

ಮಹಾಭಾರತದ ಕಥಾವಸ್ತು ಪ್ರತಿಯೊಬ್ಬ ಭಾರತೀಯನಿಗೂ ಆಪ್ಯಾಯಮಾನವಾದದ್ದು. ಎಲ್ಲಾ ವರ್ಗದವರಿಗೂ ಬೇಕಾದ ರಸಾನುಭವಗಳ ಸಾಗರದಂತಿರುವ ಮಹಾಭಾರತ ಕಥೆ ಚಿಂತನೆಗೆ ಬೆಳಕು ನೀಡುವ ದೀವಿಗೆಯಂತಿದೆ.
ಮಹಾಭಾರತದ ಯುದ್ಧವನ್ನೇ ಕೇಂದ್ರವಾಗಿಟ್ಟುಕೊಂಡು ಅದನ್ನು ವಿಭಿನ್ನವಾದ ದೃಷ್ಟಿಕೋನದಿಂದ ವೀಕ್ಷಿಸಿ ಮೂಲ ಕಥೆಗೆ ಭಂಗ ಬಾರದಂತೆ ವಿನೂತನ ರೀತಿಯಲ್ಲಿ ಶ್ರೀ ಶಿವಮೂರ್ತಿ ನಂದನ ಹೊಸುರು ರಚಿಸಿದ ನಾಟಕ “ಅಂಧಕಾರ” ವನ್ನು ಸಿದ್ದಾಪುರದ ರಂಗ ಸೌಗಂಧ ತಂಡ ಸ್ವರ್ಣವಲ್ಲಿಯ ಸುಧರ್ಮಾ ಸಭಾಭವನದಲ್ಲಿ ಇತ್ತೀಚೆಗೆ ಪ್ರದರ್ಶಿಸಿತು.
ಯುದ್ಧವೆಂದರೆ ಸಕಲವನ್ನೂ ನಾಶದ ಹಾದಿಗೆ ತಳ್ಳುವ ಸಮಯ. ಯುದ್ಧದಲ್ಲಿ ಕೇವಲ ಮನುಷ್ಯರಲ್ಲದೇ ಸಕಲ ಸಂಪತ್ತು, ಶಾಂತಿ, ನೆಮ್ಮದಿ, ಪ್ರೀತಿ, ಪ್ರೇಮ ಇದರೊಂದಿಗೆ ಹೆಣ್ಣಿನ ಪವಿತ್ರ ಶೀಲ ಕೂಡಾ ನಾಶ ಹೊಂದುತ್ತದೆ. ಸಮರಕ್ಕೆ ನಾಂದಿ ಹಾಡಲು ಮನುಷ್ಯರಲ್ಲಿಯ ಅಂಧಕಾರವೇ ಮೂಲ ಕಾರಣ. ಇದರಿಂದಾಗಿಯೇ ಸರ್ವನಾಶ. ಕೊನೆಯಲ್ಲಿ ಪರಿತಾಪ ಎನ್ನುವುದನ್ನು ರಂಗಸೌಂಗಧದ ನಟರು ಅಂಧಕಾರ ನಾಟಕದಲ್ಲಿ ಸ್ಪಷ್ಟ ಸುಂದರವಾಗಿ ಬಿಂಬಿಸಿದರು.
ಮಹಾಭಾರತ ಯುದ್ಧದ ಅಂತಿಮ ಘಟ್ಟದ ಸನ್ನಿವೇಶಗಳೊಂದಿಗೆ ಪ್ರಾರಂಭವಾಗುವ ನಾಟಕದಲ್ಲಿ ಧೃತರಾಷ್ಟ್ರನು ನ್ಯಾಯ, ಅನ್ಯಾಯಗಳ ಗೊಡವೆಗೆ ಹೋಗದೆ ಕೇವಲ ಪಾಂಡವರ ಮೇಲಿನ ದ್ವೇಷದಿಂದ ಸಕಲ ಸಂಪತ್ತು ತನ್ನದಾಗಬೇಕೆನ್ನುವ ಬಯಕೆಯಿಂದ ತನ್ನ ಮುಂಗೋಪಿ ಮಕ್ಕಳನ್ನು ಎದುರಿಗಿಟ್ಟುಕೊಂಡು ಪಾಂಡವರೊಂದಿಗೆ ಹೋರಾಟಕ್ಕೆ ಮುಂದಾಗುತ್ತಾನೆ. ಹೆಜ್ಜೆ ಹೆಜ್ಜೆಗೂ ಆತನ ಧರ್ಮಪತ್ನಿ ಗಾಂಧಾರಿ ನೀಡುವ ಎಚ್ಚರಿಕೆಯ ಮಾತುಗಳು ಆತನಿಗೆ ಸಹ್ಯವಾಗದೇ ಕೋಪಕ್ಕೆ ಎಡೆಮಾಡಿಕೊಡುತ್ತದೆ. ಧೃತರಾಷ್ಟ್ರನ ಪರಿಧಿಯೊಳಗೆ ಸೇರಿಕೊಳ್ಳುವ ಪ್ರತಿಯೊಂದೂ ಪಾತ್ರವೂ ಆತನನ್ನು ವಿಜೃಂಭಿಸಲು ಮುಂದಾಗುತ್ತವೆಯೇ ವಿನಃ ಸತ್ಯವನ್ನು ಬಿಚ್ಚಿಡುವಲ್ಲಿ ಹಿಂದೇಟು ಹಾಕುತ್ತವೆ. ಕಟ್ಟಕಡೆಯಲ್ಲಿ ಸುಯೋಧನನ್ನೂ ಕಳೆದುಕೊಂಡು ವಾಸ್ತವಿಕತೆಯ ಅರಿವಿಗೆ ಧೃತರಾಷ್ಟ್ರ ಬರುತ್ತಾನಾದರೂ ಕಾಲ ಮಿಂಚಿದ್ದರಿಂದ ಹತಾಶೆಯ ಮಡಿಲಿಗೆ ನೂಕಲ್ಪಡುತ್ತಾನೆ.
ಈ ಎಲ್ಲಾ ಘಟನೆಗಳನ್ನು ನಾಟಕದಲ್ಲಿಯ ಸೈನಿಕರ ಪಾತ್ರಗಳು ಆಧುನಿಕ ದೃಷ್ಟಿಕೋನದಲ್ಲಿ ಅನುಭವಿಸಿ ಪ್ರೇಕ್ಷಕರಿಗೂ ಉಣಬಡಿಸುತ್ತ ಹೋಗುತ್ತವೆ.
ಧೃತರಾಷ್ಟ್ರನಾಗಿ ಹಿರಿಯ ನಟ ರಾಜಾರಾಮ ಭಟ್ ಹೆಗ್ಗಾರಳ್ಳಿ ತಮ್ಮ ಸ್ಪಷ್ಟ ಉಚ್ಚಾರ, ಉತ್ತಮ ಅಭಿನಯದ ಮೂಲಕ ಪಾತ್ರಕ್ಕೆ ಜೀವ ತುಂಬಿದರು. ಸಂಜಯನಾಗಿ ಶ್ರೀಪಾದ ಹೆಗಡೆ ಕೋಡನಮನೆ ಪಾತ್ರದ ಆಶಯವನ್ನು ಬಿಂಬಿಸುವಲ್ಲಿ ಸಫಲರಾದರು.
ಕರ್ಣನಾಗಿ ಗಣಪತಿ ಗುಂಜಗೋಡ ಸುಯೋಧನನೊಂದಿಗಿನ ಆತ್ಮೀಯ ಸಂಬಂಧವನ್ನು ತಮ್ಮ ಅಭಿನಯದ ಮೂಲಕ ಸ್ಪಷ್ಟ ಪಡಿಸಿದರು. ಸುಯೋಧನನಾಗಿ ನಾಗಪತಿ ಭಟ್ಟ ವಡ್ಡಿನಗದ್ದೆ ಪ್ರಬುದ್ಧ ಅಭಿನಯ ನೀಡಿದರೆ, ಗಾಂಧಾರಿಯಾಗಿ ಶುಭಾ ರಮೇಶ, ಕುಂತಿಯಾಗಿ ಜಯಶ್ರೀ ಹುಲಿಮನೆ ಉತ್ತಮವಾಗಿ ಪಾತ್ರಗಳಿಗೆ ಜೀವ ತುಂಬಿ ಪ್ರದರ್ಶನದ ಯಶಸ್ಸಿಗೆ ಸಹಕರಿಸಿದರು.
ಸೈನಿಕರಾಗಿ ಅಜಿತ ಭಟ್ಟ ಹೆಗ್ಗಾರಳ್ಳಿ, ಮುಂತಾದವರು ಅಭಿನಯಿಸಿದ್ದು, ಅವರ ಸಹಜ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ನಾಟಕದ ಗಾಢತೆ ಹೆಚ್ಚಿಸಲು ರಾಜೇಂದ್ರ ಕೊಳಗಿ, ಜಯರಾಮ ಭಟ್ಟ ಹೆಗ್ಗಾರಳ್ಳಿ ಪೂರಕವಾಗಿ ಹಿನ್ನೆಲೆ ಸಂಗಿತ ಒದಗಿಸಿದ್ದು, ರಂಗಸೌಗಂಧದ ಉತ್ಸಾಹಿ ಗಣಪತಿ ಹುಲಿಮನೆ ರಂಗಕ್ಕೆ ತಂದ ಈ ಪ್ರದರ್ಶನ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರ ಮನರಂಜಿಸುವಲ್ಲಿ ಯಶಸ್ವಿಯಾಯಿತು.
ಶಾಸಕ ಶಿವರಾಮ ಹೆಬ್ಬಾರ್ ಪತ್ತೆಗೆ ಪೊಲೀಸ್ ಮೊರೆ
ರಾಜ್ಯ ಸಮ್ಮಿಶ್ರ ಸರ್ಕಾರದ ಅತೃಪ್ತಶಾಸಕರ
ತಂಡದಲ್ಲಿರುವ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಪತ್ತೆಗೆ ಡಿ.ಸಿ.ಸಿ. ಉತ್ತರ ಕನ್ನಡ ಪೊಲೀಸ್ ಮೊರೆಹೋಗಿದೆ.
ಬುಧವಾರ ಶಿರಸಿ ಉಪ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿರುವ ಜಿಲ್ಲಾ ಕಾಂಗ್ರೆಸ್ ತಂಡ ಯಲ್ಲಾಪುರ ಕ್ಷೇತ್ರದಲ್ಲಿ ಬರ,ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಈ ಸಾರ್ವಜನಿಕ ಸಮಸ್ಯೆಗೆ ಸ್ಫಂದಿಸಬೇಕಿದ್ದ ಶಾಸಕ ಶಿವರಾಮ ಹೆಬ್ಬಾರರನ್ನು ಅಕ್ರಮವಾಗಿ ಕರೆದೊಯ್ದು ಒತ್ತಡ,ಆಮಿಷ ತೋರಿಸಿ ಅಪಹರಿಸಿದಂತಿದೆ.
ಕಳೆದ 10 ದಿವಸಗಳಿಂದ ಜನರ ಸಂಪರ್ಕ, ಮಾತಿಗೆ ಸಿಗದ ಹೆಬ್ಬಾರ್ ನಾಪತ್ತೆ ಹಿಂದೆ ಷಡ್ಯಂತ್ರ, ಕುತಂತ್ರಗಳಿರಬಹುದು ಹಾಗಾಗಿ ಅವರನ್ನು ಶೀಘ್ರಬಂಧಮುಕ್ತಗೊಳಿಸಿ ಸಾರ್ವಜನಿಕ ಸೇವೆಗೆ ಅನುಕೂಲವಾಗುವಂತೆ ಸಹಕರಿಸಬೇಕೆಂದು ಪೊಲೀಸ್ ದೂರಿನಲ್ಲಿ ವಿನಂತಿಸಲಾಗಿದೆ.
ಪೊಲೀಸ್ ದೂರು ನೀಡುವ ವೇಳೆ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳೊಂದಿಗೆ ಭೀಮಣ್ಣ ಪ್ರತಿಕ್ರೀಯಿಸಿ ನಮ್ಮ ಶಾಸಕ ಶಿವರಾಮ ಹೆಬ್ಬಾರ ಕಳೆದ ಹತ್ತು ದಿವಸಗಳಿಂದ ನಾಪತ್ತೆಯಾಗಿದ್ದಾರೆ. ಅವರ ಮನೆಗೆ ತೆರಳಿ ವಿಚಾರಿಸಿದರೂ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಹಾಗಾಗಿ ಅವರ ಪತ್ತೆಗಾಗಿ ಪೊಲೀಸ್ ದೂರು ನೀಡಲಾಗಿದೆ ಎಂದು ಹೇಳಿದರು.
ಇದೇ ರೀತಿ ಕಾಂಗ್ರೆಸ್, ಜೆ.ಡಿ.ಎಸ್. ಗಳಿಂದ ಆಯ್ಕೆಯಾಗಿ ಈಗ ಅನ್ಯ ಚಿತಾವಣೆಗಳಿಂದ ಕ್ಷೇತ್ರಗಳಿಂದ ತಲೆ ಮರೆಸಿಕೊಂಡಿರುವ ಶಾಸಕರ ಪತ್ತೆಗೆ ಆಯಾ ಜಿಲ್ಲೆಗಳಿಂದ ಪೊಲೀಸ್ ದೂರು ದಾಖಲಿಸಿರುವ ಬಗ್ಗೆ ಸಮಾಜಮುಖಿಗೆ ಮಾಹಿತಿ ದೊರೆತಿದೆ.



