ಸಿದ್ದಾಪುರ ಪಟ್ಟಣ ಪಂಚಾಯತ ವ್ಯಾಪ್ತಿಯ ಹೊನ್ನೇಗುಂಡಿ ನಿವಾಸಿಗಳಿಗೆ ಕಳೆದ ಹತ್ತಾರು ವರ್ಷಗಳಿಂದ ಗಟಾರದಲ್ಲಿ ಹರಿಯುವ ಕೊಳಚೆ ನೀರು ಪಿಶಾಚಿಯಾಗಿ ಕಾಡತೊಡಗಿದೆ.
ಈ ಹಿಂದೆ ಕೊಳಚೆ ನೀರು ಹರಿದುಹೋಗಲು ಗಟಾರವನ್ನು ಪ.ಪಂ.ನಿಂದ ನಿರ್ಮಿಸಲಾಗಿದ್ದರೂ ನೆಲಕ್ಕೆ ಸರಿಯಾಗಿ ಬೆಡ್ ಹಾಕದೇ ಇದ್ದುದರಿಂದ ಈ ಭಾಗದ ನಿವಾಸಿಗಳ ಮನೆಯ ಕುಡಿಯುವ ನೀರಿನ ಬಾವಿಗಳಿಗೆ ಕೊಳಚೆ ನೀರು ನುಗ್ಗಿ ಬವಣೆ ಪಡುವಂತಾಗಿತ್ತು. ಕಳೆದ ವರ್ಷ ಅಲ್ಲಲ್ಲಿ ತೇಪೆ ಹಚ್ಚಿ, ಪೈಪ್‍ಗಳನ್ನು ಅಳವಡಿಸಿ ತಾತ್ಪೂರ್ತಿಕ ದುರಸ್ತಿಮಾಡಲಾಗಿದ್ದರೂ ಗಟಾರದ ಮುಂದಿನ ಭಾಗವನ್ನು ಹಾಗೇ ಬಿಟ್ಟಿದ್ದರಿಂದ ಅಲ್ಲಿ ಈಗ ಕೊಳಚೆ ನೀರು ಸರಾಗವಾಗಿ ಹರಿದು ಹೋಗದೇ ಹೊಂಡಗಳಲ್ಲಿ ತುಂಬಿಕೊಂಡು ಗಬ್ಬುವಾಸನೆ ಹೊಡೆಯತೊಡಗಿದೆ.
ಹೊಂಡಗಳಲ್ಲಿ ಕ್ರಿಮಿಗಳು, ಸೊಳ್ಳೆಗಳು ಜನ್ಮತಾಳಲು, ರೋಗರುಜಿನು ಹರಡಲು ಅವಕಾಶವಾಗುವಂತಾಗಿದೆ. ಅಲ್ಲದೆ ಹತ್ತಿರದ ನಿವಾಸಿಗಳ ಕುಡಿಯುವ ನೀರಿನ ಬಾವಿಯ ವರತೆಗೂ ಈ ಕೊಳಚೆ ನೀರು ಸೇರಿ ಬಾವಿಗೆ ವಕ್ಕರಿಸುವ ಸಾಧ್ಯತೆಯಿದ್ದು ಸ್ಥಳೀಯ ನಿವಾಸಿಗಳ ನಿದ್ದೆಗೆಡುವಂತೆ ಮಾಡಿದೆ.
ಈ ಹಿಂದೆ ಸಾಕಷ್ಟುಸಲ ನಮ್ಮ ಬಾವಿಗಳಿಗೆ ಕೊಳಚೆ ನೀರು ಸೇರಿಕೊಂಡು ಬವಣೆ ಅನುಭವಿಸಿದ್ದೇವೆ. ಮಳೆಗಾಲದಲ್ಲಿ ರಭಸವಾಗಿ ನೀರು ಹರಿದು ಹೋಗಿದ್ದರಿಂದ ಸಮಸ್ಯೆಯಾಗಿರಲಿಲ್ಲ. ಇದೀಗ ನೀರಿನ ಹರಿವು ಕಡಿಮೆಯಿದ್ದು ಗಟಾರಕ್ಕೆ ನೆಲಹಾಸು ಮಾಡದೇ ಇದ್ದುದರಿಂದ ಬಾವಿಯಂತೆ ಹೊಂಡ ಬಿದ್ದು ಅಲ್ಲಲ್ಲಿ ಕೊಳಚೆ ನೀರು ಮಡುಗಟ್ಟಿದೆ. ಈ ಕೊಳಚೆ ನೀರು ಯಾವಾಗ ಬಾವಿಗೆ ನುಗ್ಗುವುದೋ ಎಂಬ ಆತಂಕದಲ್ಲಿದ್ದೇವೆ. ಅಲ್ಲದೆ ಕೊಳಚೆ ನೀರಿನಿಂದಾಗಿ ಡೆಂಗ್ಯೂ ಸೇರಿದಂತೆ ವಿವಿಧ ಕಾಯಿಲೆಗಳು ಹರಡುವ ಸಾಧ್ಯತೆಯಿದೆ.
ಪಟ್ಟಣ ಪಂಚಾಯತ ಆಡಳಿತ ಈ ಕುರಿತು ಶೀಘ್ರ ಕ್ರಮ ವಹಿಸಿ ಗಟಾರವನ್ನು ಸರಿಪಡಿಸಿ ನಮಗಾಗುತ್ತಿರುವ, ಆಗಲಿರುವ ತೊಂದರೆ ನೀಗಬೇಕು ಎಂದು ಈ ಭಾಗದ ನಾಗರಿಕರು ಆಗ್ರಹಿಸಿದ್ದಾರೆ. ಎಲ್ಲಿ ಹೋಯ್ತು ಅಭಿವೃದ್ಧಿ-
ಇದೇ ವರ್ಷದ ಪಟ್ಟಣ ಪಂಚಾಯತ್ ಸೇರಿದಂತೆ ನಡೆದ ಅನೇಕ ಚುನಾವಣೆಗಳಲ್ಲಿ ಮತಕೇಳಲು ಬರುವ ಬಿ.ಜೆ.ಪಿ. ಕಾರ್ಯಕರ್ತರು ಹೊನ್ನೆಗುಂಡಿ ಸೇರಿದಂತೆ ನಗರ,ತಾಲೂಕು, ಜಿಲ್ಲೆಯಲ್ಲಿ ಬಿ.ಜೆ.ಪಿ.ಗೇ ಮತಹಾಕಿ ಮೇಲಿನಿಂದ ಕೆಳಗಿನವರೆಗೆ ನಾವೇ ಅಧಿಕಾರಕ್ಕೆ ಬರುತ್ತೇವೆ ನಿಮ್ಮ ಸಮಸ್ಯೆಗಳಿಗೆ ಸ್ಫಂದಿಸಿ ಅಭಿವೃದ್ಧಿ ಮಾಡುತ್ತೇವೆ ಎಂದು ಪ್ರಚಾರಮಾಡುತ್ತಾರೆ. ಆದರೆ ಈಗ ನಗರ,ತಾಲೂಕು, ಕ್ಷೇತ್ರ,ಜಿಲ್ಲೆ,ರಾಜ್ಯ,ರಾಷ್ಟ್ರದಲ್ಲಿ ಅವರದೇ ಅಧಿಕಾರ ಆದರೆ ಯಾಕೆ ಯಾವುದೇ ಕೆಲಸ, ಏನೂ ಅಭಿವೃದ್ಧಿ ಆಗುತ್ತಿಲ್ಲ?
-ನೊಂದ ಬಿ.ಜೆ.ಪಿ. ಕಾರ್ಯಕರ್ತ