

ಡಿ.5 ಕ್ಕೆ ಚುನಾವಣೆ ನಡೆಯಲಿರುವ ಯಲ್ಲಾಪುರ ಕ್ಷೇತ್ರದಿಂದ ಸ್ಫರ್ಧಿಸಲಿರುವ ಅಭ್ಯರ್ಥಿಗಳಲ್ಲಿ ಕಾಂಗ್ರೆಸ್ ನ ಭೀಮಣ್ಣ ನಾಯ್ಕ ಇಂದು ಯಲ್ಲಾಪುರದಲ್ಲಿ ನಾಮಪತ್ರ ಸಲ್ಲಿಸಿದರು.
ಇವರ ಪ್ರತಿಸ್ಫರ್ಧಿಯಾಗಲಿರುವ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಇಂದು ಬೆಂಗಳೂರಿನಲ್ಲಿ ಬಿ.ಜೆ.ಪಿ.ಸೇರುವ ಮೂಲಕ ದಶಕಗಳ ನಂತರ ಮತ್ತೆ ಮಾತೃಪಕ್ಷ ಬಿ.ಜೆ.ಪಿ. ಸೇರ್ಪಡೆಯಾದರು.
ಭೀಮಣ್ಣ ನಾಯ್ಕ ಕೆ.ಸಿ.ಪಿ., ಕೆ.ವಿ.ಪಿ. ಕಾಂಗ್ರೆಸ್,ಸಮಾಜವಾದಿ,ಬಿ.ಜೆ.ಪಿ. ಗಳಿಂದ ಹೊರಬಂದು ಇತ್ತೀಚಿನ ಒಂದು ದಶಕದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದವರು.
ಶಿವರಾಮ ಹೆಬ್ಬಾರ್ ಬಿ.ಜೆ.ಪಿ. ಜಿಲ್ಲಾಧ್ಯಕ್ಷರಾಗಿ ಅಲ್ಲಿಂದ ಹೊರಬಂದು ಯಲ್ಲಾಪುರ ಕ್ಷೇತ್ರದಿಂದ ಎರಡುಬಾರಿ ಶಾಸಕರಾದವರು. ಈ ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಶಾಸಕರಾಗಿ ಸಚಿವರಾಗಲು ಪ್ರಯತ್ನಿಸಿ ವಿಫಲರಾದ ಹೆಬ್ಬಾರ್ ರಿಗೆ ಬಿ.ಜೆ.ಪಿ.ಆಮಿಷ ತೋರಿಸಿ ರಾಜೀನಾಮೆ ನೀಡಿಸಿದ್ದು ಈಗ ಇತಿಹಾಸ.
ನ.18 ರಂದು ನಾಮಪತ್ರ ಸಲ್ಲಿಸಲಿರುವ ಶಿವರಾಮ ಹೆಬ್ಬಾರ್ ಬೆಂಗಳೂರು ಮಟ್ಟದಲ್ಲಿ ವ್ಯವಹಾರ ಕುದುರಿಸಿ ರಾಜೀನಾಮೆ ನೀಡಿ ಈ ಚುನಾವಣೆಯ ನಂತರ ಸಚಿವರಾಗುತ್ತಾರೆ ಎನ್ನಲಾಗುತ್ತಿದೆ. ವಿಶೇಶವೆಂದರೆ ವಲಸೆ ವ್ಯಕ್ತಿ ಶಿವರಾಮ ಹೆಬ್ಬಾರ್ ರನ್ನು ಸೋಲಿಸುವ ಮೂಲಕ ಅವರ ಪಕ್ಷಾಂತರಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಕಾಂಗ್ರೆಸ್ ಯೋಜಿಸುತ್ತಿರುವ ಆಟಕ್ಕೆ ಬಿ.ಜೆ.ಪಿ.ಯ ಮಾಜಿ ಸಚಿವ ವಿಶ್ವೇಶ್ವರ ಹೆಗಡೆಯವರ ಬಣಕೂಡಾ ಪಣ ತೊಟ್ಟಿದೆ ಎನ್ನಲಾಗುತ್ತಿದೆ.
ಅನರ್ಹರಲ್ಲಿ ಕನಿಷ್ಟ 8 ಜನ ಗೆಲ್ಲಬೇಕು.ಗೆಲ್ಲದಿದ್ದರೆ ದೇವೇಗೌಡರು ಬೆಂಬಲಿಸುವ ಸಾಧ್ಯತೆ ನಿಚ್ಛಳ. ಈ ವಿದ್ಯಮಾನಗಳ ನಡುವೆ ಶಿವರಾಮ ಹೆಬ್ಬಾರ್ ರಿಗೆ ಉಸ್ತುವಾರಿ ನೀಡುವ ಏಕೈಕ ಕಾರಣಕ್ಕೆ ಸಭಾಧ್ಯಕ್ಷರಾಗಿರುವ ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಾನೇ ಸಚಿವ, ಉಸ್ತುವಾರಿ ಮಂತ್ರಿಯಾಗುವ ಕಾರಣಕ್ಕೆ ಶಿವರಾಮ ಹೆಬ್ಬಾರ್ ರನ್ನು ಸೋಲಿಸಿ ಎಲ್ಲಾ ದೃಷ್ಟಿಯಿಂದ ತನ್ನ ದಾರಿ ಸರಿಮಾಡಿಕೊಳ್ಳುವ ತಂತ್ರ ಹೆಣೆದಿದ್ದಾರೆ ಎನ್ನಲಾಗುತ್ತಿದೆ.
ಭೀಮಣ್ಣ ಸ್ವಪಕ್ಷೀಯರು, ಆತ್ಮೀಯರಿಂದಲೇ ಹೊಡೆತ ತಿಂದು ಶಾಸಕರಾಗದೆ ಸಂಘಟನೆ ಮುಂದುವರಿಸಿದವರು. ದೇಶಪಾಂಡೆ ಮತ್ತು ಕಾಂಗ್ರೆಸ್ ಪ್ರತಿಷ್ಠೆಯೊಂದಿಗೆ ಸಂಘಟನೆಯಲ್ಲಿಯೂ ಮುಂದಿರುವ ಭೀಮಣ್ಣ ಈ ಬಾರಿ ಶಾಸಕರಾಗಲು ಪ್ರಯತ್ನಿಸುವ ಜೊತೆಗೆ ಅವರ ಸಾಮಥ್ರ್ಯವನ್ನೂ ಪಣಕ್ಕಿಡಲಿದ್ದಾರೆ ಎನ್ನಲಾಗುತ್ತಿದೆ. ಹಣಬಲ,ಪಕ್ಷಬಲ,ಜಾತಿ ಸಮೀಕರಣ ಎಲ್ಲದರಲ್ಲೂ ಸಮರ್ಥರಿರುವ ಇಬ್ಬರ ನಡುವಿನ ಸ್ಫರ್ಧೆಗೆ ಮುಂಡಗೋಡು ನಿರ್ಣಾಯಕ. ದೇಶಪಾಂಡೆ ಮತ್ತು ಬಿ.ಜೆ.ಪಿ. ಬಣಗಳ ನಡುವಿನ ಸ್ಫರ್ಧೆಯಲ್ಲಿ ಭೀಮಣ್ಣ ಜಯಗಳಿಸುತ್ತಾರೆ ಎಂದು ಕಾಂಗ್ರೆಸ್ ವಿಶ್ವಾಸದಲ್ಲಿದ್ದರೆ, ಜನಸಂಪರ್ಕ,ಕೆಲಸ, ಬಿ.ಜೆ.ಪಿ.ಯ ಭಾವನಾತ್ಮಕ ರಣತಂತ್ರಗಳೆದುರು ಭೀಮಣ್ಣ ಗೆಲುವು ಅಷ್ಟು ಸುಲಭದ್ದಲ್ಲ ಎನ್ನುವ ಅಭಿಪ್ರಾಯ ಬಿ.ಜೆ.ಪಿ.ಬೆಂಬಲಿಗರಲ್ಲಿದೆ.
ಪಕ್ಷ, ವೈಯಕ್ತಿಕ ಬಲಾಬಲಗಳಲ್ಲಿ ಸಮಸಮ ಎನ್ನುವಷ್ಟು ಬಲಶಾಲಿಗಳಾಗಿರುವ ಹೆಬ್ಬಾರ್ ಮತ್ತು ಭೀಮಣ್ಣ ತಮ್ಮ ಅಸ್ಥಿತ್ವಕ್ಕಾಗಿ ಹೋರಾಡುವ ಸಿದ್ಧತೆಯಲ್ಲಿದ್ದಾರೆ.



