ಇಂದು ಇಲ್ಲೇ ನನ್ನ ಕ್ಲಿನಿಕ್ ಹತ್ತಿರ ಇರುವ ಒಂದು ಸಣ್ಣ ಚಾ ಅಂಗಡಿಗೆ ಹೋಗಿದ್ದೆ. ಇನ್ನೇನಕ್ಕೆ ಹೋಗ್ತೀನಿ? ಚಪ್ಪೆ ಚಾ ಕುಡಿಯೋಕೆ ಅಂತಾನೇ ಹೋಗಿದ್ದೆ ಕಣ್ರಿ. ಚಾ ಮಾಡುತ್ತಾ ಆ ಅಂಗಡಿಯ ರವಿಯಣ್ಣ ಹೇಳಿದ..”ಸಾರ್, ನನಗೆ ಈ ಜನ ಗಣ ಮನ ಹಾಡು ಕೇಳಿದೊಡನೆ ಮೈಯಲ್ಲೆಲ್ಲಾ ರೋಮಾಂಚನ ಆದಂತಾಗಿ, ಮೈಯೆಲ್ಲಾ ನಡುಗಿದಂತಾಗಿ ಕಣ್ಣಲ್ಲಿ ನೀರು ಬಂದು ಬಿಡುತ್ತೆ. ಎಲ್ಲೇ ಆ ಹಾಡು ಕೇಳಿದರೆ ಅಲ್ಲೇ ಬೈಕಿಂದ ಇಳಿದು ನೆಟ್ಟಗೆ ನಿಂತು ಬಿಡುತ್ತೇನೆ. ನನ್ನ ಹೆಂಡತಿ ಅದ್ಯಾಕೆ ಕಣ್ಣಲ್ಲಿ ನೀರು ಎಂದು ಕೇಳಿದಳು. ಹಾಡು ಕೇಳಿ ಅಂತ ಹೇಳಿದೆ. ಏಕಿರಬಹುದು ಸಾರ್?” ಅಂದ. ನನಗೆ ಬಾಯಲ್ಲಿ ಆ ಕೂಡಲೇ ಉತ್ತರವೇನೂ ಬರಲಿಲ್ಲ. ಆದರೆ ಮನದಲ್ಲೇ ಅಂದುಕೊಂಡೆ. ರವಿಯಣ್ಣ ರಿಯಲೀ ನೀನು ಗ್ರೇಟ್. ನಿನಗೆ ರಾಷ್ಟ್ರಗೀತೆ ಕೇಳಿದೊಡನೆ ಮೈ ಶೇಕ್ ಆಗುತ್ತೆ ಕಣ್ಣಲ್ಲಿ ನೀರು ಬರುತ್ತೆ ಅಂದರೆ ನೀನು ನಿಜವಾಗಿಯೂ ದೇಶಪ್ರೇಮಿ ಎಂಬುದರಲ್ಲಿ ಸಂಶಯವೇ ಇಲ್ಲ. ಗ್ರೇಟ್ ಕಣಪ್ಪಾ.
ಅಲ್ಲಿಂದ ಬಂದ ಮೇಲೆ ವಿಚಾರ ಮಾಡಿದೆ. ನಿಜವಾಗಲೂ ಆ ಹಾಡು ಅದೇಕೇ ಅವನಿಗೆ ಆ ರೀತಿ ಮಾಡುತ್ತೆ? ಇನ್ ಫ್ಯಾಕ್ಟ್ ನನಗೂ ಹಾಗೇ ಆಗುತ್ತೆ. ಅವನು ಹೇಳಿಕೊಂಡ. ನಾ ಹೇಳಿಕೊಳ್ಳಲಿಲ್ಲ ಅಷ್ಟೇ. ನಾವು ಸಣ್ಣವರಿದ್ದಾಗಿನಿಂದ ಈ ಇಫೆಕ್ಟ್ ಇದೆ. ನಿಮ್ಮಲ್ಲೂ ಬಹಳ ಜನರಿಗೆ ಈ ಅನುಭವ ಆಗಿರಬಹುದು. ಆಗಿರಬಹುದು ಏನು? ಆಗೇ ಆಗಿರುತ್ತದೆ. ಐ ಕ್ಯಾನ್ ಬೆಟ್ ಆಗಿರುತ್ತದೆ.
ವಿಚಾರ ಮಾಡುತ್ತಾ ಕುಳಿತೆ. ಮಧ್ಯ ಮಧ್ಯ ಪೇಶಂಟ್ ಬರ್ತಾ ಇದ್ದರೂ ಮನದಲ್ಲಿ ಆ ವಿಚಾರ ಪದೇ ಪದೇ ಬಂದು ಕೊರೆಯುತ್ತಲೇ ಇತ್ತು. ನನಗನ್ನಿಸುತ್ತೆ… ಆ ಹಾಡಿನೊಂದಿಗೆ ಎಷ್ಟೋ ಸ್ವಾತಂತ್ರ್ಯ ಯೋಧರ ಜೀವನ ಅಡಕವಾಗಿದೆ. ಅವರ ಬಲಿದಾನ, ತ್ಯಾಗ, ರೋಷ ಎಲ್ಲಾ ಆ ಒಂದು ಹಾಡಿನಲ್ಲಿ ಮಿಳಿತವಾಗಿದೆ. ಭಗತ್ ಸಿಂಗ್, ಸುಖದೇವ್, ರಾಜ್‌ಗುರು, ಚಂದ್ರಶೇಖರ್ ಆಝಾದ್, ಸುಭಾಷ್‌ಚಂದ್ರ ಬೋಸ್ ಮುಂತಾದ ಅಗಣ್ಯ ವ್ಯಕ್ತಿಗಳು, ಆ ಒಂದು ಹಾಡಿನೊಂದಿಗೆ ಕಣ್ಮುಂದೆ ಮಿಂಚಿನಂತೆ ಬಂದು ನೆನಪಿಸಿ ಹೋಗಿಬಿಡುತ್ತಾರೆ. ಸಣ್ಣ ಸಣ್ಣ ವಯಸ್ಸಿನಲ್ಲೇ ಜೀವ ತ್ಯಾಗ ಮಾಡಿದ, ಅಮರರಾದ ವ್ಯಕ್ತಿಗಳೆಲ್ಲಾ ಮನ ಪಟಲದಲ್ಲಿ ಕಿಚ್ಚೆಬ್ಬಿಸಿಬಿಡುತ್ತಾರೆ. ನಮ್ಮ ದೇಶದ ಅಗಾಧತೆ, ವೈವಿಧ್ಯತೆ, ಭಾಷಾಭಿಮಾನ, ವೈಶಿಷ್ಟ್ಯತೆ, ಏಕತೆ ಎಲ್ಲಾ ಆ ಹಾಡಿನೊಂದಿಗೆ ಹೆಮ್ಮೆ ಮೂಡಿಸಿಬಿಡುತ್ತದೆ. ಮನತುಂಬಿ ಬೇಡವೆಂದರೂ ಕಣ್ಣಂಚಲಿ ನೀರು ತುಂಬಿಸಿಯೇ ಬಿಡುತ್ತದೆ.
ಮೊನ್ನೆ ಮೊನ್ನೆ ಆಗಿದೆ ಅನ್ನಿಸುವ ಯುದ್ಧಗಳು, ಅಸುನೀಗಿ ಶಹೀದರಾದ ಎಲ್ಲಾ ಯುದ್ಧವೀರರ ಶೌರ್ಯ, ಸಾಹಸ, ವೀರ್ಯ ಕಾರ್ಯಗಳು ದುಃಖದೊಂದಿಗೆ ಹೆಮ್ಮೆಯನ್ನು ಈ ಹಾಡಿನೊಂದಿಗೆ ಬೆಸೆದುಬಿಡುತ್ತದೆ. ಈ ಹಾಡು, ಆ ಶಹೀದರಾದ ಯೋಧರ ಪತ್ನಿಯರ, ಮಕ್ಕಳ ಕಷ್ಟಗಳು, ಅಸಹಾಯಕತೆ, ಗೋಳುಗಳೆಲ್ಲಾ ನಮ್ಮದೇ ಎನ್ನುವಂತೆ ಬಿಂಬಿಸಿ ಗಂಟಲನ್ನು ಗದ್ಗದಿತವಾಗಿಸಿಬಿಡುತ್ತದೆ.
ಯೋಚಿಸುತ್ತಾ ಹೋದರೆ ಮತ್ತೆಷ್ಟೋ ವೀರರ ಕತೆಗಳು ಮನಸಿನಲ್ಲಿ ಬಿಚ್ಚಿಕೊಳ್ಳುತ್ತಾ ಅವರ ಮತ್ತು ಅವರ ಕುಟುಂಬಸ್ತರ ಜೀವದ ಹಂಗಿನಲ್ಲಿ ಅವರನ್ನೇ ಮರೆತವರಂತೆ ಬದುಕುತ್ತಿರುವ ನಮ್ಮಂತವರ ಜೀವನವನ್ನೇ ಹೇಸಿಗೆ ಎಂಬಂತೆ ಈ ಹಾಡು ನಮ್ಮಲ್ಲಿ ಕಲ್ಪನೆಯ ಬೀಜವನ್ನು ಬಿತ್ತಿಬಿಡುತ್ತದೆ.
ಥ್ಯಾಂಕ್ಸ್ ರವಿಯಣ್ಣ…. ನಿನ್ನ ಒಂದು ಮಾತು ನನ್ನ ಈ ಇಡೀ ದಿನವನ್ನು ವಿಚಾರಕ್ಕೆ ತಳ್ಳಿಬಿಟ್ಟಿತು. ನೀನು ನನ್ನ ಮನಸಿನಲ್ಲಿ ಉಳಿದುಬಿಟ್ಟೆ ಅಷ್ಟೇ.
-ಡಾ: ರಾಜು ಕೆ ಭಟ್ಟ
ದಂತ ವೈದ್ಯರು
ಸಿದ್ದಾಪುರ
ಉತ್ತರ ಕನ್ನಡ.