

ಸ್ವರ್ಣವಲ್ಲೀ ಶ್ರೀಗಳ ಪರಿಸರ ಕಾಳಜಿ ಮಾದರಿ
ಶಿಷ್ಯರಲ್ಲಿ ವೃಕ್ಷ ಪ್ರೀತಿ ಬೆಳೆಸಲು ವಿಶಿಷ್ಟ ನಡೆ
ಚಾತುರ್ಮಾಸ್ಯದಲ್ಲಿ ಹಸಿರು ಶ್ರೀಗಳಿಂದ ವೃಕ್ಷ ಮಂತ್ರಾಕ್ಷತೆ
ಚಾತುರ್ಮಾಸ್ಯ ಅವಧಿಯಲ್ಲಿ ಪವಿತ್ರ ವೃಕ್ಷಗಳನ್ನು ಸ್ವತಃ ಸ್ವಾಮೀಜಿಗಳೇ ಶಿಷ್ಯರಿಗೆ ನೆನಪಿನ ಮಂತ್ರಾಕ್ಷತೆ ನೀಡುವ ಕಾರ್ಯಕ್ಕೆ ಈ ಬಾರಿಯೂ ಹಸಿರು ಸ್ವಾಮೀಜಿ ಎಂದೇ ಹೆಸರಾದ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಮುನ್ನುಡಿ ಬರೆದಿದ್ದಾರೆ.
ಪರಿಸರ ಸಂರಕ್ಷಣೆ ಪ್ರತಿಯೊಬ್ಬರಲ್ಲೂ ಜಾಗೃತಿ ಆಗಬೇಕು. ಮಠ ನೀಡಿದ ಉಡುಗೋರೆಯನ್ನು ಪ್ರೀತಿಯಿಂದ ಬೆಳೆಸಬೇಕು ಎಂಬ ಆಶಯದಲ್ಲಿ ವೃಕ್ಷ ಮಂತ್ರಾಕ್ಷತೆಯನ್ನು ಸ್ವಾಮೀಜಿಗಳು ನೀಡುತ್ತಿದ್ದಾರೆ.
ಬೇರೆ ಬೇರೆ ಅರಣ್ಯ ಪ್ರದೇಶಗಳಲ್ಲಿ ಲಭ್ಯವಿರುವ ಅನೇಕ ಅತ್ಯಮೂಲ್ಯವಾದ ವೃಕ್ಷ ಪ್ರಭೇದಗಳು ಅನೇಕ ಕಾರಣಗಳಿಂದ ವಿನಾಶದ ಅಂಚಿಗೆ ಹೋಗುತ್ತಿರುವ ಸಸ್ಯಗಳನ್ನು ಬೆಳಸಿ, ತರಿಸಿ ಮಠದಿಂದ ಶಿಷ್ಯರಿಗೆ ನೀಡಲಾಗುತ್ತಿದೆ.
ಸಂಪಿಗೆ, ಬಿಲ್ವ, ನೆಲ್ಲಿ, ಸಾಂಬಾರು ಗಿಡ, ಹಲಸು, ರಕ್ತ ಚಂದನ, ಮಾವು, ಸೀತಾ ಅಶೋಕ, ಪುತ್ರ ಸಂಜೀವಿನಿ, ನೇರಳೆ, ಪಾರಿಜಾತ, ಕದಂಬ, ಶಮಿ, ಮೊದಲಾದ ಹಣ್ಣು, ಹೂವು, ಔಷಧ ಸೇರಿದಂತೆ 22ಕ್ಕೂ ಹೆಚ್ಚು ಬಗೆಯ ಸಸ್ಯಗಳನ್ನು ಶ್ರೀಗಳು ವಿತರಿಸುತ್ತಿದ್ದಾರೆ. ಹೀಗೆ ವಿತರಿಸುವ ಸಸ್ಯಗಳನ್ನು ಮಠದ ಪವಿತ್ರ ಸಸ್ಯಲೋಕದಲ್ಲಿ ಬೆಳೆಸಲಾಗುತ್ತಿರುವುದೂ ಇನ್ನೊಂದು ವಿಶೇಷವಾಗಿದೆ.
ಸಸ್ಯ ಲೋಕದಲ್ಲಿ ಸಾವಿರಾರು ಸಸ್ಯಗಳನ್ನು ಇಲ್ಲಿ ಬೆಳೆಸಿದ್ದು, ಕೆಲವು ಅಗತ್ಯ ಸಸಿಗಳನ್ನು ನೀಡಿ ಅರಣ್ಯ ಇಲಾಖೆ ಕೂಡ ಕೈ ಜೋಡಿಸಿ ಶ್ರೀಗಳ ಕನಸಿಗೆ ಸ್ಪಂದಿಸುತ್ತಿದೆ.
2006ರ ಚಾತುರ್ಮಾಸ್ಯದಿಂದ ವೃಕ್ಷ ಮಂತ್ರಾಕ್ಷತೆಯನ್ನು ಶ್ರೀಗಳು ಆರಂಭಿಸಿದ್ದಾರೆ. ಈ ವರೆಗೂ ಶಿಷ್ಯರಿಗೆ ಮಂತ್ರಾಕ್ಷತೆ ಜೊತೆ ಸಸಿ ನೀಡುತ್ತಿರುವ ಸಂಖ್ಯೆ ಲಕ್ಷ ದಾಟಿರಬಹುದು ಎನ್ನುತ್ತಾರೆ ಪರಿಸರ ಕಾರ್ಯಕರ್ತ ಅನಂತ ಹೆಗಡೆ ಅಶೀಸರ.
ಸೀಮಾ ಭಿಕ್ಷೆಗೆ ಬರುವ ಭಕ್ತರೆಲ್ಲರಿಗೂ ಮಂತ್ರಾಕ್ಷತೆಯ ಜೊತೆ ಸಸಿಯನ್ನು ನೀಡುವುದು ವಾಡಿಕೆ. ಪ್ರತಿ ಸೀಮಾ ಭಿಕ್ಷದಂದು 250ಕ್ಕೂ ಅಧಿಕ ಸಸಿಗಳನ್ನು ವಿತರಿಸಲಾಗುತ್ತದೆ. ವೃಕ್ಷ ಮಂತ್ರಾಕ್ಷತೆಯ ರೂಪದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಪ್ರತಿಯೊಬ್ಬರಿಗೂ ಸಸಿಯನ್ನು ನೀಡುವುದು ಇಲ್ಲಿನ ಕ್ರಮವಾಗಿ ಬೆಳೆದಿದೆ. ವನವಾಸಿಗಳಿಗೂ ಹಸಿರು ಪ್ರೀತಿಯಿಂದ ಶ್ರೀಗಳು ವೃಕ್ಷ ನೀಡುತ್ತಿದ್ದಾರೆ. ಶಿಷ್ಯರ ಮೊಗದಲ್ಲೂ ಹಸಿರು ಪ್ರೀತಿ ಮೂಡಿಸುತ್ತಿದ್ದಾರೆ.
ಸಸ್ಯಲೋಕದಲ್ಲಿ ಪ್ರತಿ ವರ್ಷವೂ 25 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನರ್ಸರಿ ಮಾಡಿ ಬೆಳೆಸಲಾಗುತ್ತಿದೆ. ಅರಣ್ಯ ಇಲಾಖೆ, ಅರಣ್ಯ ಕಾಲೇಜುನವರು ಬೀಜವನ್ನು ನೀಡಿ ಸಹಕರಿಸುತ್ತಾರೆ ಎನ್ನುತ್ತಾರೆ ಸಸ್ಯ ಲೋಕದ ಸಹ ಸಂಚಾಲಕ ಮಹಾಬಲೇಶ್ವರ ಗುಮ್ಮಾನಿ.
ಗುರುಗಳ ಸಸ್ಯ ಪ್ರೀತಿ ಪ್ರತೀ ಚಾತುರ್ಮಾಸ್ಯವೂ ಪರಿಸರ ಸಂದೇಶವಾಗಿ ಭಕ್ತರ ಭಾವವನ್ನು ಇನ್ನಷ್ಟು ಆಪ್ತಗೊಳಿಸುತ್ತಿರುವುದು ಸತ್ಯ.
ಸ್ವರ್ಣವಲ್ಲೀ ಶ್ರೀಗಳು ಮಂತ್ರಾಕ್ಷತೆಯಾಗಿ ನೀಡಿದ ಸಸ್ಯಗಳು ನಾಡಿನ ಹಲವಡೆ ಮಾತ್ರವಲ್ಲ, ಹೊರನಾಡಾದ ಮುಂಬಯಿ, ಕಲ್ಕತ್ತ, ಪೂನಾ, ದೆಹಲಿ ಸೇರಿದಂತೆ ಹಲವು ಕಡೆ ಇಂದು ಮರವಾಗಿ ಬೆಳೆದು ಪರಿಸರ ಸಮೃದ್ಧಿ ಕೊಡುಗೆ ನೆಟ್ಟಿದೆ.
ಅನಂತ ಹೆಗಡೆ ಅಶೀಸರ, ಸಸ್ಯ ಲೋಕ ಸಂಚಾಲಕ
ಪೀಠ ನೀಡಿದ ವೃಕ್ಷ ಮಂತ್ರಾಕ್ಷತೆಯ ಗಿಡವನ್ನು ಪ್ರೀತಿಯಿಂದ ತಂದು ನೆಡುತ್ತಿದ್ದೇವೆ. ಗಿಡ ನೋಡಿದಾಗ ಗುರುಗಳು ನೆನಪಾಗುತ್ತಾರೆ.ನರೇಂದ್ರ ಎಸ್.ಹೆಗಡೆ, ಶಿಷ್ಯ
