

ಒಂದೆಡೆ ಕನ್ನಡದ ಅಭಿಮಾನ,ಕನ್ನಡದ ಉಳಿವು,ಅಸ್ಮಿತೆಗಳ ಪ್ರಶ್ನೆಯಾದರೆ, ಅದಕ್ಕೆ ಪ್ರತಿಯಾಗಿ ಪ್ರಾಪಂಚಿಕತೆ, ವ್ಯವಹಾರಿಕತೆಗೆ ಇಂಗ್ಲೀಷ್ ಅನಿವಾರ್ಯವೆಂಬ ವಾಸ್ತವ. ಇದಕ್ಕೆ ಕಾನಸೂರಿನಲ್ಲಿ ವ್ಯಕ್ತವಾದ ಅಭಿಪ್ರಾಯಗಳು ವ್ಯವಹಾರಿಕತೆ,ಪ್ರಾಪಂಚಿಕತೆಗಳ ಅನಿವಾರ್ಯತೆಯನ್ನೇ ಹೇಳುತಿದ್ದವು.
ವಾಸ್ತವವಾಗಿ ಅಲ್ಲಿ ನಡೆದದ್ದು ಇಂಗ್ಲೀಷ್ ಮಾಧ್ಯಮದ ಪ್ರಾಥಮಿಕ ಶಾಲೆಯೊಂದರ ಉದ್ಘಾಟನೆ.ಈ ಕಾರ್ಯಕ್ರಮದಲ್ಲಿ ಇಂಗ್ಲೀಷ್ ಮಹತ್ವ, ಇಂಗ್ಲೀಷ್ ಅನಿವಾರ್ಯತೆ ಬಗ್ಗೆ ಮಾತುಗಳು ಕೇಳಲು ಕಾರಣ ಅಲ್ಲಿ ಕೆಲವು ದಿವಸಗಳ ಹಿಂದೆ ಇಂಗ್ಲೀಷ್ ಮಾಧ್ಯಮ ಪ್ರಾಥಮಿಕ ಶಾಲೆ ಬೇಡ ಎಂದು ವ್ಯಕ್ತವಾದ ವಿರೋಧ.
ಈ ಬಗ್ಗೆ ಪ್ರತ್ಯಕ್ಷ, ಪರೋಕ್ಷವಾಗೇ ಅಭಿಪ್ರಾಯ ವ್ಯಕ್ತಪಡಿಸಿದ ಕೆಲವರಲ್ಲಿ ನಿವೃತ್ತ ಶಿಕ್ಷಕ ಕೆ.ಆರ್.ಹೆಗಡೆ ಮಾತನಾಡಿ ನಾವ್ಯಾರೂ ಕನ್ನಡ ವಿರೋಧಿಗಳಲ್ಲ, ಆದರೆ ಇಂಗ್ಲೀಷ್ ಭಾಷೆ ಮತ್ತು ಶಿಕ್ಷಣ ಇಂದಿನ ಅನಿವಾರ್ಯತೆ. ಬದುಕಿನ ಸವಾಲುಗಳನ್ನು ಎದುರಿಸಲು ಇಂಗ್ಲೀಷ್ ಕಲಿಕೆ ಅನಿವಾರ್ಯ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ ಕಾನಸೂರು ಗ್ರಾ.ಪಂ. ಅಧ್ಯಕ್ಷ ತಿಮ್ಮಪ್ಪ ನಾಯ್ಕ ಮಾತನಾಡಿ ಗ್ರಾಮೀಣ, ನಗರಗಳೆನ್ನದೆ ವ್ಯವಹಾರ, ಅನುಕೂಲಕ್ಕಾಗಿ ಇಂಗ್ಲೀಷ್ ಅವಶ್ಯವಿರುವಾಗ ಪ್ರಾಥಮಿಕ ಹಂತದಿಂದ ಇಂಗ್ಲೀಷ್ ಕಲಿಯುವುದು, ಕಲಿಸುವುದು ಮುಖ್ಯ ಎಂದರು.
ಉತ್ತರ ಕನ್ನಡ ಜಿಲ್ಲೆ ಪುಣ್ಯ ಭೂಮಿ ಇಲ್ಲಿಯ ವಾತಾವರಣ, ನಿಸರ್ಗಅನನ್ಯ.ಇಲ್ಲಿಯ ಪ್ರತಿಭೆಗಳು ಉದ್ಯೋಗ, ಹೆಚ್ಚಿನ ವೇತನ, ಅನುಕೂಲ ಎಂದು ಬೇರೆ ನಗರಗಳಿಗೆ ವಲಸೆ ಹೋಗುತಿದ್ದಾರೆ. ಆಧುನಿಕ ಅವಶ್ಯಕತೆಗಳಾದ ಕಾರ್ಪೋರೇಟ್ ವ್ಯವಸ್ಥೆ ಮತ್ತು ಅದಕ್ಕೆ ಅವಶ್ಯವಾದ ಇಂಗ್ಲೀಷ್ ಶಿಕ್ಷಣ, ಜ್ಞಾನ ಇಲ್ಲೇ ಸಿಗುವುದಾದರೆ ನಮ್ಮ ಜಿಲ್ಲೆಯ ಪ್ರತಿಭಾ ಪಲಾಯನ ತಡೆಯಬಹುದು. ಇಲ್ಲಿ ನೆಲೆಕಾಣುತ್ತಿರುವ ಕಾರ್ಪೋರೇಟ್ ವ್ಯವಸ್ಥೆಯ ಸಹಕಾರಿ ಸಂಸ್ಥೆಗಳು, ಶೈಕ್ಷಣಿಕ,ತಾಂತ್ರಿಕ ಸೌಲಭ್ಯಗಳು ಜಿಲ್ಲೆಯಿಂದ ಹೊರಹೋಗಿದ್ದ ಜನರನ್ನು ನೆಲಮೂಲಕ್ಕೆ ಮರಳುವಂತೆ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ.
- ಎನ್.ಬಿ.ಹೆಗಡೆ, ಮತ್ತೀಹಳ್ಳಿ
ಶೀರಲಗದ್ದೆಗೆ ಬೇಕು ಸರ್ವಋತು ರಸ್ತೆ ತೆರೆಮರೆಯ ತಾಣ ಜನಾಕರ್ಷಣೆಯ ಕೇಂದ್ರ
ಸಿದ್ಧಾಪುರ,ಆ.19-ಜಲಪಾತಗಳ ಜಿಲ್ಲೆ ಉತ್ತರಕನ್ನಡದ ಸಿದ್ಧಾಪುರದ ಶೀರಲಗದ್ದೆ ಜಲಪಾತಕ್ಕೆ ಹೆಚ್ಚಿನ ಮಹತ್ವ, ಆಕರ್ಷಣೆ ಬರುತಿದ್ದು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗಳು ಈ ಜಲಪಾತಕ್ಕೆ ಭೇಟಿ ನೀಡುತ್ತಿರುವುದು ಸಾಕ್ಷಿಯಾಗಿದೆ.
ಶಿರಸಿ-ಸಿದ್ಧಾಪುರ ರಾಜ್ಯ ಹೆದ್ದಾರಿಯಲ್ಲಿ ಸಿದ್ಧಾಪುರದಿಂದ 16 ಕಿ,ಮೀ ದೂರ ಮತ್ತು ಶಿರಸಿಯಿಂದ 22 ಕಿ.ಮೀ ದೂರದ ಶೀರಲಗದ್ದೆ ಜಲಪಾತ ವೀಕ್ಷಣೆ ಸರಳ ಮತ್ತು ಸುಲಭ ಇರುವುದರಿಂದ ರಾಜ್ಯ ಪರರಾಜ್ಯಗಳ ಜನರು ಈ ಜಲಪಾತಕ್ಕೆ ಭೇಟಿ ನೀಡಿ ನೀರು,ನಿಸರ್ಗದ ಸೊಬಗನ್ನು ಸವಿಯುತ್ತಿದ್ದಾರೆ.
ರಾಜ್ಯಮುಖ್ಯರಸ್ತೆಯಿಂದ ಕೇವಲ 2 ಕಿ.ಮೀ ದೂರದ ಅರಣ್ಯದ ಮಧ್ಯೆ ಹರಿಯುತ್ತಿರುವ ಈ ಜಲಧಾರೆ ಇಷ್ಟುವರ್ಷ ಎಲೆಮರೆಯ ಕಾಯಿಯಂತಿದ್ದುದೇ ಆಶ್ಚರ್ಯದ ವಿಷಯ. ಚಂಡ ಸೇರಿದಂತೆ ಕೆಲವು ಕನ್ನಡ ಚಿತ್ರಗಳ ಚಿತ್ರೀಕರಣ ಈ ಜಲಪಾತದಲ್ಲಾದರೂ ಇದಕ್ಕೆ ಪ್ರಚಾರ,ಪ್ರಸಾರ ದೊರೆತದ್ದು ಕಡಿಮೆ.
ಸ್ಥಳಿಯ ನಾರಾಯಣ ನಾಯ್ಕ ಎನ್ನುವ ಯುವಕ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಈ ಜಲಪಾತದ ಪ್ರಚಾರ ಮಾಡಿದ ನಂತರ ಜನಾಕರ್ಷಣೆ ವೃದ್ಧಿಸಿತಾದರೂ ಸಮಾಜಮುಖಿ ಪತ್ರಿಕೆ ಮತ್ತು ನ್ಯೂಸ್ ಪೊರ್ಟಲ್ ಕೊಟ್ಟ ಪ್ರಚಾರದಿಂದ ಈ ಜಲಪಾತಕ್ಕೆ ಹೆಚ್ಚಿನ ಪ್ರಚಾರ,ಜನಪ್ರೀಯತೆ ದೊರೆತಿದೆ.
ಹೀಗೆ ಎಲೆಮರೆಯ ಕಾಯಿಯಂತಿದ್ದ ಶೀರಲಗದ್ದೆ ಜಲಪಾತ ಕಾಳೇನಳ್ಳಿಗೆ ಸಮೀಪ ಸುಲಭ ಪ್ರಯಾಣಕ್ಕೆ ಸಿಗುವ ಅಪರೂಪದ ನೈಸರ್ಗಿಕ ಸೌಂದರ್ಯವಾದರೂ ಇಲ್ಲಿಗೆ ತೆರಳಲು ಸೂಕ್ತ ಸರ್ವಋತು ರಸ್ತೆಯಿಲ್ಲ.
ಈ ಜಲಪಾತಕ್ಕೆ ವ್ಯವಸ್ಥಿತ ರಸ್ತೆಮಾಡಿ ಎಂದು ಈ ಭಾಗದ ಜನಪ್ರತಿನಿಧಿಗಳು ಸಾಮಾಜಿಕ ಮುಖಂಡರಾದ ನಾರಾಯಣ,ಅಶೋಕ ನಾಯ್ಕ,ಗೌರೀಶ್ ನಾಯ್ಕ, ವಸಂತ ಹೆಗಡೆ, ಸುಬ್ರಾಯ ಮತ್ತೀಹಳ್ಳಿ ಸೇರಿದ ಅನೇಕರು ಸ್ಥಳಿಯ ಶಾಸಕರು, ಸಂಸದರನ್ನು ಆಗ್ರಹಿಸಿದ್ದರೂ ಕಳೆದ ಕೆಲವು ವರ್ಷಗಳಿಂದ ಪ್ರವಾಸೋದ್ಯಮ ಇಲಾಖೆಯ ಕಡೆ ಬೊಟ್ಟುಮಾಡುತ್ತಿರುವ ಇಲ್ಲಿಯ ಸಂಸದರು, ಶಾಸಕರು ಈ ಜಲಪಾತಕ್ಕೆ ‘ಬೇಡ’ ದವರಾಗಿದ್ದಾರೆ.
ಇತ್ತೀಚೆಗೆ ಈ ಜಲಪಾತಕ್ಕೆ ಭೇಟಿ ನೀಡಿದ ಸಿದ್ಧಾಪುರ ಪತ್ರಕರ್ತರ ತಂಡ ಇಷ್ಟು ಸಮೀಪದ ಅದ್ಭುತ ಜಲಪಾತ ಪ್ರಚಾರ,ಅಭಿವೃದ್ಧಿಯ ವಿಷಯದಲ್ಲಿ ಕತ್ತಲೆಯಲ್ಲಿರುವುದರಿಂದ ಬೇಸರ ವ್ಯಕ್ತಪಡಿಸಿ ಈ ಜಲಪಾತದ ಅಭಿವೃದ್ಧಿ, ಮೂಲಭೂತ ಸೌಲಭ್ಯಗಳ ಪೂರೈಕೆಗೆ ಅಗತ್ಯ ಒತ್ತಡ, ಪ್ರಚಾರ ನೀಡುವುದಾಗಿ ತಿಳಿಸಿದ್ದಾರೆ.
ಪ್ರವಾಸೋದ್ಯಮ ಸಚಿವರಾಗಿದ್ದ ಹಿಂದಿನ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯವರ ಕಣ್ಣಿಗೆ ಬೀಳದೆ, ಗಮನ ಸೆಳೆಯದ ಈ ಪ್ರೇಕ್ಷಣೀಯ ಸ್ಥಳದ ಅಭಿವೃದ್ಧಿ ಬಗ್ಗೆ ಈಗಿನ ರಾಜ್ಯ, ಕೇಂದ್ರ ಸರ್ಕಾರಗಳು ಕಣ್ಣು ತರೆಯಬಹುದೆ ಎನ್ನುವ ನಿರೀಕ್ಷೆ ಸ್ಥಳೀಯರಲ್ಲಿದೆ.
ರಸ್ತೆ, ವೀಕ್ಷಣಾಗೋಪುರ, ಪಾರ್ಕಿಂಗ್, ಊಟೋಪಚಾರಕ್ಕೆ ಅಗತ್ಯವಾಗಿ ಬೇಕಾದ ಹೋಟೆಲ್ ನಿರ್ಮಾಣವಾದರೆ ಸಿದ್ಧಾಪುರದ ಈ ಜಲಪಾತ ಪ್ರಪಂಚದ ಪ್ರಕೃತಿಪ್ರೀಯರನ್ನು ಆಕರ್ಷಿಸುವಲ್ಲಿ ಅನುಮಾನಗಳಿಲ್ಲ. ಆಸಕ್ತ ಚಾರಣ ತಜ್ಞರು ಇಲ್ಲಿ ಜಲಕ್ರೀಡೆ,ಜಲಸಾಹಸ ಚಾರಣಗಳನ್ನು ಆಯೋಜಿಸುವಂತೆ ಮಾಡಿ ಸ್ಥಳಿಯರು, ಪ್ರವಾಸಿಗಳಿಗೆ ಅನುಕೂಲಮಾಡಿಕೊಡುವ ಹಿನ್ನೆಲೆಯಲ್ಲಿ ಸ್ಥಳಿಯ ಆಡಳಿತ ಪ್ರಯತ್ನಿಸಬೇಕಾಗಿದೆ. ವರ್ಷದ ಕನಿಷ್ಟ ಆರು ತಿಂಗಳು ತುಂಬಿಹರಿಯುವ ಕಾರಗೋಡು ಹೊಳೆಯ ಈ ಶೀರಲಗದ್ದೆ ಜಲಪಾತ ಸಿದ್ಧಾಪುರದ ಪ್ರಮುಖ ಕೆಲವು ಪ್ರವಾಸಿತಾಣಗಳಲ್ಲಿ ಒಂದಾಗುವ ಸಾಧ್ಯತೆಗಳಂತೂ ಇವೆ.
ನಿಸರ್ಗ ಸೌಂದರ್ಯದ ಈ ಜಲಪಾತ ತೆರೆಮರೆಯಲ್ಲಿರುವುದೇ ಆಶ್ಚರ್ಯ,ಸ್ಥಳಿಯ ಜವಾಬ್ಧಾರಿ ವ್ಯಕ್ತಿಗಳು,ಸಂಬಂಧಿಸಿದ ಇಲಾಖೆ, ಅಧಿಕಾರಿಗಳು ಆಸಕ್ತಿವಹಿಸಿದರೆ ತಾಲೂಕಿನ ಈ ಜಲಪಾತ ಒಂದು ಪ್ರವಾಸಿತಾಣವಾಗುವುದಂತೂ ನಿಶ್ಚಿತ.ಗುಣಮಟ್ಟದ ಸರ್ವಋತು ರಸ್ತೆ ಇಲ್ಲಿಯ ಮೊದಲ ಆದ್ಯತೆ.- ರವೀಂದ್ರಭಟ್,ಗಂಗಾಧರ ಕೊಳಗಿ, ಬರಹಗಾರರು,ಸಿದ್ಧಾಪುರ

