

ಮಗಳು ಜಾನಕಿ ಖ್ಯಾತಿಯ ನಟಿ ಶೋಭಾ ಕೂಡ ನಿನ್ನೆ ಚತ್ರದುರ್ಗ ವಾಹನ ಅಪಘಾತದಲ್ಲಿ ಮೃತರಾದವರಲ್ಲಿ ಸೇರಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಗಳು ಜಾನಕಿ ಧಾರಾವಾಹಿಯ ನಿರ್ದೇಶಕ ಟಿಎನ್ ಸೀತಾರಾಮ್ ಅವರು ಸಾಮಾಜಿಕ ಜಾಲತಾಣದಲ್ಲಿ ಕಂಬನಿ ಮಿಡಿದ್ದು, ‘ಮಗಳು ಜಾನಕಿ ಯಲ್ಲಿ ಮಂಗಳಕ್ಕನ ಪಾತ್ರ ಮಾಡುತ್ತಿದ್ದ ಶೋಭಾ, ರಸ್ತೆ ಅಪಘಾತ ದಲ್ಲಿ ನಿಧನರಾಗಿದ್ದಾರೆ ಎಂಬ ಸುದ್ದಿ ಬಂದಿದೆ.
ಸದಾ ನಗುಮುಖದ, ಅಪಾರ ಪ್ರತಿಭೆಯ,ಸೌಜನ್ಯ ತುಂಬಿದ ಮಂಗಳಕ್ಕನ ಅನಿರೀಕ್ಷಿತ ಸಾವು ನನ್ನನ್ನು ದಿಗ್ಭ್ರಮೆ ಗೊಳಿಸಿದೆ. ತಂಡದ ಪರವಾಗಿ ತೀವ್ರ ಸಂತಾಪಗಳು ಎಂದು ಕಂಬನಿ ಮಿಡಿದ್ದಾರೆ.
ಇನ್ನು ನಿನ್ನೆ, ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ-4ರ ಕುಂಚಿಗನಾಳು ಗ್ರಾಮದಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ಐವರು ಮೃತಪಟ್ಟು ಇನ್ನೂ ಮೂವರು ಗಂಭೀರ ಗಾಯಗೊಂಡಿದ್ದರು. ಪೊಲೀಸ್ ಮೂಲಗಳ ಪ್ರಕಾರ ಕಾರಿನಲ್ಲಿ ಅಶೋಕ್, ಪ್ರವಿತಾ, ಮಂಜುಳಾ, ಕಿರುತೆರೆ ನಟಿ ಶೋಭಾ, ಸುಕನ್ಯಾ, ಶ್ರೇಷ್ಠ ಸೇರಿ ಒಟ್ಟು ಎಂಟು ಮಂದಿ ಪ್ರಯಾಣಿಸುತ್ತಿದ್ದರು.
ಇವರೆಲ್ಲಾ ಬೆಂಗಳೂರಿನ ರಾಜರಾಜೇಶ್ವರಿ ನಗರ ನಿವಾಸಿಗಳಾಗಿದ್ದು ಬಾಗಲಕೋಟೆ ಜಿಲ್ಲೆ ಬಾದಾಮಿ ಬನಶಂಕರಿ ದೇವಾಲಯಕ್ಕಾಗಿ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ಗಾಯಾಳುಗಳಲ್ಲಿ ಇಬ್ಬರು ಮಕ್ಕಳೂ ಸೇರಿದ್ದು ಎಲ್ಲಾ ಗಾಯಾಳುಗಳನ್ನು ಚಿತ್ರದುರ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಕಾರು ಸಂಪೂರ್ಣ ಜಖಂ ಆಗಿದ್ದು, ಸ್ಥಳಕ್ಕೆ ಚಿತ್ರದುರ್ಗ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
