
ಸಿದ್ಧಾಪುರದ ನೆಲ-ಮಣ್ಣಿನ ಮಹಿಮೆಯೋ ಅಥವಾ ಇಲ್ಲಿಯ ಚಾರಿತ್ರಿಕ ಹಿನ್ನೆಲೆಯ ಮಹಿಮೆಯೋ ಇಲ್ಲಿ ಸಂಭವಿಸುವ ಪ್ರತಿ ಘಟನೆ,ವಿದ್ಯಮಾನಗಳೂ ವಿಶೇಶ.
ತೀರಾ ಹಳ್ಳಿಯಂಥ ಪಟ್ಟಣದ ಸಿದ್ಧಾಪುರದಲ್ಲಿ ಬಹಳ ವರ್ಷಗಳ ಹಿಂದಿನಿಂದ ತೋಟಗಾರಿಕಾ ತರಬೇತಿ ಸಂಸ್ಥೆಯೊಂದು ನಡೆಯುತ್ತಿದೆ. ಈ ಸಂಸ್ಥೆಯ ವ್ಯಾಪ್ತಿ ಉತ್ತರಕನ್ನಡ ಶಿವಮೊಗ್ಗ ಜಿಲ್ಲೆಗಳಿಗೆ ಸೀಮಿತವಾಗಿದೆಯಾದರೂ ಇಲ್ಲಿ ರಾಜ್ಯ ಹೊರರಾಜ್ಯಗಳ ವಿದ್ಯಾರ್ಥಿಗಳು ಕಲಿತು ಹೆಸರು ಮಾಡಿದ್ದಾರೆ.
ರಾಜ್ಯಸರ್ಕಾರದ ತೋಟಗಾರಿಕೆ ಇಲಾಖೆಯ ಜವಾಬ್ಧಾರಿಯ ಈ ಸಂಸ್ಥೆ ಪ್ರತಿವರ್ಷ 35 ರಂತೆ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಿ ತರಬೇತಿ ನೀಡುತ್ತಿದೆ.
ಕನಿಷ್ಟ ಮೆಟ್ರಿಕ್ ಓದಿರುವ ಯಾವುದೇ ಭಾರತೀಯ ಪ್ರಜೆ ಇಲ್ಲಿ ಅರ್ಜಿ ಹಾಕಿ ಪ್ರವೇಶ ಪಡೆಯಬಹುದು ಆದರೆ ವಯೋಮಿತಿ 18 ರಿಂದ ಮೂವತ್ತು ವರ್ಷ ದಾಟುವಂತಿಲ್ಲ.
ಪ್ರತಿವರ್ಷ ಏಫ್ರಿಲ್ ನಲ್ಲಿ ಕರೆಯುವ ಪ್ರವೇಶ ಆಮಂತ್ರಣದ ಮೇರೆಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು 11ತಿಂಗಳ ವರೆಗೆ ಸ್ಟೈಪಂಡ್ ಪಡೆದು ತರಬೇತಿ ಪಡೆಯುತ್ತಾರೆ. ಹೊಸೂರಿನ ತೋಟಗಾರಿಕಾ ತರಬೇತಿ ಕೇಂದ್ರದಲ್ಲಿ 11 ತಿಂಗಳ ಡಿಪ್ಲೋಮಾ ತರಬೇತಿ ಪಡೆಯುವ ನಂತರ ಅವರು ಸ್ವಯಂ ಉದ್ಯೋಗ, ಸರ್ಕಾರಿ, ಅರೆಸರ್ಕಾರಿ ಕೆಲಸಗಳಿಗೆ ನೇಮಕವಾಗಬಹುದು.
ಇಲ್ಲಿಯ67 ಎಕರೆಯ ವಿಶಾಲ ಪ್ರದೇಶದಲ್ಲಿ ತರಬೇತಿ, ಪ್ರಾಯೋಗಿಕ ಅನುಭವ ಪಡೆದು ಹೊರನಡೆದವರಲ್ಲಿ ಬಹುತೇಕರು ಸಾಧಕರು, ಪ್ರಸಿದ್ಧರು ಆಗಿರುವುದು ಈ ತರಬೇತಿ ಕೇಂದ್ರದ ಹೆಗ್ಗಳಿಕೆ.
ಈ ತರಬೇತಿ ಪಡೆಯಲಿಚ್ಛಿಸುವವರು ರೈತ ಕುಟುಂಬದವರಾಗಿರಬೇಕು, ಕನಿಷ್ಟ ಮೆಟ್ರಿಕ್ ಓದಿರಬೇಕು ಎನ್ನುವ ಕಡ್ಡಾಯ ನಿಯಮ ಬಿಟ್ಟರೆ ರಾಜ್ಯದ ಯಾವುದೇ ವ್ಯಕ್ತಿ ಇಲ್ಲಿ ವಿದ್ಯಾರ್ಥಿಯಾಗಬಹುದು. ವಿಶೇಶವೆಂದರೆ ಶಿವಮೊಗ್ಗ, ಉತ್ತರಕನ್ನಡ ಜಿಲ್ಲೆಗಳಿಗಾಗಿಯೇ ಇರುವ ಈ ತರಬೇತಿ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳಲ್ಲಿ ಅತಿ ಕಡಮೆ ಆಕಾಂಕ್ಷಿಗಳೆಂದರೆ ಉತ್ತರಕನ್ನಡ ಜಿಲ್ಲೆಯವರು.
ವಿಶಾಲ ಕ್ಯಾಂಪಸ್,ವಿಶೇಶ ವ್ಯವಸ್ಥೆ, ಎಲ್ಲಾ ಅನುಕೂಲಗಳ ನಡುವೆ ಕೂಡಾ ಸ್ಥಳಿಯರು ಕಡಿಮೆ ಆಸಕ್ತರಾಗಲು ಕಾರಣ ಈ ಸಂಸ್ಥೆ ತೆರೆಮರೆಯಲ್ಲಿರುವುದು. ರೈತರ ಮಕ್ಕಳು, ಆಸಕ್ತ ವಿದ್ಯಾರ್ಥಿಗಳು ಈ ತರಬೇತಿ ಪಡೆದರೆ ಅದು ತೋಟಗಾರಿಕೆ ಕ್ಷೇತ್ರದ ಹೆಬ್ಬಾಗಿಲು ಪ್ರವೇಶಿಸಿದಂತೆ ಪ್ರತಿವರ್ಷಕ್ಕೊಂದರಂತೆ ಡಿಪ್ಲೊಮಾ ಪಡೆದು ಇಲ್ಲಿಂದ ಹೊರಹೋದವರು ಮತ್ತೆ ಮರಳುವಾಗ ಸಾಧಕರು, ನೌಕರರು ಆಗಿ ಮರಳಿ ಬರುವ ಈ ತರಬೇತಿ ಕೇಂದ್ರ ಸ್ಥಳಿಯರಿಗೇ ದೂರವಾಗಿರುವುದು ಅಚ್ಚರಿಯ ವಿಷಯ.
ಈ ಸಂಸ್ಥೆಯ ಮಾಹಿತಿಗಾಗಿ 08389298032 ಸಂಖ್ಯೆಯನ್ನು ಸಂಪರ್ಕಿಸಬಹುದು. ತೋಟಗಾರಿಕಾ ಬೆಳೆಗಳು,ಮಾರುಕಟ್ಟೆ ಕೇಂದ್ರಗಳು, ಪೂರಕ ಪರಿಸರ ಇರುವ ಸಿದ್ದಾಪುರದ ಹೊಸೂರು ತೋಟಗಾರಿಕಾ ತರಬೇತಿ ಕೇಂದ್ರ ರಾಜ್ಯದ ಅನೇಕ ತರಬೇತಿ ಕೇಂದ್ರಗಳಿಗಿಂತ ಭಿನ್ನ ಎನ್ನುವ ಹೆಗ್ಗಳಿಕೆಯ ಸ್ಥಾನ-ಮಾನ ರಾಜ್ಯಮಟ್ಟದಲ್ಲಿದೆ.
