡಲಾಗದೇಮೌನವಾಗಿದ್ದಾರೆ… ಹುಡುಗರು
ಅಮೇರಿಕಾದಿಂದ ಮನೆಯ ಒಳಗೆ ಬಂದು
ಮಾತಾಡುತ್ತಾರೆ ಮತ್ತೆ ಔಷಧಿ ಕಳುಹಿಸುತ್ತಾರೆ
ಭೂಮಿಯ ತಾಪ ಹೆಚ್ಚಿದೆ
ಅದು ಕರಗಿ ಕಣ್ಣೀರಾಗುತ್ತಿದೆ
ಬೀಜ ಬಿತ್ತುತ್ತಲೇ ಇರೋಣ
ಕಣ್ಣೀರು ತಣ್ಣೀರಾಗುತ್ತದೆ
ಬೀಜ ಚಿಗುರಿ ಮರವಾಗುತ್ತದೆ
ಮತ್ತೆ ನಗುತ್ತದೆ.
-ತಮ್ಮಣ್ಣ
ಬೀಗಾರ ( ತಮ್ಮಣ್ಣ ಬೀಗಾರ್ ವೃತ್ತಿಯಿಂದ ಶಿಕ್ಷಕರು,ಸಾಹಿತ್ಯ, ವ್ಯಂಗ್ಯ ಚಿತ್ರ ರಚನೆ ಅವರ ಹವ್ಯಾಸ. ಅತ್ಯುತ್ತಮ ಶಿಕ್ಷಕರೆಂದೇ ಅವರಿಗೆ ಸಿಕ್ಕಿದ್ದು ರಾಷ್ಟ್ರಪ್ರಶಸ್ತಿ. ಪ್ರಸ್ತುತ ಬಿದ್ರಕಾನ ಶಾಲೆ ಅವರ ಅಂಗಳ ಅವರ ವಿದ್ಯಾರ್ಥಿಗಳು,ಪ್ರಕಟಿತ ಪುಸ್ತಕಗಳೇ ಅವರ ಮೌಲ್ಯ ತಿಳಿಸುತ್ತವೆ. ಉಳಿದಂತೆ ಮಕ್ಕಳ ಸಾಹಿತ್ಯದಲ್ಲಿ ಅವರದು ದೊಡ್ಡ ಹೆಸರು.)

