ಉತ್ತರಕನ್ನಡದ ಅಂಕೋಲೆಯ ಶಿಕ್ಷಕಿ, ಕವಯತ್ರಿ ರೇಣುಕಾ ರಮಾನಂದರ ಕವನ ಸಂಕಲನ ಮೀನುಪೇಟೆಯ ತಿರುವಿಗೆ ಹರಿಹರದ ಸಾಹಿತ್ಯ ಸಂಗಮ(ರಿ) ಕೊಡಮಾಡುವ ರಾಜ್ಯಮಟ್ಟದ “ಹರಿಹರಶ್ರೀ” ಪ್ರಶಸ್ತಿ ಲಭಿಸಿದೆ.
ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಹರಿಹರದ ಸಾಹಿತ್ಯ ಸಂಗಮ ಸಂಸ್ಥೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ,ಕವಿಗೋಷ್ಟಿ ಹಾಗೂ ಇನ್ನಿತರ ಸಾಹಿತ್ಯಿಕ ಕಾರ್ಯಕ್ರಮಗಳ ಮೂಲಕ ವರ್ಷಪೂರ್ತಿ ಸಕ್ರಿಯವಾಗಿದ್ದು ವರ್ಷಕ್ಕೊಮ್ಮೆ ಆಯ್ದ ಉತ್ತಮ ಕವನಸಂಕಲನಕ್ಕೆ “ಹರಿಹರಶ್ರೀ” ಪ್ರಶಸ್ತಿ ನೀಡುತ್ತಿದ್ದು ಈ ಬಾರಿ ಅದು “ಮೀನುಪೇಟೆಯ ತಿರುವಿಗೆ” ದೊರೆತಿದೆ.ಪ್ರಶಸ್ತಿ ಐದುಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ.
ದಿನಾಂಕ 28/7/2019 ಭಾನುವಾರ ಹರಿಹರದ ಶ್ರೀಶೈಲ ಶಿಕ್ಷಣ ಮಹಾವಿದ್ಯಾಲಯದ ಜಿ ಎಮ್ ಬಸವರಾಜ ಸಭಾಂಗಣದಲ್ಲಿ ಪ್ರಶಸ್ತಿ ಪ್ರಧಾನ,ಸಾಧಕರಿಗೆ ಸನ್ಮಾನ,ಜಿಲ್ಲಾಮಟ್ಟದ ಕವಿಗೋಷ್ಟಿ ಹಮ್ಮಿಕೊಳ್ಳಲಾಗಿದ್ದು ಅಧ್ಯಕ್ಷರಾದ ಶ್ರೀ ವಿ ಬಿ ಕೊಟ್ರೇಶಪ್ಪ ಹಾಗೂ ಕಾರ್ಯದರ್ಶಿಗಳಾದ ಶ್ರೀ ಸುಬ್ರಹ್ಮಣ್ಯ ನಾಡಿಗೇರ್ ಅವರು ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.
ಇದಾಗಲೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಸಹಿತ ಏಳೆಂಟು ಬಹುಮಾನಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿರುವ”ಮೀನುಪೇಟೆಯ ತಿರುವು” ರೇಣುಕಾ ರಮಾನಂದರ ಮೊದಲ ಪುಸ್ತಕವಾಗಿದ್ದು ರಾಜ್ಯದ ಸಾಹಿತ್ಯಾಸಕ್ತರ ಗಮನ ಸೆಳೆದಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.